ಜನರ ಸಮಸ್ಯೆ ನಿವಾರಣೆಗೆ ಗ್ರಾಮ ವಾಸ್ತವ್ಯ
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ|ಆಶಪ್ಪ ಪೂಜಾರ ಸ್ಪಷ್ಟನೆ
Team Udayavani, Apr 18, 2022, 4:16 PM IST
ಮುಂಡರಗಿ: ಗ್ರಾಮೀಣ ಜನರ ಕುಂದುಕೊರತೆಗಳ ನಿವಾರಣೆಗಾಗಿ ಸರ್ಕಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜಾರಿಗೆ ತಂದಿದೆ. ಆಯಾ ಗ್ರಾಮಗಳ ಸಾರ್ವಜನಿಕರ ಸಮಸ್ಯೆಗಳನ್ನು ಪರಿಶೀಲಿಸಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹರಿಸಲಾಗುವುದು ಎಂದು ತಹಶೀಲ್ದಾರ್ ಡಾ|ಆಶಪ್ಪ ಪೂಜಾರ ಹೇಳಿದರು.
ತಾಲೂಕಿನ ಆಶಾಕಿರಣ(ಕಕ್ಕೂರು ತಾಂಡಾ) ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ನಡೆದ ಎಲ್ಲಾ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಹಾಗೆಯೇ ಆಯಾ ಗ್ರಾಮದ ಸಾರ್ವಜನಿಕರು, ತಮ್ಮ ಸಣ್ಣ ಪುಟ್ಟ ಸಮಸ್ಸೆಗಳ ಕುರಿತು ನೀಡಿದ್ದ ಅರ್ಜಿಗಳಿಗೆ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದರು.
ತಹಶೀಲ್ದಾರ್ ಪೂಜಾರ ಅವರು ಗ್ರಾಮದಲ್ಲಿ ಸಸಿ ನಡುವ ಕಾರ್ಯಕ್ರಮ, ಅಂಗನವಾಡಿ ಕೇಂದ್ರ ಹಾಗೂ ಶಾಲೆಯನ್ನು ವೀಕ್ಷಣೆ ಮಾಡಿದರು. ನಂತರ ಗ್ರಾಮದ ಶುದ್ಧ ನೀರಿನ ಘಟಕ, ಪಶು ಆಸ್ಪತ್ರೆ, ಹಾಲಿನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ಕೆಲವು ರೈತರ ಆಸ್ತಿ ಪೋಡಿ ಸಮಸ್ಯೆ, ಅಂಗವಿಕಲ, ವಿಧವಾ, ವೃದ್ಧಾಪ್ಯ ಸಮಸ್ಯೆಗಳಿವೆ. ಅವುಗಳನ್ನು ಪರಿಶೀಲಿಸಿ ಸರಿಪಡಿಸಬೇಕೆಂದು ಮನವಿ ಮಾಡಿಕೊಂಡರು. ತಹಶೀಲ್ದಾರ್‌ರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹೆಸರೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮಿಬಾಯಿ ಗುಡಿಮನಿ, ತಾಪಂ ಇಒ ಎಸ್. ಎಸ್. ಕಲ್ಮನಿ, ಬಿ.ಕುಮಾರ, ವಿನಯ ಕುಮಾರ, ಟಿ.ಸಿ.ವೆಂಕಟೇಶಮೂರ್ತಿ, ಟಿ.ಎಂ.ನಾಗರತ್ನಾ, ಡಾ.ಎಸ್.ವ್ಹಿ. ತಿಗರಿಮಠ, ರಾಜು ರಾಠೊಡ, ಡಾ.ಸಂತೋಷಗೌಡ ಪಾಟೀಲ, ಎಚ್. ನಾಗರಾಜ, ಎಚ್.ಎಸ್.ಪಾಟೀಲ, ಲಕ್ಕಾನಾಯಕ್, ಸುವರ್ಣ ಕೋಟಿ, ಐ.ಎಸ್. ಮುಲ್ಲಾ, ಎಲ್.ಬಿ.ದೇಸಾಯಿ, ಎಚ್.ಕೆ.ಕಲ್ಮೇಶ, ಕಸ್ತೂರಿ ಬಳ್ಳೊಳ್ಳಿ, ವೀರಪ್ಪ ಕುಂಬಾರ, ಗ್ರಾಪಂ ಸದಸ್ಯರಾದ ಸೋನಮ್ಮ ನಾಯಕ್, ಮಂಜನಾಥ ಹಳ್ಳಿ, ಬನ್ನಪ್ಪ ಚೂರಿ, ರಂಗನಾಥ ನಾಯಕ, ಗೀತಾ ಮುರುಡಿ, ಹನಮಂತಪ್ಪ ನಾಯಕ್, ಮೈಲಾರಪ್ಪ ಕಲಕೇರಿ, ಸುಭಾಷ ಗುಡಿಮನಿ, ನಾಗರಾಜ ಗುಡಿಮನಿ, ಸುರೇಶ ಹಲವಾಗಲಿ, ಹನುಮರಡ್ಡಿ ಮಾದೂರು ಇತರರಿದ್ದರು.
ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ ಸ್ವಾಗತಿಸಿ, ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.