ನೂರು ವರ್ಷಗಳ ಬಳಿಕ ಬಳ್ಳಕ್ಕ ಗುಳಿಗನ ಕಯದಲ್ಲಿ ನೀರಿಲ್ಲ
ಬತ್ತಿದ ಉರುಂಬಿ ಹೊಳೆ
Team Udayavani, Apr 6, 2019, 10:43 AM IST
ಉರುಂಬಿ ಹೊಳೆ ಬತ್ತಿ ಹೋಗಿದ್ದು, ಬಳ್ಳಕ್ಕ ಸಮೀಪದ ಗುಳಿಗನ ಕಯದಲ್ಲಿ ನೀರೇ ಇಲ್ಲ.
ಗುತ್ತಿಗಾರು : ಬಿರು ಬೇಸಗೆಯ ತಾಪಕ್ಕೆ ಗುತ್ತಿಗಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಗೃಹಬಳಕೆ ಹಾಗೂ ಕೃಷಿಗೆ ನೀರಿನ ಕೊರತೆ ಉಂಟಾಗಿದೆ. ಗುತ್ತಿಗಾರು ಸಮೀಪದ ಬಳ್ಳಕ ಹಾಗೂ ಅಕ್ಕಪಕ್ಕದ
ಹಳ್ಳಿಗರಿಗೆ ನೀರುಣಿಸುತ್ತಿದ್ದ ಉರುಂಬಿ ಹೊಳೆ ಸಂಪೂರ್ಣ ಬತ್ತಿದ್ದು, ನೂರಾರು ವರ್ಷಗಳಿಂದ ಸದಾ ತುಂಬಿರುತ್ತಿದ್ದ ಬಳ್ಳಕ್ಕದ ಗುಳಿಗನ ಕಯ ಬರಡಾಗಿದೆ.
ಈ ಪ್ರದೇಶಗಳಲ್ಲಿ ಎಂತಹ ಬಿರು ಬೇಸಗೆ ಬಂದರೂ ಗುಳಿಕನ ಕಯದಲ್ಲಿ ನೀರು ಬತ್ತಿರುವ ನಿದರ್ಶನಗಳೇ ಇಲ್ಲ. ಇಲ್ಲಿನ ಹಿರಿ ತಲೆಮಾರಿನ ಜನ ಹೇಳುವಂತೆ ಒಂದು ಶತಮಾನದಿಂದ ಈಚೆಗೆ ಇಲ್ಲಿ ನೀರು ಕಡಿಮೆಯಾದ ಉದಾಹರಣೆ ಇಲ್ಲ. 2016ರಲ್ಲಿ ಉಂಟಾದ ಬರದ ಸಂದರ್ಭದಲ್ಲೂ ಸಾಕಷ್ಟು ನೀರಿದ್ದ ಈ
ಪ್ರದೇಶ ಈ ಬಾರಿ ಸಂಪೂರ್ಣವಾಗಿ ಖಾಲಿಯಾಗಿದ್ದು ಕಯದಲ್ಲಿನ
ಜಲಚರಗಳು ಅಸುನೀಗಿವೆ.
ಉರುಂಬಿ ಹೊಳೆ ಮುತ್ಲಾಜೆ, ಉರುಂಬಿ ಗಬ್ಲಿಡ್ಕ, ಬಳ್ಳಕ್ಕದ ಜನರ ಜೀವನಾಡಿ. ಕಳೆದ ಹಲವು ವರ್ಷಗಳಿಂದ ಇದೇ ಹೊಳೆಯ
ನೀರನ್ನು ಕೃಷಿ ಹಾಗೂ ಗೃಹಬಳಕೆಗೆ ಇಲ್ಲಿನ ಜನ ಬಳಸುತ್ತಿದ್ದರು.
ಆದರೆ ಇದೀಗ ಈ ಹೊಳೆಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದ್ದು ಜನರು ನೀರಿಗಾಗಿ ಕೊಳವೆ ಬಾವಿ ಸಹಿತ ಪರ್ಯಾಯ ಮಾರ್ಗಗಳತ್ತ ವಾಲಿದ್ದಾರೆ.
ಕಾರಣಿಕರ ಪ್ರದೇಶ
ಉರುಂಬಿ ಹೊಳೆಯ ಚಿಮ್ ಗಯ ಅಥವಾ ಗುಳಿಗನ ಕಯ ಎಂದು
ಕರೆಸಿಕೊಳ್ಳುವ ಬಹಳ ಕಾರಣಿಕದ ಪ್ರದೇಶವೆಂದು ಸ್ಥಳೀಯರ ನಂಬಿಕೆ. ಇಲ್ಲಿ ಗುಳಿಗನ ಬಾವಿ ಇತ್ತೆಂದು ಹೇಳಲಾಗುತ್ತಿದ್ದು, ಇಲ್ಲಿ ವಾರದ ಕೆಲವು ದಿನಗಳಂದು ಯಾರೂ ನೀರೆತ್ತಲು ಹೋಗುವುದಿಲ್ಲ. ಈ ಕಯದಲ್ಲಿನ ಮೀನುಗಳನ್ನು ಯಾರೂ ಬಳಸುವುದಿಲ್ಲ.
ಕುಡಿಯಲು ಗ್ರಾ.ಪಂ. ನೀರು
ಹಲವಾರು ವರ್ಷಗಳಿಂದ ಬಟ್ಟೆ ತೊಳೆಯಲು, ಮನೆ ಕೆಲಸಗಳಿಗೆ ಕಯದ ನೀರನ್ನೇ ಜನ ಬಳಸುತ್ತಿದ್ದರು. ಆದರೆ ಇದೀಗ ಕಯದಲ್ಲಿ ನೀರು ಬತ್ತಿರುವುದರಿಂದ ಪಂಚಾಯತ್ ನೀರಿಗಾಗಿ ಕಾಯಬೇಕಾಗಿದೆ. ಬಿರು ಬೇಸಿಗೆಯಲ್ಲೂ ತುಂಬಿ ತುಳುಕಿರುತ್ತಿದ್ದ
ಕಯ ಇಂದು ಬರಿದಾಗಿದೆ.
ಹೂಳು ತುಂಬಿದೆ
ಕಳೆದ ವರ್ಷ ಸುರಿದ ಭಾರೀ ಮಳೆಗೆ ಹೊಳೆಯಲ್ಲಿ ಮರಳು ಹಾಗೂ ಹೂಳು ತುಂಬಿದ್ದು ನೀರು ಕಡಿಮೆಯಾಗಲು ಕಾರಣ ಎಂಬುದು ಸ್ಥಳೀಯರ ಅಭಿಪ್ರಾಯ. ಅಲ್ಲದೇ ಈ ಹಿಂದೆ ಇಲ್ಲಿ ಮರಳನ್ನು ತೆಗೆಯುತ್ತಿದ್ದು ಈಬಾರಿ ಮರಳೆತ್ತಲು ಬಿಡದಿರುವುದೂ ಕೂಡಾ ಹೂಳು ತುಂಬಲು,ನೀರು ಕಡಿಮೆಯಾಗಲು ಕಾರಣ ಎನ್ನುತ್ತಾರೆ ಜನ. ಅಲ್ಲದೇ ಅಂತರ್ಜಲ ಮಟ್ಟವೂ ನೀರಿನ ಮಟ್ಟ ಕುಸಿಯಲು ಕಾರಣವಾಗಿದೆ.
ನೀರಿಗೆ ವ್ಯವಸ್ಥೆ
ಬಳ್ಳಕ್ಕದಲ್ಲಿ ಕುಡಿಯುವ ನೀರಿಗೆ ಪಂಚಾಯತ್ ಬೋರ್‌ಗೆ
ಪಂಪ್ ಅಳವಡಿಸಿ ನೀರು ಪೂರೈಸುವ ಕೆಲಸ ಮಾಡಿದ್ದೇವೆ. ಜನರಿಗೆ
ತೊಂದರೆಯಾಗದಂತೆ ಪಂಚಾಯತ್ ನಿಂದ ವ್ಯವಸ್ಥೆ ಕಲ್ಪಿಸಲಾಗಿದೆ.
– ಶ್ಯಾಮ್‌ಪ್ರಸಾದ್ ಎಂ.ಆರ್.,
ಪಿಡಿಒ, ಗುತ್ತಿಗಾರು ಗ್ರಾ.ಪಂ.
ಇದೇ ಮೊದಲು
ಕಯದಲ್ಲಿ ನೀರು ಖಾಲಿಯಾಗಿರುವುದು ಇದೇ ಮೊದಲು. ನೂರಾರು ವರ್ಷಗಳಿಂದ ಈ ಕಯ ಸದಾ ತುಂಬಿ ಇರುತ್ತಿತ್ತು.
– ಸುಭಾಶ್ ಬಳ್ಳಕ್ಕ
ಮೊಗ್ರ ಮೇಲೆಮನೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.