ಜಿಲ್ಲಾ ಕೇಂದ್ರಕ್ಕಾಗಿ ಶುರುವಾಯ್ತು ಪೈಪೋಟಿ
ಹರಪನಹಳ್ಳಿಯಲ್ಲಿ ಮತ್ತೆ ಹೋರಾಟದ ಕೂಗು
Team Udayavani, Sep 19, 2019, 12:59 PM IST
ಹರಪನಹಳ್ಳಿ: ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಲು ಆಗ್ರಹಿಸಿ ಹೋರಾಟ ಸಮಿತಿ ಕಾರ್ಯಕರ್ತರು ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.
•ಎಸ್.ಎನ್.ಕುಮಾರ್ ಪುಣಬಗಟ್ಟಿ
ಹರಪನಹಳ್ಳಿ: ತಾಲೂಕಿಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ 371ಜೆ ಕಲಂ ಸೌಲಭ್ಯ ಪಡೆಯುವಲ್ಲಿ ಯಶಸ್ವಿಯಾಗಿರುವ ತಾಲೂಕಿನ ಜನತೆ ಇದೀಗ ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂದು ಮತ್ತೂಂದು ಹೋರಾಟಕ್ಕೆ ಅಣಿಯಾಗಿದ್ದಾರೆ.
1997ರಲ್ಲಿ ಜಿಲ್ಲೆಗಳ ಪುನರಚನೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ದಿ. ಜೆ.ಎಚ್.ಪಟೇಲ್ ಅವರು ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ಬೇರ್ಪಡಿಸಿ ದಾವಣಗೆರೆ ಜಿಲ್ಲೆಗೆ ಸೇರಿಸಿದರು. ಪುನಃ ಎರಡು ದಶಕಗಳ ನಂತರ 2018 ಡಿಸೆಂಬರ್ ಡಿ.26ರಂದು ಅಧಿಕೃತವಾಗಿ ಹರಪನಹಳ್ಳಿ ಬಳ್ಳಾರಿ ಜಿಲ್ಲೆ ಮಡಿಲು ಸೇರಿಕೊಂಡಿದೆ. ಜಿಲ್ಲಾ ಕೇಂದ್ರ 180 ಕಿ.ಮೀ ದೂರವಿದ್ದು, ಬಳ್ಳಾರಿಗೆ ಸಾಗುವ ಸಂಪರ್ಕ ರಸ್ತೆಗಳು ಸರಿಯಿಲ್ಲದಿರುವುದರಿಂದ ಹರಪನಹಳ್ಳಿಯಿಂದ ಬಳ್ಳಾರಿ ತಲುಪಲು ಮೂರುವರೆ ತಾಸು, ಮರಳಿ ಬರಲು ಮೂವರೆತಾಸು ಸಮಯ ಬೇಕಾಗುತ್ತದೆ. ಇಡೀ ದಿನ ಸಂಚಾರ ಮಾಡುವುದರಲ್ಲಿಯೇ ಕಾಲ ವ್ಯರ್ಥವಾಗುತ್ತಿದೆ. ಜಿಲ್ಲಾ ಕೇಂದ್ರಕ್ಕೆ ಇಲ್ಲಿನ ಜನರು ಒಂದು ದಿನದಲ್ಲಿ ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂಬ ಬೇಡಿಕೆಯ ಧ್ವನಿ ಮೊಳಗಿದೆ.
ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಹೂವಿನಹಡಗಲಿ, ಕೊಟ್ಟೂರು, ಹರಪನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳನ್ನು ಒಳಗೊಂಡು ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು. ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯನ್ನು ಮೂರು ಜಿಲ್ಲೆಗಳನ್ನಾಗಿ ವಿಭವಿಸುವುದು ಸೂಕ್ತ. ಬಳ್ಳಾರಿ ಜಿಲ್ಲೆಯಲ್ಲಿ ಶಿರಗುಪ್ಪ, ಬಳ್ಳಾರಿ, ಕುರುಗೋಡು, ಸಂಡೂರು, ಹೊಸಪೇಟೆ ಜಿಲ್ಲೆಯಲ್ಲಿ ಕಂಪ್ಲಿ, ಹೊಸಪೇಟೆ, ಕೂಡ್ಲಿಗಿ, ಹರಪನಹಳ್ಳಿ ಜಿಲ್ಲೆಗೆ ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಾಲೂಕುಗಳನ್ನು ಒಳಗೊಂಡಂತೆ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಬೇಕು ಎಂಬುವುದು ಹೋರಾಟ ಸಮಿತಿಯ ವಕೀಲ ಇದ್ಲಿ ರಾಮಪ್ಪ ಅಭಿಪ್ರಾಯವಾಗಿದೆ. ಹರಪನಹಳ್ಳಿ ಜಿಲ್ಲಾಮಟ್ಟದ ಕಚೇರಿಗಳನ್ನು ತೆರೆಯಲು ಸೂಕ್ತ ಕೇಂದ್ರ ಪ್ರದೇಶವಾಗಿದ್ದು, ರಾಜ್ಯ ಹೆದ್ದಾರಿ ಸಂಪರ್ಕ ಹೊಂದಿರುವುದಲ್ಲದೇ ಇದೀಗ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ಹೊಸಪೇಟೆ, ಬಳ್ಳಾರಿ, ಗಂಗಾವತಿ, ಕೊಪ್ಪಳ, ರಾಯಚೂರು ನಗರಗಳಿಗೆ ತೆರಳು ಹರಪನಹಳ್ಳಿ ಮಾರ್ಗದ ಮೂಲಕವೇ ಸಾಗಬೇಕಿದೆ. ದಾವಣಗೆರೆ, ಹರಿಹರ, ಹೊಸಪೇಟೆ ನಗರಗಳಿಗೆ ರೈಲು ಸಂಪರ್ಕ ಹೊಂದಿದೆ. ಭೌಗೋಳಿಕವಾಗಿ ವಿಶಾಲ ವಿಸ್ತೀರ್ಣ, ಆಡಳಿತಾತ್ಮಕವಾಗಿ ಕಂದಾಯ ಇಲಾಖೆ ಉಪವಿಭಾಗ, ಡಿವೈಎಸ್ಪಿ ಉಪವಿಭಾಗ, ಜಿಪಂ ಉಪ ವಿಭಾಗ ಕಚೇರಿಗಳನ್ನು ಒಳಗೊಂಡಿದೆ. ಶೈಕ್ಷಣಿಕವಾಗಿ ತೆಗ್ಗಿನಮಠ, ಉಜ್ಜಯಿನಿ, ತರಳಬಾಳು ಮಠಗಳ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ಮಾದರಿಯ ಶಾಲಾ-ಕಾಲೇಜುಗಳನ್ನು ಹೊಂದಿದ್ದು, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ತನ್ನದೇ ಆದ ಛಾಪುಮೂಡಿಸಿದೆ. ಹೀಗಾಗಿ ಜಿಲ್ಲಾ ಕೇಂದ್ರವಾಗುವ ಎಲ್ಲ ಅರ್ಹತೆ ಹರಪನಹಳ್ಳಿ ಹೊಂದಿದೆ ಎನ್ನುವುದು ಇಲ್ಲಿಯ ಜನತೆಯ ಪ್ರಬಲ ಕೂಗಾಗಿದೆ.
ಹರಪನಹಳ್ಳಿಗೆ ಹೈಕ ಸೌಲಭ್ಯ ಪಡೆಯಲು 2015 ಡಿಸೆಂಬರ್ 13ರಂದು ಅಂದಿನ ಶಾಸಕ ಎಂ.ಪಿ. ರವೀಂದ್ರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಸರ್ವ ಪಕ್ಷದ ನಿಯೋಗ ಬೆಂಗಳೂರಿಗೆ ತೆರಳಿತ್ತು. 2016 ಜುಲೈ 21ರಂದು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹರಪನಹಳ್ಳಿ ಬಂದ್ ನಡೆಸಲಾಗಿತ್ತು. ಅಲ್ಲದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಂ.ಪಿ.ರವೀಂದ್ರ ಘೋಷಿಸಿದ್ದರು. ಜನರ ನಿರಂತರ ಹೋರಾಟ ಮತ್ತು ಎಂ.ಪಿ. ರವೀಂದ್ರರವರ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರಿಸುವ ಮೂಲಕ 371ಜೆ ಕಲಂ ಸೌಲಭ್ಯ ಒದಗಿಸಿತ್ತು. ಇದೀಗ ಹೈಕ ಹೋರಾಟದ ಮಾದರಿಯಲ್ಲಿಯೇ ಹರಪನಹಳ್ಳಿ ಜಿಲ್ಲಾ ಕೇಂದ್ರವನ್ನಾಗಿಸಲು ಹೋರಾಟದ ಸಿದ್ಧತೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸೂಚನೆ ಕಾಣುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.