ಕಾಂಗ್ರೆಸ್ ಪ್ರಾಬಲ್ಯ; ಬಿಜೆಪಿಗೆ ಮುಖಭಂಗ
ಇಬ್ಬರು ಬಂಡಾಯ ಕಾಂಗ್ರೆಸ್, ಓರ್ವ ಜೆಡಿಎಸ್ ಅಭ್ಯರ್ಥಿಗೆ ಜಯ•ಕಾರ್ಯಕರ್ತರ ಸಂಭ್ರಮ
Team Udayavani, Jun 2, 2019, 11:20 AM IST
ಹರಪನಹಳ್ಳಿ: ಮತ ಎಣಿಕೆ ಕೇಂದ್ರದ ಬಳಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು
ಹರಪನಹಳ್ಳಿ: ಲೋಕಸಭೆ ಚುನಾವಣೆಗೆ ಕ್ಷೇತ್ರದಿಂದ ಹೆಚ್ಚಿನ ಲೀಡ್ ಕೊಡುವ ಮೂಲಕ ತನ್ನ ಪ್ರಾಬಲ್ಯ ಮೆರೆದಿದ್ದ ಬಿಜೆಪಿ ಪಕ್ಷವು ಪುರಸಭೆ ಚುನಾವಣೆಯಲ್ಲಿಯೂ ಭಾರೀ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ ಪಕ್ಷವು ಪುರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಪಾರುಪತ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಪುರಸಭೆಯ ಒಟ್ಟು 27 ಸ್ಥಾನಗಳಲ್ಲಿ ಕಾಂಗ್ರೆಸ್-14, ಬಿಜೆಪಿ-10, ಜೆಡಿಎಸ್-1, 2 ಬಂಡಾಯ ಕಾಂಗ್ರೆಸ್ ಪಕ್ಷೇತರರು ಜಯ ಗಳಿಸಿದ್ದಾರೆ. ಪುರಸಭೆಯ ಗದ್ದುಗೆ ಏರಲು 15 ಸ್ಥಾನಗಳ ಅವಶ್ಯಕತೆಯಿದ್ದು, ಕಾಂಗ್ರೆಸ್ ಸರಳ ಬಹುಮತದ ಮೂಲಕ ಅಧಿಕಾರದತ್ತ ಹೆಜ್ಜೆಯಿಟ್ಟಿದೆ. ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಎಸ್ಸಿಗೆ ಮೀಸಲಾಗಿದ್ದ ಅಗಸನಕಟ್ಟೆ, ಶೀಲಾರಗೇರಿ, ಅಂಬೇಡ್ಕರ್ ನಗರ ಸೇರಿ 3 ವಾರ್ಡ್‌ಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರಿಂದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದು ಖಚಿತವಾಗಿದೆ.
ವಾರ್ಡ್ ನಂ.12ರಲ್ಲಿ ಜೆಡಿಎಸ್ ಅಭ್ಯರ್ಥಿ ಶಾಹೀನಾಬಿ ಗೆಲುವು ಸಾಧಿಸಿದ್ದು, ಕಳೆದ ಚುನಾವಣೆಯಲ್ಲಿಯೂ ಕೇವಲ 1 ಸ್ಥಾನ ಪಡೆದಿದ್ದ ಜೆಡಿಎಸ್ ಈ ಬಾರಿಯೂ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ವಾರ್ಡ್ ನಂ.27ರಲ್ಲಿ ಪುರಸಭೆ ಉಪಾಧ್ಯಕ್ಷ, ಅಧ್ಯಕ್ಷರಾಗಿ ಅನುಭವ ಹೊಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಹಾಲೇಶ್ ಅವರನ್ನು ಪ್ರಥಮ ಬಾರಿಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ರೊಕ್ಕಪ್ಪ ಮಣಿಸಿ ಪುರಸಭೆ ಪ್ರವೇಶ ಮಾಡಿದ್ದಾರೆ. ಅಂಬೇಡ್ಕರ್ ನಗರದಿಂದ ಹರಿಜನ ಕೊಟ್ರೇಶ್ ಪುನರಾಯ್ಕೆಯಾಗುವ ಮೂಲಕ ನಿರಂತರವಾಗಿ 2ನೇ ಬಾರಿಗೆ ಪುರಸಭೆಗೆ ಪ್ರವೇಶಿಸಿದ್ದಾರೆ.
ವಾರ್ಡ್ ನಂ.4ರಲ್ಲಿ ಸಂಬಂಧಿಗಳಾಗಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಜಗದೀಶ್ ಮತ್ತು ಪಕ್ಷೇತರ ಅಭ್ಯರ್ಥಿ ಕೆ.ಎಂ.ಕವಿತಾ ವಾಗೀಶ್ ಮಧ್ಯ ಪೈಪೋಟಿ ನಡೆದು ಬಿಜೆಪಿ ಅಭ್ಯರ್ಥಿ ಎಸ್.ಕಿರಣ್ ವಿಜಯ ಪತಾಕೆ ಹಾರಿಸಿದ್ದಾರೆ. ವಾರ್ಡ್ ನಂ.10ರಲ್ಲಿ ಪುಸರಭೆ ಮಾಜಿ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಅವರು ಒಂದು ಬ್ರೇಕ್‌ನ ಮರಳಿ ಪುರಸಭೆ ಮೆಟ್ಟಿಲೇರಿದ್ದಾರೆ. ವಾರ್ಡ್ ನಂ.13ರಲ್ಲಿ ಎರಡನೇ ಅವಧಿಗೆ ಬಯಸಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ನಜೀರ್‌ಅಹ್ಮದ್ ಅವರು ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಡಿ.ಅಬ್ದುಲ್ರಹಿಮಾನಸಾಬ್ ಎದುರು ಪರಾಭವಗೊಂಡಿದ್ದಾರೆ.
ಕಳೆದ ಅವಧಿಯಲ್ಲಿ ಬಿಜೆಪಿ-10, ಕಾಂಗ್ರೆಸ್-7, ಬಿಸ್ಸಾರ್-6, ಜೆಡಿಎಸ್-1, ಕೆಜೆಪಿ-1, ಪಕ್ಷೇತರರು-2 ಸದಸ್ಯರು ಆಯ್ಕೆಯಾಗಿದ್ದರು. ಈ ಬಾರಿಯೂ ಬಿಜೆಪಿ 10 ಸ್ಥಾನಗಳನ್ನು ಪಡೆದುಕೊಂಡಿದೆ. ಕಳೆದ ಅವಧಿಯಲ್ಲಿ ಕೇವಲ 7 ಸ್ಥಾನ ಪಡೆದುಕೊಂಡಿದ್ದ ಕಾಂಗ್ರೆಸ್ ಬಿಸ್ಸಾರ್, ಕೆಜೆಪಿ, ಪಕ್ಷೇತರರ ಸಹಾಯದಿಂದ ಅಧಿಕಾರದ ಗದ್ದುಗೆ ಹಿಡಿದು ಆಡಳಿತ ನಡೆಸಿತ್ತು. ನಂತರ ಬದಲಾದ ರಾಜಕಾರಣದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದು ಅವಧಿ ಪೂರೈಸಿದೆ. ಪಟ್ಟಣದಲ್ಲಿ ಮುಸ್ಲಿಂ ಸಮುದಾಯ ನಿರ್ಣಾಯಕ ಪಾತ್ರದಲ್ಲಿದ್ದು, ಈ ಬಾರಿ ಪಕ್ಷ ನೋಡದೇ ಅಭ್ಯರ್ಥಿ ವ್ಯಕ್ತಿತ್ವ ಅಧಾರದ ಮೇಲೆ ಮತದಾನ ಮಾಡಿರುವುದು ಕೆಲವೊಂದು ಕಡೆ ಕಾಂಗ್ರೆಸ್‌ಗೆ ಹೊಡೆತ ಬಿದ್ದಿದೆ. ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಅವರು ಪುರಸಭೆ ಚುನಾವಣೆಯ ಅಂತಿಮ ದಿನಗಳಲ್ಲಿ ಉಸ್ತುವಾರಿ ಪಡೆದು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.
ಪಟ್ಟಣದ ತರಳಬಾಳು ಶಾಲೆಯಲ್ಲಿ ನಡೆದ ಮತ ಎಣಿಕೆ ಕಾರ್ಯ ಯಾವುದೇ ಗೊಂದಲವಿಲ್ಲದೇ ಸುಗಮವಾಗಿ ನಡೆಯಿತು. ಅಭ್ಯರ್ಥಿಗಳ ಪರ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆಯೇ ಹೊತ್ತುಕೊಂಡು ಮೆರವಣಿಗೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.