ಅವಿಶ್ವಾಸ ಗೊತ್ತುವಳಿಗೆ ಸೋಲು
ಸಿಗದ ಕನಿಷ್ಟ ಸದಸ್ಯರ ಬೆಂಬಲ•ಜೆಡಿಎಸ್, ಕಾಂಗ್ರೆಸ್‌ಗೆ ಮುಖಭಂಗ
Team Udayavani, Aug 7, 2019, 10:18 AM IST
ಹರಿಹರ: ತಾಪಂ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿಗೆ ಸೋಲಾದ ನಂತರ ಬಿಜೆಪಿ ಮುಖಂಡರು ವಿಜಯೋತ್ಸವ ಆಚರಿಸಿದರು. ಮಾಜಿ ಶಾಸಕ ಬಿ.ಪಿ.ಹರೀಶ್ ಮತ್ತಿತರರಿದ್ದರು
ಹರಿಹರ: ಇಲ್ಲಿನ ತಾಪಂ ಅಧ್ಯಕ್ಷೆ ಎಚ್.ಎಸ್. ಶ್ರೀದೇವಿ ಮಂಜಪ್ಪ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿ ಕನಿಷ್ಟ ಸದಸ್ಯರ ಬೆಂಬಲವೂ ಇಲ್ಲದೆ ಬಿದ್ದು ಹೋಗಿದ್ದು, ಜೆಡಿಎಸ್, ಕಾಂಗ್ರೆಸ್ ಮುಖಂಡರಿಗೆ ತೀವ್ರ ಮುಖಭಂಗವಾಗಿದೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ತಾಪಂ ಸಭಾಂಗಣದಲ್ಲಿ ಮಂಗಳವಾರ ಉಪಾಧ್ಯಕ್ಷೆ ಜಯ್ಯಮ್ಮ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಹಾಜರಿದ್ದ ಎಲ್ಲಾ 7 ಸದಸ್ಯರೂ ಗೊತ್ತುವಳಿ ಪರವಾಗಿ ಕೈ ಎತ್ತಿದರಾದರೂ ಅಗತ್ಯವಾದ ಮೂರನೆ ಎರಡರಷ್ಟು, ಅಂದರೆ ಕನಿಷ್ಟ 10 ಸದಸ್ಯರ ಬೆಂಬಲವಿಲ್ಲದ್ದರಿಂದ ಗೊತ್ತುವಳಿಗೆ ಸೋಲುಂಟಾಗಿದೆ ಎಂದು ಇಒ ಗಂಗಾಧರನ್ ಘೋಷಿಸಿದರು.
ಕೈಕೊಟ್ಟ ಇಬ್ಬರು ಸದಸ್ಯರು: ಕಳೆದ ಜು. 10ರಂದು ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಎಲ್ಲಾ 10 ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ, ವಿಶೇಷ ಸಭೆ ಕರೆದು ಅವಿಶ್ವಾಸ ಮಂಡನೆಗೆ ಅವಕಾಶ ಮಾಡಿಕೊಡುವಂತೆ ಸಹಿ ಮಾಡಿ ಮನವಿ ಸಲ್ಲಿಸಿದ್ದರು.
ಆದರೆ ಮಂಗಳವಾರ ನಡೆದ ಸಭೆಗೆ ಕೊಂಡಜ್ಜಿ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಪ್ರೇಮಾ ಪರಮೇಶ್ವರಪ್ಪ, ಕೊಕ್ಕನೂರು ಕ್ಷೇತ್ರದ ಜೆಡಿಎಸ್ ಸದಸ್ಯ ಬಸವನಗೌಡ ಬಿ. ಗೈರು ಹಾಜರಾಗುವ ಮೂಲಕ ಬಿಜೆಪಿ ಅಭ್ಯರ್ಥಿ ಶ್ರೀದೇವಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಪರೋಕ್ಷವಾಗಿ ಸಹಕರಿಸಿದರು.
ಸಭೆಯಲ್ಲಿ ಹಾಜರಿದ್ದ ಸದಸ್ಯರು: ಕಾಂಗ್ರೆಸ್ ಸದಸ್ಯರಾದ ಕುಂಬಳೂರು ಕ್ಷೇತ್ರದ ಆದಾಪುರ ವೀರಭದ್ರಪ್ಪ, ಕುಣಿಬೆಳಕೆರೆ ಕ್ಷೇತ್ರದ ಎನ್.ಪಿ.ಬಸವಲಿಂಗಪ್ಪ, ರಾಜನಹಳ್ಳಿ ಕ್ಷೇತ್ರದ ಲಕ್ಷ್ಮೀ ಮಹಾಂತೇಶ್, ಜೆಡಿಎಸ್ ಸದಸ್ಯರಾದ ಸಿರಿಗೆರೆ ಕ್ಷೇತ್ರದ ಕೊಟ್ರಪ್ಪಗೌಡ, ವಾಸನದ ಜಿ.ಸಿ.ಬಸವರಾಜ್, ಗುತ್ತೂರು ಕ್ಷೇತ್ರದ ಸದಸ್ಯೆ, ಹಾಲಿ ಉಪಾಧ್ಯಕ್ಷೆ ಜಯ್ಯಮ್ಮ ಬಸವಲಿಂಗಪ್ಪ, ಜಿಗಳಿ ಕ್ಷೇತ್ರದ ರತ್ನಮ್ಮ ಕೆ.ಆರ್.ರಂಗಪ್ಪ, ಎಳೆಹೊಳೆ ಕ್ಷೇತ್ರದ ಶಾಂತಮ್ಮ ಗದಿಗೆಪ್ಪ ಸಭೆಯಲ್ಲಿ ಹಾಜರಿದ್ದರು. ನಿರೀಕ್ಷೆಯಂತೆ ಬಿಜೆಪಿಯ ಎಲ್ಲಾ ಐವರು ಸದಸ್ಯರು ಸಭೆಗೆ ಗೈರಾಗಿದ್ದರು.
ಸತ್ಯಕ್ಕೆ ಸಿಕ್ಕ ಜಯ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಅವಿಶ್ವಾಸ ಗೊತ್ತುವಳಿಗೆ ಸಹಿ ಮಾಡಿದ್ದವರೇ ಗೈರು ಹಾಜರಾಗಿರುವುದು ಅವಿಶ್ವಾಸ ನಿರ್ಣಯಕ್ಕೆ ಸೋಲಾಗಲು ಕಾರಣ. ಕೆಲ ಸದಸ್ಯರು ನನ್ನ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿರುವುದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಎಲ್ಲಾ ಸದಸ್ಯರ ಕ್ಷೇತ್ರಗಳಿಗೂ ಸಮಾನ ಆದ್ಯತೆ, ಅನುದಾನ ನೀಡುತ್ತಾ ಅಭಿವೃದ್ಧಿ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ನನ್ನ ವಿರುದ್ಧದ ನಿರ್ಣಯಕ್ಕೆ ಸೋಲಾಗುವ ಮೂಲಕ ಸತ್ಯಕ್ಕೆ ಜಯ ಸಿಕ್ಕಂತಾಗಿದೆ ಎಂದರು.
ವೀರಭದ್ರಪ್ಪಗೆ ನಿರಾಶೆ: ತಾಪಂ ಅಧ್ಯಕ್ಷ ಸ್ಥಾನ ಎಸ್ಸಿ ವರ್ಗಕ್ಕೆ ಮೀಸಲಾಗಿದ್ದು, ಜೆಡಿಎಸ್, ಬಿಜೆಪಿ ಮೈತ್ರಿಯಲ್ಲಿ ಏಕೈಕ ಅರ್ಹ ಅಭ್ಯರ್ಥಿ ಶ್ರೀದೇವಿ ಅವರನ್ನು ಅಧ್ಯಕ್ಷರನ್ನಾಗಿಸಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಹೊಸ ಮೈತ್ರಿಗೆ ಮುಂದಾಗಿದ್ದು, ಅದೆ ಮೀಸಲು ವರ್ಗಕ್ಕೆ ಸೇರಿದ್ದ ಏಕೈಕ ಅಭ್ಯರ್ಥಿಯಾಗಿ ಅಧ್ಯಕ್ಷರಾಗಲು ತುದಿಗಾಲಲ್ಲಿ ನಿಂತಿದ್ದ ಕಾಂಗ್ರೆಸ್‌ನ ವೀರಭದ್ರಪ್ಪಗೆ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿರುವುದು ನಿರಾಸೆ ಮೂಡಿಸಿದೆ.
ಐವರು ಸದಸ್ಯ ಬಲದ ಬಿಜೆಪಿಗೆ ಗದ್ದುಗೆ
ತಾಪಂನಲ್ಲಿ ಜೆಡಿಎಸ್‌ನ 6, ಬಿಜೆಪಿಯ 5 ಹಾಗೂ ಕಾಂಗ್ರೆಸ್‌ನ 4 ಸದಸ್ಯರು ಸೇರಿ ಒಟ್ಟು 15 ಸದಸ್ಯರಿದ್ದಾರೆ. ತಾಪಂ ಅಧಿಕಾರ ಹಿಡಿಯಲು ಕನಿಷ್ಟ 8 ಸದಸ್ಯ ಬಲ ಅತ್ಯಗತ್ಯ. ಮುಂಚೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿಗೆ ಸರಾಗವಾಗಿ ಅಧಿಕಾರ ದಕ್ಕಿತ್ತು. ಆದರೆ ಈಗ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿಕೊಂಡಿದ್ದು, ಬಿಜೆಪಿಗೆ ಅಧಿಕಾರ ತೊರೆಯುವುದು ಅನಿವಾರ್ಯವಾಗಿತ್ತು. ಕೊನೆ ಗಳಿಗೆಯಲ್ಲಿ ಇಬ್ಬರು ಸದಸ್ಯರು ಸಭೆಗೆ ಗೈರಾಗಿದ್ದು ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸದಸ್ಯರಿಗೆ ವಿಪ್ ಜಾರಿಗೊಳಿಸಿರಲಿಲ್ಲ ಎನ್ನಲಾಗಿದೆ. ಅವಿಶ್ವಾಸ ಗೊತ್ತುವಳಿ ಮಂಡಿಸಲು ತಾಪಂನ ಚುನಾಯಿತ ಒಟ್ಟು ಸದಸ್ಯರ ಅರ್ಧದಷ್ಟು ಅಂದರೆ ಕನಿಷ್ಟ 8 ಸದಸ್ಯರು ಮನವಿ ಮಾಡಬಹುದಾದರೂ ನಿರ್ಣಯದ ಗೆಲುವಿಗೆ ಒಟ್ಟು ಸದಸ್ಯರ ಮೂರನೆ ಎರಡರಷ್ಟು ಅಂದರೆ 10 ಸದಸ್ಯರ ಬೆಂಬಲ ಕಡ್ಡಾಯವಾಗಿರುವುದು ಬಿಜೆಪಿ ವರವಾಗಿ ಪರಿಣಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.