ಪ್ರತಿ ಮಳೆಗಾಲ ಮುಳುಗುವ ಬದುಕು
ಸಾರಥಿ-ಚಿಕ್ಕಬಿದರೆ ಸೇತುವೆ ಕಥೆ-ವ್ಯಥೆ • ಈಡೇರದ ಬೇಡಿಕೆ-ಬೇಸತ್ತ ಜನ
Team Udayavani, Aug 11, 2019, 10:18 AM IST
ಹರಿಹರ: ಮಳೆ ನೀರಿನಿಂದ ತುಂಬಿದ ಹಿರೇಹಳ್ಳದ ನೀರು ಸಾರಥಿ-ಚಿಕ್ಕಬಿದರೆ ಮಧ್ಯದ ಸೇತುವೆ ಮೇಲಿಂದ ಹರಿಯುತ್ತಿದೆ. (ಸಂಗ್ರಹ ಚಿತ್ರ)
ಹರಿಹರ: ಮಳೆಗಾಲ ಆರಂಭವಾದರೆ ಸಾಕು ತಾಲ್ಲೂಕಿನ ಸಾರಥಿ-ಚಿಕ್ಕಬಿದರೆ ಸೇತುವೆ ಮುಳುಗಡೆಯಾಗುವುದು ಸಾಮಾನ್ಯ. ಆದರೆ ಸ್ಥಳೀಯರಿಗೆ ಮಾತ್ರ ತಮ್ಮ ಬದುಕೇ ಮುಳುಗಡೆಯಾದಂತಹ ಯಾತನೆ.
ಪಶ್ಚಿಮ ಘಟ್ಟದಲ್ಲೆಲ್ಲೋ ಜೋರು ಮಳೆ ಸುರಿದು, ತುಂಗಭದ್ರೆಯ ಹರಿವು ಹೆಚ್ಚಾದರೆ ನದಿಯ ಹಿನ್ನೀರಿಗೆ ಈ ಸೇತುವೆ ಮುಳುಗಡೆಯಾಗುತ್ತದೆ. ತಾಲೂಕಿನಲ್ಲೂ ದೊಡ್ಡ ಮಳೆಯಾದರೆ ಸಾಕು, ಹಿರೆಹಳ್ಳ ತುಂಬಿಕೊಂಡು ಸೇತುವೆ ಮೇಲೆ ನೀರು ಭೋರ್ಗರೆಯುವುದರಿಂದ ಸಂಚಾರ ಕಡಿತಗೊಳ್ಳುತ್ತದೆ.
ಎರಡೂ ಗ್ರಾಮಗಳ ಮಧ್ಯೆ ಹರಿದಿರುವ ಹಳ್ಳಕ್ಕೆ ಹಿಂದಿನ ಕಾಲದಲ್ಲಿ ಆಗಿನ ಅಗತ್ಯದಂತೆ ಚಿಕ್ಕ ಸೇತುವೆ ನಿರ್ಮಿಸಲಾಗಿತ್ತು. ಆದರೀಗ ಜನ-ವಾಹನ ಸಂಚಾರ ಹೆಚ್ಚಿದ್ದು, ಪರಸ್ಪರ ಗ್ರಾಮಗಳಿಗೆ ಮಾತ್ರವಲ್ಲದೆ ನಗರ, ತಾಲೂಕು ಕೇಂದ್ರದ ಸಂಪರ್ಕ ಕೊಂಡಿಯಾಗಿ ಮಹತ್ವ ಪಡೆದಿರುವ ಸೇತುವೆ, ನದಿ ನೀರು ಸ್ವಲ್ಪ ಅಧಿಕವಾದರೂ 15-20 ದಿನಗಳ ಕಾಲ ಬಂದ್ ಆಗುತ್ತದೆ.
ಸದ್ಯಕ್ಕೀಗ ಜನಜೀವನ ಅಸ್ತವ್ಯಸ್ತ: ಎಂದಿನಂತೆ ಈ ಸಲದ ಮಳೆಗಾಲದಲ್ಲೂ ಸ್ಥಳೀಯರ ಬದುಕು ಅಸ್ತವ್ಯಸ್ತವಾಗಿದೆ. ಕಳೆದ 5 ದಿನಗಳಿಂದ ಸೇತುವೆ ಮೇಲೆ ನದಿಯ ಹಿನ್ನೀರು ಆವರಿಸಿದ್ದು, ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಉದ್ಯೋಗಕ್ಕೆ, ವ್ಯಾಪಾರ-ವಹಿವಾಟಿಗೆ, ಆಸ್ಪತ್ರೆ ಮತ್ತಿತರೆ ಅಗತ್ಯತೆಗಳಿಗೆ ನಿತ್ಯ ನಗರಕ್ಕೆ ಬರಲಾಗದೆ ಜನರು ಪರಿತಪಿಸುತ್ತಿದ್ದಾರೆ. ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ನೀಡಿಲ್ಲವಾದ್ದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಗೈರು ಹಾಜರಾಗಿ ಶೈಕ್ಷಣಿಕ ಹಿನ್ನೆಡೆ ಅನುಭವಿಸುತ್ತಿದ್ದಾರೆ.
ಜನರೂ ದೇವರ ಮೇಲೆ ಭಾರ ಹಾಕಿ ಮುಳುಗಡೆಯಾದ, ತಡೆಗೋಡೆ ಇಲ್ಲದ ಸೇತುವೆ ಮೇಲೆ ಒಂದೆರಡು ದಿನ ಓಡಾಡಿದರು. ಆದರೆ ನೀರಿನ ಮಟ್ಟ ಮತ್ತಷ್ಟು ಅಧಿಕವಾಗಿ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಬೇಕಾಯಿತು.
ಗುರುವಾರದೀಮದ ಜಿಲ್ಲಾಡಳಿತ ಒಂದು ಬೋಟ್ ವ್ಯವಸ್ಥೆ ಮಾಡಿದ್ದರೂ ಮತ್ತೂಂದು ದಡದಿಂದ ಮುಂದೆ ಸಾಗಲು ಯಾವುದೇ ವಾಹನಗಳಿಲ್ಲ. ಅನಿವಾರ್ಯವಾಗಿ ಜನರು ದ್ವಿಚಕ್ರ ವಾಹನ, ಮಾರುತಿ ವ್ಯಾನು, ಕಾರುಗಳಲ್ಲಿ ಹರಪನಹಳ್ಳಿ ತಾಲೂಕು ದುಗ್ಗಾವತಿಗೆ ತೆರಳಿ, ಮಂಗಳೂರು-ಹೊಸಪೇಟೆ ಹೆದ್ದಾರಿ ಮೂಲಕ ಸುತ್ತು ಬಳಸಿ ಸಂಚಾರ ಮಾಡಬೇಕಾಗಿದೆ. 3 ಕಿ.ಮೀ. ಅಂತರಕ್ಕೆ ಸಂಪರ್ಕವಿಲ್ಲದ್ದರಿಂದ 15 ಕಿ.ಮೀ ದೂರ ಕ್ರಮಿಸಬೇಕಾಗಿದೆ.
ಚಿಕ್ಕಬಿದರೆ ಗ್ರಾಮವಂತೂ ನಡುಗಡ್ಡೆಯಾಗುತ್ತದೆ. ಗ್ರಾಮದಿಂದ ಸಾರಥಿ ಪ್ರೌಢಶಾಲೆಗೆ ಬರಲಾಗದೆ ವಿದ್ಯಾರ್ಥಿಗಳು, ತಮ್ಮ ಜಮೀನುಗಳಿಗೆ ತೆರಳಲಾಗದೆ ಎರಡೂ ಗ್ರಾಮದ ರೈತರು ಪರಿತಪಿಸಬೇಕಾಗಿದೆ.
ದಶಕಗಳ ಬೇಡಿಕೆ ಈಡೇರಿಲ್ಲ: ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಈಗಿನ ಸೇತುವೆ ನೆಲ ಮಟ್ಟದಿಂದ ಅಂದಾಜು 8 ಅಡಿ ಎತ್ತರವಿದ್ದು, ಅದನ್ನು ಕನಿಷ್ಠ 20-25 ಅಡಿವರೆಗೆ ಎತ್ತರಿಸಿ ಹೊಸ ಸೇತುವೆ ನಿರ್ಮಿಸಿದರೆ ಸೇತುವೆ ನದಿ ಹಿನ್ನೀರಿನಿಂದ ಜಲಾವೃತವಾಗುವುದು ತಪ್ಪುವುದಲ್ಲದೆ ಹಳ್ಳದ ನೀರು ಹೆಚ್ಚಿದರೂ ಸಮಸ್ಯೆಯಾಗಲ್ಲ.
ಆದ್ದರಿಂದ ನೂತನ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಹಲವು ದಶಕಗಳಿಂದ ಕೋರುತ್ತಿದ್ದರೂ ಜನಪ್ರತಿನಿಧಿಗಳು ಗಮನಹರಿಸಿಲ್ಲ. ಪ್ರತಿವರ್ಷ ಸೇತುವೆ-ದಾರಿ ಬಂದ್ ಆದಾಗಲೊಮ್ಮೆ ಬಂದು ಶಾಶ್ವತ ಪರಿಹಾರ ರೂಪಿಸುವ, ಪರ್ಯಾಯ ವ್ಯವಸ್ಥೆ ಮಾಡುವ ಭರವಸೆ ನೀಡುತ್ತಾರಾದರೂ ಈ ಎರಡೂ ಗ್ರಾಮಗಳ ಅಂದಾಜು ಏಳು ಸಾವಿರ ಗ್ರಾಮಸ್ಥರಿಗೆ ಮಳೆಗಾಲದ ಬವಣೆ ಮಾತ್ರ ತಪ್ಪಿಲ್ಲ.
ಬಿ.ಪಿ.ಹರೀಶ್ ಶಾಸಕರಾಗಿದ್ದಾಗ ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ವಹಿಸಿದ್ದು, ನಂತರ ಶಿವಶಂಕರ್ ಶಾಸಕರಿದ್ದಾಗ ಟೆಂಡರ್ ಪ್ರಕ್ರಿಯೆ ಮುಗಿದರೂ ಗುತ್ತಿಗೆದಾರ ಎನ್.ಆರ್.ಕನ್ಸ್‌ಟ್ರಕ್ಷನ್ಸ್ ಇನ್ನೂ ಕಾಮಗಾರಿ ಆರಂಭಿಸಿಲ್ಲ.
ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ಅಥವಾ ಕಾನೂನು ಕ್ರಮದಿಂದ ಬಗ್ಗಿಸಿ, ಇಲ್ಲವೆ ಮತ್ತೂಬ್ಬ ಗುತ್ತಿಗೆದಾರಗೆ ಕಾಮಗಾರಿ ವಹಿಸುವ ಕಾಳಜಿಯನ್ನೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತೋರದಿರುವುದು ವ್ಯವಸ್ಥೆಯ ಬಗ್ಗೆಯೇ ಸ್ಥಳೀಯ ಜನರು ಬೇಸರಪಟ್ಟುಕೊಳ್ಳುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.