ರಂಗಭೂಮಿಗೆ ಕೈಲಾಸಂ ಕೊಡುಗೆ ಅಪಾರ
ಶಿಸ್ತಿನಿಂದ ಕೂಡಿತ್ತು ಟಿಪಿಕೆ ಬಾಲ್ಯ ಜೀವನವಿದ್ಯಾರ್ಥಿಗಳಲ್ಲಿಸಾಹಿತ್ಯ-ನಾಟಕಾಸಕ್ತಿ ಬೆಳೆಸಲು ಸಲಹೆ
Team Udayavani, Dec 29, 2019, 4:25 PM IST
ಹರಿಹರ: ಕನ್ನಡ ರಂಗಭೂಮಿಯನ್ನು ಸಾಂಪ್ರದಾಯಿಕತೆಯ ಸಂಕೋಲೆಗಳಿಂದ ಹೊರಗೆಳೆದು ತಂದು ಅದಕ್ಕೆ ಹೊಸ ತಿರುವು, ಆಯಾಮಗಳನ್ನು ತಂದು ಕೊಟ್ಟ ಹಿರಿಮೆ ತ್ಯಾಗರಾಜ ಪರಮಶಿವ ಕೈಲಾಸಂ (ಟಿಪಿಕೆ) ರಿಗೆ ಸಲ್ಲುತ್ತದೆ ಎಂದು ಲೀಡ್ ಬ್ಯಾಂಕ್ ಮಾಜಿ ಡಿಜಿಎಂ, ಲೇಖಕ ಎನ್.ಟಿ.ಎರ್ರಿಸ್ವಾಮಿ ಹೇಳಿದರು.
ನಗರದ ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕಸಾಪದಿಂದ ನಡೆದ ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಹಾಗೂ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು, “ಕನ್ನಡ ಪ್ರಹಸನ ಪಿತಾಮಹ’ ಎಂದೇ ಖ್ಯಾತಿ ಪಡೆದ ಟಿಪಿಕೆ ಕನ್ನಡದ ಜನರ ಮನೆ, ಮನಗಳಲ್ಲಿ ಚಿರಕಾಲ ಉಳಿಯುವ ಜನಪ್ರಿಯ ಹೆಸರಾಗಿದೆ ಎಂದರು.
ತಮಿಳು ಮೂಲದ ಇವರ ತಂದೆ ಜಸ್ಟಿಸ್ ಪರಮಶಿವ ಅಯ್ಯರ್ ಮೈಸೂರು ಸರಕಾರಿ ಸೇವೆಯಲ್ಲಿದ್ದರು. ಬೆಂಗಳೂರಿನಲ್ಲಿ ಜನಿಸಿದ ಟಿಪಿಕೆ ಬಾಲ್ಯ ಜೀವನ ಅತ್ಯಂತ ಶಿಸ್ತಿನಿಂದ ಕೂಡಿತ್ತು. ಬೆಂಗಳೂರು, ಮೈಸೂರು, ಹಾಸನದಲ್ಲಿ ಪ್ರಾಥಮಿಕ ಶಿಕ್ಷಣ, ಮದರಾಸಿನಲ್ಲಿ ಮೆಟ್ರಿಕ್ಯುಲೇಶನ್, ಪ್ರಸಿಡೆನ್ಸಿ ಕಾಲೇಜಿನಲ್ಲಿ ಭೂವಿಜ್ಞಾನ ವಿಷಯದಲ್ಲಿ ಬಿ.ಎ., ಎಂ.ಎ ಪದವಿ, ವಿದ್ಯಾರ್ಥಿ ವೇತನದಲ್ಲಿ ಲಂಡನ್ನಿನ ರಾಯಲ್ ಕಾಲೇಜ್ ಆಫ್ ಸೈನ್ಸ್ ನಲ್ಲಿ ಏಳು ವಿಷಯಗಳಲ್ಲಿ ಮೊದಲ ದರ್ಜೆ ಪಡೆದು ಪ್ರಶಸ್ತಿ ಪಡೆದರು.
ರಾಯಲ್ ಜಿಯಾಲಜಿಕಲ್ ಸೊಸೈಟಿಗೆ ಪ್ರಬಂಧ ಸಲ್ಲಿಸಿ ಫೆಲೋಶಿಪ್ ಪಡೆದರು. ಫುಟ್‌ಬಾಲ್‌ನಲ್ಲಿ ಅಜೇಯ ಗೋಲ್ ಕೀಪರ್ ಆಗಿದ್ದರು ಎಂದರು. ಇಂಗ್ಲೆಂಡಿನಲ್ಲಿ ವ್ಯಾಸಂಗ ಮಡುವಾಗ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳು ಟಿಪಿಕೆ ಮೇಲೆ ಅಪಾರ ಪ್ರಭಾವ ಬೀರಿದವು. ಅದೇ ತಂತ್ರಗಾರಿಕೆ ಬಳಸಿ ಹಲವು ನಾಟಕಗಳನ್ನು ರಚಿಸಿದರು. ಬೆಂಗಳೂರಿನಲ್ಲಿ ರವೀಂದ್ರನಾಥ ಟ್ಯಾಗೋರರ ಸಮ್ಮುಖದಲ್ಲಿ ಪ್ರದರ್ಶಿಸಿದ ನಾಟಕ ಟೊಳ್ಳುಗಟ್ಟಿ ಪ್ರಥಮ ಬಹುಮಾನ ಗಳಿಸಿತಲ್ಲದೆ ಕನ್ನಡ ರಂಗಭೂಮಿಯಲ್ಲಿ ಕ್ರಾಂತಿ ಎಬ್ಬಿಸಿತು ಎಂದರು.
ಹೋಂ ರೂಲು, ಬಹಿಷ್ಕಾರ, ಗಂಡಸ್ಕತ್ರಿ, ನಮ್ ಬ್ರಾಹ್ಮಣ್ಕೆ, ಬಂಡವಾಳವಿಲ್ಲದ ಬಡಾಯಿ, ನಮ್ ಕ್ಲಬ್ಬು, ಅಮ್ಮಾವ್ರ ಗಂಡ, ಸತ್ತವನ ಸಂತಾಪ, ಅನುಕೂಲಕೊಬ್ಬ ಅಣ್ಣ, ಸೀಕರ್ಣೆ ಸಾವಿತ್ರಿ, ಪೋಲಿಕಿಟ್ಟಿ, ವೈದ್ಯನವ್ಯಾ, ಸೂಳೆ ಇವರ ಪ್ರಖ್ಯಾತ ನಾಟಕಗಳಾಗಿದ್ದು, ಕೋಳಿಕೆ ರಂಗ, ನಂಜಿ ನನ್ ಅಪರಂಜಿ, ಕಾಶಿಗ್ ಹೋದ ನಂ ಭಾವ ಕವನಗಳಾದರೆ, ಇಂಗ್ಲಿಷ್‌ನಲ್ಲಿ ಕವನ, ಕಥೆ, ನಾಟಕಗಳನ್ನೂ ರಚಿಸಿದ್ದರು ಎಂದರು.
1945ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾಡಿದ ಭಾಷಣ ಅತ್ಯಂತ ಚಿಕ್ಕ ಹಾಗೂ ಚೊಕ್ಕ ಭಾಷಣವೆಂದು ಖ್ಯಾತವಾಗಿದೆ. ಅತಿ ಕ್ಲುಪ್ತ, ಪ್ರಭಾವಿ ಭಾಷಣಕ್ಕೆ, ಮಾತುಕತೆಗೆ ಅವರು ಪ್ರಸಿದ್ಧರಾಗಿ, ಕನ್ನಡಕೊಬ್ಬನೆ ಕೈಲಾಸಂ ಎನಿಸಿಕೊಂಡರು.
ಕೂತಲ್ಲಿ ಕಂಪನಿ, ನಿಂತಲ್ಲಿ ನಾಟಕ ಎಂದು ಹೋದೆಡೆಯಲ್ಲೆಲ್ಲ ಜನರನ್ನು ನಕ್ಕುನಗಿಸಿದ ಟಿಪಿಕೆ ನಿಜ ಜೀವನದ ರಂಗದಿಂದ 1946ರಲ್ಲಿ ಮರೆಯಾದರು. ಇವರ ಸತತ ಸಿಗರೇಟ್, ಮದ್ಯಪಾನ, ಹಗಲು ಮಲಗಿ ರಾತ್ರಿ ಎಚ್ಚರವಿರುವ ವ್ಯಕ್ತಿತ್ವ ಹೊಂದಿದ ಇವರನ್ನು ಕುಟುಂಬ ದೂರ ಮಾಡಿತು. ಆಗ ಇವರು ಅವರ ತಂದೆ ಮನೆಯ ಕಾರ್ ಶೆಡ್‌ನಲ್ಲಿ ಜೀವಿಸುತ್ತಿದ್ದರು ಎಂದರು.
ದತ್ತಿ ದಾನಿ ಕೈಗಾರಿಕೋದ್ಯಮಿ ಎಂ.ಆರ್. ಸತ್ಯನಾರಾಯಣ ಮಾತನಾಡಿ, ವ್ಯಕ್ತಿತ್ವ ವಿಕಸನ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಕ್ರಮ ಆಯೋಜಿಸಿದರೆ ಅದನ್ನು ತಾವು ಪ್ರಾಯೋಜಕತ್ವ ನೀಡುವುದಾಗಿ ಹೇಳಿದರು.
ಇನ್ನೋರ್ವ ದತ್ತಿ ದಾನಿ ನಿವೃತ್ತ ಕನ್ನಡ ಉಪನ್ಯಾಸ್ಯಕ ಪ್ರೊ.ಎಚ್.ಟಿ.ಶಂಕರಮೂರ್ತಿ ಮಾತನಾಡಿ, ಟಿಪಿಕೆ ಸಾಹಿತ್ಯ ಹಾಸ್ಯ ಹಾಗೂ ವಿಡಂಬಣೆ ಒಳಗೊಂಡಿದ್ದವು. ಅವರ ಕಾಲೇಜಿನ ಹಿಸ್ಟರಿ ಉಪನ್ಯಾಸಕರನ್ನು ಇಸ್ವಿ ಮಾಸ್ಟರ್ ಎನ್ನುತಿದ್ದರು. ಆ ಉಪನ್ಯಾಸಕರು ಅಶೋಕ ಚಕ್ರವರ್ತಿ ಮರಣ ಹೊಂದಿದ ದಿನಾಂಕ ಕೇಳಿದರೆ ನಾನಾಗ ಹುಟ್ಟಿದ್ದಿಲ್ಲ ಎನ್ನುವುದು, ಸಿಟ್ಟಾದ ಉಪನ್ಯಾಸಕರು ನಿನ್ನ ತಿಥಿ ಮಾಡ್ತೇನೆ ಎಂದಾಗ ನೀವು ನನ್ನ ಮಗ
ಅಲ್ವಲ್ಲ ಸಾರ್ ಎನ್ನುತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಮಾತನಾಡಿದರು. ಕೈಗಾರಿಕೋದ್ಯಮಿ ಎಂ.ಆರ್. ಸತ್ಯನಾರಾಯಣರವರ ಮಾಯಸಂದ್ರ ರಾಮಸಂದ್ರ ರಾಮಸ್ವಾಮಿ ಕುಟುಂಬ ವರ್ಗದ ದತ್ತಿ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಎಚ್.ಟಿ.ಶಂಕರಮೂರ್ತಿಯವರ ಹರಿಯಬ್ಬೆ ಅಂಗಡಿ ತಿಪ್ಪಯ್ಯ ಮತ್ತು ರುದ್ರಮ್ಮ ಸ್ಮರಣಾರ್ಥ ದತ್ತಿ ಉಪನ್ಯಾಸ ನಡೆಸಲಾಯಿತು. ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯ ಇನಾಯತ್ ಉಲ್ಲಾ ಟಿ., ಹೊಳೆಸಿರಿಗೆರೆ ಪ್ರಗತಿಪರ ರೈತ ಕುಂದೂರು ಮಂಜಪ್ಪರನ್ನು ಸತ್ಕರಿಸಲಾಯಿತು.
ಪ್ರಾಚಾರ್ಯ ರವಿರಾಜ್ ಗೆಜ್ಜಿ, ಉಮೇಶ್ ಲಕ್ಕೊಳ್ಳಿ, ಜಿ.ವಿರೂಪಾಕ್ಷಪ್ಪ, ತಿಪ್ಪೇಸ್ವಾಮಿ, ನಿವೃತ್ತ ಶಿಕ್ಷಕ ಕೊಟ್ರಬಸಪ್ಪ ಎ.ಡಿ., ವಾಣಿ ಮಾತನಾಡಿದರು. ಕಲಾವಿದರಾದ ಪರಮೇಶ್ವರ ಕತ್ತಿಗೆ, ಎನ್.ಬಿ.ಲೀಲಾ ಮತ್ತು ಸಂಗಡಿಗರು ಸಂಗೀತ ಸೇವೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.