ನೂತನ ಸುಸಜ್ಜಿತ ಸಿಮೆಂಟ್ ರಸ್ತೆ ಹಾಳು
20 ಕೋಟಿ ವೆಚ್ಚದ ರಸ್ತೆ•ನಗರಸಭೆ ಅಧಿಕಾರಿಗಳಿಗೆ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!
Team Udayavani, May 23, 2019, 10:34 AM IST
ಹರಿಹರ: ನಗರದ ಜಯಶ್ರೀ ಟಾಕೀಸ್ ಎದುರು ನೀರಿನ ಪೈಪ್ ದುರಸ್ತಿಗೆ ಹೊಸದಾಗಿ ನಿರ್ಮಿಸಿದ ಸಿಮೆಂಟ್ ರಸ್ತೆ ಅಗೆದು ಗುಂಡಿ ತೋಡಿರುವುದು.
ಹರಿಹರ: ಅಧಿಕಾರಿಗಳ ಅವೈಜ್ಞಾನಿಕ ನೀತಿಯಿಂದಾಗಿ ನಗರದಲ್ಲಿ ಇತ್ತೀಚಿಗಷ್ಟೆ ನಿರ್ಮಿಸಿದ್ದ ಸಿಮೆಂಟ್ ಕಾಂಕ್ರೀಟ್‌ನ ಚತುಷ್ಪಥ ರಸ್ತೆ ಹಾಳಾಗುತ್ತಿದೆ.
ಅಗಲೀಕರಣಗೊಂಡ ಹಳೆ ಪಿಬಿ ರಸ್ತೆಯನ್ನು ಅಂದಾಜು 20 ಕೋ.ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಿ ಇನ್ನೂ ಆರು ತಿಂಗಳೂ ಗತಿಸಿಲ್ಲ. ಆದರೆ ನೀರು ಸರಬರಾಜು ಪೈಪ್‌ಲೈನ್ ಲೀಕ್ ಆಗಿದೆ ಎಂದು ನಗರಸಭೆಯವರು ಜಯಶ್ರೀ ಟಾಕೀಸ್ ಎದುರು ಸುಮಾರು 12 ಅಡಿ ವ್ಯಾಸದಲ್ಲಿ 15 ಅಡಿ ಆಳಕ್ಕೆ ಬಗೆದು ಹಾಳುಗೆಡವಿದ್ದಾರೆ.
ನಗರಸಭೆ ನಿರ್ಲಕ್ಷ್ಯ: ಹೊಸ ರಸ್ತೆ ನಿರ್ಮಿಸುವ ಮುನ್ನ ಹಳೆ ಡಾಂಬರು ರಸ್ತೆ ತೆರವುಗೊಳಿಸಿದ್ದ ಪಿಡಬ್ಲ್ಯುಡಿ ಅಧಿಕಾರಿಗಳು ರಸ್ತೆ ಅಡಿಯ ನೀರಿನ ಕೊಳವೆ ಮಾರ್ಗಗಳನ್ನು ಬದಿಗೆ ಸ್ಥಳಾಂತರಿಸಲು ಸೂಚಿಸಿದ್ದರು. ಆದರೆ ನಗರಸಭೆ ಅಧಿಕಾರಿಗಳು ಹೊಸದಾಗಿ ಜಲಸಿರಿ ಯೋಜನೆ ಜಾರಿಯಾಗುತ್ತಿರುವುದರಿಂದ ಹಳೆ ಕೊಳವೆ ಮಾರ್ಗದ ಅಗತ್ಯವಿಲ್ಲ ಎಂದು ಕೈತೊಳೆದುಕೊಂಡಿದ್ದರು.
ಈಗ ಆರು ತಿಂಗಳಲ್ಲೇ ನಡು ರಸ್ತೆಯ ಆಳದಲ್ಲಿ ಪೈಪ್‌ಲೈನ್ ಒಡೆದು ಹೋಗಿದ್ದು, ನಗರದ ಹಲವಾರು ಬಡಾವಣೆಗಳಿಗೆ ನೀರು ಪೂರೈಕೆ ಸ್ಥಗಿತಗೊಂಡಿದ್ದರಿಂದ ಅನಿವಾರ್ಯವಾಗಿ ರಸ್ತೆ ಅಗೆದು ದುರಸ್ತಿ ಮಾಡಲೇಬೇಕಾಗಿದೆ.
ಶನಿಕಾಟ ಶುರು: ಇದು ಇಲ್ಲಿಗೆ ಮುಗಿಯುವ ಕಥೆಯಲ್ಲ. ಈ ರಸ್ತೆ ಮಧ್ಯೆ ಹಲವೆಡೆ ನೀರಿನ ಕಂಟ್ರೋಲ್ ವಾಲ್ವ್ಗಳೂ ಇವೆ. ಈ ವಾಲ್ವ್ಗಳೂ ಸಹ ಪದೆ ಪದೆ ದುರಸ್ತಿಗೆ ಬರುವುದರಿಂದ ಸಿಮೆಂಟ್ ರಸ್ತೆ ಅಗೆಯುವುದು ಅನಿವಾರ್ಯವಾಗಲಿದೆ. ಎಸ್‌ಜೆವಿಪಿ ಕಾಲೇಜು ಮುಂದಿನ ವಾಲ್ವ್ ಸಹ ಈಗಾಗಲೇ ದೊಡ್ಡ ಮಟ್ಟದಲ್ಲಿ ಲೀಕ್ ಆಗುತ್ತಿದೆ. ಈಗ ಅಗೆದಿರುವ ರಸ್ತೆಯನ್ನು ಮುಚ್ಚುತ್ತಿದ್ದಂತೆ ಅಲ್ಲಿಯೂ ರಸ್ತೆ ಅಗೆದು ದುರಸ್ತಿಗೊಳಿಸಬೇಕಾಗಿದೆ. ಒಟ್ಟಿನಲ್ಲಿ 20 ಕೋಟಿ ವೆಚ್ಚದ ಸಿಮೆಂಟ್ ರಸ್ತೆಗೆ ಶನಿಕಾಟ ಶುರುವಾದಂತಾಗಿದೆ.
ಶಿಸ್ತು ಕ್ರಮ ಅಗತ್ಯ
ಎರಡು ಅಡಿ ದಪ್ಪದ ಕಾಂಕ್ರೀಟ್ ಕತ್ತರಿಸಿ, ರಸ್ತೆ ಆಳದ ಜಲ್ಲಿ, ಕಲ್ಲು ಎತ್ತಿ ಗುಂಡಿ ತೋಡುವುದರಲ್ಲೆ 3 ದಿನ ಕಳೆಯಲಾಗಿದೆ. ವಾರದಿಂದ ನಾಲ್ಕೈದು ವಾರ್ಡ್‌ಗಳಿಗೆ ಕುಡಿಯುವ ನೀರಿಲ್ಲ. ಪೈಪ್‌ಲೈನ್ ಶಿಫ್ಟ್ ಮಾಡದೆ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
•ಎಸ್.ಬಿ. ಚೌಧರಿ,
ಬಾತಿ ಶಿವನಾಗಪ್ಪ ಕಾಂಪೌಂಡ್ ವಾಸಿ.
ಸಿಮೆಂಟ್ ರಸ್ತೆ ನಿರ್ಮಿಸುವ ಮುನ್ನ ವಾಟರ್ ಲೈನ್ ಶಿಫ್ಟ್ ಮಾಡಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿದ್ದಿಲ್ಲ. ವಾಟರ್ ಲೈನ್ ದುರಸ್ತಿ ಕೆಲಸ ಪೂರ್ಣಗೊಂಡಿದ್ದು, ಇನ್ನೆರಡು ದಿನಗಳಲ್ಲಿ ರಸ್ತೆಯನ್ನು ಮುಂಚಿನಂತೆ ನಿರ್ಮಿಸಲಾಗುವುದು.
•ಎಸ್.ಎಸ್. ಬಿರಾದರ್,
ಎಇಇ, ನಗರಸಭೆ, ಹರಿಹರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.