ಕುಡಿವ ನೀರು ಯೋಜನೆ ಚುರುಕುಗೊಳಿಸಿ
Team Udayavani, Mar 7, 2019, 11:47 AM IST
ಹಾಸನ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತನ್ನ ಯೋಜನೆಗಳ ಅನುಷ್ಠಾನವನ್ನು ಚುರುಕುಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧಕ್ಷೆ ಬಿ.ಎಸ್. ಶ್ವೇತಾ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಇನ್ನೂ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯಲು ಅನುಮೋದನೆಯಾಗಿದೆ. ಆದಷ್ಟು ಬೇಗ ಆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ದನಕರುಗಳಿಗೆ ಮೇವು ಹಾಗೂ ಕುಡಿಯುವ ನೀರಿಗೆ ತೊಂದರೆ ಯಾಗಬಾರದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಮೀಕ್ಷೆ ನಡೆಸಿ ಅಗತ್ಯವಿರುವೆಡೆ ಗೋಶಾಲೆ ತೆರೆಯಲು ಪೂರ್ವ ಸಿದ್ಧತೆ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಬೇಸಿಗೆಯಲ್ಲಿ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳ ಕುರಿತು ಮುಂಜಾಗ್ರತೆ ವಹಿಸಬೇಕು. ಮಲೇರಿಯಾ, ಡೆಂಗ್ಯೂ, ಮಂಗನ ಕಾಯಿಲೆ ನಿಯತ್ರಣಕ್ಕೆ ಮುಂಜಾಗ್ರತೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸಿ: ಕೃಷಿ ತೋಟಗಾರಿಕಾ ಮತ್ತು ಪಶುಪಾಲನಾ ಇಲಾಖೆ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಬರ ನಿರ್ವಹಣೆಗೆ ವ್ಯವಸ್ಥಿತ ಕ್ರಮಕೈಗೊಳ್ಳಬೇಕು. ಬೆಳೆವಿಮೆ ಹಣ ಪಾವತಿಗೆ ಸಹಕಾರ ನೀಡಬೇಕು ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ಅಪೌಷ್ಟಿಕತೆ ನಿಯಂತ್ರಣ ಇನ್ನಷ್ಟು ಪರಿಣಾ ಮಕಾರಿಯಾಗಬೇಕು ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಬಾಣಂತಿಯರಿಗೆ ಡಬ್ಬಿಗಳ ಮೂಲಕವೂ ಊಟ ಒದಗಿಸಲು ಕ್ರಮ ಕೈಗೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಧಿಕಾರಿಗಳು ಕೇವಲ ಆರ್ಥಿಕ ಮತ್ತು ಭೌತಿಕ ಗುರಿ ಸಾಧನೆಯತ್ತ ಗಮನಹರಿಸಿ ಗುಣಾತ್ಮಕ ಬದಲಾವಣೆ ಸಾಧಿಸಬೇಕು. ರೈತರು, ಮಹಿಳೆಯರು, ಗ್ರಾಮೀಣ ಜನಸಮುದಾಯದಲ್ಲಿ ಸಾಮಾರ್ಥ್ಯಾ ಭಿವೃದ್ಧಿ ಚಟುವಟಿಕೆಗಳು ಹಾಗೂ ಜಾಗೃತಿ ಕಾರ್ಯಗಳು ನಡೆಯ ಬೇಕು. ಮುಂದಿನ ಸಭೆಗಳಲ್ಲಿ ಈ ವಿಷಯದ ಬಗ್ಗೆ ಹೆಚ್ಚಿನ ಗಮನಹರಿಸಲಾಗುವುದು ಎಂದರು.
ಎಸ್ಸಿ, ಎಸ್ಟಿ ಅನುದಾನ ಸದ್ಬಳಕೆಯಾಗಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅನುದಾನ ಸಂಪೂರ್ಣ ಸದ್ಬಳಕೆಯಾಗಬೇಕು. ಈ ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ಆದ್ಯತೆ ನೀಡಬೇಕು ಎಂದ ಅವರು, ಹಾಸನ ಜಿಲ್ಲೆ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಣೆಯಾಗಿದೆ. ಅದರೆ ಅಧಿಕಾರಿಗಳ ಜವಾಬ್ದಾರಿ ಮುಗಿದಿಲ್ಲ. ಇನ್ನೂ ಅನೇಕ ಕ್ರಮಗಳ ಅಗತ್ಯವಿದೆ. ನಮ್ಮ ಗ್ರಾಮ ಸ್ವತ್ಛಗ್ರಾಮ ಯೋಜನೆಯಡಿ ಆರೋಗ್ಯ ಜಾಗೃತಿ, ಘನ ದ್ರವ್ಯ ತ್ಯಾಜ್ಯ ವಿಲೇವಾರಿಗಳ ಬಗ್ಗೆ ಅರಿವು ಮೂಡಿಸಿ ಗ್ರಾಮ ಪಂಚಾಯಿತಿಗಳು ರಾಷ್ಟ್ರಮಟ್ಟದಲ್ಲಿ ಪುರಸ್ಕಾರ ಪಡೆಯುವಂತಾಗಬೇಕು ಎಂದರು.
ಮಂಗನ ಕಾಯಿಲೆ ನಿಯಂತ್ರಣಕ್ಕೆ ಕ್ರಮ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ನಿಯಂತ್ರಣದಲ್ಲಿದೆ. ಎಲ್ಲಾ ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಹೆಚ್ಚಿನ ನಿಗಾವಹಿಸಲಾಗುತ್ತಿದೆ.
ಜಿಲ್ಲೆಯಲ್ಲಿ 600 ಉಣ್ಣೆಗಳನ್ನು (ಮಂಗ, ದನಕರುಗಳಲ್ಲಿ ಕಂಡು ಬರುವ ಹುಳು) ಸಂಗ್ರಹಿಸಿ ಪರೀಕ್ಷೆಗೆ ಕಳುಸಲಾಗಿತ್ತು ಅದರಲ್ಲಿ 2 ಧನಾತ್ಮಕ (ಪಾಸಿಟಿವ್) ಎಂದು ಮಾಹಿತಿ ಬಂದಿದೆ. ಉಣ್ಣೆ ಕಡಿತ ನಿಯಂತ್ರಣ ತೈಲಗಳನ್ನು ಅರಣ್ಯ ವ್ಯಾಪ್ತಿಯ ಪ್ರದೇಶದ ಜನರಿಗೆ ವಿತರಿಸಲಾಗುತ್ತದೆ ಎಂದರು.
ಪ್ರಚಾರ ಪತ್ರಗಳ ಬಿಡುಗಡೆ: ನಮ್ಮ ಗ್ರಾಮ – ಸ್ವತ್ಛ ಗ್ರಾಮದ ಪ್ರಚಾರದ ಭಿತ್ತಿಪತ್ರಗಳನ್ನು ಸಭೆಯಲ್ಲಿ ಅಧ್ಯಕ್ಷರು ಮತ್ತು ಸಿಇಒ ಅವರು ಸಭೆಯಲ್ಲಿ ಬಿಡುಗಡೆ ಮಾಡಿದರು. ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಪರಪ್ಪಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ್ ಗೌಡ, ಉಪ ಕಾರ್ಯದರ್ಶಿ ನಾಗರಾಜ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಅರುಣ್‌ಕುಮಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಕೃಷಿಕ ಸಮ್ಮಾನ್ ಯೋಜನೆಗೆ
ಗಮನ ಹರಿಸಿ: ವಿಜಯಪ್ರಕಾಶ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎನ್.ವಿಜಯಪ್ರಕಾಶ್ ಅವರು ಮಾತನಾಡಿ, ಪ್ರಧಾನ ಮಂತ್ರಿ ಕೃಷಿಕ ಸಮ್ಮಾನ್ ಯೋಜನೆ ಅನುಷ್ಠಾನ ತ್ವರಿತಗೊಳ್ಳ ಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 100 ಮಂದಿ ಫಲಾನುಭವಿಗಳನ್ನು ಗುರುತಿಸಿ ದಾಖಲೆಗಳನ್ನು ಸಂಗ್ರಹಿಸಬೇಕು. ಕೃಷಿ ಹಾಗೂ ತೋಟಗಾರಿಕಾ ಇಲಾಖಾ ಅಧಿಕಾರಿಗಳು ಗ್ರಾಮ ಪಂಚಾಯಿತಿ ಪಿಡಿಒಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.