ಬಜೆಟ್: ಜಿಲ್ಲೆಗೆ ಭಾರೀ ಕೊಡುಗೆಗಳ ನಿರೀಕ್ಷೆ
Team Udayavani, Feb 8, 2019, 7:08 AM IST
ಹಾಸನ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳೆದ ವರ್ಷ ಜು.5 ರಂದು ಮಂಡಿಸಿದ್ದ ಬಜೆಟ್‌ನಲ್ಲಿ ತವರು ಜಿಲ್ಲೆ ಹಾಸನಕ್ಕೆ ಭರಪೂರ ಕೊಡುಗೆ ನೀಡಿದ್ದರು. ಶುಕ್ರವಾರ ಮಂಡಿಸಲಿರುವ ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್‌ನಲ್ಲಿಯೂ ಭಾರೀ ಕೊಡುಗೆ ಘೋಷಣೆ ಮಾಡುವರೆಂಬ ನಿರೀಕ್ಷೆಯಿದೆ. ಪ್ರಮುಖವಾಗಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಬೃಹತ್ ಯೋಜನೆಗಳನ್ನು ಹಾಸನ ಜಿಲ್ಲೆಗೆ ಘೊಷಣೆ ಮಾಡಬಹುದು.
ಹಾಸನ ತಾಲೂಕು ಗೊರೂರಿನ ಹೇಮಾವತಿ ಜಲಾಶಯದ ಮುಂಭಾಗ ಕೆಆರ್‌ಎಸ್‌ನ ಬೃಂದಾವನ ಮಾದರಿಯ ಉದ್ಯಾನವನ ಹಾಗೂ ಡಿಸ್ನಿಲ್ಯಾಂಡ್ ಮಾದರಿಯ ಮನರಂಜನಾ ತಾಣ ನಿರ್ಮಾಣ ಮಾಡುವ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಕಟಿಸಬಹುದು. ಈಗಾಗಲೇ ಈ ಸಂಬಂಧದ ನೀಲನಕ್ಷೆ ರೂಪುಗೊಂಡಿದ್ದು, ರಾಜಸ್ತಾನದ ಜೈಪುರ ಮೂಲದ ಸಂಸ್ಥೆಯೊಂದು ನೀಲನಕ್ಷೆಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದೆ.
ಮೂರು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಯೋಜನೆಯ ಬಗ್ಗೆ ಚರ್ಚೆ ನಡೆದಿತ್ತು. ಸುಮಾರು 10 ಸಾವಿರ ಕೋಟಿ ರೂ. ಅಂದಾಜಿನ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಚಿಂತನೆ ಸರ್ಕಾರಕ್ಕಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಹೇಳಿದ್ದರು. ಈಗ ಬಜೆಟ್‌ನಲ್ಲಿ ಆ ಯೋಜನೆಯನ್ನು ಮುಖ್ಯಮಂತ್ರಿಯವರು ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಜಿಲ್ಲೆಯ ಜನರದ್ದು.
ಚನ್ನಕೇಶ್ವ ದೇವಾಲಯ ಶತಮಾನೋತ್ಸವ: ವಿಶ್ವ ವಿಖ್ಯಾತ ಬೇಲೂರಿನ ಚನ್ನಕೇಶವ ದೇವಾಲಯ ನಿರ್ಮಾಣವಾಗಿ 900 ವರ್ಷಗಳು ಕಳೆದಿವೆ. ಹಾಗಾಗಿ 9 ನೇ ಶತಮಾನೋತ್ಸವ ಆಚರಣೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕು. ಈ ಸ್ಮರಣಾರ್ಥವಾಗಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯನ್ನು ಬೇಲೂರಿನಲ್ಲಿ ಆರಂಭಿಸಬೇಕೆಂಬ ಬೇಡಿಕೆ ಹಿನ್ನಲೆಯಲ್ಲಿ ಬೇಲೂರಿನ ಯಗಚಿ ಜಲಾಶಯದ ಮುಂಭಾಗ ಉದ್ಯಾನವನ ನಿರ್ಮಾಣದ ಯೋಜನೆಯೂ ಬಜೆಟ್‌ನಲ್ಲಿ ಘೋಷಣೆಯಾಬಹುದು.
ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಸಲು ಅವಕಾಶವಿದೆ ಎಂದು ಸ್ವತಃ ಮುಖ್ಯಮಂತ್ರಿಯವರು ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಲವುಬಾರಿ ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಬಜೆಟ್‌ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳು ಬಜೆಟ್‌ನಲ್ಲಿ ಘೋಷಣೆಯಾಗಬಹುದೆಂದು ಜಿಲ್ಲೆಯ ಜನರು ನಿರೀಕ್ಷಿಸಿದ್ದಾರೆ.
ವಿಶ್ವವಿದ್ಯಾಲಯ ಘೋಷಣೆ: ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಹಾಸನ ಜಿಲ್ಲೆಯನ್ನು ಶೈಕ್ಷಣಿಕ ಕೇಂದ್ರ ಮಾಡಬೇಕೆಂಬ ನಿರೀಕ್ಷೆಯಿದೆ. ಆ ನಿಟ್ಟಿನಲ್ಲಿ ಹಾಸನ ಜಿಲ್ಲಾ ಕೇಂದ್ರ ಮತ್ತು ಹೊಳೆನಸೀಪುರ ತಾಲೂಕು ಕೇಂದ್ರದಲ್ಲಿ ಹಲವು ಉನ್ನಶ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರದಿಂದಲೇ ಮಂಜೂರು ಮಾಡಿಸಿದ್ದಾರೆ.
ಐಐಟಿ ಮತ್ತು ಕೇಂದ್ರೀಯ ವಿಶ್ವ ವಿದ್ಯಾನಿಲಯ ಹಾಸನದಲ್ಲಿ ಆರಂಭವಾಗಬೇಕು ಎಂಬುದು ಅವರ ಕನಸಾಗಿದೆ. ಕಳೆದ ಒಂದು ದಶಕದಿಂದ ಆ ನಿಟ್ಟಿನಲ್ಲಿ ಆವರು ಪ್ರಯತ್ನ ನಡೆಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ ರಾಜ್ಯ ಸರ್ಕಾರದಿಂದಲೇ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಆರಂಭಿಸುವ ಬಗ್ಗೆ ಚಿಂತನೆ ನಡೆದಿದ್ದು ಬಜೆಟ್‌ನಲ್ಲಿ ಮುಖ್ಯಮಂತ್ರಿಯವರು ಹಾಸನಕ್ಕೆ ವಿಶ್ವವಿದ್ಯಾನಿಲಯ ಘೋಷಣೆ ಮಾಡಬಹುದು.
ತೋಟಗಾರಿಕೆ ಕಾಲೇಜು ಸ್ಥಾಪನೆ: ಹಾಸನ ತಾಲೂಕಿನ ಸೋಮನಹಳ್ಳಿ ಕಾವಲಿನಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಯ ಸಿದ್ಧತೆ ನಡೆದಿದೆ. 75 ಕೋಟಿ ರೂ.ಯೋಜನಾ ವರದಿಯೂ ಸಿದ್ಧವಾಗಿದ್ದು ನಬಾರ್ಡ್‌ನಿಂದ ಕಟ್ಟಡ ನಿರ್ಮಾಣಕ್ಕೆ 34 ಕೋಟಿ ರೂ, ಮಂಜೂರಾತಿಯ ಪ್ರಸ್ತಾವನೆಗೆ ಹಣಕಾಸು ಇಲಾಖೆಯ ಅನುಮೋದನೆಯಷ್ಟೇ ಬಾಕಿ ಉಳಿದಿದೆ. ಹಾಗಾಗಿ ತೋಟಗಾರಿಕೆ ಕಾಲೇಜು ಘೋಷಣೆ ಆಗಬಹುದು.
ಹಾಸನ ತಾಲೂಕು ಮೊಸಳೆ ಹೊಸಹಳ್ಳಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಆರಂಭಕ್ಕೆ ಈಗಾಗಲೇ ಹಣ ಬಿಡುಗಡೆಯಾಗಿದೆ. ಹಾಗಾಗಿ ಬಜೆಟ್‌ನಲ್ಲಿ ಘೋಷಣೆ ಆಗಬಹುದು ಇಲ್ಲವೇ ಘೋಷಣೆಯಾಗದಿದ್ದರೂ ತೋಟಗಾರಿಕೆ ಕಾಲೇಜು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹೊಸದಾಗಿ ಆರಂಭವಾಗುವುವು ಖಚಿತವಾಗಿದೆ.
ಹೊಸದಾಗಿ ಅರಸೀಕೆರೆ ಮತ್ತು ಚನ್ನರಾಯಪಟ್ಟಣದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜು ಆರಂಭವಾಗಬೇಕೆಂಬ ಬೇಡಿಕೆಯಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ ಶೈಕ್ಷಣಿಕ ವರ್ಷದಿಂದ ಈ ಕಾಲೇಜುಗಳು ಆರಂಭವಾಗಲಿವೆ ಎಂದು ಘೋಷಣೆ ಮಾಡಿದ್ದಾರೆ. ಹಾಗಾಗಿ ಹೊಸದಾಗಿ ಒಂದಾದರೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಸನ ಜಿಲ್ಲೆಗೆ ಘೋಷಣೆಯಾಗುವ ನಿರೀಕ್ಷೆಯಿದೆ.
ರೈಲು ಮಾರ್ಗ: ಚಿಕ್ಕಮಗಳೂರು – ಬೇಲೂರು – ಹಾಸನ ರೈಲು ಮಾರ್ಗದಲ್ಲಿ ಬೇಲೂರು – ಹಾಸನ ನಡುವಿನ 33 ಕಿ.ಮೀ.ರೈಲು ಮಾರ್ಗವನ್ನು ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ಈಗಾಗಲೇ ರಾಜ್ಯ ಸರ್ಕಾರ ತನ್ನ ಪಾಲಿನ ಶೇ.50 ರಷ್ಟು ನಿರ್ಮಾಣ ವೆಚ್ಚ ಭರಿಸಲು ಸಮ್ಮತಿಸಿದ್ದು, ಸಚಿವ ಸಂಪುಟದ ಅನುಮೋದನೆಯೂ ಸಿಕ್ಕಿದೆ. ಆದರೆ ಕೇಂದ್ರ ಬಜೆಟ್‌ನಲ್ಲಿ ಈ ರೈಲು ಮಾರ್ಗದ ಮಂಜೂರಾತಿಯ ಘೋಷಣೆ ಆಗಿಲ್ಲ. ಆದರೂ ಈ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತ ಭರಿಸುವ ಘೋಷಣೆ ಮಾಡುವ ಸಾಧ್ಯತೆ ಇದೆ.
ಹೊಸ ಬಂದೀಖಾನೆ ಮಂಜೂರು: ಹಾಸನ ನಗರದ ಮಧ್ಯಭಾಗದಲ್ಲಿರುವ ಜಿಲ್ಲಾ ಬಂದೀಖಾನೆಯನ್ನು ಸ್ಥಳಾಂತರಿಸಿ ಶಾಂತಿಗ್ರಾಮದ ಸಮೀಪದ ಕೆಎಸ್‌ಆರ್‌ಪಿ ಬೆಟಾಲಿಯನ್ ಕ್ಯಾಂಪಸ್ ಬಳಿ 40 ಎಕರೆಯಲ್ಲಿ ನಿರ್ಮಾಣಕ್ಕೆ ಭೂಮಿ ಮಂಜೂರಾಗಿದೆ. ಬಜೆಟ್‌ನಲ್ಲಿ ಹಾಸನದ ಹೊಸ ಜೈಲು ನಿರ್ಮಾಣದ ಯೋಜನೆ ಘೋಷಣೆಯ ನಿರೀಕ್ಷೆಯಿದೆ.
ಹಿಂದಿನ ಬಜೆಟ್ ಘೋಷಣೆಗಳು ಏನಾಗಿವೆ?: 2019 -19 ನೇ ಸಾಲಿನ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಘೋಷಣೆಯಾಗಿದ್ದ ಅಭಿವೃದ್ಧಿ ಯೋಜನೆಗಳ ಪೈಕಿ ಹಾಸನ ಮೆಗಾಡೇರಿ ಯೋಜನಾ ಕಾಮಗಾರಿ ಆರಂಭವಾಗಿದೆ. ಇನ್ನುಳಿದ ಯೋಜನೆಗಳು ಇನ್ನೂ ಅನುಮೋದನೆ ಹಾಗೂ ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ. ಬಜೆಟ್‌ನಲ್ಲಿ 286 ಕೋಟಿ ರೂ. ಯೋಜನೆಗಳು ಘೋಷಣೆಯಾಗಿದ್ದರೂ ಬಜೆಟ್‌ನಲ್ಲಿ ಘೋಷಣೆಯಾಗದ ನೂರಾರು ಕೋಟಿ ರೂ.ನ ಹಲವು ಯೋಜನೆಗಳು ಶರವೇಗದಲ್ಲಿ ಮಂಜೂರಾತಿಯಾಗಿ ಕಾಮ ಗಾರಿಗಳು ಆರಂಭವಾಗಿರುವುದೂ ವಿಶೇಷ.
ಬಜೆಟ್‌ನಲ್ಲಿ ಹಾಸನ ಮೆಗಾಡೇರಿ ಯೋಜನೆಗೆ 50 ಕೋಟಿ ರೂ. ಅನುದಾನ ಘೋಷಣೆಯಾಗಿತ್ತು. ಆದರೆ ಹಾಸನ ಹಾಲು ಒಕ್ಕೂಟ ಮತ್ತು ಇತರೆ ಆರ್ಥಿಕ ಮೂಲಗಳಿಂದ ನೆರವು ಪಡೆದು 530 ಕೋಟಿ ರೂ.ನ ಮೆಗಾಡೇರಿ ಯೋಜನೆಗೆ ಕಳೆದ ನವೆಂಬರ್‌ನಲ್ಲಿಯೇ ಮುಖ್ಯಮಂತ್ರಿ ಎಚ್‌ಡಿಕೆ ಶಿಲಾನ್ಯಾಸ ನೆರವೇರಿಸಿದ್ದರು. ಟೆಂಡರ್ ಪ್ರಕ್ರಿಯೆಗಳು ಮಗಿದು ಈಗ ಕಾಮಗಾರಿ ಆರಂಭದ ಹಂತದಲ್ಲಿದೆ.
ಹಾಸನ ವೈದ್ಯಕೀಯ ಕಾಲೇಜಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್‌ನಲ್ಲಿ 100 ಕೋಟಿ ರೂ. ಘೋಷಣೆಯಾಗಿತ್ತು. ಆದರೆ ಯೋಜನಾ ವೆಚ್ಚ ಪರಿಷ್ಕರಣೆ ಯಾಗಿ 142 ಕೋಟಿ ರೂ.ಗಳಿಗೆ ಕಳೆದ ವಾರವಷ್ಟೆ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಬಜೆಟ್‌ನ ಘೋಷಣೆ ಗಿಂತಲೂ ವೈದ್ಯಕೀಯ ಕಾಲೇಜಿನ ವಿವಿಧ ಯೋಜನೆಗಳಿಗೆ ಹೆಚ್ಚು ಅನುದಾನ ಮಂಜೂರಾಗಿದ್ದು ಈಗ 253 ಕೋಟಿ ರೂ. ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗುತ್ತಿದೆ.
ಹಾಸನ ತಾಲೂಕಿನ ದುದ್ದ, ಶಾಂತಿಗ್ರಾಮ ಹೋಬಳಿಗಳ ಎಲ್ಲಾ ಗ್ರಾಮಗಳಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯವ ನೀರಿನ 160 ಕೋಟಿ ರೂ. ಯೋಜನೆಗೆ ಬಜೆಟ್‌ನಲ್ಲಿ 70 ಕೋಟಿ ರೂ. ಘೋಷಣೆ ಯಾಗಿತ್ತು. ಆದರೆ ಈಗ ಯೋಜನಾ ವೆಚ್ಚ ಪರಿಷ್ಕರಣೆಯಾಗಿ 240 ಕೋಟಿ ರೂ.ಗೆ ಏರಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭದ ಹಂತದಲ್ಲಿದೆ.
ಹಾಸನ ನಗರದ ಚನ್ನಪಟ್ಟಣ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್‌ನಲ್ಲಿ 36 ಕೋಟಿ ರೂ. ಘೋಷಣೆ ಯಾಗಿತ್ತು. ಈಗ ಯೋಜನಾ ವೆಚ್ಚ ಪರಿಷ್ಕರಣೆಯಾಗಿ 136 ಕೋಟಿ ರೂ.ಗೆ ಟೆಂಡರ್ ಪಕ್ರಿಯೆ ಮುಗಿದಿದ್ದು ಕಾಮಗಾರಿ ಆರಂಭವಾಗ ಬೇಕಾಗಿದೆ. ಹಾಸನ ಹೊರ ವರ್ತುಲ ರಸ್ತೆಗೆ 30 ಕೋಟಿ ರೂ. ಘೋಷಣೆಯಾಗಿದ್ದರೂ ಭೂ ಸ್ವಾಧೀನ ಆರಂಭವಾಗಿಲ್ಲ. ಸ್ನಾನ ಗೃಹ, ನೆಲಹಾಸು ಉತ್ಪಾದನಾ ಘಟಕ ಸ್ಥಾಪನೆಯ ಪ್ರಸ್ತಾಪವಾಗಿದೆ. ಅಧಿಕಾರಿಗಳು ಸ್ಥಳಪರಿಶೀಲನೆ ಮಾಡಿದ್ದು ಈ ಯೋಜನೆ ಪ್ರಸ್ತಾಪದ ಹಂತದಲ್ಲಿಯೇ ಇದೆ.
* ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.