ಶ್ರದ್ಧೆ, ತಾಳ್ಮೆ ಹೋರಾಟದಿಂದ ಯಶಸ್ಸು
Team Udayavani, Oct 3, 2020, 2:50 PM IST
ಹಾಸನ: ಶ್ರದ್ಧೆ ಹಾಗೂ ತಾಳ್ಮೆಯಿಂದ ಎಲ್ಲಾ ಕೆಲಸಗಳಲ್ಲೂ ಜಯ ಸಾಧಿಸಬಹುದು ಎಂಬುದಕ್ಕೆ ಗಾಂಧಿ ಅವರ ಹೋರಾಟವೇ ಉದಾಹರಣೆ. ಹಾಗಾಗಿಯೇ ಅವರ ಚಿಂತನೆ ಮತ್ತು ಆದರ್ಶ ಸದಾ ಅನುಕರಣೀಯ. ಶಾಂತಿ ಹಾಗೂ ಅಹಿಂಸಾ ಹೋರಾಟದ ಮೂಲಕ ಜಗತ್ತಿಗೆ ಮಾದರಿ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಂಗ ಸಭಾಂ ಗಣದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಹಾಸನ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧಿ ಅವರ ಜೀವನ ಮೌಲ್ಯ ವಿಶ್ವಮಾನ್ಯ ವಾಗಿದೆ. ಶ್ರದ್ಧೆ ಹಾಗೂ ತಾಳ್ಮೆಯಿಂದ ಮಾತ್ರ ಪ್ರತಿಯೊಂದು ಕೆಲಸದಲ್ಲೂ ಜಯ ಗಳಿಸಲು ಸಾಧ್ಯ. ಬಾಪೂಜಿ ಅವರ ಮಾರ್ಗವನ್ನು ಎಲ್ಲರೂ ಪಾಲಿಸಿದರೆ ಸಮಾಜದಲ್ಲಿ ಶಾಂತಿ ಹಾಗೂ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ವಿಶ್ವ ಚರಿತ್ರೆಯಲ್ಲಿ ಶಾಶ್ವತ: ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ಹಾಗೂ ನಾಗರಿಕ ಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಟ ಪ್ರಾರಂಭ ಮಾಡಿದ ಮಹಾತ್ಮ ಗಾಂಧೀಜಿ ನಂತರ ಭಾರತಕ್ಕೆ ಬಂದು ದೇಶದಲ್ಲಿನ ಅಸ್ಪೃಶ್ಯತೆ ಹಾಗೂ ಬ್ರಿಟಿಷರ ಆಡಳಿತದ ವಿರುದ್ಧ ಹಲವು ಸ್ವರೂಪದ ಚಳವಳಿ ನಡೆಸಿದರು. ಅವರು ಅನುಸರಿಸಿದ ಶಾಂತಿಹಾಗೂ ಅಹಿಂಸಾತ್ಮಕ ಮಾರ್ಗದ ಹೋರಾಟ ಜಗತ್ತಿನ ಕಣ್ಣು ತೆರೆಸಿತು. ಇದು ವಿಶ್ವ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿದಿದೆ ಎಂದು ಹೇಳಿದರು.
ಸರಳ ಸಜ್ಜನಿಕೆ: ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರೂ ಸರಳ, ಪ್ರಾಮಾಣಿಕ ಹಾಗೂ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. 1965ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಗೆಲುವು ತಂದು ಕೊಡುವುದರ ಜೊತೆಗೆ ಜೈ ಜವಾನ್ ಜೈ ಕಿಸಾನ್ ಎಂಬ ಧ್ಯೇಯ ವಾಕ್ಯ ವನ್ನು ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ಮರಿಸಿದರು.
ಆದರ್ಶ ಅನುಸರಿಸಿ: ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಈ ಇಬ್ಬರೂ ಮಹಾನ್ ನಾಯಕರ ಆದರ್ಶ ಅನುಸರಿಸಬೇಕು. ಅನಾಚಾರದ ಹಿಂದೆಹೋಗದೆ, ಸತ್ಯ ಹಾಗೂ ಶಾಂತಿ, ಸೌಹಾರ್ದತೆಯಿಂದ ಪ್ರತಿಯೊಬ್ಬರೂ ಜೀವಿಸಬೇಕು. ಮಹಾತ್ಮ ಗಾಂಧಿ ಅವರ ಜೀವನವೇ ಎಲ್ಲರಿಗೂ ದೊಡ್ಡ ಸಂದೇಶ. ಬಾಪೂ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ, ಚಿಂತನೆ ಬಹಳ ಶ್ರೇಷ್ಠವಾದವು ಎಂದು ಹೇಳಿದರು.
ಕನ್ನಡಮತ್ತುಸಂಸ್ಕೃತಿಇಲಾಖೆಯಸಹಾಯಕ ನಿರ್ದೇಶಕ ಡಾ.ಸುದರ್ಶನ್ ಮಾತನಾಡಿ, ಮಹಾನ್ ವ್ಯಕ್ತಿಗಳ ಮೂರ್ತಿ ಪೂಜೆ ಬದಲು ಅವರ ಆದರ್ಶ ಪಾಲನೆ ಮಾಡಬೇಕು ಎಂದು ಹೇಳಿದರು.
ಸಿಇಒ ಬಿ.ಎ.ಪರಮೇಶ್, ತಾಪಂ ಅಧ್ಯಕ್ಷೆ ಜ್ಯೋತಿ ಅಪ್ಪಣ್ಣ, ಅಪರ ಜಿಲ್ಲಾಧಿಕಾರಿ ಕವಿತಾರಾಜಾರಾಂ, ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಬಿ.ಎನ್.ನಂದಿನಿ, ಜಿಲ್ಲಾ ವಾರ್ತಾಧಿಕಾರಿ ವಿನೋದ್‌ಚಂದ್ರ, ತಹಶೀಲ್ದಾರ್ ಶಿವಶಂಕರಪ್ಪ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.