ನಂದಿನಿ: ವಿಲೀನಕ್ಕೆ ಅವಕಾಶ ನೀಡಲ್ಲ: ಎಚ್.ಡಿ.ರೇವಣ್ಣ
Team Udayavani, Jan 2, 2023, 2:53 PM IST
ಹಾಸನ: ನಂದಿನಿ ( ಕೆಎಂಎಫ್) ಯನ್ನು ಗುಜರಾತ್‌ನ ಆಮೂಲ್‌ನೊಂದಿಗೆ ವಿಲೀನಗೊಳಿಸುವ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರ ಪ್ರಸ್ತಾಪಕ್ಕೆ ಕೆಎಂಎಫ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕರಾದ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂದಿನಿ ಕನ್ನಡಿಗರ ಆಸ್ಮಿತೆ. ನಂದಿನಿ ಕನ್ನಡಮ್ಮನ ಮಗಳಿದ್ದಂತೆ. ಕನ್ನಡ ನಾಡಿನ ರೈತರ ಜೀವನದಲ್ಲಿ ಬೆರೆತು ಹೋಗಿರುವ ನಂದಿನಿ ಸಂಸ್ಥೆಯನ್ನು ಆಮೂಲ್‌ನೊಂದಿಗೆ ವಿಲೀನಗೊಳಿಸುವ ಅನಿ ವಾರ್ಯತೆಯೂ ಎದುರಾಗಿಲ್ಲ. ಗುಜರಾತ್‌ನ ಆಮೂಲ್ ಅನ್ನು ಮೀರಿ ಬೆಳೆಯುವ ಶಕ್ತಿ ಕೆಎಂ ಎಫ್ಗೆ ಇದೆ. ಅಂತಹ ಅಡಿಪಾಯವನ್ನು ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗಲೇ ಹಾಕಿದ್ದಾರೆ. ದೇಶದಲ್ಲಿ ಆಮೂಲ್ ನಂತರ 2ನೇ ಸ್ಥಾನದಲ್ಲಿರುವ ಸಹಕಾರಿ ಕ್ಷೇತ್ರದ ಹೈನು ಉದ್ಯಮ ನಂದಿನಿ ಎಂದೇ ಖ್ಯಾತವಾಗಿರುವ ಕೆಎಂಎಫ್ ಅನ್ನು ವಿಲೀನಗೊಳಿಸುವುದಕ್ಕೆ ಕನ್ನಡಿಗರು ಎಂದಿಗೂ ಅವಕಾಶ ಕೊಡಲಾರರು. ಕೆಎಂಎಫ್ಗೆ ಧಕ್ಕೆ ಯಾಗುವ ಸನ್ನಿವೇಶ ಎದುರಾದರೆ ಪಕ್ಷಾತೀತವಾದ ಹೋರಾಟಕ್ಕೆ ನಾನೇ ಮುಂಚೂಣಿಯಲ್ಲಿ ನಿಲ್ಲುತ್ತೇನೆ ಎಂದು ಭಾನುವಾರ ತಿರುಪತಿಯಲ್ಲಿದ್ದ ರೇವಣ್ಣ ಅವರು ಉದಯವಾಣಿಗೆ ಪ್ರತಿಕ್ರಿಯಿಸಿದರು.
ಹೈನು ಉದ್ಯಮ ಬೆಳೆಯಲು ಸಹಕಾರ: ದೇಶದಲ್ಲಿ ಆಮೂಲ್‌ನಲ್ಲಿ ಏಕೈಕ ಮೆಗಾ ಡೇರಿ ಇತ್ತು. ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿ ದ್ದಾಗ ಹೈನೋದ್ಯಮದ ಪಿತಾಮಹ ಎಂದೇ ದೇಶ ದಲ್ಲಿ ಗುರ್ತಿಸುವ ಡಾ.ಕುರಿಯನ್ ಅವರನ್ನು ಮನ ವೊಲಿಸಿ, ಬೆಂಗಳೂರಿನಲ್ಲಿ ಮೆಗಾ ಡೇರಿ ಯನ್ನು ಸ್ಥಾಪಿಸಿದರು. ಇಂತಹ ಕೊಡುಗೆ ನೀಡಿದ ಡಾ.ಕುರಿಯನ್ ಹಾಗೂ ಕುರಿಯನ್ ನಂತರ ಆಮೂಲ್ ನೇತೃತ್ವ ವಹಿಸಿದ್ದ ಅಮೃತಾ ಪಟೇಲ್ ಅವರೂ ಕರ್ನಾಟಕದಲ್ಲಿ ರಾಜ್ಯದಲ್ಲಿ ಹೈನು ಉದ್ಯಮ ಬೆಳೆಯಲು ಸಹಕಾರ ನೀಡಿದ್ದಾರೆ. ಅವರ ಕೊಡುಗೆಯನ್ನು ಕನ್ನಡಿಗರು ಸ್ಮರಿಸುತ್ತಾರೆ ಎಂದು ಹೇಳಿದರು.
ನಿತ್ಯ 80 ಲಕ್ಷ ಲೀಟರ್ ಹಾಲು ಸಂಗ್ರಹ: ಬೆಂಗಳೂರಿನಲ್ಲಿ ಮೇಗಾ ಡೇರಿ ಸ್ಥಾಪಿಸುವ ಮೂಲಕ ಎಚ್.ಡಿ.ದೇವೇಗೌಡರು ಆಂದು ಹಾಕಿದ ಭದ್ರ ಅಡಿಪಾಯದ ಆಧಾರದಲ್ಲಿ ಈಗ ರಾಜ್ಯದ ಕೆಲವು ಹಾಲು ಒಕ್ಕೂಟಗಳು ಮೆಗಾಡೇರಿಯನ್ನು ಸ್ಥಾಪಿಸಿವೆ. ದೇಶದ ಸಹಕಾರಿ ಕ್ಷೇತ್ರದ ಕಣ್ಣು ಕುಕ್ಕುವಂತಹ ಅಭಿವೃದ್ಧಿ ಕರ್ನಾಟದ ಹೈನು ಉದ್ಯಮದಲ್ಲಾಗುತ್ತಿದೆ. ರಾಜ್ಯದಲ್ಲಿ ಈಗ ಪ್ರತಿನಿತ್ಯ 80 ಲಕ್ಷ ಲೀಟರ್ ಹಾಲಿನ ಸಂಗ್ರಹ, ಸಂಸ್ಕರಣೆಯನ್ನು 14 ಹಾಲು ಒಕ್ಕೂಟಗಳು ಕೆಎಂಎಫ್ ನೇತೃತ್ವದಲ್ಲಿ ಸಮರ್ಥವಾಗಿ ನಿರ್ವಹಿಸುತ್ತಿವೆ. ನಿರ್ವಹಣೆಯ ಲೋಪದಿಂದ ಕೆಲವು ಒಕ್ಕೂಟಗಳು ನಷ್ಟದಲ್ಲಿರಬಹುದು. ಆದರೆ, ಹಾಸನ ಹಾಲು ಒಕ್ಕೂಟವು ಪ್ರತಿದಿನ 12 ಲಕ್ಷ ಲೀಟರ್ ಹಾಲು ಸಂಗ್ರಹಿಸಿ, ಸಂಸ್ಕರಿಸಿ ಪ್ರತಿ ವರ್ಷವೂ ಲಾಭದಲ್ಲಿಯೇ ಮುನ್ನಡೆಯುತ್ತಾ ರಾಜ್ಯದಲ್ಲಿ ಬೆಂಗಳೂರು ಒಕ್ಕೂಟದ ನಂತರ 2ನೇ ಸ್ಥಾನದಲ್ಲಿದೆ. ಇಂತಹ ಅಗ್ರಗಣ್ಯ ಸಹಕಾರಿ ಸಂಸ್ಥೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕಾದ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಆಮೂಲ್‌ನೊಂದಿಗೆ ವಿಲೀನಗೊಳಿಸುವ ಕನಸು ಕಾಣುವುದನ್ನು ಬಿಡಬೇಕು ಎಂದು ಕಿಡಿಕಾರಿದರು.
ಹಾಲು ಉತ್ಪಾದನೆಯೇ ಜೀವನಾಧಾರ : ರಾಜ್ಯದಲ್ಲಿ ಇಂದು ಸುಮಾರು 25 ಲಕ್ಷ ಕುಟುಂಬಗಳಿಗೆ ಹಾಲು ಉತ್ಪಾದನೆಯೇ ಜೀವನಾಧಾರವಾಗಿದೆ. ಇಂದು ರೈತರಿಗೆ ವಾರಕ್ಕೊಮ್ಮೆ ಕೈಗೆ ಹಣ ಸಿಗುವುದು ಹಾಲಿನಿಂದ ಮಾತ್ರ. ಹೈನು ಉದ್ಯಮ ರಾಜ್ಯದಲ್ಲಿ ಇನ್ನೂ ಹೆಚ್ಚು ಬೆಳೆಯಲು ಸಾಕಷ್ಟು ಅವಕಾಶವಿದೆ. ಇದಕ್ಕೆ ಕೇಂದ್ರ ಸರ್ಕಾರ ಏನು ಕೊಡುಗೆ ನೀಡುತ್ತಿದೆ? ಅಂತಹ ಕಾಳಜಿ ಇದ್ದರೆ ಕೇಂದ್ರ ಸಚಿವ ಅಮಿತ್ ಶಾ ಅವರು ರಾಜ್ಯ ಸಹಕಾರ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ ಎಂಬ ಮಾಹಿತಿ ಪಡೆದು ಲೋಪಗಳನ್ನು ಸರಿಪಡಿಸಲು ಮುಂದಾಗಲಿ. ಅದನ್ನು ಬಿಟ್ಟು ಆಮೂಲ್‌ನಲ್ಲಿ ಕೆಎಂಎಫ್ ವಿಲೀನಗೊಳಿಸಲು ಕರ್ನಾಟಕದ ಹಾಲು ಉತ್ಪಾದಕರು ಎಂದಿಗೂ ಆವಕಾಶ ಕೊಡುವುದಿಲ್ಲ. ಅಂತಹ ಸನ್ನಿವೇಶ ಎದುರಾದರೆ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.