ಬೀದಿ ಬದಿ ಗಾಡಿಗಳ ತಿಂಡಿ, ತಿನಿಸು ಎಷ್ಟು ಸುರಕ್ಷಿತ?
Team Udayavani, Feb 17, 2020, 3:00 AM IST
ಹಾಸನ: ಒತ್ತಡದ ಬದುಕಿನಲ್ಲಿ ಉದ್ಯೋಗಿಗಳ ಬಹುಪಾಲು ಬದುಕು ಹೋಟೆಲ್, ಬೀದಿ ಬದಿಯ ತಿಂಡಿಗಳೊಂದಿಗೆ ಕಳೆದು ಹೋಗುತ್ತಿದೆ. ಇಂತಹ ಅನಿವಾರ್ಯ ಸಂದರ್ಭದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿದರೆ ಮಾತ್ರ ಆರೋಗ್ಯ ಕಾಪಾಡಿಕೊಳ್ಳಬಹುದು. ಇಲ್ಲದಿದ್ದರೆ ಅನಾರೋಗ್ಯಕ್ಕೆ ತುತ್ತಾಗಿ ನೋವು – ಸಾವು ಅನುಭವಿಸಬೇಕಾಗುತ್ತದೆ.
ಹೋಟೆಲ್‌ಗಳಿಗಿಂತಲೂ ಕಡಿಮೆ ದರ: ಇತ್ತೀಚಿನ ದಿನಗಳಲ್ಲಿ ಬೀದಿ ಬದಿಯ ತಿಂಡಿ ಗಾಡಿಗಳು ಹೋಟೆಲ್‌ಗಳಿಗೆ ಸಡ್ಡು ಹೊಡೆಯುವ ಮಟ್ಟದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿವೆ. ಬೀದಿ ಬದಿಯ ಗಾಡಿಗಳ ತಿಂಡಿಗಳು ಹೋಟೆಲ್‌ಗಳ ತಿಂಡಿಗಳಿಗಿಂತಲೂ ರುಚಿ ಹಾಗೂ ಕಡಿಮೆ ದರ ಎಂಬುದು ಜನ ಸಾಮಾನ್ಯರ ನಂಬಿಕೆ. ಹೌದು ಗಾಡಿಗಳಲ್ಲಿನ ತಿಂಡಿ ದರ ಹೋಟೆಲ್‌ಗಳ ತಿಂಡಿಗಳಿಗಿಂತಲೂ ಕಡಿಮೆಯಿರುತ್ತದೆ.
ಏಕೆಂದರೆ ಬೀದಿ ಬದಿಯ ತಿಂಡಿ ಗಾಡಿಗಳವರು ಸಾವಿರಾರು ರೂ. ಬಾಡಿಗೆ ಕಟ್ಟಬೇಕಾಗಿಲ್ಲ. ತೆರಿಗೆ, ವಿದ್ಯುತ್ಛಕ್ತಿ ಬಿಲ್, ಹತ್ತಾರು ನೌಕರರಿಗೆ ಸಂಬಳವನ್ನೂ ನೀಡಬೇಕಾಗಿಲ್ಲ. ಹಾಗಾಗಿ ಸಹಜವಾಗಿ ಕಡಿಮೆ ದರದಲ್ಲಿಯೇ ತಿಂಡಿ – ತಿನಿಸುಗಳನ್ನು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಜನ ಸಾಮಾನ್ಯರು, ವಿಶೇಷವಾಗಿ ಕಾರ್ಮಿಕ ವರ್ಗ ಊಟ – ತಿಂಡಿಗೆ ನೂರಾರು ರೂ. ವೆಚ್ಚ ಮಾಡುವ ಬದಲು ಹತ್ತಾರು ರೂ.ಗಳಲ್ಲಿಯೇ ತುತ್ತಿನ ಚೀಲ ತುಂಬಿಕೊಳ್ಳುತ್ತಾರೆ.
ಕಾರ್ಮಿಕರು, ಉದ್ಯೋಗಿಗಳಷ್ಟೇ ಅಲ್ಲ, ಗಾಡಿ ತಿಂಡಿಗಳ ರುಚಿಗೆ ಮನಸೋತು ಗೃಹಿಣಿಯರೂ ಒಮ್ಮೊಮ್ಮೆ ಕುಟುಂಬದವರೊಂದಿಗೆ ತಿಂಡಿ ತಿನಿಸುಗಳನ್ನು ಸವಿಯುವುದು ಸಾಮಾನ್ಯವಾಗಿದೆ. ಅಷ್ಟರ ಮಟ್ಟಿಗೆ ಬದಿ ಬದಿಯ ತಿಂಡಿ ಗಾಡಿಗಳನ್ನು ಜನ ಸಾಮಾನ್ಯವರು ಅವಲಂಬಿಸಿದ್ದಾರೆ.
ಶುಚಿತ್ವದ ಸಮಸ್ಯೆ: ಬೀದಿ ಬದಿಯ ಗಾಡಿಗಳಲ್ಲಿ ತಿಂಡಿ – ತಿನಿಸುವ ವ್ಯಾಪಾರ ಆರಂಭಿಸಿ ದೊಡ್ಡ ಹೋಟೆಲ್‌ಗಳ ಉದ್ಯಮದವರೆಗೂ ಬೆಳೆದವರಿದ್ದಾರೆ. ಕಡಿಮೆ ವರಮಾನದ ಕಾರ್ಮಿಕರು, ಉದ್ಯೋಗಿಗಳು ಬೀದಿ ಬದಿಯ ಗಾಡಿಗಳ ತಿಂಡಿ – ಊಟವನ್ನೇ ಅವಲಂಬಿಸಿ ಬದುಕು ಸಾಗಿಸುವವರೂ ಇದ್ದಾರೆ. ಈ ವ್ಯವಸ್ಥೆ ಬಹಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ಬೆಳೆಯುತ್ತಲೂ ಇದೆ. ಇದರಿಂದ ಸಮಾಜಕ್ಕೇನೂ ತೊಂದರೆ ಇಲ್ಲ. ಬಹುಪಾಲು ಜನರಿಗೆ ಕಡಿಮೆ ದರದಲ್ಲಿ ಆಹಾರ ಸಿಗುತ್ತದೆ. ಒಂದಷ್ಟು ಮಂದಿ ಸ್ವಯಂ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಇದೆಲ್ಲ ಸ್ವಾಗತಾರ್ಹ ಬೆಳೆವಣಿಗೆ. ಆದರೆ ಇಲ್ಲಿ ಮುಖ್ಯವಾಗಿ ಎದುರಾಗುವುದು ಶುಚಿತ್ವದ ಪ್ರಶ್ನೆ ಅಷ್ಟೆ.
ವಿವಿಧ ಬಗೆಯ ತಿಂಡಿಗಳು ಲಭ್ಯ: ಬಹುಪಾಲು ತಿಂಡಿ ಗಾಡಿಗಳಿರುವುದು ರಸ್ತೆ ಬದಿ, ಚರಂಡಿಗಳ ಬದಿ, ಬಯಲು ಮೈದಾನಗಳಲ್ಲಿಯೇ. ಈ ಗಾಡಿಗಳಲ್ಲಿ ಇಡ್ಲಿ, ವಡೆ, ಪಲಾವ್,ಚಿತ್ರಾನ್ನ, ದೋಸೆ, ರೊಟ್ಟಿ, ಪರೋಟ, ಎಗ್‌ಫ್ರೈಡ್ ರೈಸ್, ಎಗ್ ಆಮ್ಲೆಟ್, ಚಿಕನ್ ಬಿರಿಯಾನಿ,ಚಿಕನ್ ಕಬಾಬ್, ಮಟನ್ ಬಿರಿಯಾನಿ, ಪಾನಿಪೂರಿ, ಮಸಾಲೆ ಪುರಿ, ಬೇಲ್‌ಪುರಿ, ವಡೆ, ಜಿಲೇಬಿ ಪಕೋಡಾ ಹೀಗೆ ಹಲವು ತಿಂಡಿ ತಿನಿಸುಗಳು ಮಾರಾಟವಾಗುತ್ತವೆ.
ಕೆಲವು ಗಾಡಿಗಳು ಸ್ಥಳದಲ್ಲಿಯೇ ತಿಂಡಿ – ತಿನಿಸುಗಳನ್ನು ತಯಾರಿಸಿ ವಹಿವಾಟು ನಡೆಸಿದರೆ, ಕೆಲವರು ಮನೆಗಳಲ್ಲಿಯೇ ಆಹಾರ ಸಿದ್ಧಪಡಿಸಿಕೊಂಡು ಗಾಡಿಗಳಲ್ಲಿಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಕೆಲವೇ ಫ್ಲೇಟ್‌ಗಳು, ಲೋಟಗಳ, ಒಂದಿಷ್ಟು ಪಾತ್ರೆಗಳಷ್ಟೇ ಬೀದಿ ಬದಿ ಗಾಡಿಗಳಲ್ಲಿನ ವ್ಯವಸ್ಥೆ. ಇವುಗಳನ್ನು ತೊಳೆಯಲು ಎಲ್ಲಿಂದ ನೀರು ತರುತ್ತಾರೆ? ಗ್ರಾಹಕರಿಗೆ ಕೊಡುವ ನೀರು ಶುದ್ಧ ಮತ್ತು ಸ್ವತ್ಛವೇ ಎಂಬುದು ಮಾತ್ರ ನಿಗೂಢ.
ನೊಣಗಳ ಹಾವಳಿ: ಗಾಡಿಗಳಲ್ಲಿನ ಆಹಾರದ ಮೇಲೆ ನೊಣಗಳ ಹಾವಳಿ, ಧೂಳಿನ ನಿಯಂತ್ರಣ ಹೇಗೆ? ಆಹಾರ ತಯಾರಿಕೆಗೆ ಬಳಸುವ ಸಾಮಗ್ರಿಗಳು, ಎಣ್ಣೆ ಯಾವ ಗುಣಮಟ್ಟದ್ದು ಎಂಬುದು ಮಾತ್ರ ಆತಂಕ ಹುಟಿುrಸುವಂತಹುದು. ಆತುರದಲ್ಲಿ ಗ್ರಾಹಕರು ತಿಂದು ಹೋಗುತ್ತಾರೆ, ಗಾಡಿ ವ್ಯಾಪಾರಗಳೂ ಅಷ್ಟೇ ಆತುರದಲ್ಲಿ ವ್ಯಾಪಾರ ಮುಗಿಸಿ ಆದಾಯದ ಲೆಕ್ಕ ಹಾಕಿಕೊಂಡು ಹೋಗುತ್ತಲೇ ಇದ್ದಾರೆ. ಶುಚಿತ್ವದ ಕಡೆಗೆ ಗಮನ ಕೊಡುವ ಬಗ್ಗೆ, ಅವರ ಮೇಲೆ ನಿಯಂತ್ರಣ ಹಾಗೂ ಎಚ್ಚರಿಕೆ ನೀಡುವವರು ಮಾತ್ರ ಇಲ್ಲ ಎಂಬುದು ಮಾತ್ರ ಆತಂಕಕಾರಿ ವಿಷಯ.
ಆಹಾರ ಸುರಕ್ಷತೆ ಪರಿಶೀಲನೆಯಿಲ್ಲ: ಸ್ಥಳೀಯ ಸಂಸ್ಥೆಗಳಲ್ಲಿರುವ ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರು ತಿಂಡಿ ಗಾಡಿಗಳವರಿಗೆ ಚಿರಪರಿಚಿತರು. ಹಾಗಾಗಿ ಅವರ ನಡುವಿನ ಸಂಬಂಧ ಎಂತಹುದು ಎಂಬುದು ಸಾರ್ವಜನಿಕರಿಗೆ ಗೊತ್ತೇ ಇದೆ. ಆರೋಗ್ಯ ಇಲಾಖೆಯಲ್ಲಿ ಸುರಕ್ಷತೆಯ ಮೇಲೆ ನಿಗಾ ಇಡಲು ಪ್ರತ್ಯೇಕ ವಿಭಾಗವೇ ಇದೆ. ಇಲಾಖೆಯಲ್ಲಿ ಅಂತಹ ವಿಭಾಗ ಇದೆ ಎಂಬುದು ಬಹುಪಾಲು ನಾಗರಿಕರಿಗೆ ಗೊತ್ತೇ ಇಲ್ಲ . ಅಷ್ಟರ ಮಟ್ಟಿಗೆ ಆ ವಿಭಾಗದ ಅಂಕಿತ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಬೀದಿ ಬದಿಯ ಗಾಡಿಗಳಿರಲಿ, ಹೋಟೆಲ್‌ಗಳಲ್ಲಿನ ಆಹಾರ, ಶುಚಿತ್ವ, ಆಹಾರದ ಪ್ರಮಾಣದ ಬಗ್ಗೆ ಸ್ಥಳೀಯ ಸಂಸ್ಥೆಗಳ ಆರೋಗ್ಯ ನಿರೀಕ್ಷಕರು, ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳು ಕ್ರಮಗಳನ್ನು ಕೈಗೊಂಡ ಉದಾಹರಣೆಗಳೂ ವಿರಳ.
ಅಧಿಕಾರಿಗಳಿಗೆ ಮಾಹಿತಿಯಿಲ್ಲ: ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳು ನೋಂದಾಯಿಸಿಕೊಳ್ಳಬೇಕು, ಪರವಾನಗಿ ಪಡೆಯಬೇಕು ಶುಚಿತ್ವ ಕಾಪಾಡಿಕೊಳ್ಳಬೇಕು ಎಂದೆಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಮಾಧ್ಯಮ ಪ್ರಕಟಣೆ ನೀಡುತ್ತಾರೆ. ಆದರೆ ಇಲಾಖೆಯಲ್ಲಿ ಈವರೆಗೂ ಬೀದಿ ಬದಿಯ ತಿಂಡಿ ಗಾಡಿಗಳ ಸಂಖ್ಯೆ ಎಷ್ಟು ಎಂಬುದು ಮಾತ್ರ ಇಲ್ಲ. ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತಾ ವಿಭಾಗದಲ್ಲಿಯಂತೂ ಈ ಬಗ್ಗೆ ಮಾಹಿತಿ ಇಲ್ಲ.
ಎಲ್ಲೆಲ್ಲಿ ಬೀದಿ ತಿಂಡಿ ಮಾರಾಟ?: ಹಾಸನ ನಗರದಲ್ಲಿ ವಿವಿಧ ರಸ್ತೆಗಳ ಬದಿ, ಆಸ್ಪತ್ರೆ, ಶಾಲಾ – ಕಾಲೇಜುಗಳ ಸಮೀಪ, ಬಸ್ ನಿಲ್ದಾಣ, ಟ್ಯಾಕ್ಸಿ ನಿಲ್ದಾಣಗಳ ಬಳಿ ಸಾವಿರಾರು ಗಾಡಿಗಳು ಬೀದಿ ಬದಿಯಲ್ಲಿ ತಿಂಡಿ – ತಿನಿಸುಗಳನ್ನು ಮಾರಾಟ ಮಾಡುತ್ತವೆ. ಹಾಸನದ ಮಹಾರಾಜ ಪಾರ್ಕ್‌ನ ಪಶ್ಚಿಮಕ್ಕೆ ಅಂದರೆ ಹಾಸನಾಂಬ ಕಲಾಕ್ಷೇತ್ರ, ಕನ್ನಡ ಸಾಹಿತ್ಯ ಪರಿಷತ್ ಎದುರು, ಸಹ್ಯಾದ್ರಿ ಚಿತ್ರಮಂದಿರದ ಎದುರು, ಗಂಧದ ಕೋಠಿ ಮತ್ತು ಬಾಲಕರ ಸರ್ಕಾರಿ ಪ್ರೌಢಶಾಲೆ ಮಧ್ಯದ ರಸ್ತೆ, ಕೇಂದ್ರೀಯ ಬಸ್ ನಿಲ್ದಾಣದ ಎದುರು, ರೈಲ್ವೆ ಟ್ರ್ಯಾಕ್ ಸಮೀಪ,
ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆ ರಸ್ತೆಯಲ್ಲಿ ತಾಲೂಕು ಪಂಚಾಯಿತಿ ಕಚೇರಿ ಸಮೀಪ, ಹಾಸನದ ಎಂ.ಜಿ.ರಸ್ತೆಯ ವಿವಿಧೆಡೆ , ಸಂತೆಪೇಟೆಯ ವಿವಿಧ ರಸ್ತೆಗಳಲ್ಲಿ ಬೀದಿ ಬದಿ ಗಾಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಚಳಿಗಾಲ ಮತ್ತು ಬೀಸಿಗೆ ಕಾಲದಲ್ಲಂತೂ ವಾಹನಗಳ ಸಂಚರಿಸುವಾಗ ರಸ್ತೆ ಬದಿಯಲ್ಲಿರುವ ತಿಂಡಿ ಗಾಡಿಗಳಿಗೂ ಆ ಧೂಳು ಮುತ್ತಿಕೊಳ್ಳುತ್ತದೆ ಧೂಳಿನಿಂದಾವೃತವಾದ ಆಹಾರ ಸೇವಿಸುವವ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಬೀದಿ ಬದಿ ವ್ಯಾಪಾರ ಮಾಡುವುದು ತಪ್ಪಲ್ಲ. ಆದರೆ ಸಾರ್ವಜನಿಕರಿಗೆ ಶುಚಿ, ರುಚಿಯಾದ ಆಹಾರ ನೀಡುವುದು ಅಗತ್ಯ. ಇದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರು ಇಬ್ಬರಿಗೂ ಒಳ್ಳೆಯದಾಗುತ್ತದೆ.
ಸೋಂಕು, ಕ್ಯಾನ್ಸರ್‌ನ ಆತಂಕ: ಬೀದಿ ಬದಿಯ ತಿಂಡಿ ಗಾಡಿಗಳಲ್ಲಿ ಶುಚಿತ್ವದ ಕೊರತೆ ಸಾಮಾನ್ಯ. ಅಲ್ಲಿನ ಆಹಾರ ತಿನ್ನುವುದರಿಂದ ಮುಖ್ಯವಾಗಿ ಸೋಂಕು ( ಇನೆ#ಕ್ಷನ್) ಆಗಬಹುದು.ಗಾಡಿಗಳಲ್ಲಿ ಇಡ್ಲಿ ತಯಾರಿಕೆಯ ವೇಳೆ ಪ್ಲಾಸ್ಟಿಕ್ ಶೀಟ್ ಬಳಸುತ್ತಾರೆ. ಕ್ಯಾನ್ಸರ್ ರೋಗ ಬರಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ. ಕೆಲವು ತಿಂಡಿಗಳಿಗೆ ಬಳಸುವ ಬಣ್ಣಗಳೂ ಕ್ಯಾನ್ಸರ್ ಕಾರಕ. ರುಚಿಗಾಗಿ ಬಳಸುವ ಟೇಸ್ಟಿಂಗ್ ಪೌಡರ್‌ಗಳಿಂದಲೂ ಆರೋಗ್ಯಕ್ಕೆ ಹಾನಿ ಆಗಬಹುದು.
ಆರೋಗ್ಯ ಮೇಲೆ ದುಷ್ಪರಿಣಾಮ ಬೀರುವ ಇಂತಹ ವಸ್ತುಗಳನ್ನು ಬೀದಿ ಬದಿಯ ಗಾಡಿಗಳಲ್ಲಷ್ಟೇ ಅಲ್ಲ ಹೋಟೆಲ್‌ಗಳು ಹಾಗೂ ದೊಡ್ಡ ಸಮಾರಂಭಗಳಲ್ಲಿ ಆಹಾರ ತಯಾರು ಮಾಡುವವರೂ ಬಳಸುತ್ತಾರೆ. ಇವೆಲ್ಲವೂ ಆರೋಗ್ಯಕ್ಕೆ ಹಾನಿಕಾರಕವೇ ಆಗಿರುತ್ತವೆ. ಆಹಾರ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಹರಿಸುವುದು ಅಗತ್ಯ. ಆದರೆ ಇಲಾಖೆಯ ಆಹಾರ ಸುರಕ್ಷತಾ ವಿಭಾಗದಲ್ಲಿ ಸಿಬ್ಬಂದಿಯ ಕೊರತೆ ಇದೆ. ಆರೋಗ್ಯದಷ್ಟೇ ಆಹಾರ ಸುರಕ್ಷತೆಗೂ ಹೆಚ್ಚು ಗಮನಕಡುವ ಅಗತ್ಯವಿದೆ ಎಂದೂ ಅವರು ಸ್ಪಷ್ಟಡಿಸುತ್ತಾರೆ.
ದಾಳಿ ಮಾಡುವ ಕಾರ್ಯಕ್ರಮ: ಹಾಸನ ನಗರದಲ್ಲಿ, ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಬೀದಿ ಬದಿಯ ತಿಂಡಿ ಗಾಡಿಗಳ ಎಷ್ಟಿವೆ ಎಂಬ ಬಗ್ಗೆ ದಾಖಲೆ ಸಿದ್ಧಪಡಿಸಿಲ್ಲ ಎಂದು ಆರೋಗ್ಯ ಇಲಾಖೆಯ ಆಹಾರ ಸುರಕ್ಷತೆ ವಿಭಾಗದ ಅಂಕಿತ ಅಧಿಕಾರಿ ಹಿರಣ್ಣಯ್ಯ ಹೇಳಿದ್ದಾರೆ. ಸಾವಿರಾರು ಗಾಡಿಗಳಲ್ಲಿ ತಿಂಡಿ, ತಿನಿಸುಗಳ ವ್ಯಾಪಾರ ನಡೆಯುತ್ತಿದೆ. ಈ ಹಿಂದೆ ತಿಂಡಿ ಗಾಡಿಗಳು ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು.
ಆದರೆ ವಿವಿಧ ಒತ್ತಡಗಳಿಂದಾಗಿ ಅದು ಅನುಷ್ಠಾನವಾಗಲೇ ಇಲ್ಲ. ಒಮ್ಮೆ ದಾಳಿ ನಡೆಸಿ ಬೀದಿ ಬದಿಯ ಗಾಡಿಗಳ ತಿಂಡಿಯ ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆಸಿ ವ್ಯಾಪಾರಗಳಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗು ಸಾಧ್ಯವಾಗಿಲ್ಲ. ಶೀಘ್ರದಲ್ಲಿಯೇ ದಿಢೀರ್ ದಾಳಿ ನಡೆಸಿ ಸ್ವತ್ಛತೆ, ಆಹಾರದ ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳುತ್ತಾರೆ.
ಬೀದಿ ಬದಿಯ ತಿಂಡಿ ಗಾಡಿಗಳನ್ನು ನಿಯಂತ್ರಿಸದಿದ್ದರೆ ಕೆಲವೇ ವರ್ಷಗಳಲ್ಲಿ ಹೋಟೆಲ್‌ಗಳನ್ನು ಮುಚ್ಚುವ ಸ್ಥಿತಿ ಬರಬಹುದು. ಕೆಲವು ತಿಂಡಿಗಳ ವ್ಯಾಪಾರಿಗಳು ಮಾಡುವಷ್ಟು ವ್ಯಾಪಾರವನ್ನು ಕೆಲವು ಹೋಟೆಲ್‌ಗಳು ಮಾಡುತ್ತಿಲ್ಲ. ಲಕ್ಷಾಂತರ ರೂ. ಬಂಡವಾಳ ಹೂಡಿ, ತೆರಿಗೆ, ವಿದ್ಯುತ್ಛಕ್ತಿ ಬಿಲ್ ಪಾವತಿಸಿ, ಹತ್ತಾರು ಕಾರ್ಮಿಕರನ್ನಿಟ್ಟುಕೊಂಡು ಹೋಟೆಲ್ ಉದ್ಯಮ ನಡೆಸುವ ನಾವು ನಷ್ಟ ಅನುಭವಿಸುತ್ತಿದ್ದೇ ವೆ. ಸಂಬಂಧಪಟ್ಟ ಇಲಾಖೆಯುವರು ಬೀದಿ ಬದಿ ಗಾಡಿಗಳನ್ನು ನಿಯಂತ್ರಿಸಬೇಕು.
-ಹೆಸರು ಹೇಳಲಿಚ್ಛಿಸದ ಹೋಟೆಲ್ ಉದ್ಯಮಿ
ಶುಚಿತ್ವದ ಬಗ್ಗೆ ಬಿದಿ ಬದಿಯ ತಿಂಡಿ ಗಾಡಿಗಳನ್ನೇ ಏಕೆ ಗುರಿ ಮಾಡಬೇಕು ? ಹೋಟೆಲ್‌ಗಳಲ್ಲಿನ ಸ್ವತ್ಛತೆ, ಆಹಾರದ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆಯೇ? ನಾವು ಕಡಿಮೆ ಬಂಡವಾಳದಲ್ಲಿ ಗಾಡಿಗಳನ್ನಿಟ್ಟುಕೊಂಡು ಕಡಿಮೆ ದರದಲ್ಲಿ ಆಹಾರ ನೀಡುತ್ತೇವೆ. ನಾವು ಸ್ವಯಂ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ಧೇವೆ. ಸಾಧ್ಯವಾದಷ್ಟೂ ಶುಚಿತ್ವ ಕಾಪಾಡಿಕೊಳ್ಳುತ್ತಿದ್ದೇವೆ. ಗ್ರಾಹಕರ ಎದುರೇ ಆಹಾರ ತಯಾರಿಸಿ ವಿತರಿಸುವಾಗ ಶುಚಿ ಇಲ್ಲದಿದ್ದರೆ ಗ್ರಾಹಕರು ಸುಮ್ಮನಿರುತ್ತಾರೆಯೇ ?
-ಹೆಸರು ಹೇಳಿಕೊಳ್ಳಲಿಚ್ಛಿಸದ ಬೀದಿ ಬದಿ ತಿಂಡಿ ಗಾಡಿ ವ್ಯಾಪಾರಿ
* ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.