ಶ್ರವಣಬೆಳಗೊಳದಲಿ ಬೆಳಗಿದೆ ಸಂಭ್ರಮದ ಪ್ರಭ
Team Udayavani, Feb 8, 2018, 6:11 PM IST
ಶ್ರವಣ ಬೆಳಗೊಳ: ನಾಡಿನ ಸುದೀರ್ಘ ಉತ್ಸವ ಎಂಬ ಹೆಗ್ಗಳಿಕೆಯ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಬುಧವಾರ ವಿದ್ಯುಕ್ತ ಚಾಲನೆ ದೊರಕಿದ್ದು, ಶ್ರವಣಬೆಳಗೊಳದಲ್ಲಿ ಸಂಭ್ರಮದ ಪ್ರಭೆ ಬೆಳಗಿದೆ. ಭಗವಾನ್ ಬಾಹುಬಲಿಯ ಜೀವನದ ಐದು ಪ್ರಮುಖ ಘಟ್ಟಗಳನ್ನು ಪ್ರತಿಬಿಂಬಿಸುವ ಪಂಚ ಕಲ್ಯಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ರಾಷ್ಟ್ರದ ಪ್ರಥಮ ಪ್ರಜೆ ರಾಮನಾಥ ಕೋವಿಂದ್ ಅವರು ಉದ್ಘಾಟಿಸುವ ಮೂಲಕ 20 ದಿನಗಳ ಧಾರ್ಮಿಕ ವಿಧಿವಿಧಾನಗಳಿಗೆ ಸಾಂಪ್ರದಾಯಿಕ ಚಾಲನೆ ದೊರಕಿದೆ.
ತ್ಯಾಗಮೂರ್ತಿ ಬಾಹುಬಲಿ ಅಖಂಡ ಮೂರ್ತಿಯಿರುವ ವಿಂಧ್ಯಗಿರಿಯು ವಿಶೇಷ ಕಳೆಯೊಂದಿಗೆ ಭಕ್ತರು, ಪ್ರವಾಸಿರನ್ನು ಸೆಳೆಯುತ್ತಿದೆ. ವರ್ಣಮಯ ದೀಪದ ವ್ಯವಸ್ಥೆ, ಹೂವಿನ ಅಲಂಕಾರದಿಂದ ಗಿರಿಯ ಕೆಳಭಾಗದ ಮೆಟ್ಟಿಲುಗಳ ಪ್ರವೇಶ ದ್ವಾರದಲ್ಲಿನ ಮಂಟಪದ ಪ್ರತಿಕೃತಿ ವಿಶೇಷವಾಗಿದೆ. ಗಿರಿಯಲ್ಲಿನ 630 ಮೆಟ್ಟಿಲಿನ ಎರಡೂ ಬದಿಯ ಸರಳಿನ ತಡೆಗೆ ಅಳವಡಿಸಿರುವ ವಿದ್ಯುತ್ ದೀಪಾಲಂಕಾರ ರಾತ್ರಿ ವೇಳೆ ವಿಶೇಷ ಆಕರ್ಷಣೆ ತಂದುಕೊಟ್ಟಿದೆ.
ಬೆಳಗೊಳದ ಉತ್ಸವ: 12 ವರ್ಷಕ್ಕೊಮ್ಮೆ ನಡೆಯುವ ಐತಿಹಾಸಿಕ ಮಹೋತ್ಸವಕ್ಕೆ ಶ್ರವಣಬೆಳಗೊಳದ ಜನತೆ ಪುಳಕಿತರಾಗಿದ್ದಾರೆ. ವಿಂಧ್ಯಗಿರಿ, ಚಂದ್ರಗಿರಿಯ ಸುತ್ತಮುತ್ತ ಮಾತ್ರವಲ್ಲದೇ ಇಡೀ ಬೆಳಗೊಳದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಮನೆಗಳು ಸುಣ್ಣಬಣ್ಣ ಬಳಿದುಕೊಂಡು ಸಿಂಗಾರಗೊಂಡಿದ್ದರೆ ರಸ್ತೆಗಳಲ್ಲಿ ಚಿತ್ತಾಕರ್ಷಕ ರಂಗೋಲಿಗಳು ಮೆರುಗು ತಂದಿವೆ. ದೊಡ್ಡ ಬೆಟ್ಟ, ಚಿಕ್ಕ ಬೆಟ್ಟ, ಕಲ್ಯಾಣಿಯು ವಿಶೇಷವಾಗಿ ಸಿಂಗಾರಗೊಂಡಿದ್ದು, ವಿದ್ಯುತ್ ದೀಪಾಲಂಕಾರ ಮೆರುಗು ಹೆಚ್ಚಿಸಿದೆ.
ಜೈನ ಧರ್ಮೀಯರು ಮಾತ್ರವಲ್ಲದೇ ಹೋಬಳಿಯಲ್ಲಿರುವ ಸರ್ವ ಧರ್ಮೀಯರು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಬೆಳಗೊಳದ ಊರ ಉತ್ಸವದಂತೆ ಆಚರಿಸುವುದು ಹಿಂದಿನಿಂದ ನಡೆದು ಬಂದಿದ್ದು, ಈಗಲೂ ಮುಂದುವರಿದಿದೆ. ದಿಗಂಬರ ಮುನಿಗಳು ವಿಂಧ್ಯಗಿರಿಗೆ ಬಂದು ಹೋಗುವಾಗ ಅವರು ನಡೆದಾಡುವ ಹಾದಿಯಲ್ಲಿ ನೀರು ಹರಿಸಿ ಜನ ಗೌರವಿಸುತ್ತಾರೆ. ರಸ್ತೆಯಲ್ಲಿ ಎದುರಾದಾಗ ಬಾಗಿ ನಮಸ್ಕರಿಸುತ್ತಾರೆ. ಒಟ್ಟಾರೆ ಊರ ಉತ್ಸವದಿಂದ ಜನ ಸಂಭ್ರಮದಲ್ಲಿದ್ದಾರೆ.
ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಬೆಳಗೊಳದ ಜನತೆ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವ್ಯಾಪಾರಿಗಳು ಕೆಲ ಹೊತ್ತು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾದರು. ಉಪನಗರ ಸೇರಿದಂತೆ ಇತರ ಸಿದ್ಧತೆ, ವ್ಯವಸ್ಥೆಗೆ ಭೂಮಿ ಕೊಟ್ಟವರು ಕೂಡ ಸಂಭ್ರಮದಿಂದಲೇ ಉದ್ಘಾಟನಾ ಸಮಾರಂಭವನ್ನು ಕಣ್ತುಂಬಿಕೊಂಡರು.
ನಾನಾ ಸೇವೆ: ವಿಂಧ್ಯಗಿರಿಯ ಸುತ್ತಮುತ್ತಲಿನ ಕೆಲ ನಿವಾಸಿಗಳು ಬೆಟ್ಟವಿಳಿದು ಬಂದವರು ದಣಿವಾರಿಸಿಕೊಳ್ಳಲೆಂದು ಮನೆಗಳ ಮುಂದೆ ಬಾಟಲಿಗಳಲ್ಲಿ ನೀರು ತುಂಬಿಸಿಟ್ಟು ನೆರವಾಗುತ್ತಿದ್ದಾರೆ. ಮಂಗಾಯಿ ಬಸದಿ ರಸ್ತೆಯ ಕೆಲ ನಿವಾಸಿಗಳು ಮನೆಯ ಮುಂದೆ ಟೇಬಲ್‌ಗಳ ಮೇಲೆ ನೀರಿನ ಬಾಟಲಿಯಿಟ್ಟು ಸ್ಪಂದಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ತೆರಳುವ ಸ್ಥಳೀಯರು ಪ್ರವಾಸಿಗರು, ಸ್ವಯಂಸೇವಕರಿಗೆ ಡ್ರಾಪ್ ನೀಡುವ ಜತೆಗೆ ಮಾರ್ಗದರ್ಶನ ನೀಡಿ ಸಹಕಾರ ನೀಡುತ್ತಿದ್ದಾರೆ. ಶಾಲಾ- ಕಾಲೇಜು ವಿದ್ಯಾರ್ಥಿಗಳು ನಾನಾ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ಸಂಭ್ರಮಿಸುತ್ತಿದ್ದಾರೆ.
ತಮ್ಮ ದಿನನಿತ್ಯದ ಜೀವನದಲ್ಲಿ ಗೊಮ್ಮಟಗಿರಿ ಒಂದು ಭಾಗವಾಗಿದ್ದರೂ ಮಹಾಮಸ್ತಕಾಭಿಷೇಕ ಉತ್ಸವ ಸ್ಥಳೀಯರಲ್ಲಿ ವಿಶೇಷ ಆಕರ್ಷಣೆ ಹುಟ್ಟಿಸಿದೆ. ಸಾಮಾನ್ಯ ಸಂದರ್ಭದ ಸಣ್ಣ ಕುರುಹೂ ಕಾಣದಂತೆ ಸೃಷ್ಟಿಯಾಗಿರುವ ವೈಭವದ ಉತ್ಸವದ ಪ್ರತಿಕ್ಷಣವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸ್ಥಳೀಯರು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಪಾರಿಗಳು, ಕೃಷಿಕರು ಹೀಗೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಬಾಹುಬಲಿಯ ಮಹಾಮಜ್ಜನ ಉತ್ಸವಕ್ಕಾಗಿ ಪುಳಕಗೊಂಡಿದ್ದಾರೆ.
ಕಣ್ತುಂಬಿಕೊಳ್ಳಲು ಕಾತರ: ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆಯೊಂದಿಗೆ ಮಹಾಮಸ್ತಕಾಭಿಷೇಕ ಉತ್ಸವದ ಬಹುಕಾಲದ ಸಿದ್ಧತೆಗೆ ಬಹುತೇಕ ತೆರೆ ಬಿದ್ದಂತಂತಾಗಿದೆ. ರಾಜ್ಯ, ರಾಷ್ಟ್ರದ ಪ್ರವಾಸಿಗರು, ಭಕ್ತರು ಮಾತ್ರವಲ್ಲದೆ ವಿದೇಶಿಗರು, ಅನಿವಾಸಿ ಭಾರತೀಯರು ದೊಡ್ಡ ಸಂಖ್ಯೆಯಲ್ಲಿ ವಿಂಧ್ಯಗಿರಿಯತ್ತ ಮುಖ ಮಾಡಿದ್ದಾರೆ. ಫೆ.17ಕ್ಕೆ ನಡೆಯಲಿರುವ ಮಹಾಮಜ್ಜನವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಕಾತರರಾಗಿದ್ದಾರೆ. ಒಟ್ಟಾರೆ ಇಡೀ ಶ್ರವಣಬೆಳಗೊಳ ಕ್ಷೇತ್ರ ಸಂಭ್ರಮದ ಜತೆಗೆ ಧಾರ್ಮಿಕ, ಭಕ್ತಿ ಆಚರಣೆಗಳಲ್ಲಿ ಮಿಂದಿದೆ.
ಹಾಲ್ನೊರೆಯ ಮೂರ್ತಿ ಬಿಂಬ
981ರಲ್ಲಿ ವಯೋವೃದ್ಧ ಗುಳ್ಳಕಾಯಜ್ಜಿ ಸಣ್ಣ ಗಿಂಡಿಯಲ್ಲಿ ಮಾಡಿದ ಅಭಿಷೇಕದಿಂದ ಇಡೀ ಬಾಹುಬಲಿ ಮೂರ್ತಿ ತೋಯ್ದು ಹಾಲು ಹೊಳೆಯಾಗಿ ಬೆಟ್ಟದ ಕೆಳಗೆ ಹರಿದು ಬೆಳಗೊಳವಾಯಿತು ಎಂಬುದು ಪ್ರತೀತಿ. ಹಾಗಾಗಿ ಈ ಬಾರಿ ಮಹಾಮಸ್ತಕಾಭಿಷೇಕದ ಲಾಂಛನದಲ್ಲಿ ಗುಳ್ಳಕಾಯಜ್ಜಿ ಕೈಯಲ್ಲಿನ ಕೊಡದಿಂದ ಹಾಲು ಬಾಹುಬಲಿ ಮೂರ್ತಿಯ ಮಸ್ತಕದ ಮೇಲೆ ಸುರಿಯುತ್ತಿರುವ ರೂಪಕವನ್ನು ಮೂಡಿಸಲಾಗಿದೆ. ಹಾಲ್ನೊರೆಯಲ್ಲಿ ಮಿಂದ ಮೂರ್ತಿಯ ಲಾಂಛನವನ್ನೇ ಬೆಳಗೊಳದಾದ್ಯಂತ ಕಂಬ, ಕಟ್ಟಡ, ಗೋಡೆ, ಮರಗಳಿಗೆ ಅಳವಡಿಸಿರುವುದು ವಿಶೇಷ ಗಮನ ಸೆಳೆಯುತ್ತಿದೆ.
ಹೆಮ್ಮೆಯ ಸಂಗತಿ
ಮಹಾಮಸ್ತಕಾಭಿಷೇಕವು ಬೆಳಗೊಳದ ಪಾರಂಪರಿಕ, ಐತಿಹಾಸಿಕ ಉತ್ಸವ. ಜಗತ್ತಿನಾದ್ಯಂತ ಜನರನ್ನು ಸೆಳೆಯುವ ಉತ್ಸವಕ್ಕೆ ನಮ್ಮೂರು ಸಾಕ್ಷಿಯಾಗುವುದು ನಮಗೆ ಎಲ್ಲಿಲ್ಲದ ಸಂತೋಷ. ತಾತ್ಕಾಲಿಕ ವ್ಯವಸ್ಥೆಗಳಿಗೆ ಭೂಮಿ ನೀಡುವುದು, ಸಂಚಾರದಲ್ಲಿ ಬದಲಾವಣೆ, ನಿರ್ಬಂಧ, ಪ್ರವಾಸಿಗರ ಜನಜಂಗಳಿಯಿಂದ ನಮಗೇನೂ ತೊಂದರೆಯಿಲ್ಲ. ಬದಲಿಗೆ ನಮ್ಮೂರ ಖ್ಯಾತಿ ಹೆಚ್ಚಾಗುವುದು ಹೆಮ್ಮೆಯ ಸಂಗತಿ ಎನ್ನುತ್ತಾರೆ ಹೊಸಹಳ್ಳಿಯ ವೆಂಕಟೇಶ್.
ಐ ಯಾಮ್ ರಿಯಲಿ ಎಕ್ಸೆ„ಟೆಡ್
ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದ ಬಗ್ಗೆ ಆರು ತಿಂಗಳ ಹಿಂದೆ ಇಂಟರ್‌ನೆಟ್‌ನಲ್ಲಿ ಓದಿದ್ದೆ. ಹಾಗಾಗಿ, ಭಾರತ ಪ್ರವಾಸವನ್ನು ಇದೇ ಅವಧಿಗೆ ಹೊಂದಿಸಿಕೊಂಡೆ. ಎರಡು ವಾರದ ಹಿಂದಷ್ಟೇ ಭಾರತಕ್ಕೆ ಬಂದಿದ್ದು, ಮೊದಲ ಬಾರಿ ದಕ್ಷಿಣ ಭಾರತ ಪ್ರವಾಸ ಕೈಗೊಂಡಿದ್ದೇನೆ. ಏಕಶಿಲೆಯಲ್ಲಿ ಇಷ್ಟು ದೊಡ್ಡ ಮೂರ್ತಿ ನಿರ್ಮಾಣದ ಕಲ್ಪನೆಯೇ ಇರಲಿಲ್ಲ. ಆ ಮೂರ್ತಿ ಬಾಹುಬಲಿಯ ವ್ಯಕ್ತಿತ್ವ, ತ್ಯಾಗವನ್ನು ಸಾರುವಂತಿದೆ. ಕ್ಷಣಕಾಲ ಮೂರ್ತಿ ನನ್ನನ್ನು ಹಿಡಿದಿಟ್ಟುಕೊಂಡಿತ್ತು. ಮೂರ್ತಿಯ ದರ್ಶನ ರೋಮಾಂಚನ ಉಂಟು ಮಾಡಿದ್ದು, ಐ ಯಾಮ್ ರಿಯಲಿ ಎಕ್ಸೆ„ಟೆಡ್…’ ಎಂದು ಪ್ರವಾಸಿಗ ಮ್ಯಾಂಚೆಸ್ಟರ್‌ನ ಕೊಲಿನ್ ಶಾರ್ಪಲ್ಸ್ ಹೇಳಿದರು.
ಕೀರ್ತಿಪ್ರಸಾದ್ ಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.