ಜಿಲ್ಲೆಯಲ್ಲಿ ಬಹುತೇಕ ಶುದ್ಧ ನೀರಿನ ಘಟಕ ಸ್ಥಗಿತ
Team Udayavani, Dec 28, 2019, 3:15 PM IST
ಹಾಸನ: ಸರ್ವರಿಗೂ ಶುದ್ಧ ಕುಡಿವ ನೀರು ಪೂರೈಕೆ ಆಶಯದೊಂದಿಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ನೀರಿನ ಘಟಕಗಳು ನಿರ್ಮಾಣವಾಗಿವೆ. ಆದರೆ, ಸಮರ್ಪಕ ನಿರ್ವಹಣೆ ಕೊರತೆಯಿಂದ ಜಿಲ್ಲೆಯಲ್ಲಿ ಕೆಲವು ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿವೆ. 2 ರೂ.ಗೆ 20 ಲೀಟರ್ ಶುದ್ಧೀಕರಿಸಿದ ಕುಡಿವ ನೀರು ಪೂರೈಸುವ ಶುದ್ಧ ನೀರಿನ ಘಟಕಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿದ್ದು, ಸರ್ಕಾರದ ಆಶಯ ಈಡೇರುತ್ತಿಲ್ಲ.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ( ಕೆಆರ್‌ಐಡಿಎಲ್) ನಿರ್ವಹಿಸುತ್ತಿದ್ದ ಶುದ್ಧ ನೀರಿನ ಘಟಕಗಳನ್ನು ಈಗ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಗೆ ವಹಿಸಿ ಕೈ ತೊಳೆದುಕೊಂಡಿದೆ. ಈ ಎಲ್ಲಾ ಘಟಕಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ಗ್ರಾಮೀಣ ಕುಡಿವ ನೀರು ಪೂರೈಕೆ ಇಲಾಖೆ ಈಗ ಪರದಾಡುತ್ತಿದೆ. ಹಾಸನ ಜಿಲ್ಲೆಯಲ್ಲಿ ಒಟ್ಟು 486 ಶುದ್ಧ ನೀರಿನ ಘಟಕಗಳಿವೆ. ಆ ಪೈಕಿ ನಗರ, ಪಟ್ಟಣ ಪ್ರದೇಶಗಳಲ್ಲಿ 26 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 460 ಘಟಕಗಳಿವೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ 59 ಘಟಕ ಸ್ಥಗಿತಗೊಂಡಿವೆ. ಸ್ವಯಂ ಸೇವಾ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ನಿರ್ವಹಿಸುವ ಘಟಕಗಳು ಸಮರ್ಪಕವಾಗಿ ನಡೆಯುತ್ತಿದ್ದು, ಇನ್ನುಳಿದವು ಆಗಿಂದಾಗ್ಗೆ ಕೆಟ್ಟು ನಿಲ್ಲುತ್ತವೆ. ಇನ್ನೂ ಹೊಸದಾಗಿ 65 ಶುದ್ಧ ನೀರಿನ ಘಟಕಗಳ ಸ್ಥಾಪನೆಗೆ ಗ್ರಾಮೀಣ ಕುಡಿವ ನೀರು ಪೂರೈಕೆ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದೆ.
ಕೆಟ್ಟಿವೆ: ನಗರ ಪ್ರದೇಶಗಳಲ್ಲಿಯೂ ಕೆಲವು ಘಟಕಗಳು ಆರಂಭವಾಗಿ ಕೆಲ ದಿನ ಮಾತ್ರ ನೀರು ಪೂರೈಕೆಯಾದರೆ ಬಹುತೇಕ ಸ್ಥಗಿತಗೊಂಡಿವೆ. ಆದರೆ, ಪೌರಾಡಳಿತ ಸಂಸ್ಥೆಗಳ ಕಡತಗಳಲ್ಲಿ ಮಾತ್ರ ಸಮರ್ಪಕ ನಿರ್ವ ಹಣೆಯಾಗುತ್ತಿವೆ ಎಂಬ ದಾಖಲೆಯಿದ್ದರೆ, ವಾಸ್ತವಾಗಿ ಬಹುಪಾಲು ಕೆಟ್ಟು ನಿಂತಿವೆ. ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಶುದ್ಧ ನೀರಿನ ಘಟಕ ಕೆಲವು ತಿಂಗಳಿಂದ ಕೆಟ್ಟು ನಿಂತಿದೆ. ಮಹಾವೀರ ಸರ್ಕಲ್ ಬಳಿ ಇರುವ ಘಟಕವೂ ಸ್ಥಗಿತಗೊಂಡಿದೆ. ಕುವೆಂಪು ನಗರದ ಘಟಕ ಚಾಲ್ತಿಯಲ್ಲಿದ್ದರೂ ಆಗಿಂದಾಗ್ಗೆ ರಜೆ ಘೋಷಣೆಯಾಗುತ್ತಿರುತ್ತದೆ. ಆದರೂ, ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿಯೇ ಇರುವ ನಗರಾಭಿವೃದ್ಧಿ ಕೋಶದ ಕಚೇರಿಗೆ ನಗರಸಭೆ ನೀಡಿರುವ ವರದಿಯಲ್ಲಿ ಹಾಸನ ನಗರದ ಎಲ್ಲಾ ಘಟಕಗಳೂ ಸುಸ್ಥಿತಿಯಲ್ಲಿದ್ದು, ವ್ಯವಸ್ಥಿತವಾಗಿ ನಿರ್ವಹಣೆ ಯಾಗುತ್ತಿವೆ ಎಂದಿರುವುದು ವಿಪರ್ಯಾಸ.
ನಿರ್ವಹಣೆ ಯಾರದ್ದು? ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪನೆಯಾಗಿರುವ ನೀರಿನ ಘಟಕಗಳ ನಿರ್ವಹಣೆಯನ್ನು ಕೆಲವು ಸ್ವಯಂ ಸೇವಾ ಸಂಸ್ಥೆಗಳು ವಹಿಸಿಕೊಂಡಿವೆ. ಆ ಪೈಕಿ ಹಾಸನ ಜಿಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ 50 ಘಟಕ ನಿರ್ವಹಿಸುತ್ತಿದೆ. ಇನ್ನು ಸಹಕಾರಿ ಸಂಸ್ಥೆಗಳು 41 ಘಟಕ ನಿರ್ವಹಣೆ ಮಾಡುತ್ತಿದೆ. ಗ್ರಾಹಕರು ಅಂದರೆ ನೀರು ಪಡೆಯುವವರು 2 ರೂ. ನಾಣ್ಯ ಹಾಕಿ 20 ಲೀಟರ್ ಶುದ್ಧೀಕರಿಸಿದ ಕುಡಿವ ನೀರು ಪಡೆಯುವ ವ್ಯವಸ್ಥೆ.
ಆದರೆ, ಜಿಲ್ಲೆಯಲ್ಲಿ 50 ಘಟಕ ನಿರ್ವಹಿಸು ತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ 2 ರೂ. ಪಡೆಯದೆ ನೀರಿನ ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ. ಸಹಕಾರಿ ಸಂಸ್ಥೆಗಳ ನಿರ್ವಹಣೆ ಪರವಾಗಿಲ್ಲ. ಆದರೆ ಖಾಸಗಿಯವರ ನಿರ್ವಹಣೆ ಆ ಘಟಕಗಳಲ್ಲಿ ಸಂಗ್ರಹವಾಗುವ ಹಣಕ್ಕಷ್ಟೇ ಸೀಮಿತ ವಾಗಿದೆ. ಘಟಕಗಳನ್ನು ನಿರ್ಮಾಣ ಮಾಡಿದ ಸಂಸ್ಥೆಯೇ 5 ವರ್ಷ ನಿರ್ವಹಣೆ ಮಾಡುವ ಕರಾರಿದ್ದರೂ ಘಟಕಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಸಂಪೂರ್ಣ ಹೊಣೆ ಇನ್ನು ಇಲಾಖೆಯದ್ದು:
ಗ್ರಾಮೀಣ ಪ್ರದೇಶದ ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆ ಹೊಣೆಯನ್ನು ಈಗ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ವಹಿಸಿಕೊಂಡಿದೆ. ಅಂದರೆ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ 460 ಘಟಕ ಮತ್ತು ಹೊಸದಾಗಿ ನಿರ್ಮಾಣವಾಗಲಿರುವ 65 ಘಟಕ ಸೇರಿ ಒಟ್ಟು 525 ಘಟಕಗಳನ್ನೂ ಗ್ರಾಮೀಣ ಕುಡಿಯುವ ನೀರಿನ ಪೂರೈಕೆ ಇಲಾಖೆಯೇ ನಿರ್ವಹಣೆ ಮಾಡಬೇಕಾಗಿದೆ.
ವೆಚ್ಚ ಭರಿಸಿವೆ:ದುರಸ್ತಿಯಾಗಬೇಕಾಗಿರುವ 59 ಶುದ್ಧ ನೀರಿನ ಘಟಕಗಳ ದುರಸ್ತಿ ಹಾಗೂ ನಿರ್ವಹಣೆಗೆ ಟೆಂಡರ್ ಕರೆದಿದೆ. ಟೆಂಡರ್‌ನಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳು 5 ವರ್ಷ ಘಟಕಗಳನ್ನು ನಿರ್ವಹಣೆ ಮಾಡಬೇಕೆಂಬ ಷರತ್ತು ವಿಧಿಸಿದ್ದು,1 ಘಟಕದ ನಿರ್ವಹಣೆಗೆ ತಿಂಗಳಿಗೆ 3000 ರೂ.ಗಳನ್ನು ನಿರ್ವಹಣೆಯ ವೆಚ್ಚವನ್ನು ಇಲಾಖೆ ಭರಿಸಲಿದೆ. ಇನ್ನುಳಿದ ಘಟಕಗಳ ನಿರ್ವಹಣೆಯನ್ನೂ ಗುತ್ತಿಗೆ ನೀಡಲು ಇಲಾಖೆ ಟೆಂಡರ್ ಆಹ್ವಾನಿಸಿದ್ದು, ಎರಡು ಕಂಪನಿಗಳು ಮುಂದೆ ಬಂದಿವೆ. ಬೆಂಗಳೂರಿನ ಅಕ್ವಾಶೈನ್ ಕಂಪನಿ 54 ಘಟಕಗಳ ನಿರ್ವಹಣೆಗೆ ಮುಂದೆ ಬಂದಿದ್ದು, ಬೆಂಗಳೂರಿನ ನ್ಯೂಟೆಕ್ ಸೋಲಾರ್ ಸಿಸ್ಟಂ ಕಂಪನಿ 64 ಘಟಕಗಳ ನಿರ್ವಹಣೆ ವಹಿಸಿಕೊಂಡಿದೆ.
ಇನ್ನುಳಿದ ಘಟಕಗಳ ನಿರ್ವಹಣೆ ಹೊಣೆ ಇನ್ನೂ ನಿರ್ಧಾರವಾಗಬೇಕಾಗಿದೆ. ಹೊಸದಾಗಿ ನಿರ್ಮಾಣವಾಗಲಿರುವ 65 ಶುದ್ಧನೀರಿನ ಘಟಕಗಳ ವೆಚ್ಚ ಸುಮಾರು 12 ಲಕ್ಷ ರೂ. ಈ ಘಟಕಗಳನ್ನು ನಿರ್ಮಿಸಿದ ಸಂಸ್ಥೆಯೇ 5 ವರ್ಷ ನಿರ್ವ ಹಣೆ ಮಾಡಬೇಕು. ಬೋರ್‌ವೆಲ್‌ಗಳಿಂದ ನೀರು ಪಡೆದು ಆ ನೀರನ್ನು ಶುದ್ಧೀಕರಿಸಿ 2 ರೂ.ಗೆ 20 ಲೀಟರ್ ನೀರು ಪೂರೈಸುವುದರೊಂದಿಗೆ ಈ ಘಟಕಗಳ ನಿರ್ವ ಹಣೆಗೆ ಗ್ರಾಮೀಣ ನೀರು ಪೂರೈಕೆ ಇಲಾಖೆ ಮಾಸಿಕ 3000 ರೂ. ಪಾವತಿ ಮಾಡುತ್ತದೆ. ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳು ಈ ವೆಚ್ಚವನ್ನು ಪಾವತಿಸುತ್ತವೆ.
ಕೆಲವೇ ದಿನಗಳಲ್ಲಿ ಚಾಲೂ ಆಗಲಿವೆ: ಇಲಾಖೆ ಆಯುಕ್ತರ ಸೂಚನೆಯಂತೆ ಕೆಆರ್‌ಐಡಿಎಲ್ ನಿರ್ವಹಿಸುತ್ತಿದ್ದ ಘಟಕಗಳನ್ನು ಗ್ರಾಮೀಣ ಕುಡಿವ ನೀರು ಪೂರೈಕೆ ಇಲಾಖೆ ವಹಿಸಿಕೊಂಡಿದೆ. ದುರಸ್ತಿಯಾಗಬೇಕಾದ ಎಲ್ಲಾ ಘಟಕ ಹಾಗೂ ಇಲಾಖೆ ವ್ಯಾಪ್ತಿಗೆ ಬರುವ ಗ್ರಾಮೀಣ ಪ್ರದೇಶದ ಎಲ್ಲಾ ಘಟಕಗಳ ನಿರ್ವಹಣೆಗೆ ಈಗಾಗಲೇ ಟೆಂಡರ್ ಕರೆದಿದ್ದು, ಕೆಲವೇ ದಿನಗಳಲ್ಲಿ ಎಲ್ಲಾ ಘಟಕಗಳಿಗೆ ಚಾಲನೆ ಸಿಗಲಿದೆ. ಇನ್ನು ಮುಂದೆ ಆಯಾ ತಾಲೂಕಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಿರಿಯ ಎಂಜನಿಯರ್‌ಆಗಿಂದಾಗ್ಗೆ ಘಟಕಗಳನ್ನು ಪರಿವೀಕ್ಷಣೆ ಮಾಡುವಂತೆ ಸೂಚನೆ ನೀಡಲಾಗಿದೆ. ತಿಂಗಳಿಗೊಮ್ಮೆ ನೀರನ್ನು ಪರೀಕ್ಷೆ ಮಾಡಲಾಗುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್ ತಿಳಿಸಿದ್ದಾರೆ.
-ಎನ್.ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.