ರೋಹಿಣಿ ಸಿಂಧೂರಿ ದಿಢೀರ್ ವರ್ಗಾವಣೆ
Team Udayavani, Feb 23, 2019, 7:29 AM IST
ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯಾಗಿದ್ದು, ಹೊಸದಾಗಿ ಅಕ್ರಂ ಪಾಷಾ ಕಾರ್ಯಭಾರ ವಹಿಸಿಕೊಂಡಿದ್ದಾರೆ. ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿನಲ್ಲಿರುವ ಕಟ್ಟಡಗಳ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದ್ದು, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಅಕ್ರಂಪಾಷಾ ಅವರನ್ನು ಹಾಸನ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿತ್ತು.
ಆದೇಶ ಹೊರಬಿದ್ದ ತಕ್ಷಣ ಅಕ್ರಂಪಾಷಾ ಅವರು ಬೆಂಗಳೂರಿನಿಂದ ಹಾಸನಕ್ಕೆ ಬಂದು ಕಾರ್ಯಭಾರ ವಹಿಸಿಕೊಂಡರು. ಕೇಂದ್ರ ಸ್ಥಾನದಲ್ಲಿದ್ದರೂ ನೂತನ ಜಿಲ್ಲಾಧಿಕಾರಿಯವರಿಗೆ ಕಾರ್ಯಭಾರ ವಹಿಸಿಕೊಡಲು ರೋಹಿಣಿ ಸಿಂಧೂರಿ ಅವರು ಕಚೇರಿಗೆ ಬರಲಿಲ್ಲ. ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರಿಂದ ಅಕ್ರಂ ಪಾಷಾ ಕಾರ್ಯಭಾರ ವಹಿಸಿಕೊಂಡರು.
ರೇವಣ್ಣ ಜತೆ ಮುನಿಸು: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರೊಂದಿಗೆ ರೋಹಿಣಿ ಸಿಂಧೂರಿ ಕೆಲ ದಿನಗಳಿಂದ ಮುನಿಸಿಕೊಂಡಿದ್ದರು ಎನ್ನಲಾಗಿದೆ. ತಿಂಗಳಿನಿಂದ ರೋಹಿಣಿ ಸಿಂಧೂರಿ ಅವರು ಸರ್ಕಾರದ ಅಧಿಕೃತ ಕಾರ್ಯಕ್ರಮಗಳ ಸಿದ್ಧತೆಯತ್ತ ನಿರಾಸಕ್ತಿ ವಹಿಸುತ್ತಿದ್ದರು. ಕಳೆದ ವಾರ ನಡೆದ ಆರೋಗ್ಯ ಮೇಳ, ಕೃಷಿ ಮೇಳದತ್ತಲೂ ರೋಹಿಣಿ ಸಿಂಧೂರಿ ಮುಖ ಹಾಕಿರಲಿಲ್ಲ.
ಅಪರ ಜಿಲ್ಲಾಧಿಕಾರಿ ವೈಶಾಲಿ ಹಾಗೂ ಜಿಪಂ ಪ್ರಭಾರಿ ಸಿಇಒ ಪುಟ್ಟಸ್ವಾಮಿ ಅವರೇ ಆರೋಗ್ಯ ಮತ್ತು ಕೃಷಿ ಮೇಳದ ಸಿದ್ಧತೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತ್ರ ರೋಹಿಣಿ ಸಿಂಧೂರಿ ಪಾಲ್ಗೊಂಡಿದ್ದರು. ಹಿಂದೆ ನಡೆದಿದ್ದ ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರೇ ಸ್ವಾಗತ ಭಾಷಣ ಮಾಡುತ್ತಿದ್ದರು. ಆದರೆ, ಫೆ.18 ರಂದು ನಡೆದ ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಸ್ವಾಗತ ಮಾಡಿದ್ದರು.
ವರ್ಗಾವಣೆಗೆ ಕಾರಣವೇನು?: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಜಿಲ್ಲಾಧಿಕಾರಿಯವರು ಕೆಲವು ನಿಯಮಗಳನ್ನು ಮುಂದೊಡ್ಡಿ ರೇವಣ್ಣ ಅವರ ವೇಗಕ್ಕೆ ಸ್ಪಂದಿಸುತ್ತಿರಲಿಲ್ಲವೆಂದೂ, ಈ ಸಂಬಂಧ ಜಿಲ್ಲೆಯ ಕೆಲ ಶಾಸಕರು ಜಿಲ್ಲಾಧಿಕಾರಿಯವರ ಧೋರಣೆಗೆ ಬೇಸರ ವ್ಯಕ್ತಪಡಿಸಿದ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿದ್ದ ದಿಶಾ ಸಮಿತಿ ಸಭೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಜಲ್ಲಿ ಮತ್ತು ಮರಳು ಸಕಾಲದಲ್ಲಿ ಸಿಗುತ್ತಿಲ್ಲ. ಗುತ್ತಿಗೆದಾರರು ಕಲ್ಲು ಕ್ವಾರಿಯಲ್ಲಿ ಜಲ್ಲಿ ಒಡೆಯಲು ಲೈಸೆನ್ಸ್ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಆರೋಪಿಸಿದ್ದರು. ಈ ಸಂದರ್ಭದಲ್ಲಿ ನಿಯಮ ನಿಬಂಧನೆ ಬಿಟ್ಟು ಪರವಾನಗಿ ಕೊಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿವರು ಮಾರುತ್ತರ ನೀಡಿದ್ದರು.
ಸಕಲೇಶಪುರ – ಹಾಸನ ನಡುವಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಗುತ್ತಿಗೆದಾರರು ಸಂಗ್ರಹಿಸಿದ್ದ ಮರಳು ಮುಟ್ಟುಗೋಲು ಹಾಕಿಕೊಂಡು 2 ಕೋಟಿ ರೂ. ದಂಡ ವಿಧಿಸಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಹಾಸನ ಜಿಪಂ ಉಪಾಧ್ಯಕ್ಷ ಸುಪ್ರದೀಪ್ ಯಜಮಾನ್ ಅವರು ಅಕ್ರಮ ಮರಳು ಸಂಗ್ರಹಕ್ಕೆ ಸಹಕಾರ ನೀಡಿದ್ದಾರೆ ಎಂದು ನೋಟಿಸ್ ಜಾರಿ ಮಾಡಿದ್ದರು. ಆಡಳಿತ ಪಕ್ಷದ ಮುಖಂಡರಿಗೇ ರೋಹಿಣಿ ಸಿಂಧೂರಿ ಅವರು ತೊಂದರೆ ಕೊಡುತ್ತಿದ್ದುದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಹ್ಯವಾಗಿರಲಿಲ್ಲ.
ಕೋರ್ಟ್ ಮೆಟ್ಟಿಲೇರಲು ರೋಹಿಣಿ ಚಿಂತನೆ?
ಹಾಸನ: ಅವಧಿ ಪೂರ್ವ ವರ್ಗಾವಣೆಯನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರಲಿದ್ದಾರೆ ಎಂದು ಅಧಿಕಾರಿಗಳ ವಲಯದಲ್ಲಿ ಚರ್ಚೆ ಅರಂಭವಾಗಿದೆ. ಒಂದು ಹುದ್ದೆಯಲ್ಲಿ ಐಎಎಸ್ ಅಧಿಕಾರಿಗಳನ್ನು ಕನಿಷ್ಠ 2 ವರ್ಷದ ಅವಧಿಗಿಂತ ಮೊದಲು ವರ್ಗ ಮಾಡಬಾರದೆಂಬ ನಿಯಮ ಆಧರಿಸಿ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಹಾಸನ ಜಿಲ್ಲಾಧಿಕಾರಿ ಹುದ್ದೆಗೆ ಬಂದಿದ್ದ ರೋಹಿಣಿ ಸಿಂಧೂರಿ ಅವರು, ಈಗ ಮತ್ತೆ ಕೋರ್ಟ್ ಮೊರೆ ಹೋಗುವರು. ಹಾಗಾಗಿಯೇ ನೂತನ ಡೀಸಿಗೆ ಕಾರ್ಯಭಾರವಹಿಸಲು ಅವರು ನಿರಾಕರಿಸಿದ್ದಾರೆ ಎಂಬ ವದಂತಿ ಹರಡಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರ ಒತ್ತಡದಿಂದ ರೋಹಿಣಿ ಸಿಂಧೂರಿ ಅವರನ್ನು 2018ರ ಜನವರಿಯಲ್ಲಿ ವರ್ಗಾವಣೆ ಮಾಡಿತ್ತು. ಆದರೆ, 2017 ಜೂನ್‌ನಲ್ಲಿ ಹಾಸನ ಜಿಲ್ಲಾಧಿಕಾರಿ ಕಾರ್ಯಭಾರ ವಹಿಸಿಕೊಂಡಿದ್ದ ರೋಹಿಣಿ ಸಿಂಧೂರಿ, ತಮ್ಮನ್ನು ಅವಧಿ ಪೂರ್ವ ವರ್ಗಾವಣೆ ಮಾಡಲಾಗಿದೆ ಎಂದು ಸಿಎಟಿಯ ಮೊರೆ ಹೋಗಿದ್ದರು. ಆನಂತರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿರ್ದೇಶನದನ್ವಯ ಚುನಾವಣೆ ಮುಗಿಯುವವರೆಗೆ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ಸಿ.ಕೆ.ಜಾಫರ್ ಅವರನ್ನು ಹಾಸನ ಜಿಲ್ಲಾಧಿಕಾರಿ ಹುದ್ದೆಗೆ ವರ್ಗ ಮಾಡಲಾಗಿತ್ತು. ಆದರೆ, ರೋಹಿಣಿ ಸಿಂಧೂರಿ ಅವರ ವರ್ಗಾವಣೆ ವಿವಾದ ಹೈಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿತ್ತು.
ಆದರೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2018ರ ಜೂನ್‌ನಲ್ಲಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಆದೇಶವನ್ನು ಹಿಂತೆಗೆದುಕೊಂಡಿತು. ಹಾಗಾಗಿ ಕಳೆದ ಜೂನ್‌ನಲ್ಲಿ ಮತ್ತೆ ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿ ಕಾರ್ಯಭಾರ ವಹಿಸಿಕೊಂಡು ಮುಂದುವರಿದಿದ್ದರು. ಮುಂದಿನ ಜೂನ್‌ಗೆ ರೋಹಿಣಿ ಸಿಂಧೂರಿ ಅವರು 2 ವರ್ಷ ಅಧಿಕಾರ ಪೂರ್ಣಗೊಳಿಸುತ್ತಿದ್ದರು.
ಅಲ್ಲಿಯವರೆಗೂ ಅವರು ಜಿಲ್ಲಾಧಿಕಾರಿಯವರು ಮುಂದುವರಿಯುವರು ಎಂದು ಹೇಳಲಾಗುತ್ತಿತ್ತು. ಆದರೆ, ಈಗ ವರ್ಗಾವಣೆಯಾಗಿದ್ದಾರೆ. ತಮ್ಮನ್ನು ಅವಧಿ ಪೂರ್ಣ ವರ್ಗಾವಣೆ ಮಾಡಲಾಗಿದೆ ಎಂದು ಮತ್ತೆ ರೋಹಿಣಿ ಸಿಂಧೂರಿ ಅವರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆಯಲು ರೋಹಿಣಿ ಸಿಂಧೂರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Enquiry: ತನ್ನದೇ ವೀಡಿಯೋ ಕೋರ್ಟ್‌ನಲ್ಲಿ ವೀಕ್ಷಿಸಲು ಮಾಜಿ ಸಂಸದ ಪ್ರಜ್ವಲ್‌ಗೆ ಅನುಮತಿ
Discomfort: ಬಿಜೆಪಿ ತೊರೆಯುವರೇ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ?
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ