ಹಾಸನಾಂಬೆ ದರ್ಶನಕ್ಕೆ ನೂಕು ನುಗ್ಗಲು
Team Udayavani, Oct 27, 2019, 3:00 AM IST
ಹಾಸನ: ಹಾಸನಾಂಬೆಯ ದರ್ಶನಕ್ಕೆ ಇನ್ನು ಮೂರು ದಿನ ಬಾಕಿ ಇರುವುದರಿಂದ ಹಾಗು ಸಾಲು, ಸಾಲು ರಜೆಗಳಿರುವುದರಿಂದ ನಿರೀಕ್ಷೆಯಂತೆ ದೇವಿಯ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದ್ದು, ಶನಿವಾರ ದೇವಿಯ ದರ್ಶನಕ್ಕೆ ನೂಕು ನುಗ್ಗಲು ಉಂಟಾಯಿತು. ಶನಿವಾರ ಮುಂಜಾನೆಯಿಂದ ರಾತ್ರಿವರೆಗೂ ಭಕ್ತರ ಸಂಖ್ಯೆಯಲ್ಲಿ ಏರುತ್ತಲೇ ಹೋಯಿತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು.
ವಿಶೇಷವಾಗಿ ನೇರ ದರ್ಶನಕ್ಕೆ ಬರುವ ಗಣ್ಯರು ಮತ್ತು ಅವರ ಹಿಂಬಾಲಕರನ್ನು ತಡೆಯಲು ಪೊಲೀಸರು ಹರ ಸಾಹಸಪಟ್ಟರು. 1000 ರೂ. ಟಿಕೆಟ್ ಹಾಗೂ ಗಣ್ಯರಿಗಾಗಿ ದೇವಾಲಯದ ಪ್ರಧಾನ ದ್ವಾರದಿಂದ ನಿಗದಿಪಡಿಸಿರುವ ಸಾಲಿನಲ್ಲಿಯೇ ನೂಕು ನುಗ್ಗಲು ಉಂಟಾಯಿತು. ಈ ಸಾಲುಗಳಲ್ಲಿಯೇ ಒಂದರಿಂದ 2 ಗಂಟೆಗಳ ಕಾಲ ನಿಂತು ದೇವಿಯ ದರ್ಶನ ಪಡೆಯುವ ಸ್ಥಿತಿ ನಿರ್ಮಾಣವಾಗಿತ್ತು.
ದೇವಾಲಯದ ಹಿಂಭಾಗ 300 ರೂ. ಟಿಕೆಟ್ ಹಾಗೂ ಪಾಸ್ ಹೊಂದಿದವರ ಸರದಿಯ ಸಾಲೂ ಅರ್ಧ ಕಿ.ಮೀ.ನಷ್ಟಿತ್ತು. ಈ ಸಾಲುಗಳಲ್ಲಿ 3 ಗಂಟೆಗೂ ಹೆಚ್ಚು ಕಾಲ ನಿಂತು ನೂಕು ನುಗ್ಗಲಿನಲ್ಲಿ ದೇವಿಯ ದರ್ಶನ ಪಡೆದರು. ಇನ್ನು ಧರ್ಮ ದರ್ಶನದ ಸಾಲು ಸುಮಾರು ಒಂದು ಕಿ.ಮೀ.ನಷ್ಟಿತ್ತು. ದೇವಿಯ ದರ್ಶನ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಧರ್ಮ ದರ್ಶನದ ಸರದಿಯ ಸಾಲು ಬಿ.ಎಂ.ರಸ್ತೆಯಲ್ಲಿ ಕೃಷಿ ಜಂಟಿ ನಿರ್ದೇಶಕರ ಕಚೇರಿಯಿಂದ ಮುಂದೆ ಸಾಗಿತ್ತು.
ಭಾರೀ ಸಂಖ್ಯೆ ಭಕ್ತರ ನಡುವೆ ಶನಿವಾರ ಗಣ್ಯರು ಮತ್ತು ಅತಿ ಗಣ್ಯರ ಸಂಖ್ಯೆಯೂ ಹೆಚ್ಚಾಗಿತ್ತು. ಗಣ್ಯರು ದೇವಿಯ ದರ್ಶನಕ್ಕೆ ಬಂದಾಗಲೆಲ್ಲ 10 ರಿಂದ 20 ನಿಮಿಷ ಸರದಿಯ ಸಾಲಿನಲ್ಲಿದ ಭಕ್ತರನ್ನು ತಡೆಯುತ್ತಿದ್ದರಿಂದ ನೂಕು ನುಗ್ಗಲು ಮತ್ತಷ್ಟು ಹೆಚ್ಚಾಯಿತು. ಜೊತೆಗೆ ಮೋಡ ಕವಿದ ವಾತಾವರಣ ಮತ್ತು ಶೀತ ಗಾಳಿಯೊಂದಿಗೆ ಆಗಿಂದಾಗ್ಗೆ ಸುರಿಯುತ್ತಿದ್ದ ಮಳೆಯ ಕಾಟದಿಂದ ಭಕ್ತರು ಹೈರಾಣಾದರು.
1000 ರೂ.ಟಿಕೆಟ್ ಪಡೆದವರು ಹಾಗೂ ವಿಶೇಷ ದರ್ಶನದ ಪಾಸ್ ಹೊಂದಿದ್ದವರನ್ನೂ ಪೊಲೀಸರು ತಳ್ಳುತ್ತಿದ್ದುದರಿಂದ ಕೆಲವು ಸಂದರ್ಭಗಳಲ್ಲಿ ಭಕ್ತರು ಮತ್ತು ಪೊಲೀಸರ ನಡುವೆ ಸಂಘರ್ಷವೂ ನಡೆಯಿತು. ಇಡೀ ದಿನ ದೇವಿಯ ದರ್ಶನಕ್ಕೆ ಭಕ್ತರು ಹರಸಾಹಸ ಪಟ್ಟರು.
ವಿಜಯ ಭಾಸ್ಕರ್ ಸೇರಿದಂತೆ ಗಣ್ಯರಿಂದ ದೇವಿ ದರ್ಶನ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೇರಿದಂತೆ ಹಲವು ಗಣ್ಯರು ಶನಿವಾರ ಹಾಸನಾಂಬೆಯ ದರ್ಶನ ಪಡೆದರು. ವಿಜಯಭಾಸ್ಕರ್ ಅವರು ಕುಟುಂಬದವರೊಂದಿಗೆ ಆಗಮಿಸಿ ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಹಾಜರಿದ್ದು ವಿಜಯಭಾಸ್ಕರ್ ಅವರು ದೇವಿಯ ದರ್ಶನ ಪಡೆಯಲು ನೆರವಾದರು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯಭಾಸ್ಕರ್ ಅವರು , ದೇವಿಯ ದರ್ಶನದಿಂದ ಧನ್ಯತಾ ಭಾವ ಮೂಡಿದೆ. ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಕಲ್ಪಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಸನ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಬಡ್ತಿ ಪಡೆದಿರುವ ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ಶರತ್‌ಚಂದ್ರ ಅವರೂ ಶನಿವಾರ ದೇವಿಯ ದರ್ಶನ ಪಡೆದರು. ನಂತರ ದರ್ಬಾರ್ ಗಣಪತಿ ಹಾಗೂ ಶ್ರೀ ಸಿದ್ದೇಶ್ವರ ದೇವಾಲಯಕ್ಕೂ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಾಂಗ್ರೆಸ್ ನಾಯಕಿ ಮೋಟಮ್ಮ: ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರು ಕುಟುಂಬ ಸಮೇತರಾಗಿ ಶನಿವಾರ ಮಧ್ಯಾಹ್ನ ಹಾಸನಾಂಬೆ ದೇವಿ ದರ್ಶನ ಮಾಡಿದರು. ಪ್ರತಿ ವರ್ಷವೂ ಹಾಸನಾಂಬೆಯ ದರ್ಶನ ಪಡೆಯುತ್ತಿದ್ದು ಈ ವರ್ಷವೂ ದೇವಿಯ ದರ್ಶನ ಪಡೆದು ಪುನೀತಳಾಗಿದ್ದೇನೆ ಎಂದರು.
ಬಿ.ಜೆ.ಪುಟ್ಟಸ್ವಾಮಿ: ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿಜೆಪಿ ಪುಟ್ಟಸ್ವಾಮಿ ಅವರು ಶನಿವಾರ ಹಾಸನಾಂಬೆ ದೇಗುಲಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.
ಚಲನಚಿತ್ರ ನಟರು: ಚಲನ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಬಿರಿಯ ನಟ ದೊಡ್ಡಣ್ಣ ಅವರು ಹಾಸನಾಂಬೆಯ ದರ್ಶನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.