ಆನೆ ಕಾರಿಡಾರ್ ಯೋಜನೆ ಗಗನ ಕುಸುಮ
Team Udayavani, Feb 6, 2019, 7:28 AM IST
ಹಾಸನ: ಜಿಲ್ಲೆಯ ಮಲೆನಾಡು ಪ್ರದೇಶಗಳಾದ ಸಕಲೇಶಪುರ ಮತ್ತು ಆಲೂರು ತಾಲೂಕಿನಲ್ಲಿ ಕಾಡಾನೆಗಳ ಉಪಟಳ ತಡೆಗೆ ಆನೆ ಕಾರಿಡಾರ್ ನಿರ್ಮಿಸಬೇಕೆಂಬುದು ಕಳೆದ ನಾಲ್ಕೈದು ವರ್ಷ ಗಳಿಂದಲೂ ಕೇಳಿ ಬರುತ್ತಿದೆ. ಆದರೆ ಸರ್ಕಾರಕ್ಕೆ ಇದು ವರೆಗೂ ಯೋಜನಾ ಪ್ರಸ್ತಾವನೆಯೇ ಸಲ್ಲಿಕೆಯಾಗಿಲ್ಲ. ಹಾಗಾಗಿ ಆನೆ ಕಾರಿಡಾರ್ ಬೇಡಿಕೆ ಅಂಗೈಯಲ್ಲಿನ ಅರಮನೆಯಂತಾಗಿದೆ.
ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ಯಲ್ಲಿ ಬಿಸಿಲೆ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಂತೆ 15 ಸಾವಿರ ಎಕರೆಯಲ್ಲಿ ಆನೆ ಕಾರಿಡಾರ್ ನಿರ್ಮಿಸುವ ಪ್ರಸ್ತಾಪವಿದೆ. ಆನೆ ಕಾರಿಡಾರ್ ಪ್ರಸ್ತಾಪಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸುಮಾರು 11 ಸಾವಿರ ಎಕರೆ ಯಿದ್ದರೆ. ರೈತರು ನ್ಯಾಯಯುತ ಪರಿಹಾರ ನೀಡಿದರೆ ತಮ್ಮ ಹಿಡುವಳಿಯ 3,300 ಎಕರೆ ಬಿಟ್ಟುಕೊಡಲು ಮುಂದೆ ಬಂದಿದ್ದಾರೆ. ಆದರೆ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದೂ ಸೇರಿದಂತೆ ಆನೆ ಕಾರಿಡಾರ್ ಸ್ಥಾಪನೆಯ ಪ್ರಾಮಾಣಿಕ ಪ್ರಯತ್ನ ಆಗುತ್ತಿಲ್ಲ.
273 ಕೋಟಿ ರೂ. ಯೋಜನೆ: 2014 -15ನೇ ಸಾಲಿನಲ್ಲಿ ಆನೆ ಕಾರಿಡಾರ್ ಸ್ಥಾಪನೆಗೆ 273 ಕೋಟಿ ರೂ. ಬೇಕಾಗಬಹುದೆಂದು ಅಂದಾಜು ಮಾಡ ಲಾಗಿತ್ತು. ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಪರಿಹಾರ ನಿಗದಿಯ ಸಂಬಂಧ ಒಂದು ಸಭೆ ನಡೆದು ಎಕರೆಗೆ ಗರಿಷ್ಠ 8 ಲಕ್ಷ ರೂ. ನಿಗದಿ ಪಡಿಸುವ ಪ್ರಸ್ತಾಪ ವಾಗಿತ್ತು. ಆದರೆ ಅದಕ್ಕೆ ರೈತರು ಒಪ್ಪಿರಲಿಲ್ಲ. ಅಷ್ಟಕ್ಕೆ ನಿಂತ ಪ್ರಯತ್ನ ಮತ್ತೆ ಆರಂಭವಾಗಿಯೇ ಇಲ್ಲ.
ಕಾಡಾ ನೆಗಳಿಂದ ಬೆಳೆ ಹಾನಿಯಾದಾಗ, ಜೀವ ಹಾನಿಯಾ ದಾಗ ಮಾತ್ರ ಆನೆ ಕಾರಿಡಾರ್ ಆರಂಭಕ್ಕೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂಬ ಜನಪ್ರತಿನಿಧಿಗಳ ಮತ್ತು ರಾಜಕಾರಣಿಗಳ ಭರವಸೆ ಬಿಟ್ಟರೆ ಬೇರೇನೂ ಆಗಿಲ್ಲ. ಅರಣ್ಯ ಇಲಾಖೆಯೂ ಒಂದೆರೆಡು ಆನೆಗಳನ್ನು ಹಿಡಿದು ಸಾಗಿಸಿ ಜನರ ಆಕ್ರೋಶವನ್ನು ತಣ್ಣಗೆ ಮಾಡುವುದಕ್ಕಷೇ ಸೀಮಿತವಾಗಿದೆ.
ಭೂ ಪರಿಹಾರದ್ದೇ ಹೊರೆ: ಕಾಡಿನಂಚಿನಲ್ಲಿರುವ ಹೆತ್ತೂರು ಹೋಬಳಿಯ ಗ್ರಾಮಗಳ ಜನರು ಕಾಡಾನೆ ಗಳ ಹಾವಳಿಯಿಂದ ಬೇಸತ್ತು ಪುನರ್ವಸತಿ ಕಲ್ಪಿಸಿದರೆ ತಮ್ಮ ಗ್ರಾಮ ತೊರೆದು ಹೋಗಲು ಸಿದ್ಧರಿದ್ದಾರೆ. ಆದರೆ ಸ್ವಾಧೀನಪಡಿಸಿಕೊಳ್ಳಲಿರುವ 3, 300 ಎಕರೆ ಭೂಮಿಗೆ ನ್ಯಾಯಯುತ ಪರಿಹಾರ ನೀಡಿದರೆ ಸಾಕು ಎಂದು ಹೇಳುತ್ತಾರೆ. ಈ ಹಿಂದೆ ಎಕರೆಗೆ 8 ಲಕ್ಷ ರೂ. ಪರಿಹಾರ ನೀಡುವ ಪ್ರಸ್ತಾಪವಾಗಿತ್ತು. ಆದಕ್ಕೆ ಒಪ್ಪಿರಲಿಲ್ಲ.
ಕಳೆದೆರಡು ವರ್ಷಗಳಿಂದ ಜಾರಿಯಾಗು ತ್ತಿರುವ ಎತ್ತಿನಹೊಳೆ ಯೋಜನೆಗೆ ಸ್ವಾಧೀನಪಡಿಸಿ ಕೊಂಡ ಭೂಮಿಗೆ ಪ್ರತಿ ಎಕರೆಗೆ 30 ಲಕ್ಷ ರೂ. ಪರಿಹಾರ ನೀಡಲಾಗಿದೆ. ಈಗ ಅಷ್ಟು ಪರಿಹಾರವನ್ನು ಆನೆ ಕಾರಿಡಾರ್ ನಿರ್ಮಾಣದ ಭೂ ಸ್ವಾಧೀನದ ಭೂಮಿಗೂ ನೀಡಲೇಬೇಕಾಗಿದೆ. ಹಾಗಾಗಿ ಭೂ ಪರಿಹಾರದ ಹೊರೆ ನೋಡಿ ರಾಜ್ಯ ಸರ್ಕಾರ ಕೈ ಚೆಲ್ಲಿದೆ. ಕೇಂದ್ರ ಸರ್ಕಾರ ಕ್ಯಾಂಪ್ಕೊ ನಿಧಿಯಿಂದ ನೆರವು ನೀಡಬೇಕು ಎಂಬ ವರಸೆಯನ್ನು ರಾಜ್ಯ ಸರ್ಕಾರ ಈಗ ಆರಂಭಿಸಿದೆ.
ಈಗೇನು ಮಾಡಬೇಕು?: ಆನೆ ಕಾರಿಡಾರ್ ನಿರ್ಮಾಣವಾಗಲೇಬೇಕೆಂಬ ಇಚ್ಛಾಶಕ್ತಿದ್ದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿ ಕ್ಯಾಂಪ್ಕೋ ನಿಧಿಯಿಂದ ನೆರವು ಪಡೆಯಲು ಯತ್ನಿಸಬೇಕು. ಏತನ್ಮಧ್ಯೆ ರೈತರ ಭೂ ಸ್ವಾಧೀನ ಪ್ರಕ್ರಿಯೆ ಆರಂಭಕ್ಕೆ ಸಕಲೇಶಪುರ ಉಪ ವಿಭಾಗಾಧಿ ಕಾರಿಯವರಿಗೆ ಜಿಲ್ಲಾಡಳಿತ ತಾಕೀತು ಮಾಡಿ ಭೂ ಸ್ವಾಧೀನದ ನಿಖರ ವೆಚ್ಚ ಎಷ್ಟಾಗುತ್ತದೆ ಎಂಬ ಅಂದಾಜು ಸಿದ್ಧಪಡಿಸಬೇಕು. ಈ ಪ್ರಕ್ರಿಯೆಗಳಾಗದ ಹೊರತು ಆನೆ ಕಾರಿಡಾರ್ ನಿರ್ಮಾಣ ಗಗನಕುಸುಮವಾದೀತು ಅಷ್ಟೇ.
ಮರ ಕಡಿಯಲು ಅನುಮತಿ: ಆನೆ ಕಾರಿಡಾರ್ ನಿರ್ಮಾಣಕ್ಕೆ ಭೂ ಸ್ವಾಧೀನವಾಗಲಿರುವ ಪ್ರದೇಶ ದಲ್ಲಿಯೇ ಹಿಡುವಳಿ ಪ್ರದೇಶದಲ್ಲಿ ಮರ ಕಡಿದು ಮಾರಾಟ ಮಾಡಲು ರೈತರಿಗೆ ಅನುಮತಿ ನೀಡಲು ಅರಣ್ಯ ಇಲಾಖೆ ಮುಂದಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ ಈ ಸಂಬಂಧ ಸ್ಪಷ್ಟನೆ ನೀಡಿರುವ ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂಬಾಬು ಅವರು, ಆನೆಕಾರಿಡಾರ್ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ 3,300 ಎಕರೆ ಪ್ರದೇಶ ಹೊರತುಪಡಿಸಿ ಏಲಕ್ಕಿ ತೋಟಗಳಲ್ಲಿನ ಮರ ಕಡಿಯಲು ಅನುಮತಿ ನೀಡಬೇಕೆಂಬ ಮನವಿ ರೈತರಿಂದ ಬಂದಿದೆ.
ಏಲಕ್ಕಿ ಬೆಳೆಗೆ ರೋಗ ಬಾಧೆ ಹೆಚ್ಚುತ್ತಿರುವುದರಿಂದ ಏಲಕ್ಕಿಗೆ ಪರ್ಯಾಯವಾಗಿ ಕಾಫಿ ಬೆಳೆಯುವುದಾಗಿ, ಈಗಿರುವ ಮರಗಳಿಂದ ನೆರಳು ಹೆಚ್ಚಾಗಿದ್ದು ಕಾಫಿ ಬೆಳೆಯಲು ಸಾಧ್ಯವಾಗದು. ಆದ್ದರಿಂದ ಮರ ಕಡಿದು ಮಾರಾಟ ಮಾಡಲು ಅನುಮತಿ ನೀಡಬೇಕೆಂದು ರೈತರ ಬೇಡಿಕೆ ಆಧರಿಸಿ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳುತ್ತಾರೆ.
ಈಗ ವಸತಿ ಶಾಲೆಗಳ ಪ್ರಸ್ತಾಪ: ಆನೆ ಕಾರಿಡಾರ್ ನಿರ್ಮಾಣದ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಆಸಕ್ತಿ ಇದ್ದಂತಿಲ್ಲ. ಈ ಬಗ್ಗೆ ಅವರು ಹೆಚ್ಚು ಪ್ರಸ್ತಾಪ ಮಾಡುತ್ತಲೂ ಇಲ್ಲ. ಕಾಡಾನೆ ಗಳ ಹಾವಳಿಯಿಂದ ಶಾಲೆ, ಕಾಲೇಜುಗಳಿಗೆ ಬಂದು ಹೋಗಲು ಈಗ ಅರಣ್ಯ ಇಲಾಖೆ ವಿದ್ಯಾರ್ಥಿಗಳನ್ನು ಮನೆಯಿಂದ ಆಲೂರು ಮತ್ತು ಸಕಲೇಶಪುರ ಮತ್ತು ಅಯಾ ತಾಲೂಕಿನ ಶಿಕ್ಷಣ ಸಂಸ್ಥೆಗಳಿಗೆ ಕರೆ ತಂದು ಮತ್ತೆ ಮನೆಗೆ ಬಿಡುತ್ತಿದೆ. ಸಕಲೇಶಪುರ ತಾಲೂಕಿನಲ್ಲಿ 2 ವ್ಯಾನ್‌ಗಳನ್ನು ಬಾಡಿಗೆ ಪಡೆದು ಓಡಿಸುತ್ತಿದೆ. ಆಲೂರು ತಾಲೂಕಿನಲ್ಲಿ ಇಲಾಖೆಯ ಒಂದು ವಾಹನವನ್ನು ವಿದ್ಯಾರ್ಥಿಗಳಿಗಾಗಿ ಓಡಿಸುತ್ತಿದೆ.
ಆಲೂರು ಮತ್ತು ಸಕಲೇಶಪುರ ತಾಲೂಕಿನಲ್ಲಿ ಒಂದೊಂದು ವಸತಿ ಶಾಲೆ ಆರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಮುಂದಾಗಿದ್ದಾರೆ. 1ನೇ ತರಗತಿಯಿಂದ ಪಿಯು ವರೆಗೂ ಶಿಕ್ಷಣ ನೀಡುವ ಸಂಸ್ಥೆ ಗಳನ್ನು ಸರ್ಕಾರದಿಂದ ನಿರ್ಮಿಸಲು ಸೂಕ್ತ ಸ್ಥಳ ಗುರ್ತಿಸಲು ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ವಸತಿ ಶಾಲೆಗಳ ನಿರ್ಮಾಣ ಬಜೆಟ್‌ನಲ್ಲಿ ಘೋಷಣೆ ಆಗುವ ಸಾಧ್ಯತೆಯೂ ಇದೆ.
* ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.