Wild Elephant: ಕಾಡಾನೆ ಹಾವಳಿ; ಹೋರಾಟಗಾರರ ಮೇಲೆ ಅಸ್ತ್ರ
Team Udayavani, Aug 22, 2023, 2:44 PM IST
ಸಕಲೇಶಪುರ: ಕಾಡಾನೆ ಹಾವಳಿ ವಿರುದ್ಧ ಹೋರಾಟ ಮಾಡಲು ಮುಂದಾದವರ ಹೋರಾಟ ಹತ್ತಿಕ್ಕಲು 11 ಜನರ ಮೇಲೆ ಸರ್ಕಾರ ಪ್ರಕರಣ ದಾಖಲಿಸಿದ್ದು, ದು ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದ್ದರೂ ಸಹ ಈ ಆಕ್ರೋಶ ಕೇವಲ ಪತ್ರಿಕೆ, ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ತಾಲೂಕಿನ ವಡೂರು ಗ್ರಾಮದಲ್ಲಿ ಶುಕ್ರವಾರ ಕಾಡಾನೆ ದಾಳಿಯಿಂದ ಬೇಲೂರು ತಾಲೂಕಿನ ಕವಿತಾ ಎಂಬ ಮಹಿಳೆ, ತನ್ನ ತವರು ಮನೆಗೆ ಹೋದ ಸಂದರ್ಭದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.
ನ್ಯಾಯಾಂಗ ಬಂಧನ: ಈ ಘಟನೆಯನ್ನು ಖಂಡಿಸಿ ಪ್ರತಿಭಟನೆ ಮಾಡಲು ಮುಂದಾದ ಹೋರಾಟಗಾರ ಯಡೇಹಳ್ಳಿ ಆರ್.ಮಂಜುನಾಥ್, ಸಾಗರ್ ಜಾನೆಕೆರೆ ಮತ್ತಿತರರು 9 ಮಂದಿ ಮೇಲೆ ಕರ್ತವ್ಯ ನಿರತ ಪೊಲೀಸರಿಗೆ ತೊಂದರೆಕೊಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಾಸನದಲ್ಲಿ ಒಟ್ಟು 11 ಜನರ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.
ಪ್ರತಿಭಟನಾಕಾರರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ದಾಖಲಿಸಿದ ಹಿನ್ನೆಲೆಯಲ್ಲಿ ಜಾಮೀನು ದೊರಕದೆ ಹಾಸನದ ಜಿಲ್ಲಾ ಬಂಧಿಖಾನೆಯಲ್ಲಿ ಬಂಧನಕ್ಕೊಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಪಿಸಿಸಿ ಸದಸ್ಯರೂ ಸಹ ಬಂಧನ: ಕಾಡಾನೆ ಹಾವಳಿ ಸಮಸ್ಯೆ ಪರಿಹರಿಸುವಂತೆ ರಾಜ್ಯದಲ್ಲಿ ತಮ್ಮ ಸರ್ಕಾರವಿದ್ದರೂ ಸಹ ಮುಂದಾದ ಹೋರಾಟಗಾರ ಯಡೇಹಳ್ಳಿ ಆರ್.ಮಂಜುನಾಥ್ ಕೆ.ಪಿ.ಸಿ.ಸಿ ಸದಸ್ಯರಾಗಿದ್ದು, ಆದರೂ ಸಹ ಇವರನ್ನು ಪೊಲೀಸರು ಬಂಧಿಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಕಾಣದ ಕೈಗಳ ಕುತಂತ್ರ ಇದರ ಹಿಂದೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಹೋರಾಟ ಹತ್ತಿಕ್ಕುವ ಆರೋಪ: ಪ್ರತಿಭಟನಾಕಾರರ ವಿರುದ್ಧ ಒಂದೆರೆಡು ಸೆಕ್ಷನ್‌ಗಳನ್ನು ದಾಖಲಿಸಿ ಸ್ಟೇಷನ್ ಜಾಮೀನು ಕೊಡಬಹುದಿತ್ತು. ಆದರೆ ಪ್ರತಿಭಟನಾಕಾರರ ವಿರುದ್ಧ ಪ್ರಬಲ ಸೆಕ್ಷನ್‌ಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಿರುವುದು ಎಲ್ಲೋ ಒಂದು ಕಡೆ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಸಾಮಾಜಿಕ ಜಾಲತಾಣ, ಪತ್ರಿಕೆಗಳಿಗೆ ಸೀಮಿತ: ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲು ಮುಂದಾದ ಹೋರಾಟಗಾರರ ಬಂಧನ ಖಂಡನೀಯ ಎಂದು ವಿವಿಧ ಸಂಘಟನೆಗಳ ಮುಖಂಡರುಗಳು, ಸಾರ್ವಜನಿಕರು ಬೀದಿಗಿಳಿದು ಸಂಘಟಿತರಾಗಿ ಹೋರಾಟ ಮಾಡುವ ಬದಲು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಹೇಳಿಕೆಗೆ ಸೀಮಿತವಾಗಿರುವುದು ದುರಂತವಾಗಿದೆ.
ಒಟ್ಟಾರೆಯಾಗಿ ಕಾಡಾನೆ ಸಮಸ್ಯೆ ಬಗೆಹರಿಯುವುದು ಕ್ಷೇತ್ರದಲ್ಲಿ ಅನುಮಾನವಾಗಿದೆ. ಮುಂದಿನ ದಿನಗಳಲ್ಲಿ ಹೋರಾಟಗಾರರ ಮೇಲೆ ಪ್ರಕರಣಗಳು ದಾಖಲಾದಲ್ಲಿ ಕಾಡಾನೆ ಸಮಸ್ಯೆ ವಿರುದ್ದ ಹೋರಾಟ ಮಾಡುವುದು ಹೇಗೆ ಎಂಬುವ ಪ್ರಶ್ನೆ ಉದ್ಭವವಾಗಿದೆ.
ಪ್ರತಿಭಟನೆಗಳಿಗೆ ಮಲೆನಾಡಿಗರ ನಿರಾಸಕ್ತಿ :
ತುಂಡು ಗುಂಡು ಪಾರ್ಟಿ ಎಂದರೆ ನೂರಾರು ಮಂದಿ ಕ್ಷಣಾರ್ಧದಲ್ಲಿ ಸೇರುವ ಜನ ಪ್ರತಿಭಟನೆಗಳಿಗೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಮುಂದಾಗುವುದಿಲ್ಲ. ಇದರಿಂದಾಗಿ ತಾಲೂಕಿನಲ್ಲಿ ಕಾಡಾನೆ ಸಮಸ್ಯೆ ಬಗೆಹರಿಸಲು ಯಾವುದೇ ಸರ್ಕಾರಗಳು ಮುಂದಾಗಿಲ್ಲ. ತಾಲೂಕಿನಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರಿದ್ದರೂ ಪ್ರತಿಭಟನೆಗಳಿಗೆ ಸೇರುವುದು ಮಾತ್ರ 50ರಿಂದ 100 ಮಂದಿ ಮಾತ್ರ. ಇದರಿಂದ ತಾಲೂಕಿನ ಯಾವುದೆ ಸಮಸ್ಯೆಗಳು ಹೋರಾಟದಿಂದ ಬಗೆಹರಿಯುತ್ತಿಲ್ಲ ಎಂದರೆ ತಪ್ಪಾಗಲಾರದು.
ಕಾಡಾನೆ ದಾಳಿಗೆ ಮೃತರ ಸಂಖ್ಯೆ ಹೆಚ್ಚಳ :
ಕಾಡಾನೆ ದಾಳಿಯಿಂದ ಜಿಲ್ಲೆಯಲ್ಲಿ ಸುಮಾರು 80 ಮಂದಿ ಮೃತಪಟ್ಟಿದ್ದು, ಅಲ್ಲದೆ ಹಲವಾರು ಮಂದಿ ಶಾಶ್ವತ ಅಂಗವಿಕಲರಾಗಿ ದ್ದಾರೆ. ಕೋಟ್ಯಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಒತ್ತಾಯಿಸಿ ಹಲವಾರು ಪ್ರತಿಭಟನೆಗಳು ನಡೆದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಸಂಘಟನೆಗಳಲ್ಲಿ ಒಗ್ಗಟ್ಟಿನ ಕೊರತೆ:
ಮಲೆನಾಡಿನಲ್ಲಿರುವ ಸಂಘಟನೆಗಳಲ್ಲಿ ಒಗ್ಗಟ್ಟಿನ ಕೊರತೆಯಿಂದ ಈ ರೀತಿಯ ಸಮಸ್ಯೆ ನಿರ್ಮಾಣವಾಗಿದೆ. ಕಾಡಾನೆ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಇಲ್ಲಿಯವರೆಗೆ ಬೆಳೆಗಾರರ, ಕನ್ನಡ ಪರ, ಪ್ರಗತಿ ಪರ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ಮಾಡುವಲ್ಲಿ ವಿಫಲವಾಗಿರುವುದು ಸಹ ಸಮಸ್ಯೆ ಬಗೆಹರಿಯದಿರಲು ಕಾರಣವಾಗಿದೆ.
ತಾಲೂಕಿನಲ್ಲಿ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಕಾಡಾನೆ ಸಮಸ್ಯೆ ವಿರುದ್ಧ ಹೋರಾಟ ಮಾಡದ ಪರಿಣಾಮ ಈ ರೀತಿ ಹೋರಾಟಗಾರರ ಮೇಲೆ ಪ್ರಕರಣ ದಾಖಲಾಗಲು ಪ್ರಮುಖ ಕಾರಣವಾಗಿದೆ. ಜನರೂ ಪ್ರತಿಭಟನೆಗಳಿಗೆ ಬರದಿರುವುದು ಸಹ ಹೋರಾಟಗಾರರ ಬೇಸರಕ್ಕೆ ಕಾರಣವಾಗಿದೆ.-ರಮೇಶ್ ಪೂಜಾರಿ, ತಾ.ಕರವೇ ಅಧ್ಯಕ್ಷ (ಪ್ರವೀಣ್ ಶೆಟ್ಟಿ ಬಣ)
ಕಾಡಾನೆ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಹುಡುಕುವ ಬದಲು, ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಸಿಮೆಂಟ್ ಮಂಜು, ಶಾಸಕರು
– ಸುಧೀರ್ ಎಸ್.ಎಲ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.