ಸಾಹಿತಿ ಜ.ಹೊ.ನಾರಾಯಣಸ್ವಾಮಿ ಇನ್ನಿಲ್ಲ
Team Udayavani, Nov 10, 2018, 6:30 AM IST
ಹಾಸನ: ಜಹೊನಾ ಎಂದೇ ಖ್ಯಾತರಾಗಿದ್ದ ವಕೀಲ, ವಿಚಾರವಾದಿ, ಸಾಹಿತಿ ಜ.ಹೊ.ನಾರಾಯಣಸ್ವಾಮಿ (77) ಶುಕ್ರವಾರ ವಿಧಿವಶರಾದರು. ಮೃತರು ಪತ್ನಿ ಹಾಗೂ ಪುತ್ರಿ ಸಾಹಿತಿ ಜ.ನಾ.ತೇಜಶ್ರೀ ಮತ್ತು ಪುತ್ರನನ್ನು ಅಗಲಿದ್ದಾರೆ.
ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನಾರಾಯಣಸ್ವಾಮಿ, ನಗರದ ಮಿಷನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಡೆಂಘೀ ಜ್ವರಎಂದು ಖಚಿತವಾಯಿತು. ಅಷ್ಟರಲ್ಲಿ ಅವರ ಪರಿಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆ ಅವರ ಹುಟ್ಟೂರು ಹಾಸನ ತಾಲೂಕು ಜನಿವಾರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನೆರವೇರಲಿದೆ.
ಸ್ವಾಮಿ ವಿವೇಕಾನಂದ, ಕುವೆಂಪು ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಜ.ಹೊ.ನಾರಾಯಣ ಸ್ವಾಮಿ ಅವರು ಪೂರ್ಣಚಂದ್ರ ತೇಜಸ್ವಿಯವರ ನಿಕಟವರ್ತಿಯಾಗಿದ್ದರು. ಹಲವು ವೈಚಾರಿಕ ಲೇಖನಗಳನ್ನು ಬರೆದಿರುವ ಅವರು ಜಹೊನಾ ಕಾವ್ಯನಾಮದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜಗದ ತೊಟ್ಟಿಲು, ವೇದ – ಕುರ್ಹಾನ್ ಆಚೆಗೆ, ಅದಮ್ಯ, ನರಬಲಿ ಸೇರಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮತ್ತು ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.