ನೂತನ ಸಚಿವರಿಗೆ ನೆರೆಯೇ ಸವಾಲು
ನೆರೆ-ಅತಿವೃಷ್ಟಿ ಹಾನಿಗೆ ಬೇಕಿದೆ ಸ್ಪಂದನೆ •ಪ್ರಭಾವಿ ಸಚಿವರಿಂದ ಹೆಚ್ಚಿನ ಅನುದಾನ ನಿರೀಕ್ಷೆ
Team Udayavani, Aug 22, 2019, 1:22 PM IST
ಹಾವೇರಿ: ನೆರೆಯಿಂದ ಜಲಾವೃತಗೊಂಡಿದ್ದ ಕೋಣನತಂಬಗಿ ಗ್ರಾಮದ ಮನೆಗಳು.
ಎಚ್.ಕೆ. ನಟರಾಜ
ಹಾವೇರಿ: ಅತಿವೃಷ್ಟಿ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ನೂರಾರು ಕೋಟಿ ರೂ.ಗಳಷ್ಟು ಆಸ್ತಿಪಾಸ್ತಿ ಹಾನಿಯಾಗಿದ್ದು, ನಷ್ಟ ಪರಿಹಾರ ಮತ್ತು ಮನೆ ಕಳೆದುಕೊಂಡವರಿಗೆ ಸೂರಿನ ವ್ಯವಸ್ಥೆ ಕಲ್ಪಿಸುವುದೇ ನೂತನ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೊಡ್ಡ ಸವಾಲಾಗಿದೆ.
ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ನೆರೆ ಹಾಗೂ ಅತಿವೃಷ್ಟಿಯ ಪರಿಣಾಮವನ್ನು ಸಮರ್ಥವಾಗಿ ಎದುರಿಸಿ, ಜನರನ್ನು ಸಂತೈಸುವುದೇ ಮೊದಲ ಸವಾಲಾಗಿದ್ದು, ಇದನ್ನು ಯಾವ ರೀತಿಯಲ್ಲಿ ಸ್ವೀಕರಿಸಿ, ನಿಭಾಯಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಅತಿವೃಷ್ಟಿ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ 22 ಗ್ರಾಮಗಳು ಜಲಾವೃತಗೊಂಡಿದ್ದವು. 135 ಜಾನುವಾರುಗಳ ಜೀವಹಾನಿಯಾಗಿದೆ. 8823 ಮನೆಗಳು ಹಾನಿಯಾಗಿವೆ. 1,13,402 ಹೆಕ್ಟೇರ್ ಕೃಷಿ ಬೆಳೆ ಹಾಗೂ 11499.24 ತೋಟಗಾರಿಕೆ ಬೆಳೆ ಹಾನಿಯಾಗಿದೆ. ಸಾವಿರಾರು ಹೆಕ್ಟೇರ್ ಕೃಷಿ ಭೂಮಿಯ ಫಲವತ್ತಾದ ಮಣ್ಣು ನಾಶವಾಗಿದೆ. 5822 ಸಂಖ್ಯೆಯ ರಸ್ತೆ, ಸೇತುವೆ, ಬ್ರಿಜ್ಡ್, ಕೆರೆ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಕಂಬಗಳು ಸೇರಿದಂತೆ ಮೂಲ ಸೌಕರ್ಯಗಳಿಗೆ ಹಾನಿಯಾಗಿದೆ. ಒಟ್ಟಾರೆ ಪ್ರಾಥಮಿಕ ವರದಿ ಪ್ರಕಾರ 200ಕ್ಕೂ ಹೆಚ್ಚು ಕೋಟಿ ರೂ.ಗಳ ಹಾನಿ ಸಂಭವಿಸಿದೆ. ಇಷ್ಟು ದೊಡ್ಡ ಪ್ರಮಾಣದ ಹಾನಿಯನ್ನು ಭರಿಸುವುದು, ಪುನರ್ವಸತಿ ಕಲ್ಪಿಸುವುದು, ಮೂಲ ಸೌಲಭ್ಯ ಕಲ್ಪಿಸುವುದು ಸಚಿವರ ಮುಂದಿರುವ ಸವಾಲುಗಳಾಗಿವೆ.
ಜಿಲ್ಲೆಯಲ್ಲಿ ಹರಿದ ತುಂಗಭದ್ರಾ, ವರದಾ ನದಿಗಳ ಭೀಕರ ಪ್ರವಾಹದ ಪರಿಣಾಮ ಹಲವು ಗ್ರಾಮಗಳ ಜನರ ಬದುಕು ಅಕ್ಷರಶಃ ಬೀದಿಗೆ ಬಂದಿದ್ದು ನದಿ ದಂಡೆಯಲ್ಲಿರುವ ಗ್ರಾಮಗಳನ್ನು ಸ್ಥಳಾಂತರಿಸಿ ನವಗ್ರಾಮ ನಿರ್ಮಿಸುವಂತೆ ನೆರೆ ಸಂತ್ರಸ್ತರಿಂದ ಒತ್ತಾಯ ಕೇಳಿಬರುತ್ತಿದೆ. ನೆರೆ ಹಾವಳಿಯಿಂದ ಹಾವೇರಿ, ಹಾನಗಲ್ಲ, ಸವಣೂರು ತಾಲೂಕಿನ ವರದಾ ಹಾಗೂ ಧರ್ಮಾ ನದಿ ದಂಡೆಯ ಬಹುತೇಕ ಗ್ರಾಮಗಳು ಜಲಾವೃತದಿಂದ ಸಂಪರ್ಕ ಕಳೆದುಕೊಂಡು ನಡುಗಡ್ಡೆಗಳಾಗಿದ್ದವು. ಪ್ರವಾಹದ ರೌದ್ರ ನರ್ತನದಿಂದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿನ ಮನೆಗಳು, ರಸ್ತೆ, ಶಾಲೆ, ದೇವಸ್ಥಾನ ಕುಸಿದು ಬಿದ್ದಿದ್ದು, ಪ್ರವಾಹ ಪೀಡಿತ ಗ್ರಾಮಗಳು ಅಕ್ಷರಶಃ ಹಾಳು ಕೊಂಪೆಯಂತೆ ಭಾಸವಾಗುತ್ತಿವೆ.
ಮನೆಗಾಗಿ ಒತ್ತಡ: ನೆರೆ ಹಾವಳಿಗೆ ಜಿಲ್ಲೆಯ 70 ಗ್ರಾಮಗಳು ಜಲಾವೃತಗೊಂಡಿದ್ದು ಅದರಲ್ಲಿ 15 ಗ್ರಾಮಗಳು ತೀವ್ರ ಸಂಕಷ್ಟಕ್ಕೆ ತುತ್ತಾಗಿ ದ್ವೀಪಗಳಂತಾಗಿದ್ದವು. ಗ್ರಾಮದಲ್ಲಿರುವ ಬಹುತೇಕ ಮನೆಗಳಿಗೆ ಹಾನಿಯಾಗಿದ್ದು, ಗ್ರಾಮಕ್ಕೆ ಒದಗಿಸಿದ್ದ ಮೂಲಭೂತ ಸೌಲಭ್ಯಗಳು ನೆರೆಗೆ ಕೊಚ್ಚಿಕೊಂಡು ಹೋಗಿ ಸಂತ್ರಸ್ತರ ಬದುಕು ಅತಂತ್ರದ ಸ್ಥಿತಿಯಲ್ಲಿದೆ. ದ್ವೀಪಗಳಂತಾದ್ದ ವರದಾ ನದಿ ದಂಡೆಯಲ್ಲಿರುವ ಕೋಣನತಂಬಗಿ, ಕೆಸರಳ್ಳಿ, ಕಿತ್ತೂರ, ಅಕ್ಕೂರ, ಕೊಡಬಾಳ, ಹಾಲಗಿ, ಮರೋಳ, ನದಿನೀರಲಗಿ, ಹಿರೇಮಗದೂರ, ಕಲಕೋಟಿ, ಕೊರಡೂರು, ಹಲಸೂರ, ಮನ್ನಂಗಿ, ಚಿಕ್ಕಮರಳಿಹಳ್ಳಿ, ಮಂಟಗಣಿ, ಡೊಂಬರಮತ್ತೂರ, ಕುಣಿಮೆಳ್ಳಳ್ಳಿ, ಮೆಳ್ಳಾಗಟ್ಟಿ, ಹರವಿ, ವರ್ದಿ, ಅಲ್ಲಾಪೂರ, ಕೂಡಲ ಗ್ರಾಮ ಹಾಗೂ ತುಂಗಭದ್ರಾ ನದಿ ದಡದಲ್ಲಿರುವ ಹಾವಂಶಿ, ಶಾಕಾರ, ಕಂಚಾರಗಟ್ಟಿ, ಗಳಗನಾಥ, ಹಾವನೂರು, ಹುರಳಿಹಾಳ, ಹರಳಹಳ್ಳಿ, ಹಳೇಚಂದಾಪುರ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಸಾವಿರಾರು ಮನೆಗಳು, ವಿದ್ಯುತ್ ಕಂಬ, ರಸ್ತೆಗಳು ಹಾಳಾಗಿವೆ. ಮನೆ ಕಳೆದುಕೊಂಡವರು ಮನೆಗಾಗಿ ಒತ್ತಡ ಹೇರುತ್ತಿದ್ದಾರೆ. ಇಂಥ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಳ್ಳುವುದೇ ಬಡಜನರಿಗೆ ಸವಾಲಾಗಿದ್ದರೆ ಇವರ ಸಂಕಷ್ಟಕ್ಕೆ ನೂತನ ಸಚಿವರು ಯಾರ ರೀತಿ ಸ್ಪಂದಿಸುತ್ತಾರೆ ಎಂಬುದು ಕಾದುನೋಡಬೇಕಿದೆ.
ಶಾಶ್ವತ ಪರಿಹಾರ ಕ್ರಮ: 2009ರಲ್ಲಿ ನೆರೆ ಪ್ರವಾಹ ಉಂಟಾದ ಸಂದರ್ಭದಲ್ಲಿ ಜಿಲ್ಲೆಯ 3 ಗ್ರಾಮಗಳ ಸ್ಥಳಾಂತರಕ್ಕೆ ಸರ್ಕಾರ ನಿರ್ಧರಿಸಿ ಹಾವೇರಿ ತಾಲೂಕಿನ ಮಣ್ಣೂರು, ಶಾಕಾರ ಹಾಗೂ ರಾಣಿಬೆನ್ನೂರಿನ ಮುಷ್ಟೂರು ನವಗ್ರಾಮ ನಿರ್ಮಾಣ ಮಾಡಲಾಗಿತ್ತು. ಈಗಾಗಲೇ ಮಣ್ಣೂರು ಗ್ರಾಮಸ್ಥರು ಸಂಪೂರ್ಣ ನವಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ. ಆದರೆ ಇನ್ನುಳಿದ ಸ್ಥಳಾಂತರ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ ಎಂಬ ಕಾರಣದಿಂದ ಶಾಕಾರ ಹಾಗೂ ಮುಷ್ಟೂರು ಗ್ರಾಮಗಳ ಜನರು ಸ್ಥಳಾಂತರಕ್ಕೆ ಹಿಂದೇಟು ಹಾಕಿದ್ದರು. ಇದರಿಂದ ಜನರು ಮತ್ತೇ ಈ ಭಾರಿ ನೆರೆ ಪ್ರವಾಹಕ್ಕೆ ತುತ್ತಾಗಿ ಸಂಕಷ್ಟ ಎದುರಿಸುವಂತಾಯಿತು. ಈ ಭಾರಿ ಪ್ರವಾಹದಿಂದ ಹಾನಿಗಿಡಾದ ಜಿಲ್ಲೆಯ ಕೆಲವೊಂದು ಗ್ರಾಮಸ್ಥರು ನವಗ್ರಾಮ ನಿರ್ಮಿಸಿ, ಮೂಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಶಾಶ್ವತ ಪರಿಹಾರಕ್ಕೆ ಆಗ್ರಹಿಸುತ್ತಿದ್ದಾರೆ. ಒಟ್ಟಾರೆ ನೆರೆ ಹಾಗೂ ಅತಿವೃಷ್ಟಿಯ ದುಷ್ಪರಿಣಾಮ ಎದುರಿಸಲು ನೂತನ ಸಚಿವರು ಯಾವ ರೀತಿಯ ಚಾಕಚಕ್ಯತೆ ತೋರುತ್ತಾರೆ? ಜನರ ಬೇಡಿಕೆಗಳಿಗೆ ಯಾವ ರೀತಿ ಸ್ಪಂದಿಸಿ, ಎಷ್ಟು ಅನುದಾನ ತರುತ್ತಾರೆ ಎಂದು ಜನರು ಕಾತರದಿಂದ ಕಾಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ
Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್ ಮೇಲೇ ಕಣ್ಣು!
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.