ರೈತರ ಆರ್ಥಿಕ ಅಭಿವೃದ್ಧಿಗೆ ಕೃಷಿ ಯಂತ್ರೋಪಕರಣ ಸಹಕಾರಿ
ಕೃಷಿ ಯಂತ್ರಧಾರೆಯಿಂದ ರೈತರಿಗೆ ಕೂಲಿ ಕಾರ್ಮಿಕರ ಸಮಸ್ಯೆಯಿಂದ ಮುಕ್ತಿ
Team Udayavani, Jun 10, 2019, 10:19 AM IST
ಹಾವೇರಿ: ರೈತ ಸಂಪರ್ಕ ಕೇಂದ್ರದ ವತಿಯಿಂದ ಬಾಡಿಗೆ ಆಧಾರಿತ ಕೃಷಿ ಯಂತ್ರಧಾರೆ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ನೆಹರು ಓಲೇಕಾರ ಮಾತನಾಡಿದರು.
ಹಾವೇರಿ: ಇತ್ತೀಚಿನ ದಿನಗಳಲ್ಲಿ ರೈತರು ಕೂಲಿಕಾರ್ಮಿಕರ ಸಮಸ್ಯೆ ಎದುರಿಸುತ್ತಿದ್ದು, ಕೃಷಿ ಯಂತ್ರಧಾರೆ ಯೋಜನೆಯಡಿ ವಿತರಿಸುವ ಕೃಷಿ ಯಂತ್ರೋಪಕರಣಗಳು ಅನೂಕೂಲವಾಗುತ್ತವೆ. ಹೀಗಾಗಿ ರೈತರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ರೈತ ಸಂಪರ್ಕ ಕೇಂದ್ರದ ವತಿಯಿಂದ ವೀರೇಶ ಅಗ್ರಿಟೆಕ್ ಬಾಡಿಗೆ ಆಧಾರಿತ ಕೃಷಿ ಯಂತ್ರಧಾರೆ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಬಡ ಮತ್ತು ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಯೋಜನೆಯನ್ನು ಇಲಾಖೆ ಜಾರಿಗೆ ತಂದಿರುವುದು ಸಂತಸದ ಸಂಗತಿ. ಕೃಷಿ ಯಂತ್ರಧಾರೆ ಯೋಜನೆಯು ಸಕಾಲದಲ್ಲಿ ರೈತರಿಗೆ ಕಡಿಮೆ ಬಾಡಿಗೆ ರೂಪದಲ್ಲಿ ಯಂತ್ರೋಪಕರಣಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಡಿ.ಕೆ. ಪ್ರಾಸ್ತಾವಿಕ ಮಾತನಾಡಿ, ಕೃಷಿ ಯಂತ್ರಧಾರೆ ಕೇಂದ್ರವು 2014-15ನೇ ಸಾಲಿನಲ್ಲಿ ತಾಲೂಕಿನ ಗುತ್ತಲ ಹೋಬಳಿಯಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಅದೇ ಮಾದರಿಯಲ್ಲಿ ಕೃಷಿ ಯಂತ್ರಧಾರೆಯನ್ನು ಹಾವೇರಿ ಹೋಬಳಿಯಲ್ಲಿ ಪ್ರಾರಂಭಿಸಲಾಗಿದೆ. ರೈತರ ಬೇಡಿಕೆ ಅನುಸಾರ ಉಪಕರಣಗಳನ್ನು ಶೇ. 70ರ ರಿಯಾಯಿತಿ ದರದಲ್ಲಿ ಸರಕಾರಿ ವಂತಿಕೆ, ಇನ್ನುಳಿದ ಶೇ. 30ರ ವಂತಿಕೆಯನ್ನು ಸಂಸ್ಥೆಯವರು ಭರಿಸಿ ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಿ ವೀರೇಶ ಅಗ್ರಿಟೆಕ್ ಎಂಬ ಸಂಸ್ಥೆಯವರಿಗೆ ಯಂತ್ರೋಪಕರಣಗಳನ್ನು ದಾಸ್ತಾನಿಕರಿಸಿ, ಕೃಷಿ ಉಪಕರಣಗಳನ್ನು ರೈತರ ಬೇಡಿಕೆ ಅನುಸಾರ ಜೇಷ್ಠತಾ ಆಧಾರದ ಮೇಲೆ ರೈತರಿಗೆ ಉಪಕರಣಗಳನ್ನು ಬಾಡಿಗೆ ರೂಪದಲ್ಲಿ ಸ್ಥಳಿಯ ಬಾಡಿಗೆ ದರಕ್ಕಿಂತ ಕಡಿಮೆ ಮೊತ್ತಕ್ಕೆ ನೀಡಲಾಗುವುದು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಪಕರಣಗಳ ಬಾಡಿಗೆ ದರ ನಿಗದಿಯಾಗುತ್ತದೆ ಹಾಗೂ ಪ್ರತಿ ಆರು ತಿಂಗಳಿಗೊಮ್ಮೆ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಕೊಟ್ರೇಶ ಗೆಜ್ಲಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿವಪುತ್ರಪ್ಪ ಶಿವಣ್ಣನವರ, ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ ಹಾದಿಮನಿ, ಕೃಷಿಕ ಸಮಾಜದ ನಿರ್ದೇಶಕ ಪ್ರಕಾಶ ಹಂದ್ರಾಳ, ಬಸವರಾಜ ಡೊಂಕಣ್ಣನವರ, ಮಲ್ಲೇಶಪ್ಪ ಮತ್ತಿಹಳ್ಳಿ, ಪಕ್ಕಿರಪ್ಪ ಜಂಗಣ್ಣವರ ಮತ್ತು ನಾಗರಾಜ ವಿಭೂತಿ, ಜಿಲ್ಲಾ ಪ್ರತಿನಿಧಿ, ತಾಲೂಕು ಕೃಷಿಕ ಸಮಾಜದ ಈರಣ್ಣ ಸಂಗೂರ ಹಾಗೂ ರೈತ ಸಂಘದ ಶಿವಬಸಪ್ಪ ಗೋವಿ, ಶಿವಯ್ಯ ರುಮಾಲಮಠ ಮತ್ತು ರೈತ ಬಾಂಧವರು, ಇಲಾಖೆ ಅಧಿಕಾರಿ ಆರ್.ಟಿ. ಕರಲಿಂಗಪ್ಪನವರ ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.