ಬಸವಣ್ಣನವರ ವಿಚಾರಧಾರೆ ಅನುಕರಣೀಯ
ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಭಿಮತ
Team Udayavani, May 4, 2022, 4:03 PM IST
ಹಾವೇರಿ: ಬಸವಣ್ಣನವರು 12ನೇ ಶತಮಾನದಲ್ಲೇ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು. ಕಲ್ಯಾಣ ಕ್ರಾಂತಿಯ ಮೂಲಕ “ದೇವನೊಬ್ಬ ನಾಮ ಹಲವು, ಕಾಯಕವೇ ಕೈಲಾಸ’ ಎಂಬ ತತ್ವಗಳನ್ನು ಜಗತ್ತಿಗೆ ಸಾರಿದ ದೈವ ಸ್ವರೂಪಿ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.
ನಗರದ ಶ್ರೀ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಹುಕ್ಕೇರಿ ಮಠ ಮತ್ತು ಹೊಸಮಠದ ಸಹಯೋಗದಲ್ಲಿ ಜರುಗಿದ ಮಹಾನ್ ಮಾನವತಾವಾದಿ, ಸಮಾಜ ಸುಧಾರಕ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾನ್ ಮಾನವತಾವಾದಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಕಂಡವರು. ಲಿಂಗ ಸಮಾನತೆ, ಜಾತಿರಹಿತ ಸಮಾಜ ನಿರ್ಮಾಣಕ್ಕೆ ಮುಂದಾದವರು. ಬಸವಣ್ಣನವರ ಸರಳತೆ ಹಾಗೂ ವಿಚಾರಧಾರೆಗಳು ಎಲ್ಲರಿಗೂ ಅನುಕರಣೀಯ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, 12ನೇ ಶತಮಾನ ಇಡೀ ಜಗತ್ತಿಗೆ ಮಹತ್ವದ ಕಾಲಘಟ್ಟವಾಗಿತ್ತು. ಬಸವಣ್ಣನವರು ಜಾತಿ ಪದ್ಧತಿ, ಮೂಢನಂಬಿಕೆ, ಸಮಾಜದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಮಹಿಳಾ ಸಮಾನತೆ ಮೂಲಕ ದಿವ್ಯ ಸಂದೇಶ ನೀಡಿದ್ದಾರೆ. ಅವರ ತತ್ವಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದರು.
ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ವಿಶೇಷ ಉಪದೇಶ ನೀಡಿ, ಬಸವಣ್ಣನವರ ತತ್ವಗಳಡಿ ಇಂದು ಕರ್ನಾಟಕದಲ್ಲಿ ಅನೇಕ ಮಠಗಳು ಜಾತಿ, ಧರ್ಮದ ಹೊರತಾಗಿಯೂ ಎಲ್ಲರಿಗೂ ಅರಿವು, ಅಕ್ಷರ, ಅನ್ನ ದಾಸೋಹ ನೀಡುತ್ತಿವೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿವೆ. ಬಸವಣ್ಣ ದೇವರ ಮತ್ತು ಧರ್ಮದ ಬದಲು ಮನುಷ್ಯರ ಬಗ್ಗೆ ಮಾತನಾಡಿದರು.
ವ್ಯಕ್ತಿತ್ವ, ನಾಗರಿಕತೆ, ವಿಜ್ಞಾನದ ಪ್ರತಿಪಾದಕರಾಗಿದ್ದರು. ಬಸವಣ್ಣ ಸಾಮಾನ್ಯ ವ್ಯಕ್ತಿಯಲ್ಲ, ವಿಶ್ವಗುರು. ಜಾತಿ, ವರ್ಗ ರಹಿತ ಪ್ರಜಾಪ್ರಭುತ್ವ ತಂದ ಮಹಾನ್ ಚೇತನ. ಬಸಣ್ಣನವರ ತತ್ವಗಳು, ಆದರ್ಶಗಳು ಬೆಳಗಲಿ. ಧರ್ಮದ ಧ್ವಜ ಕೆಳಗಿಳಿದು ಕಾಯಕದ ಧ್ವಜ ಮೇಲೆ ಹಾರಲಿ. ಇಂದಿನ ಯುವಕರು ಡಿಜೆ ಹಾಕಿ ನೃತ್ಯ ಮಾಡುವ ಬದಲು ವ್ಯಸನಮುಕ್ತರಾಗಿ ಕಾಯಕದಲ್ಲಿ ತೊಡಗಿಸಿಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದರು. ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಡಾ.ಎನ್ .ತಿಪ್ಪೇಸ್ವಾಮಿ, ಅಬಕಾರಿ ಉಪ ಆಯುಕ್ತರಾದ ಶೈಲಜಾ, ತಹಶೀಲ್ದಾರ್ ಎನ್.ಬಿ.ಗೆಜ್ಜಿ ಇತರರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿದರು.
ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ: ಕಾರ್ಯಕ್ರಮದ ಮೊದಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹಾಗೂ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿಪಂ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ಪ್ರಭು ಹಿಟ್ನಳ್ಳಿ ಇತರ ಮುಖಂಡರು, ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.