ಅತಿವೃಷ್ಟಿ ಹಾನಿ ವರದಿ ನಿಖರವಾಗಿರಲಿ
ಪುನರ್ ಪರಿಶೀಲಿಸಿ ವಾಸ್ತವ ವರದಿ ಸಲ್ಲಿಸಿ: ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ
Team Udayavani, Aug 7, 2022, 4:44 PM IST
ಹಾವೇರಿ: ಅತಿವೃಷ್ಟಿಯಿಂದಾದ ಹಾನಿಯ ವರದಿ ಅತ್ಯಂತ ನಿಖರವಾಗಿರಲಿ. ಜಿಲ್ಲೆಯಲ್ಲಿ ಬೆಳೆ ಹಾನಿ ವರದಿ ಉತ್ಪ್ರೇಕ್ಷೆಯಿಂದ ಕೂಡಿದ್ದು, ಪುನರ್ ಪರಿಶೀಲನೆ ನಡೆಸಿ ವಾಸ್ತವಾಂಶಗಳ ಆಧಾರದ ಮೇಲೆ ವರದಿ ಸಲ್ಲಿಸಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಅತಿವೃಷ್ಟಿ ಬಾಧಿತ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಡಳಿತದ ಅಧಿ ಕಾರಿಗಳೊಂದಿಗೆ ಶನಿವಾರ ಸಂಜೆ ಬೆಂಗಳೂರಿನಿಂದ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಗಳು, ಮನೆ ಹಾನಿ, ಬೆಳೆ ಹಾನಿ, ಮೂಲ ಸೌಕರ್ಯಗಳ ಹಾನಿ, ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತಂತೆ ಮಾಹಿತಿ ಪಡೆದುಕೊಂಡರು.
ಮನೆ ಹಾನಿ ಸಂತ್ರಸ್ತರಿಗೆ ಕೂಡಲೇ ಪರಿಹಾರ ವಿತರಿಸಬೇಕು. ಹಾನಿಗೊಳಾದ ಅಂಗನವಾಡಿ, ಶಾಲೆ, ರಸ್ತೆ, ಸೇತುವೆ ಸೇರಿದಂತೆ ಮೂಲಭೂತ ಸೌಕರ್ಯಗಳ ದುರಸ್ತಿಗೆ ಕೂಡಲೇ ಕ್ರಮ ವಹಿಸಿ, ಶಾಶ್ವತ ಕಾಮಗಾರಿಗಳಿಗೆ ಅಂದಾಜು ವೆಚ್ಚದ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಗೂ ಕಂಬಗಳ ಹಾನಿ ಕುರಿತಂತೆ ಸರ್ವೇ ನಡೆಸಿ, ಪುನರ್ ಸ್ಥಾಪನೆಗೆ ತ್ವರಿತ ಕ್ರಮ ವಹಿಸಬೇಕು. ವಿದ್ಯುತ್ ಕಡಿತದಿಂದ ಯಾವುದೇ ಹಳ್ಳಿಗಳು ತೊಂದರೆಗೊಳಗಾಗಬಾರದು. ಹೆಸ್ಕಾಂ ಅಧಿಕಾರಿಗಳು ಈ ನಿಟ್ಟಿನಲ್ಲಿ ಆದ್ಯತೆ ಮೇಲೆ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.
ಸೇತುವೆ, ರಸ್ತೆ, ಕಟ್ಟಡಗಳಿಗೆ ತೀವ್ರ ಹಾನಿ ಉಂಟಾದಲ್ಲಿ ಪುನರ್ ನಿರ್ಮಾಣಕ್ಕೆ ಅಂದಾಜು ವೆಚ್ಚದೊಂದಿಗೆ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಬೇಕು. ಅತಿವೃಷ್ಟಿ ಪರಿಹಾರ, ದುರಸ್ತಿಗೆ ಯಾವುದೇ ಅನುದಾನದ ಕೊರತೆ ಇರುವುದಿಲ್ಲ. ಎನ್‌ಡಿಆರ್‌ಎಫ್ ಮತ್ತು ಎಸ್ ಡಿಆರ್‌ಎಫ್ ಮಾರ್ಗಸೂಚಿಯಂತೆ ತ್ವರಿತವಾಗಿ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.
ಅತಿವೃಷ್ಟಿ ಹಾನಿ ಕುರಿತಂತೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ, ನದಿಯ ಪ್ರವಾಹ ಅಪಾಯದ ಮಟ್ಟ ಮೀರಿಲ್ಲ. ಅಗತ್ಯಬಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲು ಕ್ರಮ ವಹಿಸಲಾಗಿದೆ. 1,402 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ 26 ಮನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದೆ. 538 ಮನೆಗಳ ವಿವರವನ್ನು ಆರ್ ಜಿಎಸ್ ಪೋರ್ಟಲ್‌ನಲ್ಲಿ ದಾಖಲಿಸಲಾಗಿದೆ. 3.89 ಕೋಟಿ ರೂ. ಪರಿಹಾರ ನೀಡಲಾಗಿದೆ. 9,372 ಹೆಕ್ಟೇರ್ ಬೆಳೆ ಹಾನಿ, 724 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿರುವ ಕುರಿತಂತೆ ವರದಿ ನೀಡಿದ್ದಾರೆ. ಆದರೆ, ಕೃಷಿ ಇಲಾಖೆ 27 ಸಾವಿರ ಹೆಕ್ಟೇರ್ ಹಾನಿಯಾಗಿರುವ ಕುರಿತಂತೆ ಇಂದು ವರದಿ ನೀಡಿದೆ. ಈ ವರದಿಯನ್ನು ಪುನರ್ ಪರಿಶೀಲನೆ ಮಾಡಲು ಕೃಷಿ ಇಲಾಖೆಗೆ ತಿಳಿಸಿರುವುದಾಗಿ ಮಾಹಿತಿ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರೋಷನ್ ಮಾತನಾಡಿ, 1,361 ಕಿ.ಮೀ. ಗ್ರಾಮೀಣ ರಸ್ತೆ, 971 ಪ್ರಾಥಮಿಕ ಶಾಲೆ, 38 ಅಂಗನವಾಡಿಗಳಿಗೆ ಹಾನಿಯಾಗಿರುವ ಕುರಿತು ವರದಿ ಸಲ್ಲಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಎನ್ ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಅನುದಾನ ಬಿಡುಗಡೆಗೊಳಿಸಿದ್ದು, ದುರಸ್ತಿ ಕಾರ್ಯ ಆರಂಭಿಸಲಾಗಿದೆ. ನದಿ ಪಾತ್ರದ ಪ್ರವಾಹದ ಬಗ್ಗೆ ನಿಗಾ ವಹಿಸಲು ಈಗಾಗಲೇ ತಂಡಗಳನ್ನು ರಚಿಸಲಾಗಿದೆ. ತಗ್ಗು ಪ್ರದೇಶದ ಜನ ವಸತಿಗಳ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಮಾಹಿತಿ ನೀಡಲಾಗುತ್ತದೆ. ಅಗತ್ಯ ಬಿದ್ದರೆ ಸ್ಥಳಾಂತರಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಕೃಷಿ ಬೆಳೆ ಹಾನಿ ಕುರಿತು ಮಾಹಿತಿ ನೀಡಿದ ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ಪ್ರಾಥಮಿಕ ಸರ್ವೇಯಲ್ಲಿ 9,372 ಹೆಕ್ಟೇರ್ ಹಾನಿ ನಮೂದಿಸಲಾಗಿತ್ತು. ಬೆಳೆಯಲ್ಲಿ ನೀರು ನಿಂತು ಫಸಲು ಹಳದಿ ರೂಪಕ್ಕೆ ತಿರುಗಿದ ಪರಿಣಾಮ ಹಾನಿ ಪ್ರಮಾಣ ಹೆಚ್ಚಾಗಿದೆ. 27 ಸಾವಿರ ಹೆಕ್ಟೇರ್ ಹಾನಿಯಾಗಿರುವ ಕುರಿತು ವರದಿ ಸಲ್ಲಿಕೆಯಾಗಿದೆ. ಮರು ಜಂಟಿ ಸಮೀಕ್ಷೆ ಕೈಗೊಂಡು ನಿಖರ ವರದಿ ಸಲ್ಲಿಸಲಾಗುವುದು ಎಂದರು.
ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಂ ಹೆಬ್ಟಾರ್ ಅವರು ಸ್ವಕ್ಷೇತ್ರದಿಂದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ, ಹಾವೇರಿ ಜಿಲ್ಲೆಯ ಬೆಳೆ ಹಾನಿ ಸೇರಿದಂತೆ ಜಿಲ್ಲೆಯ ಮಳೆ ಮತ್ತು ಹಾನಿಯ ಸ್ಥಿತಿಗತಿ ಕುರಿತು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಆರಂಭದಲ್ಲಿ ವಿಡಿಯೋ ಸಂವಾದಲ್ಲಿ ಭಾಗವಹಿಸಿ, ಮುಖ್ಯಮಂತ್ರಿಗಳಿಗೆ ಉತ್ತರ ಕನ್ನಡ ಜಿಲ್ಲೆಯ ಹಾನಿಯ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಡಾ|ಎನ್.ತಿಪ್ಪೇಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಬೆಳೆ ಹಾನಿಯ ನಿಖರ ವರದಿ ನೀಡಿ
ಹಾವೇರಿ ಜಿಲ್ಲೆಯಲ್ಲಿ 27 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿರುವುದು ವಾಸ್ತವಾಂಶಗಳನ್ನು ಒಳಗೊಂಡಿಲ್ಲ ಅನಿಸುತ್ತದೆ. ಈ ಕುರಿತು ಪುನರ್ ಪರಿಶೀಲನೆ ನಡೆಸಬೇಕು. ಹಾನಿಯ ಪ್ಲಾಟ್ ಗಳಿಗೆ ಭೇಟಿ ನೀಡಿ ವಾಸ್ತವತೆಯನ್ನು ಪರಿಶೀಲಿಸಿ ಮೂರ್‍ನಾಲ್ಕು ದಿನ ತಡವಾದರೂ ನಿಖರ ವರದಿ ನೀಡಬೇಕೆಂದು ಕೃಷಿ ಇಲಾಖಾ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದರು.
ಮೂಲ ಸೌಕರ್ಯ ಕಲ್ಪಿಸಿ: ತಗ್ಗು ಪ್ರದೇಶದ ಜನರನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಬೇಕು. ವರದಾ, ಕುಮದ್ವತಿ ಸೇರಿದಂತೆ ನದಿಗಳ ಏರಿಳಿತದ ಬಗ್ಗೆ ಗಮನ ಹರಿಸಬೇಕು. ಶಿವಮೊಗ್ಗದಲ್ಲಿ ಹೆಚ್ಚು ಮಳೆಯಾದರೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಗಮನ ಹರಿಸಿ, ಅತಿವೃಷ್ಟಿಯಿಂದ ತೊಂದರೆಗೊಳಗಾದ ಜನರಿಗೆ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಉತ್ತಮ ಗುಣಮಟ್ಟದ ಆಹಾರದ ಜೊತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಕಾಳಜಿ ಕೇಂದ್ರಕ್ಕೆ ಬರಲು ಒಪ್ಪದೇ ಸಂಬಂಧಿಕರ ಮನೆಗೆ ತೆರಳುವ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಅವರಿಗೆ ಡ್ರೈರೇಷನ್ ನೀಡಲು ಕ್ರಮ ವಹಿಸಬೇಕು. –ಬಸವರಾಜ ಬೊಮ್ಮಾಯಿ, ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.