ಉದಾಸಿಗೆ ಕೇಂದ್ರ ಸಚಿವ ಸ್ಥಾನ ನಿರೀಕ್ಷೆ
•ಸಾಧನೆ-ಪ್ರಭಾವ-ಜಾತಿ ಸಮೀಕರಣ ಎಲ್ಲವೂ ಪೂರಕ •ಮೂರು ಅವಧಿಯಲ್ಲಿ ಹೆಚ್ಚಿನ ಕೆಲಸ ಮಾಡಿದ ಸಂಸದ
Team Udayavani, May 27, 2019, 3:19 PM IST
ಹಾವೇರಿ: ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಶಿವಕುಮಾರ ಉದಾಸಿ ಅವರಿಗೆ ಈ ಬಾರಿ ಪ್ರಧಾನಿ ಮೋದಿ ನೇತೃತ್ವದ ಎರಡನೇ ಅವಧಿಯಲ್ಲಿ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಬಹುದೇ ಎಂಬ ಬಗ್ಗೆ ನಿರೀಕ್ಷೆ ಗರಿಗೆದರಿದೆ.
ಸಂಸದ ಶಿವಕುಮಾರ ಉದಾಸಿ 2009ರಿಂದ ಎದುರಾಳಿ ಕಾಂಗ್ರೆಸ್‌ನ್ನು ಮಣಿಸಿ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಕಳೆದ ಆಡಳಿತಾವಧಿ ಸಂಸತ್ ಅಧಿವೇಶನದಲ್ಲಿ ಹೆಚ್ಚು ಹಾಜರಾತಿ ಹಾಗೂ ಪ್ರಮುಖ ವಿಷಯಗಳ ಬಗ್ಗೆ ಪ್ರಶ್ನೆ ಕೇಳಿ ಉದಾಸಿ ಅವರು ಪ್ರಧಾನಿ ಮೋದಿ ಅವರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲ ಕೇಂದ್ರ ಹಣಕಾಸು ಸಮಿತಿ, ಪಬ್ಲಿಕ್ ಅಕೌಂಟ್ಸ್ ಸಮಿತಿ ಸದಸ್ಯರಾಗಿ ಯೋಜನೆ ರೂಪಿಸಲು ಅತ್ಯುತ್ತಮ ಸಲಹೆ ನೀಡಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದರು. ಈ ಎಲ್ಲ ಕಾರಣಗಳಿಂದಾಗಿ ಶಿವಕುಮಾರ ಉದಾಸಿ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಜಾತಿ ಸಮೀಕರಣದ ವಿಚಾರದಲ್ಲಿಯೂ ಶಿವಕುಮಾರ ಉದಾಸಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯಯುಳ್ಳ ಲಿಂಗಾಯತರಿಗೆ ಸಚಿವ ಸ್ಥಾನ ನೀಡುವ ಲೆಕ್ಕಾಚಾರ ನಡೆದರೆ ಇಲ್ಲಿ ಶಿವಕುಮಾರ ಉದಾಸಿ ಅವರನ್ನು ಪರಿಗಣಿಸಬಹುದು ಎನ್ನಲಾಗಿದೆ.
ಸಾಧನೆಗಳೇನು?: ಶಿವಕುಮಾರ ಉದಾಸಿ ಚುನಾವಣೆ ಪ್ರಚಾರದಲ್ಲಿ ಹೇಳಿಕೊಂಡಂತೆ ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ ದಾಖಲೆ ಕೆಲಸವಾಗಿದೆ. ಕ್ಷೇತ್ರಕ್ಕೆ 260 ಕೋಟಿ ಸಿಆರ್‌ಆಫ್ ಅನುದಾನ ಬಂದಿದೆ. 815 ಕಿಮೀ ಕ್ಷೇತ್ರದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಕ್ಷೇತ್ರದಲ್ಲಿ 1.92 ಲಕ್ಷ ಗ್ಯಾಸ್ ಸಂಪರ್ಕ, 300 ಕೋಟಿಗೂ ಅಧಿಕ ವೆಚ್ಚದಲ್ಲಿ ರೈಲ್ವೆ ಸ್ಟೇಶನ್, ಅಂಡರ್ ಬ್ರಿಜ್, ಓವರ್ ಬ್ರಿಜ್, ಇತರ ಕಾಮಗಾರಿ ಮಾಡಲಾಗಿದೆ. ಆಯುಷ್ಮಾನ್ ಭಾರತ ಎರಡು ಲಕ್ಷ ಜನರಿಗೆ ದೊರಕಿಸುವ ಪ್ರಯತ್ನ ನಡೆದಿದೆ. ಕೃಷಿ ಸಮ್ಮ್ಮಾನ್ ಯೋಜನೆ ಲಾಭ 2.70 ಜನರಿಗೆ ಸಿಗಲಿದೆ. 2009ರಲ್ಲಿ ಹಾವೇರಿ ಜಿಲ್ಲೆಯಲ್ಲಿ 117 ಬ್ಯಾಂಕ್ ಶಾಖೆಗಳಿದ್ದವು. ಈಗ ಹಾವೇರಿ ಜಿಲ್ಲೆಯಲ್ಲಿ 314, ಗದಗ ಜಿಲ್ಲೆಯಲ್ಲಿ 55 ಹೆಚ್ಚುವರಿ ಶಾಖೆಗಳಾಗಿವೆ. ಕ್ಷೇತ್ರದಲ್ಲಿನ ಈ ಸಾಧನೆಗಳು ಸಹ ಸಚಿವ ಸ್ಥಾನ ಸಿಗುವ ಲೆಕ್ಕಾಚಾರದಲ್ಲಿ ಸೇರಿಕೊಳ್ಳಬಹುದು ಎನ್ನಲಾಗಿದೆ.
ಪ್ರಭಾವವೂ ಇದೆ: ಕೇವಲ ವೈಯಕ್ತಿಕ ಅರ್ಹತೆ, ಸಾಧನೆ ಅಷ್ಟೇ ಅಲ್ಲದೇ ಶಿವಕುಮಾರ ಉದಾಸಿ ತಮ್ಮ ಪರ ಕೇಂದ್ರ ಮಟ್ಟದಲ್ಲಿ ಪ್ರಭಾವ ಬೀರುವ ಶಕ್ತಿಯನ್ನೂ ಹೊಂದಿದ್ದಾರೆ. ಶಿವಕುಮಾರ ಉದಾಸಿ ಹಾಗೂ ಅವರ ತಂದೆ ಹಿರಿಯ ಧುರೀಣ ಸಿ.ಎಂ. ಉದಾಸಿ ಇಬ್ಬರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರಾಗಿದ್ದಾರೆ. ಹೀಗಾಗಿ ಶಿವಕುಮಾರ ಉದಾಸಿ ಪರವಾಗಿ ಯಡಿಯೂರಪ್ಪ ಕೇಂದ್ರದಲ್ಲಿ ಪ್ರಭಾವ ಬೀರಿ ಸಚಿವ ಸ್ಥಾನ ದೊರಕಿಸಿಕೊಡಬಹುದು. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿಗೆ ಹೆಚ್ಚು ಸ್ಥಾನಗಳು ದೊರಕಿರುವುದರಿಂದ ಯಡಿಯೂರಪ್ಪ ಅವರ ಮಾತಿಗೂ ಕೇಂದ್ರದಲ್ಲಿ ಹೆಚ್ಚಿನ ಮನ್ನಣೆ ಸಿಗುವುದರಿಂದ ಶಿವಕುಮಾರ ಉದಾಸಿ ಅವರಿಗೆ ಸಚಿವ ಸ್ಥಾನ ಖಚಿತ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.