ವರುಣಾರ್ಭಟಕ್ಕೆ ನಲುಗಿದ ರೈತ: ಬೆಳೆ ನಷ್ಟ
ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಶೇಂಗಾ-ಹತ್ತಿ-ಈರುಳ್ಳಿ ಬೆಳೆ ಹಾನಿ
Team Udayavani, Oct 16, 2020, 4:42 PM IST
ಹಾವೇರಿ: ವಾಯುಭಾರ ಕುಸಿತದಿಂದ ಕಳೆದ ಎರಡು-ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಶೇಂಗಾ, ಹತ್ತಿ, ಈರುಳ್ಳಿ ಬೆಳೆಗಳಿಗೆ ಅಪಾರ ಹಾನಿಯಾಗಿದ್ದು, ರೈತರು ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ಎದುರಿಸುವಂತಾಗಿದೆ.
ಪ್ರಸಕ್ತ ಮುಂಗಾರು ಹಂಗಾಮು ಉತ್ತಮವಾಗಿದೆ ಎಂದು ಕೊಳ್ಳುತ್ತಿರುವಾಗಲೇ ಪ್ರವಾಹ ಮತ್ತು ಅತಿವೃಷ್ಟಿ ಸ್ಥಿತಿ ನಿರ್ಮಾಣಗೊಂಡು ರೈತರ ಲೆಕ್ಕಾಚಾರ ತಪ್ಪುವಂತೆ ಮಾಡಿತ್ತು. ಮತ್ತೆ ಈಗ ವಾಯುಭಾರ ಕುಸಿತಗೊಂಡು ಅಕಾಲಿಕ ಮಳೆಯಾದ ಪರಿಣಾಮ ಶೇಂಗಾ, ಈರುಳ್ಳಿ, ಹತ್ತಿ, ಮೆಕ್ಕೆಜೋಳ, ಸೋಯಾಬಿನ್ ಬೆಳೆಗಳಿಗೆ ಹಾನಿಯಾಗುತ್ತಿದೆ. ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದ ರೈತರು ನಿರಂತರ ಮಳೆಯಿಂದ ಕಂಗಾಲಾಗಿದ್ದು, ಮತ್ತಷ್ಟು ಸಂಕಷ್ಟಕ್ಕೆ ತುತ್ತಾಗುವಂತೆ ಮಾಡಿದೆ.
ಶೇಂಗಾ ಬೆಳೆಗೆ ಹಾನಿ: ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ 19,840 ಹೆಕ್ಟೇರ್ ಪ್ರದೇಶದಲ್ಲಿ ರೈತರು ಶೇಂಗಾ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಬೆಳೆಯು ಕೂಡ ಉತ್ತಮವಾಗಿಯೇ ಬಂದಿದೆ. ಆದರೆ, ಅನಿರೀಕ್ಷಿತ ವಾಯುಭಾರ ಕುಸಿತಗೊಂಡು ನಿತ್ಯ ಸಂಜೆ ಹಾಗೂ ರಾತ್ರಿ ವೇಳೆ ಮಳೆ ಸುರಿಯುತ್ತಿದ್ದರಿಂದ ಶೇಂಗಾ ಬೆಳೆ ಹಾಳಾಗುತ್ತಿದ್ದು, ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈಗಾಗಲೇ ಶೇಂಗಾ ಬೆಳೆ ಕೊಯ್ಲಿಗೆ ಬಂದಿದ್ದು, ಹಲವಾರು ರೈತರು ಶೇಂಗಾ ಕಿತ್ತು ಜಮೀನುಗಳಲ್ಲಿ ಬಿಸಿಲಿಗೆ ಒಣ ಹಾಕಿದ್ದರು. ನಿರಂತರ ಮಳೆ ಸುರಿಯುತ್ತಿದ್ದರಿಂದ ಜಿಲ್ಲೆಯ ಹಾವೇರಿ, ಸವಣೂರು, ಶಿಗ್ಗಾವಿ, ರಾಣೆಬೆನ್ನೂರು ಭಾಗದಲ್ಲಿ ಶೇಂಗಾ ಬೆಳೆಸಂಪೂರ್ಣ ನೀರಿನಲ್ಲಿ ಮುಳುಗಿ ಮೊಳಕೆಯೊಡೆಯುವ ಹಂತಕ್ಕೆ ತಲುಪಿದೆ.ಇದರಿಂದಾಗಿ ರೈತರು ಬೆಳೆಯನ್ನು ಜಮೀನಿನಲ್ಲಿ ಇಟ್ಟುಕೊಳ್ಳಲಾಗದೇ, ಮಾರಾಟವನ್ನೂ ಮಾಡಲಾಗದೇ ಗೋಳಾಡುವಂತಾಗಿದೆ.
ಈರುಳ್ಳಿ ಬೆಳೆ ಹಾನಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 6563 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬೆಳೆಯಲಾಗಿದ್ದು, ಈ ಹಿಂದೆ ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿತ್ತು. ಈ ನಡುವೆಯೇ ಅನೇಕ ರೈತರು ಹಲಗು, ರಾತ್ರಿ ಎನ್ನದೇ ಕಷ್ಟಪಟ್ಟು ಗೊಬ್ಬರ, ಔಷಧ ಸಿಂಪರಣೆ ಮಾಡಿ ಬೆಳೆ ಉಳಿಸಿಕೊಂಡಿದ್ದರು. ಆದರೆ, ಅಕಾಲಿಕವಾಗಿ ಮಳೆ ಸುರಿದಿದ್ದರಿಂದ ಜಮೀನಿನಲ್ಲಿ ಈರುಳ್ಳಿ ಕಿತ್ತು ಗೂಡು ಹಾಕಿದ್ದ ಬೆಳೆ ಸಂಪೂರ್ಣ ಹಾನಿಯಾಗುತ್ತಿದ್ದು, ರೈತರು ಬೆಳೆಗೆ ಮಾಡಿದ ಖರ್ಚು ಸಹ ಕೈ ಸೇರದ ಸ್ಥಿತಿ ಎದುರಿಸುವಂತಾಗಿದೆ.
ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ ಹಾಗೂ ಹತ್ತಿಬೆಳೆಗೂ ಈ ಸಲ ಕುತ್ತು ಬಂದಿದ್ದು, ನಿರಂತರ ಮಳೆಯಿಂದ ಬೆಳೆಗಳು ಅನೇಕ ರೋಗಗಳಿಗೆ ತುತ್ತಾಗಿ ಹಾನಿಯಾಗುತ್ತಿದೆ. ಅತಿವೃಷ್ಟಿಯಿಂದಾಗಿ ಹತ್ತಿ ಗಿಡಗಳು ಕೆಂಪೇರುತ್ತಿವೆ. ಅಲ್ಲದೇ, ಅನೇಕ ಜಮೀನುಗಳಲ್ಲಿ ಈಗಾಗಲೇ ಹತ್ತಿ ಗಿಡಗಳಲ್ಲಿ ಕಾಯಿ ಒಡೆದಿದ್ದು, ಮಳೆಯಿಂದಾಗಿ ಸಂಪೂರ್ಣ ಹತ್ತಿ ನೆಲದ ಪಾಲಾಗುತ್ತಿದೆ. ಮಳೆ ಹೀಗೆಯೇ ಮುಂದುವರೆದರೆ ಹತ್ತಿ ಬೆಳೆ ರೈತರ ಕೈ ಸೇರುವ ಆಸೆಗೆ ತಣ್ಣೀರು ಎರಚಿದಂತಾಗುತ್ತದೆ.
ಒಟ್ಟಿನಲ್ಲಿ ಮುಂಗಾರು ಬೆಳೆ ಕಟಾವಿನ ಹಂತದಲ್ಲಿಯೇ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ರೈತರ ನೆಮ್ಮದಿ ಹಾಳು ಮಾಡಿದೆ. ಮುಂಗಾರು ಹಂಗಾಮಿನಲ್ಲಿ ಕಷ್ಟಪಟ್ಟು ದುಡಿದ ಬೆಳೆ ಮಳೆಯಿಂದಾಗಿ ಕೈ ಸೇರದಂತಾಗಿದೆ. ಅಪಾರ ಹಾನಿಯಿಂದ ರೈತ ಸಮೂಹ ಸಂಕಷ್ಟಕ್ಕೆ ತುತ್ತಾಗುವಂತೆ ಮಾಡಿದೆ.
ನೆಲ ಕಚ್ಚಿದ ಬೆಳೆ : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಅ.13ರವರೆಗೆ ಪ್ರಮುಖ ಬೆಳೆಗಳಾದಮೆಕ್ಕೆಜೋಳ 3868 ಹೆಕ್ಟೇರ್, ಶೇಂಗಾ 1598 ಹೆಕ್ಟೇರ್,ಸೋಯಾಬಿನ್ 592 ಹೆಕ್ಟೇರ್, ಹತ್ತಿ 5406 ಹೆಕ್ಟೇರ್‌ಸೇರಿದಂತೆ ಒಟ್ಟು 11912 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆಹಾನಿಯಾಗಿದೆ. ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕಮಳೆಯಿಂದ ಹಾನಿಯಾದ ಬೆಳೆಗಳ ಪ್ರಾಥಮಿಕ ಸರ್ವೇ ಕಾರ್ಯ ನಡೆಯಬೇಕಾಗಿದೆ.
ನಿರಂತರ ಸಂಕಷ್ಟ : ಒಂದಿಲ್ಲೊಂದು ಕಾರಣದಿಂದ ರೈತರು ನಿರಂತರವಾಗಿ ಸಂಕಷ್ಟ ಎದುರಿಸುತ್ತಲೇ ಬಂದಿದ್ದಾರೆ. 2019ರ ಬೇಸಿಗೆವರೆಗೂ ಸತತ ಬರಗಾಲ, ನಂತರ ಮಳೆಗಾಲದಲ್ಲಿನೆರೆ ಹಾನಿ, ಕೊರೊನಾ ಲಾಕ್‌ಡೌನ್ ಶುರುವಾಗಿದ್ದರಿಂದ ಬೆಳೆ ಮಾರಾಟವಾಗದೇ ನಷ್ಟ ಅನುಭವಿಸಿದರು. ನಂತರಅತಿವೃಷ್ಟಿ ಎದುರಾಗಿ ಅಪಾರ ಹಾನಿ ಅನುಭವಿಸಿದ್ದರು.ಸದ್ಯ ಮತ್ತೆ ಅಕಾಲಿಕ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿ ರೈತರನ್ನು ಹೈರಾಣಾಗಿಸಿದೆ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಬೆಳೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 11,912 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಹಾನಿಯಾಗಿದ್ದು, ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದ ಶೇಂಗಾ, ಹತ್ತಿಬೆಳೆಗಳು ಹಾನಿಯಾದ ಬಗ್ಗೆ ಮಾಹಿತಿ ಇದೆ. ಈ ಕುರಿತು ಪ್ರಾಥಮಿಕ ಸರ್ವೇ ಕಾರ್ಯ ಕೈಗೊಳ್ಳಲಾಗುತ್ತಿದೆ. –ಮಂಜುನಾಥ ಬಿ., ಜಂಟಿ ಕೃಷಿ ನಿರ್ದೇಶಕರು, ಹಾವೇರಿ
ಅತಿವೃಷ್ಟಿ ಹಾಗೂ ಅಕಾಲಿಕ ಮಳೆ ಸುರಿದಿದ್ದರಿಂದ ಶೇಂಗಾ ಬೆಳೆ ಸಂಪೂರ್ಣ ಹಾಳಾಗುವಂತಾಗಿದೆ. ಶೇಂಗಾ ಬೆಳೆಗೆ ಬೆಂಬಲ ಬೆಲೆ ಘೋಷಿಸುವ ಮೂಲಕ ಮೆಕ್ಕೆಜೋಳ ಬೆಳೆಗಾರರಿಗೆ ನೀಡಿದ ಪರಿಹಾರದರೀತಿಯಲ್ಲಿಯೇ ಶೇಂಗಾ ಬೆಳೆಗಾರರಿಗೂ ಪರಿಹಾರ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. –ಷಣ್ಮುಖಪ್ಪ ಶಿವನಗೌಡ್ರ, ರೈತರು
-ವೀರೇಶ್ ಮಡ್ಲೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.