ಚುನಾವಣಾ ಅಕ್ರಮ ತಿಳಿಸಲು ಸಿವಿಜಿಲ್ ಆ್ಯಪ್
Team Udayavani, Mar 18, 2019, 11:16 AM IST
ಹಾವೇರಿ: ಸಾರ್ವಜನಿಕರು ಯಾರೇ ಆದರೂ ತಮ್ಮ ಕಣ್ಣಿಗೆ ಕಾಣಿಸಿದ ಚುನಾವಣಾ ಅಕ್ರಮಗಳನ್ನು ಗೌಪ್ಯವಾಗಿ ವಿಡಿಯೋ ಮಾಡಿ ಇಲ್ಲವೇ ಫೋಟೋ ತೆಗೆದು ಸುಲಭವಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲು ಅನುಕೂಲವಾಗುವಂತೆ ಈ ಬಾರಿ ಚುನಾವಣಾ ಆಯೋಗ ‘ಸಿವಿಜಿಲ್’ (cVIGIL) ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ.
ಚುನಾವಣಾ ಅಕ್ರಮ ತಡೆಯಲು ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿರುವ ಚುನಾವಣಾ ಆಯೋಗ, ಈ ಬಾರಿ ಎಲ್ಲರೂ ಬಳಸುವ ಮೊಬೈಲ್ ತಂತ್ರಜ್ಞಾನ ಬಳಸಿಕೊಂಡು ಸಾರ್ವಜನಿಕರ ಸಹಕಾರದೊಂದಿಗೆ ಚುನಾವಣಾ ಅಕ್ರಮ ತಡೆಯಲು ಮುಂದಾಗಿದೆ.
ಪ್ರಸಕ್ತ ನಡೆಯುತ್ತಿರುವ 17ನೇ ಲೋಕಸಭೆ ಚುನಾವಣೆಯಲ್ಲಿ ‘ಸಿವಿಜಿಲ್’ ಎಂಬ ಮೊಬೈಲ್ ಆ್ಯಪ್‌ನ್ನು ಯಾರು ಬೇಕಾದರೂ ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಆ್ಯಪ್ ಮೂಲಕ ನಾಗರಿಕರು ತಾವು ಕಂಡ ಚುನಾವಣಾ ಅಕ್ರಮ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಕಳುಹಿಸಬಹುದಾಗಿದ್ದು ಕೂಡಲೇ ಅಧಿಕಾರಿ ತಂಡ ಸ್ಥಳಕ್ಕೆ ಆಗಮಿಸಲಿದೆ. ಇದರಲ್ಲಿ ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿರುವಂತೆ ನೋಡಿಕೊಳ್ಳಲಾಗುತ್ತದೆ.
ಆ್ಯಂಡ್ರಾಯ್ಡ ಸೌಲಭ್ಯವುಳ್ಳ ಮೊಬೈಲ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಸಿವಿಜಿಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ಮೊಬೈಲ್‌ಗೆ ಬರುವ 4ಸಂಖ್ಯೆಗಳ ಒಟಿಪಿ ಬಳಸಿ, ಹೆಸರು, ವಿಳಾಸ, ರಾಜ್ಯ, ಜಿಲ್ಲೆ, ಲೋಕಸಭಾ, ವಿಧಾನಸಭಾ ಕ್ಷೇತ್ರ, ಪಿನ್ ಕೋಡ್ ನಮೂದಿಸಬೇಕು. ಲಾಗಿನ್ ಆದ ನಂತರ ಫೋಟೋ, ವಿಡಿಯೋ ಆಯ್ಕೆ ಇರಲಿದ್ದು, ತಮಗೆ ಕಂಡ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಮಾಹಿತಿಯನ್ನು ನೇರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಬಹುದು.
ಕ್ರಮ ಖಚಿತ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತು ಸಿವಿಜಿಲ್ ಆ್ಯಪ್ ಮೂಲಕ ದೂರು, ಮಾಹಿತಿ ನೀಡಿವರು ಬಯಸಿದರೆ ಹೆಸರನ್ನು ಸಹ ಗೌಪ್ಯವಾಗಿಡುವ ವ್ಯವಸ್ಥೆಯಿದೆ. ಆ್ಯಪ್ ಮೂಲಕ ದೂರು ದಾಖಲಾದ 100 ನಿಮಿಷದೊಳಗೆ ನೀತಿ ಸಂಹಿತೆ ಉಲ್ಲಂಘನೆಯ ತಂಡ ಕ್ರಮ ಜರುಗಿಸಿ, ದೂರುದಾರರಿಗೆ ಮಾಹಿತಿ ಒದಗಿಸಲಿದೆ. ‘ಸಿವಿಜಿಲ್’ ಆ್ಯಪ್ ಮೂಲಕ ರವಾನಿಸುವ ದೂರು, ಮಾಹಿತಿ ನೇರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ರವಾನೆಯಾಗಲಿದೆ.
ಈ ಹಿಂದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದರೆ ಈ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿನ ನೀತಿ ಸಂಹಿತೆ ಪಾಲನೆ ತಂಡಕ್ಕೆ ಮಾಹಿತಿ ನೀಡಬೇಕಿತ್ತು. ಈ ಸಮಯದಲ್ಲಿ ಅಧಿಕಾರಿಗಳು ತಾರತಮ್ಯ ಮಾಡುವ ಹಾಗೂ ಮಾಹಿತಿ ನೀಡಿದವರ ಹೆಸರನ್ನು ಬಹಿರಂಗ ಪಡಿಸುವ ಸಾಧ್ಯತೆಯಿತ್ತು. ಹೀಗಾಗಿ ಅನೇಕ ಸಾರ್ವಜನಿಕರು ನೀತಿ ಸಂಹಿತೆ ಉಲ್ಲಂಘನೆಯು ತಮ್ಮ ಕಣ್ಮುಂದೆ ನಡೆದರೂ ಅದನ್ನು ಅಧಿಕಾರಿಗಳಿಗೆ ತಿಳಿಸುತ್ತಿರಲಿಲ್ಲ. ಈ ಆ್ಯಪ್‌ನಲ್ಲಿ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡುವುದರಿಂದ ಸಾರ್ವಜನಿಕರು ನಿರ್ಭಿತಿಯಿಂದ ಮಾಹಿತಿ ಹಾಗೂ ದೂರು ನೀಡಬಹುದಾಗಿದೆ.
ಚುನಾವಣಾ ಆಯೋಗದ ಆದೇಶದಂತೆ ಜಿಲ್ಲಾಡಳಿತಗಳು ಅವುಗಳ ಅನುಷ್ಠಾನಕ್ಕೆ ಸಿದ್ಧತೆ ನಡೆಸಿವೆ. ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಿಂದ ಆಗುವ ಚುನಾವಣಾ ನೀತಿ ಸಂಹಿತೆ ತಡೆಗೆ ಜಿಲ್ಲಾಡಳಿತ ವಿವಿಧ ಸಮಿತಿಗಳನ್ನು ರಚಿಸಿ ಕಣ್ಗಾವಲಿಟ್ಟಿದೆ. ಅದರ ಜೊತೆಗೆ ಆಯೋಗಕ್ಕೆ ನೇರವಾಗಿ ಮಾಹಿತಿ ರವಾನಿಸುವ ಈ ಹೊಸ ಆ್ಯಪ್ ವ್ಯವಸ್ಥೆ ಜಾರಿಗೆ ಬಂದಿದೆ.
ಜಿಲ್ಲೆಯಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಾಕೀರಅಹ್ಮದ್ ತೊಂಡಿಖಾನ್ ಸಿವಿಜಿಲ್ ಆ್ಯಪ್‌ನ ಉಸ್ತುವಾರಿಗಳಾಗಿದ್ದಾರೆ. ಸಾರ್ವಜನಿಕರು ಈ ಆ್ಯಪ್ ಬಳಸಿಕೊಂಡು ಚುನಾವಣಾ ಅಕ್ರಮ ತಡೆಗೆ ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
‘ಸಿವಿಜಿಲ್’ ಎಂಬ ಹೊಸ ಆ್ಯಪ್‌ನ್ನು ಚುನಾವಣೆ ಆಯೋಗ ಬಿಡುಗಡೆಗೊಳಿಸಿದ್ದು, ನೀತಿ ಸಂಹಿತೆ
ಉಲ್ಲಂಘನೆ ಮಾಹಿತಿ ಕುರಿತು ಸಾರ್ವಜನಿಕರು ಫೋಟೋ ಹಾಗೂ ವಿಡಿಯೋ ಹಾಕಬಹುದು. ಎಂಸಿಸಿ ಸಮಿತಿ ಗಮನಿಸಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರೆ ಪ್ರಕರಣ ದಾಖಲಿಸಿಕೊಂಡು 100ನಿಮಿಷದೊಳಗೆ ದೂರು ನೀಡಿದವರಿಗೆ ಆ್ಯಪ್ ಮೂಲಕವೇ ಮಾಹಿತಿ ರವಾನಿಸುತ್ತಾರೆ. ಮಾಹಿತಿ ನೀಡುವವರು ತಮ್ಮ ಹೆಸರು ಗೌಪ್ಯವಾಗಿಡಬಹುದು.
. ಶಾಕೀರ್‌ಅಹ್ಮದ್ ತೊಂಡಿಖಾನ್,
‘ಸಿವಿಜಿಲ್’ ಆ್ಯಪ್‌ನ ಜಿಲ್ಲಾ ಉಸ್ತುವಾರಿ
ಎಚ್.ಕೆ. ನಟರಾಜ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.