ಕುಂಬಾರರ ದೀಪಾವಳಿ ಸಂಭ್ರಮಕ್ಕೆ ವರುಣನ ಕೊಕ್ಕೆ!
ಮನೆಗಳಿಗೆ ಮಳೆ ನೀರು ನುಗ್ಗಿ ಸಿದ್ಧಪಡಿಸಿಟ್ಟ ಹಣತೆಗಳು ನಾಶ ; ಮಳೆಯಿಂದ ಹಣತೆ ತಯಾರಿಕೆಗೆ ಸಂಕಷ್ಟ
Team Udayavani, Oct 23, 2022, 3:55 PM IST
ಹಾವೇರಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಲ್ಲರ ಮನೆಯಲ್ಲಿ ದೀಪಗಳ ಮೂಲಕ ಬೆಳಕು ಮೂಡಿಸುವ ಕುಂಬಾರ ಕುಟುಂಬಗಳ ಮನೆಯಲ್ಲಿಯೇ ಕತ್ತಲು ಕವಿಯುವಂತಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಣತೆ ತಯಾರಿಸಲು ಸಾಧ್ಯವಾಗದೇ ಕುಂಬಾರ ಕುಟುಂಬಗಳು ಕೈಚೆಲ್ಲಿ ಕುಳಿತುಕೊಂಡಿದ್ದು, ದೀಪಾವಳಿ ಹಬ್ಬದ ಸಂಭ್ರಮವನ್ನೇ ಕಸಿದುಕೊಂಡಿದೆ.
ನಗರದಲ್ಲಿ ನೆಲೆಸಿರುವ ಕುಂಬಾರ ಓಣಿಯ ಪಕ್ಕದಲ್ಲೇ ಕೆರೆ ಇದೆ. ಮಳೆ ಬಂದರೆ ಕೆರೆ ತುಂಬಿ ನೀರೆಲ್ಲಾ ಅವರ ಮನೆಗಳಿಗೆ ನುಗ್ಗುತ್ತದೆ. ಈ ವರ್ಷ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಕುಂಬಾರರ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಮಳೆ ಇಲ್ಲದಿದ್ದಾಗ ಹಣತೆ ಮಾಡಿ ಒಣಗಿಸಿ ಮಾರಾಟ ಮಾಡಲು ಸಿದ್ಧಪಡಿಸಿಕೊಂಡಿದ್ದ ಹಣತೆಗಳೆಲ್ಲಾ ನೀರು ಪಾಲಾಗಿವೆ. ಹೀಗಾಗಿ, ಕುಂಬಾರರ ಕುಟುಂಬಗಳು ಅಕ್ಷರಶಃ ನಲುಗಿ ಹೋಗಿವೆ.
ಈ ವರ್ಷ ಸುರಿದ ಧಾರಾಕಾರ ಮಳೆಗಳಿಗೆ ಒಂದೆಡೆ ರೈತರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಪರಿಣಾಮ ಹಬ್ಬದ ಸಂಭ್ರಮ ಅನ್ನದಾತರ ಮೊಗದಲ್ಲೂ ಇಲ್ಲ, ಇತ್ತ ಕುಂಬಾರರ ಬಾಳಿಗೂ ಮಳೆ ಕೊಳ್ಳೆ ಇಟ್ಟಂತಾಗಿದೆ.
ಮಾರುಕಟ್ಟೆಯಲ್ಲಿ ಪಿಂಗಾಣಿ ದೀಪ: ಎಲ್ಲರ ಮನೆಯಲ್ಲಿ ದೀಪ ಹೊತ್ತಿಸಲು ಹಣತೆ ತಯಾರಿಸುವ ಜಿಲ್ಲೆಯ ಕುಂಬಾರರ ಬದುಕಿನಲ್ಲಿ ಪಿಂಗಾಣಿ ಶಾಪವಾಗಿದ್ದು, ಕುಂಬಾರರ ಬಾಳಲ್ಲಿ ಕತ್ತಲು ಆವರಿಸಿದೆ. ಆಧುನಿಕ ಬದುಕಿನ ತಲ್ಲಣಗಳಿಂದಾಗಿ ಹಲವಾರು ಏರಿಳಿತಗಳ ಮಧ್ಯೆಯೂ ತಮ್ಮ ಮೂಲ ಕುಲ ಕಸುಬನ್ನು ಕೈಬಿಡಬಾರದು ಎಂಬ ಸಂಕಲ್ಪದಿಂದ ಸಂಕಷ್ಟದ ಬದುಕಿನಲ್ಲಿಯೇ ನಗರದ ಕುಂಬಾರಗುಂಡಿಯಲ್ಲಿ ಐದಾರು ಕುಂಬಾರರ ಕುಟುಂಬಗಳು ಹರವಿ, ವಿವಿಧ ಮಾದರಿ ಹಣತೆ, ಬಗೆಗೆಯ ಮಡಿಕೆಗಳನ್ನು ತಯಾರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಮಳೆ ಇಲ್ಲದಿದ್ದಾಗ ತಯಾರಿಸಿ ಬೇರೆಡೆ ಸಂಗ್ರಹಿಟ್ಟಿದ್ದ ಹಣತೆಗಳಿಗೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ.
ಮಣ್ಣಿನ ದೀಪ ಖರೀದಿ ಕ್ಷೀಣ: ದೂರದ ಕೂಳೆನೂರು ಗ್ರಾಮದ ಕೆರೆ ಸೇರಿದಂತೆ ಸುತ್ತಮುತ್ತಲಿನ ವಿವಿಧ ಕೆರೆಗಳಿಂದ ಜೇಡಿ ಮಣ್ಣನ್ನು ತಂದು ಹದ ಮಾಡಿ ಯಾವುದೇ ಸಾಧನಗಳ ಸಹಾಯವಿಲ್ಲದೇ ತಮ್ಮ ಕೈಚಳಕದಿಂದ ಸುಂದರವಾದ ಹಣತೆಗಳನ್ನು ತಯಾರಿಸುತ್ತಾರೆ. ಸತತ ಆರೇಳು ಗಂಟೆಗಳ ಕಾಲ ಬಟ್ಟಿಯಲ್ಲಿ ಸುಟ್ಟು ಮಣ್ಣಿನ ಹಣತೆಗಳಿಗೆ ಅಂತಿಮ ರೂಪ ನೀಡುತ್ತಾರೆ. ಹೀಗೆ ಕಷ್ಟಪಟ್ಟು ಸಿದ್ಧಪಡಿಸಿದ ಹಣತೆಗಳನ್ನು ಕೇವಲ 20ರಿಂದ 25ರೂ.ಗೆ ಡಜನ್ ನಂತೆ ನೀಡಿದರೂ ಅವುಗಳನ್ನು ಕೊಳ್ಳುವವರ ಸಂಖ್ಯೆ ಮಾತ್ರ ಗಣನೀಯವಾಗಿ ಕಡಿಮೆಯಾಗಿದೆ ಎಂಬುದು ಕುಂಬಾರ ಕುಟುಂಬಗಳ ಮಹಿಳೆಯರ ಅಳಲು.
ದೀಪದ ಕೆಳಗೆ ಕತ್ತಲು
ಕೆಲ ವರ್ಷಗಳ ಹಿಂದೆ ಲಕ್ಷ ಲಕ್ಷ ದೀಪಗಳನ್ನು ತಮ್ಮ ಮನೆ ಮುಂದೆ ಮಾರಾಟ ಮಾಡುತ್ತಿದ್ದ ಈ ಕುಟುಂಬಗಳು ನಂತರ ನೂರರ ಲೆಕ್ಕದಲ್ಲಿ ಹಣತೆಗಳನ್ನು ಮಾರಾಟ ಮಾಡಿ ಬದುಕಿನ ಬಂಡಿ ಸಾಗಿಸುತ್ತಿದ್ದರು. ಆದರೀಗ, ಪರಿಸ್ಥಿತಿ ಸಾಕಷ್ಟು ಭಿನ್ನವಾಗಿದ್ದು, ತಾವು ಹಗಲು-ರಾತ್ರಿ ಎನ್ನದೇ ಕಷ್ಟಪಟ್ಟು ತಯಾರಿಸಿದ ದೀಪಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಸಾವಿರದ ಬದಲಾಗಿ ಕೇವಲ ನೂರರ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಣತೆ(ದೀಪ), ಮಡಕೆ, ಹರವಿ, ಗಡಗಿಗಳ ತಯಾರಿಕೆಯಿಂದಲೇ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗದ ಅನೇಕ ಕುಟುಂಬಗಳು ಈಗಾಗಲೇ ಬೇರೆ ಬೇರೆ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ, ದೀಪದ ಕೆಳಗೆ ಕತ್ತಲು ಎಂಬಂತೆ ದೀಪ ತಯಾರಿಸುವವರ ಬದುಕಿನಲ್ಲಿ ಕತ್ತಲು ಆವರಿಸಿರುವುದು ನಿಜಕ್ಕೂ ನೋವಿನ ಸಂಗತಿ.
ಈ ವರ್ಷ ನಿರಂತರ ಮಳೆ ಸುರಿದಿದ್ದರಿಂದ ನಾವು ಮಾಡಿಟ್ಟಿದ್ದ ದೀಪಗಳೆಲ್ಲಾ ಕೊಚ್ಚಿಕೊಂಡು ಹೋಗ್ಯಾವ್ರಿ. ನಾವು ದೀಪ ಮಾಡಿ ಇಟ್ಟರೆ ಮಳೆ ಬಂದು ಹಾಳು ಮಾಡುತ್ತಿದೆ. ಈ ಸಲ ಮಳೆ ನಮ್ಮ ಹಬ್ಬದ ಸಂಭ್ರಮವನ್ನೇ ಕಸಿದುಕೊಂಡಿದೆ. ಕೆಲವರು ದೀಪ ಮಾಡಿದ್ರೂ ಮಳೆಗೆ ಹೆದರಿ ಬಟ್ಟಿ ಹಾಕೋಕೆ ಆಗಿಲ್ಲ. ಹಿಂಗಾದ್ರೆ, ನಾವೆಲ್ಲಾ ಹೇಗೆ ಜೀವನ ಮಾಡಬೇಕು. ರೈತರಿಗೆ ಸರ್ಕಾರ ಅಲ್ಪ, ಸ್ವಲ್ಪ ಸಹಾಯ ಮಾಡಿದೆ. ಆದರೆ, ನಮಗೆ ಯಾರೂ ಸಹಾಯ ಮಾಡುತ್ತಿಲ್ಲ. –ರೇಣುಕಾ ಕುಂಬಾರ
ವೀರೇಶ ಮಡ್ಲೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.