ಜಿಲ್ಲಾಧಿಕಾರಿಗೆ ಗ್ರಾಮಸ್ಥರಿಂದ ಅಹವಾಲುಗಳ ಮಹಾಪೂರ
ಗ್ರಾಮೀಣರ ಸಮಸ್ಯೆ ಅರಿತು ಪರಿಹಾರ ಕಲ್ಪಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ: ಸಂಜಯ ಶೆಟ್ಟೆಣ್ಣವರ
Team Udayavani, Sep 18, 2022, 1:27 PM IST
ಹಾವೇರಿ/ಬ್ಯಾಡಗಿ: ಸತತ ಮಳೆ, ಕೆರೆಯ ಜಿನುಗು ನಿಂದಾಗಿ ಗ್ರಾಮದಲ್ಲಿ ವಾಸಿಸುವುದು ಕಷ್ಟವಾಗಿದೆ. ಹಾಗಾಗಿ, ಗುಡ್ಡದ ಪ್ರದೇಶದಲ್ಲಿ ನಿವೇಶನ ರಚಿಸಿ ಗ್ರಾಮವನ್ನು ಸಂಪೂರ್ಣ ಸ್ಥಳಾಂತರಿಸಬೇಕೆಂದು ಖುರ್ಧವೀರಾಪೂರ ಗ್ರಾಮಸ್ಥರು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರಿಗೆ ಮನವಿ ಮಾಡಿದರು.
ಬ್ಯಾಡಗಿ ತಾಲೂಕು ಖುರ್ಧವೀರಾಪೂರದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಹಿಳೆಯರು, ಗ್ರಾಮದ ಯುವಕರು, ಹಿರಿಯರು ಗ್ರಾಮ ಸ್ಥಳಾಂತರ ಸೇರಿದಂತೆ ಗ್ರಾಮದ ಸಮಗ್ರ ಅಭಿವೃದ್ಧಿ ಕುರಿತು ಹಲವು ಬೇಡಿಕೆಗಳನ್ನು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಮನವಿ ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಮೂಲ ಭೂತ ಸೌಕರ್ಯಗಳ ಕೊರತೆ ಎದುರಿಸುವ ಜಿಲ್ಲಾ ಹಾಗೂ ತಾಲೂಕು ಕೇಂದ್ರದಿಂದ ದೂರದಲ್ಲಿರುವ ಗ್ರಾಮಗಳ ಜನರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಅರಿತು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ. ಉತ್ತಮ ವ್ಯವಸ್ಥೆ ಮತ್ತು ಸಮಾಜ ನಿರ್ಮಾಣಕ್ಕೆ ಗ್ರಾಮ ವಾಸ್ತವ್ಯ ಸಹಕಾರಿಯಾಗಿದೆ ಎಂದರು.
ಗ್ರಾಮದ ನಾಗರಿಕರ ಸಮಸ್ಯೆಗೆ ಸಮಚಿತ್ತದಿಂದ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಗ್ರಾಮದ ಸ್ಥಳಾಂತರ ಬೇಡಿಕೆಯನ್ನು ಪರಿಶೀಲನೆ ಮಾಡಲಾಗುವುದು. ವಸತಿ ರಹಿತರಿಗೆ ನಿವೇಶನ ರಚಿಸಿ ಹಂಚಿಕೆಗೆ ಕ್ರಮ ವಹಿಸಲಾಗುವುದು. ಪರಿಶಿಷ್ಟ ಕಾಲೋನಿಯ ಬೀದಿ ದೀಪ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಡಾ.ಬಿ. ಆರ್.ಅಂಬೇಡ್ಕರ್ ಭವನ ನಿರ್ಮಾಣ, ದೇವಾಲಯ ಜೀರ್ಣೋದ್ಧಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ನರೇಗಾ ಯೋಜನೆಯಡಿ ಯುವಕರ ಬೇಡಿಕೆಯಂತೆ ಕ್ರೀಡಾಂಗಣ ನಿರ್ಮಿಸಿಕೊಡಲು ಸೂಚಿಸಿದರು. ಕೆರೆ ನೀರಿನ ಜಿನುಗುವಿಕೆ ಸಮಸ್ಯೆ ನಿವಾರಣೆಗೆ ತಕ್ಷಣವೇ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಪಂ ಅಭಿಯಂತರರಿಗೆ ಸೂಚನೆ ನೀಡಿದರು.
ಮಲ್ಲೂರು, ಹಾಸನಗಿ, ಖುರ್ಧವೀರಾಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆ ದೂರುಗಳಿದ್ದು, ಹೊಸ ಯೋಜನೆ ಅನುಷ್ಠಾನಗೊಳ್ಳುವವರೆಗೆ ಪ್ರಸ್ತುತ ಇರುವ ನೀರಿನ ಜಾಲವನ್ನು ಸರಿಪಡಿಸಿ ಶುದ್ಧ ನೀರನ್ನು ಪೂರೈಸಲು ಪಂಚಾಯತ್ ರಾಜ್ ಅಭಿಯಂತರರಿಗೆ ಸೂಚನೆ ನೀಡಿದರು. ವಸತಿ ಮತ್ತು ಮನೆ ನಿರ್ಮಾಣ, ಗ್ರಾಮದ ಸ್ಥಳಾಂತರ ಕುರಿತಂತೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.
ಮುಜರಾಯಿ ಇಲಾಖೆಯಿಂದ ದೇಗುಲಗಳ ಜೀರ್ಣೋದ್ಧಾರ, ಮಹಿಳಾ ಸ್ವ ಸಹಾಯ ಸಂಘಗಳ ಚಟುವಟಿಕೆಗಳಿಗೆ ನೆರವು, ಗ್ರಂಥಾಲಯ ಸ್ಥಾಪನೆ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಖುರ್ದುವೀರಾಪುರ ಗ್ರಾಮ ಸೇರಿದಂತೆ ಬ್ಯಾಡಗಿ ತಾಲೂಕಿನಾದ್ಯಂತ ಹೊಲಗಳಿಗೆ ತೆರಳುವ ಕಾಲು ದಾರಿಗಳನ್ನು ವಿಸ್ತರಿಸಿ ಎತ್ತಿನಬಂಡಿ, ಟ್ರ್ಯಾಕ್ಟರ್‌ಗಳು ಓಡಾಡುವಂತೆ ಮಾಡುವುದು ಅಗತ್ಯವಾಗಿದೆ. ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣಗೊಂಡಿರುವ ಪ್ರಸ್ತುತ ಹೊಲಗಳಿಗೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು ಕಾಲುದಾರಿಗಳು ಅಡ್ಡಿಯಾಗಿವೆ. ಇದರಿಂದ ಪ್ರತಿ ಗ್ರಾಮಗಳಲ್ಲಿ ರೈತರ ಮಧ್ಯ ವ್ಯಾಜ್ಯಗಳು ಉಂಟಾಗಿ ಸಾವಿರಾರು ಕೇಸ್‌ಗಳು ನ್ಯಾಯಾಲಯದಲ್ಲಿ ದಾಖಲಾಗುತ್ತಿವೆ. ವಿಶೇಷ ಕ್ರಮ ಕೈಗೊಂಡು ಕಂದಾಯ ಅಧಿಕಾರಿಗಳು ಹೊಲದ ಕಾಲುದಾರಿಗಳನ್ನು ವಿಸ್ತರಿ ಸಲು ಮನವಿ ಮಾಡಿದರು.
ಪಂಚಾಯತ್ ಕೆರೆಗಳ ಅಭಿವೃದ್ಧಿಯನ್ನು ಗ್ರಾಪಂಗೆ ವಹಿಸಲಾಗಿದೆ. ಇದರಿಂದ ಪೂರ್ಣ ಪ್ರಮಾಣದಲ್ಲಿ ಕೆರೆಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಕೆರೆಗಳ ಅಭಿವೃದ್ಧಿ ಕಾರ್ಯವನ್ನು ಜಿಪಂಗೆ ವರ್ಗಾಯಿಸಿ ಅಭಿವೃದ್ಧಿಪಡಿಸಲು ಕ್ರಮ ವಹಿಸಬೇಕು. ಹಾಗೂ ಉತ್ತಮ ಅಂಕ ಗಳಿಸಿದ ಗ್ರಾಮೀಣ ವಿದ್ಯಾರ್ಥಿ ಗಳಿಗೆ ಮೊರಾರ್ಜಿ ವಸತಿ ಶಾಲೆಗಳಿಗೆ ಹೆಚ್ಚಿನ ಪ್ರವೇಶ ಕಲ್ಪಿಸುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಗ್ರಾಮೀಣ ವಿದ್ಯುತ್ ಪೂರೈಕೆಗೆ ವಿತರಣಾ ಜಾಲದ ಕೊರತೆ ದೊಡ್ಡ ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಡಿಸೆಂಬರ್ ನಲ್ಲಿ ವಿದ್ಯುತ್ ಕಾರಿಡಾರ್ ಹಾಗೂ ಗ್ರಿಡ್ ನಿರ್ಮಿಸಿ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ರೇಷ್ಮೆ ಬೆಳೆಗಾರರಾದ ಮಾಲತೇಶ ಮತ್ತು ಸುರೇಶ ಅವರಿಗೆ ತಲಾ ಮೂರು ಲಕ್ಷ ರೂ. ಮೊತ್ತದ ಪ್ರೋತ್ಸಾಹ ಧನ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಲ್ಲೂರ ಗ್ರಾಪಂ ಅಧ್ಯಕ್ಷೆ ನೀಲವ್ವ ಕುಲಕರ್ಣಿ, ಅಂಬಿಗರಚೌಡಯ್ಯ ಪ್ರಾಧಿಕಾರದ ನಿರ್ದೇಶಕ ಜಿತೇಂದ್ರ ಸುಣಗಾರ, ಜಿಪಂ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳೆಗಡ್ಡಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ಸಮಾಜ ಕಲ್ಯಾಣಾಧಿಕಾರಿ ಜಗದೀಶ ಹೆಬ್ಬಳ್ಳಿ, ಬಿಸಿಎಂ ಅಧಿಕಾರಿ ಪ್ರವೀಣ ಕೆ.ಎನ್., ಡಿಎಚ್‌ಒ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶ್ರೀನಿವಾಸ ಆಲದರ್ತಿ, ವಾರ್ತಾಧಿಕಾರಿ ಡಾ.ಬಿ.ಆರ್. ರಂಗನಾಥ್, ತಹಶೀಲ್ದಾರ್ ತಿಪ್ಪೇಸ್ವಾಮಿ, ತಾಪಂ ಇಒ ಮಲ್ಲಿಕಾರ್ಜುನ, ಸಿಪಿಐ ಬಸವರಾಜ, ಇತರ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
55 ಅರ್ಜಿ ಇತ್ಯರ್ಥ
ಬ್ಯಾಡಗಿ: ಖುರ್ದವೀರಾಪೂರ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ದಲ್ಲಿ ಗ್ರಾಮಸ್ಥರಿಂದ ಸಲ್ಲಿಕೆ ಯಾಗಿದ್ದ ಒಟ್ಟು 120 ಅರ್ಜಿಗಳ ಪೈಕಿ 55 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಯಿತು.
ಇಸ್ಪಿಟ್ ಆಟ ನಿಲ್ಲಿಸಿ
ಗ್ರಾಮದಲ್ಲಿ ಇಸ್ಪಿಟ್ ಆಟ ನಿಲ್ಲಿಸಿ. ಗ್ರಾಮದ ಇಸ್ಪಿಟ್ ಆಟಕ್ಕೆ ಪೊಲೀಸರು ನೆರವು ನೀಡುತ್ತಿದ್ದಾರೆ. ಇದರಿಂದ ಗ್ರಾಮದ ವಾತಾವರಣ ಹಾಳಾಗುತ್ತಿದೆ ಎಂದು ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಲಿಖೀತ ದೂರು ನೀಡಿದರು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮಕ್ಕೆ ತಿಳಿಸುವುದಾಗಿ ಜಿಲ್ಲಾಧಿಕಾರಿಗಳು ಸಮಾಧಾನಪಡಿಸಿದರು.
ಗ್ರಾಮದ ಸಮಗ್ರ ಅಭಿವೃದ್ಧಿ ಹಾಗೂ ವಿವಿಧ ಇಲಾಖೆಗಳ ಸೌಲಭ್ಯ ಪಡೆಯುವಲ್ಲಿ ಫಲಾನುಭವಿಗಳ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಭಾಗವಹಿಸಲಾಗಿದೆ. ನಿಮ್ಮ ಸಮಸ್ಯೆಗಳನ್ನು ಆಲಿಸಿ ಸಂಜೆಯೊಳಗಾಗಿ ಪರಿಹರಿಸಲಾಗುವುದು. ಸ್ಥಳದಲ್ಲೇ ಬಗೆಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಿಸಲಾಗುವುದು. –ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್-ಸವಾಲಾದ ಶುದ್ಧ ನೀರು ಪೂರೈಕೆ…
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ
Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.