ಮೆಕ್ಕೆಜೋಳ ಇ-ಟೆಂಡರ್‌ಗೆ ಚಾಲನೆ
ಎಪಿಎಂಸಿಗಳತ್ತ ಬರದೇ ತಮಗೆ ಅನುಕೂಲಕರ ಬೆಲೆ ಸಿಕ್ಕ ಕಡೆಯಲ್ಲಿ ಮಾರಾಟ ಮಾಡುತ್ತಿದ್ದರು.
Team Udayavani, Feb 11, 2022, 6:29 PM IST
ಹಾವೇರಿ: ನಗರದ ಎಪಿಎಂಸಿಯಲ್ಲಿ ಇ-ಟೆಂಡರ್ ಮೂಲಕ ಮೆಕ್ಕೆಜೋಳ, ಜೋಳ, ಸೋಯಾಬಿನ್ ಖರೀದಿ ಪ್ರಕ್ರಿಯೆಗೆ ಗುರುವಾರ ಟೆಂಡರ್‌ಗೆ ಇಟ್ಟಿದ್ದ ಮೆಕ್ಕೆಜೋಳ ಚೀಲಗಳಿಗೆ ಪೂಜೆ ಸಲ್ಲಿಸುವ ಮೂಲಕ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಚಾಲನೆ ನೀಡಿದರು.
ಈವರೆಗೆ ಪರಸ್ಪರ ಒಪ್ಪಂದದ ಮೂಲಕ ಸ್ಥಳೀಯ ಎಪಿಎಂಸಿಯಲ್ಲಿ ಮಾರಾಟವಾಗುತ್ತಿದ್ದ ಮೆಕ್ಕೆಜೋಳ, ಜೋಳ, ಸೋಯಾಬಿನ್ ಮಾರಾಟ ಗುರುವಾರದಿಂದ ಇ-ಟೆಂಡರ್ ಮೂಲಕ ಆರಂಭಗೊಂಡಿತು. ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುವ ನಿರೀಕ್ಷೆ ಮೂಡಿಸಿದೆ.
ಹಾವೇರಿ ಎಪಿಎಂಸಿಯಲ್ಲಿ ಈಗಾಗಲೇ ಹತ್ತಿ ಹಾಗೂ ಶೇಂಗಾ ಬೆಳೆಗಳನ್ನು ಈ ಟೆಂಡರ್ ಮೂಲಕ ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದೆ. ಮೆಕ್ಕೆಜೋಳ, ಸೋಯಾಬಿನ್, ಜೋಳದ ಬೆಳೆ ಅದರ ವ್ಯಾಪ್ತಿಗೆ ಸೇರಿರಲಿಲ್ಲ. ಹೀಗಾಗಿ, ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುತ್ತಿರಲಿಲ್ಲ. ಇದರಿಂದ ಬೇಸತ್ತ ರೈತರು ಇತ್ತೀಚಿನ ದಿನಗಳಲ್ಲಿ ಎಪಿಎಂಸಿಗಳತ್ತ ಬರದೇ ತಮಗೆ ಅನುಕೂಲಕರ ಬೆಲೆ ಸಿಕ್ಕ ಕಡೆಯಲ್ಲಿ ಮಾರಾಟ ಮಾಡುತ್ತಿದ್ದರು. ಅಲ್ಲದೇ, ಕೆಲವು ವಂಚಕರು
ಹುಟ್ಟುಕೊಂಡು ಮಾರುಕಟ್ಟೆಗಿಂತ ಹೆಚ್ಚಿನ ಬೆಲೆ ನೀಡುವ ಆಮಿಷವೊಡ್ಡಿ ಮೆಕ್ಕೆಜೋಳ ಖರೀದಿಸಿ ಹಣ ಕೊಡದೇ ವಂಚಿಸುತ್ತಿದ್ದ ಪ್ರಕರಣಗಳು ನಡೆದಿದ್ದವು.
ಈ ಹಿನ್ನೆಲೆ ರೈತರ ಬೆಳೆಗಳಿಗೆ ಸ್ಪರ್ಧಾತ್ಮಕ ದರ ಒದಗಿಸಿಕೊಡಲು ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಇ-ಟೆಂಡರ್ ಮೂಲಕ ಮೆಕ್ಕೆಜೋಳ ಖರೀದಿಗೆ ಚಾಲನೆ ನೀಡಿದರು. ಈ ವೇಳೆ ಕಾರ್ಯದರ್ಶಿ ಪರಮೇಶ್ವರಪ್ಪ ನಾಯಕ, ಎಂಜಿನಿಯರ್ ಎ.ಬಿ. ಭಾಯಿಸರ್ಕಾರ, ಸದಸ್ಯರಾದ ವಿ.ಜಿ. ಬಣಕಾರ, ವರ್ತಕರ ಸಂಘದ ಕಾರ್ಯದರ್ಶಿ ಎಂ.ಎಸ್. ಮಲಗುಂದ, ಸುಭಾಸ ಹುರಳಿಕುಪ್ಪಿ, ಎಸ್.ಕೆ. ಪಾಟೀಲ, ಸತೀಶ ಪಾಟೀಲ, ಶಿವಕುಮಾರ ಮಾಗನೂರ, ಪಿ.ಜಿ. ಛತ್ರದಮಠ, ಕರಬಸಪ್ಪ ಸೋಮಾಪುರ, ವಿಶ್ವಾಸ ಬಣಕಾರ, ನಾಗರಾಜ ಮಠದ ಇದ್ದರು.
ಮೊದಲ ದಿನವೇ ಬಂಪರ್ ದರ
ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಈವರೆಗೆ ಪ್ರತಿ ಕ್ವಿಂಟಲ್‌ಗೆ 1,911ರಿಂದ 1,930ರೂ. ವರೆಗೆ ದರ ಸಿಕ್ಕಿದೆ. ಇದಕ್ಕೂ ಮುನ್ನ ಪ್ರತಿ ಕ್ವಿಂಟಲ್‌ಗೆ 1,800ರೂ. ವರೆಗೆ ದರ ಲಭಿಸಿತ್ತು. ಇ-ಟೆಂಡರ್ ಮೂಲಕ ಖರೀದಿ ಆರಂಭದ ಮೊದಲ ದಿನವೇ 100ರೂ. ಗೂ ಅಧಿ ಕ ದರ ಸಿಕ್ಕಿದೆ. ಸೋಯಾಬಿನ್ 5,600 ರಿಂದ 6,359 ರೂ. ಜೋಳ 2,169, 2,391ರೂ.ಗೆ ಮಾರಾಟವಾಗಿದೆ.
ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗಲಿ ಎಂಬ ಉದ್ದೇಶದಿಂದ ಎಪಿಎಂಸಿಯಲ್ಲಿ ಈವರೆಗೆ ಪರಸ್ಪರ ಒಪ್ಪಂದದ ಮೇಲೆ ನಡೆಯುತ್ತಿದ್ದ ಖರೀದಿ ಪ್ರಕ್ರಿಯೆಯನ್ನು ಇಂದಿನಿಂದ ಇ-ಟೆಂಡರ್ ಮೂಲಕ ನಡೆಸಲಾಗಿದೆ. ಇದರಿಂದ ರೈತರಿಗೆ ಉತ್ತಮ ದರದ ಜೊತೆಗೆ ಖರೀದಿದಾರರ ಸೋಗಿನಲ್ಲಿ ನಡೆಸುತ್ತಿದ್ದ ವಂಚನೆಯೂ ತಪ್ಪಲಿದೆ. ಈ ವ್ಯವಸ್ಥೆಯಿಂದ ರೈತರಿಗೆ ಹೆಚ್ಚಿನ ದರ ಸಿಗುತ್ತದೆ. ತೂಕದಲ್ಲಿ ಕಟಾವು, ಮೋಸ ತಪ್ಪುತ್ತದೆ. ಸಕಾಲದಲ್ಲಿ ರೈತರಿಗೆ ಹಣ ಸಿಗುತ್ತದೆ.
ಮಲ್ಲಿಕಾರ್ಜುನ ಹಾವೇರಿ,
ಎಪಿಎಂಸಿ ಅಧ್ಯಕ್ಷರು, ಹಾವೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.