ವಿಕಲಚೇತನರಿಗೂ ಉದ್ಯೋಗ ಖಾತ್ರಿ
Team Udayavani, Jan 14, 2020, 3:40 PM IST
ಹಾವೇರಿ: ವಿಕಲಚೇತನರೂ ಸಹ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ನಡೆಸಬಹುದಾಗಿದ್ದು ಅವರಿಗಾಗಿಯೇ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ವಿಶೇಷ ನಿಯಮ ರೂಪಿಸಿ ಅವಕಾಶ ಕಲ್ಪಿಸಿದೆ.
ದೇಶದ ಗ್ರಾಮೀಣ ಭಾಗದ ಬಡ ಕುಟುಂಬಗಳ ಜೀವನೋಪಾಯದ ಭದ್ರತೆ ಒದಗಿಸಲು ರೂಪಿಸಲಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರ ಜತೆಗೆ ಸಮಾಜದಲ್ಲಿರುವ ವಿಕಲಚೇತನರು, ಬುಡಕಟ್ಟು ಜನಾಂಗ, ವಿಶೇಷ ಸ್ಥಿತಿಯಲ್ಲಿರುವ ಮಹಿಳೆಯರು, 65 ವರ್ಷ ಮೀರಿದ ಹಿರಿಯ ನಾಗರಿಕರು, ಎಚ್ ಐವಿ ಪೀಡಿತರು, ಆಂತರಿಕವಾಗಿ ಸ್ಥಳಾಂತರಿಸಲ್ಪಟ್ಟ ಜನರು ಸೇರಿದಂತೆ ವಿವಿಧ ದುರ್ಬಲ ಗುಂಪುಗಳಿಗೆ ಸಾಮಾಜಿಕ ಸಂರಕ್ಷಣೆ ಒದಗಿಸಿ ಬದುಕಿನ ಬವಣೆ ನೀಗಿಸಲು ನರೇಗಾದಲ್ಲಿ ಹಲವು ಅವಕಾಶ ಕಲ್ಪಿಸಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ವಿಶೇಷ ಗುಂಪಿನ ವಿಕಲಚೇತನರು ಮತ್ತು 65 ವರ್ಷ ಮೀರಿದಹಿರಿಯ ನಾಗರಿಕರಿಗೆ ಕೆಲಸದ ಪ್ರಮಾಣದಲ್ಲಿ ಶೇ.25 ರಿಯಾಯಿತಿ ನೀಡಲಾಗುತ್ತಿದೆ. ಅದನ್ನು ಇತ್ತೀಚಿಗೆ ಸರದಿ ಗುಂಪುಗಳಿಗೆ ಕೆಲಸದ ಪ್ರಮಾಣದಲ್ಲಿ ಶೇ.50 ರಿಯಾಯಿತಿ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಇದಲ್ಲದೆ ವಿಕಲಚೇತನರಿಗೆ ತಮ್ಮ ನಿವಾಸದಿಂದ ಕಾಮಗಾರಿ ಸ್ಥಳಕ್ಕೆ ಹೋಗಿ ಬರಲು ಕೂಲಿ ದರದಲ್ಲಿ ಶೇ.10 ಪ್ರಮಾಣ ಭತ್ಯೆಯನ್ನಾಗಿ ನೀಡಲಾಗುತ್ತಿದೆ. ಶೇ.40 ವಿಕಲತೆ ಹೊಂದಿದವರಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಅವರಿಗೆ ಉದ್ಯೋಗ ಚೀಟಿಯನ್ನು ಪ್ರತ್ಯೇಕವಾಗಿ ನೀಡಲಾಗುತ್ತಿದೆ. ಒಂದು ಆರ್ಥಿಕ ವರ್ಷಕ್ಕೆ 100 ದಿನಗಳ ಖಾತ್ರಿ ಉದ್ಯೋಗ ಒದಗಿಸಿ ಕೊಡಲಾಗುತ್ತಿದೆ. ವಿಕಲಚೇತನರು ನಿರ್ವಹಿಸ ಬೇಕಾದ ಕೆಲಸದ ಕಾಮಗಾರಿಗಳನ್ನು ಅವರ ಅಂಗವೈಕಲ್ಯದ ವಿವಿಧ ಪ್ರಮಾಣಗಳನ್ನು ಆಧರಿಸಿ ಹಾಗೂ ಹಿರಿಯ ನಾಗರಿಕರ ಶಕ್ತಿ ಸಾಮರ್ಥ್ಯಗಳಿಗೆ ಅನುಗುಣವಾಗಿ ಕಲಸ ನಿರ್ವಹಿಸಬೇಕಾದ ಕುಟುಂಬಗಳನ್ನು ಮಾರ್ಗಸೂಚಿಗಳಲ್ಲಿ ಪ್ರತ್ಯೇಕವಾಗಿ ಗುರುತಿಸಲಾಗಿದೆ.
ವಿಕಲಚೇತನರ ಕೆಲಸಗಳು: ವಿಕಲಚೇತನ ವ್ಯಕ್ತಿಗಳನ್ನು ಕಾರ್ಯ ಕ್ಷೇತ್ರದಲ್ಲಿ ಕಾಯಕ ಬಂಧುವಾಗಿ ವಿಶೇಷ ಆದ್ಯತೆ ನೀಡಲಾಗಿದೆ. ಇತರೆ ಕೆಲಸಗಾರರಿಗೆ ಕುಡಿಯುವ ನೀರು, ಮಹಿಳಾ ಕೆಲಸಗಾರರ ಮಕ್ಕಳಿಗೆ ಲಾಲನೆ ಪಾಲನೆ, ಗಿಡ ನೆಡುವುದು, ಬಾಂಡಲಿಗೆ ಜಲ್ಲಿ, ಮಣ್ಣುತುಂಬುವುದು, ಹೊಸ ಕಟ್ಟಡಗಳಿಗೆ ನೀರು ಹಾಕುವುದು, ಮಣ್ಣು ಸರಿಸುವುದು, ಬಂಡಿಂಗ್‌ಮಾಡುವುದು ಹಾಗೂ ತ್ಯಾಜ್ಯಗಳನ್ನು ಬಾಂಡಲಿಗೆಹಾಕುವುದು ಸೇರಿದಂತೆ ವಿವಿಧ ಚಿಕ್ಕಪುಟ್ಟ ಕೆಲಸಗಳನ್ನು ಅವರಿಗೆ ನೀಡಲಾಗುತ್ತಿದೆ.
ನಿಬಂಧನೆಗಳು: ಇನ್ನು ವಿಕಲಚೇತನರು ಕೆಲಸ ಮಾಡುವಾಗ ಅವರಿಗೆ ಯಾವುದೇಅಡತಡೆ, ನೋವು ಅವಮಾನ ಆಗದಂತಹರೀತಿಯ ವಾತಾವರಣ ಕಲ್ಪಿಸಿ ಕೊಡಲಾಗುತ್ತಿದೆ. ಗುರುತಿಸಲಾದ ಕಾಮಗಾರಿ ಕೆಲಸಗಳಲ್ಲಿ ಸಾಧ್ಯ ವಾದಷ್ಟು ಯೋಜನಾ ಕೆಲಸ ಆಯ್ಕೆಗೆ ಬಳಸಿಕೊಳ್ಳಬೇಕು. ಸಾಧ್ಯವಾದಷ್ಟು ಸ್ಥಳೀಯ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ವೇತನದಲ್ಲಿತಾರತಮ್ಯ ಮಾಡದೇ ವೇತನದ ಸಮಾನತೆ ಕಾಪಾಡಲಾಗುತ್ತಿದೆ.
ದೈಹಿಕ ಅಂಗವಿಕಲತೆ ಹೊಂದಿದ (ಒಂದು ಕಾಲು, ಒಂದು ಕೈಯಿಂದ ಮಾಡಬಹುದಾದ ಕೆಲಸಗಳು, ಎರಡು ಕೈಗಳು ದುರ್ಬಲವಿರುವ ಅಂಗವಿಕಲರು ಮಾಡಬಹುದಾದ ಕೆಲಸಗಳು, ಒಂದು ಕಾಲು ಹಾಗೂ ಎರಡು ಕಾಲು ದುರ್ಬಲ ಇರುವ ಅಂಗವಿಕಲರು ಮಾಡಬೇಕಾದ ಕೆಲಸಗಳು) ಗೂನು ಬೆನ್ನು ಹೊಂದಿದವರು, ಅಂಧರು(ಸಂಪೂರ್ಣ ಕಣ್ಣು ಕಾಣದವರು ಹಾಗೂ ಮಂಜು ಮಂಜಾಗಿ ಕಣ್ಣು ಕಾಣದವರು), ಬುದ್ಧಿಮಾಂದ್ಯರು, ಹಿರಿಯ ನಾಗರಿಕರು ಮಾಡಬಹುದಾದ ಕೆಲಸಗಳನ್ನು ಪಟ್ಟಿ ಮಾಡಿ ಗ್ರಾಮ ಪಂಚಾಯತಿಗಳಿಗೆ ಒದಗಿಸಲಾಗಿದೆ.
ಒಟ್ಟಾರೆ ವಿಕಲಚೇತನರು ಸಹ ಉದ್ಯೋಗ ಖಾತ್ರಿ ಯೋಜನೆಯಡಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಕೆಲಸ ಪಡೆದು ಉದ್ಯೋಗ ಮಾಡುವ ಅವಕಾಶ ಸರ್ಕಾರ ಕಲ್ಪಿಸಿದ್ದು ವಿಕಲಚೇತರು, ಹಿರಿಯ ನಾಗರಿಕರು ಇದರ ಸದುಪಯೋಗ ಪಡೆಯಬೇಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.