ಬ್ಯಾಂಕ್ ಸಿಬ್ಬಂದಿ ಅಸಹಕಾರಕ್ಕೆ ರೈತರ ಆಕ್ರೋಶ
•ಸಬ್ಸಿಡಿ ಹಣ ರೈತರ ಸಾಲದ ಖಾತೆಗೆ ಜಮೆ ಮಾಡುವುದಕ್ಕೆ ವಿರೋಧ •ದೂರುಗಳ ಸುರಿಮಳೆ
Team Udayavani, Jul 2, 2019, 9:09 AM IST
ಹಾನಗಲ್ಲ: ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ನಡೆದ ರೈತರು ಹಾಗೂ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿದರು.
ಹಾನಗಲ್ಲ: ಬ್ಯಾಂಕುಗಳಲ್ಲಿ ರೈತರಿಗಾಗುವ ತೊಂದರೆ, ಸಾಲಮನ್ನಾ ಹಾಗೂ ಅಕ್ಕಿ-ಭತ್ತದ ವ್ಯತ್ಯಾಸದ ಹಣ ರೈತರ ಖಾತೆಗೆ ಜಮೆ ಮಾಡುವ ಕುರಿತು ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಬ್ಯಾಂಕ್ ಅಧಿಕಾರಿಗಳು ಹಾಗೂ ರೈತ ಸಂಘದ ಪದಾಧಿಕಾರಿಗಳ ಸಭೆ ಜರುಗಿತು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಬ್ಯಾಂಕುಗಳಲ್ಲಿ ಸಿಬ್ಬಂದಿ ರೈತರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಿಲ್ಲ. ತಾಲೂಕಿನ ರೈತರಿಗೆ ಅಕ್ಕಿ-ಭತ್ತದ ವ್ಯತ್ಯಾಸದ 18 ಕೋಟಿ ರೂ. ಬಂದು 1 ತಿಂಗಳು ಕಳೆದಿದೆ. ಆದರೆ, ಈ ವರೆಗೂ ರೈತರ ಖಾತೆಗೆ ಜಮೆ ಮಾಡಲಾಗಿಲ್ಲ. ಕೆಲವು ಬ್ಯಾಂಕ್ ಅಧಿಕಾರಿಗಳಿಗೆ ಹಣ ಮಂಜೂರಾಗಿರುವ ಮಾಹಿತಿಯಿಲ್ಲ. ಮುಖ್ಯಮಂತ್ರಿಗಳ ಸಾಲಮನ್ನಾ ಋಣಮುಕ್ತ ಪತ್ರ ಎಲ್ಲ ಸಾಲಗಾರ ರೈತರಿಗೂ ಬಂದಿದೆ. ಆದರೆ, ಸಂಬಂಧಿಸಿದ ಬ್ಯಾಂಕುಗಳಿಗೆ ಮಾಹಿತಿ ನೀಡಲಾಗಿಲ್ಲ. ಇದರಿಂದಾಗಿ ರೈತರು ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಬೆಲೆವಿಮೆ ಪರಿಹಾರದ ಮೊತ್ತ, ಹಾಲಿನ ಸಹಾಯಧನ, ಕಂದಾಯ ಇಲಾಖೆಯಿಂದ ಬರುವ ಸಬ್ಸಿಡಿ ಹಣ ರೈತರ ಸಾಲದ ಖಾತೆಗೆ ಜಮೆ ತೆಗೆದುಕೊಳ್ಳುವುದನ್ನು ಬಿಟ್ಟು ನೇರವಾಗಿ ರೈತರಿಗೆ ಸಿಗುವಂತಾಗಬೇಕು ಎಂಬ ದೂರುಗಳ ಸರಮಾಲೆಯನ್ನೇ ಅಧಿಕಾರಿಗಳೆದುರು ಬಿಚ್ಚಿಟ್ಟರು.
ಇದಕ್ಕೆ ಉತ್ತರಿಸಿದ ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ, ಸಾಲಮನ್ನಾ ಸರ್ಕಾರದ ಮಟ್ಟದಲ್ಲಿ ತೆಗೆದುಕೊಂಡ ನಿರ್ಧಾರ. ನಮಗೆ ಈ ಕುರಿತ ಮಾಹಿತಿಯಿರುವುದಿಲ್ಲ. ಹಣ ಬಂದಾಗ ರೈತರ ಸಾಲದ ಖಾತೆಗೆ ಜಮೆ ಮಾಡುವಂತೆ ವ್ಯವಸ್ಥಾಪಕರಿಗೆ ಸೂಚಿಸಲಾಗುವುದು. ಅಕ್ಕಿ-ಭತ್ತದ ವ್ಯತ್ಯಾಸದ ಹಣವನ್ನು ಕೆಲವು ಬ್ಯಾಂಕುಗಳು ಮುಖ್ಯ ಕಚೇರಿಯಿಂದಲೇ ರೈತರ ಖಾತೆಗೆ ಜಮೆ ಮಾಡುತ್ತವೆ. ಕೆಲವು ಬ್ಯಾಂಕುಗಳು ಈಗಾಗಲೇ ತಮ್ಮ ಶಾಖೆಯಿಂದಲೇ ಜಮೆ ನೀಡುತ್ತವೆ. ಈಗಾಗಲೇ ರೈತರ ಪಟ್ಟಿಯನ್ನು ಆಯಾ ಬ್ಯಾಂಕಿನ ಮುಖ್ಯ ಕಚೇರಿಗಳಿಗೆ ಕಳುಹಿಸಿಕೊಡಲಾಗಿದೆ. ಇನ್ನೆರಡು ದಿನಗಳಲ್ಲಿ ಎಲ್ಲ ರೈತರ ಖಾತೆಗೆ ಜಮೆ ಆಗಲಿದೆ ಎಂದು ಭರವಸೆ ನೀಡಿದರು.
ಗೆಜ್ಜಿಹಳ್ಳಿ ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ಅಕ್ಕಿ-ಭತ್ತದ ವ್ಯತ್ಯಾಸದ ಹಣ 85 ಲಕ್ಷ ರೂ. ಬಂದಿದೆ. ಖಾತೆಗೆ ಹಣ ಹಾಕಲು 10 ದಿನಗಳ ಕಾಲಾವಕಾಶ ನೀಡುವಂತೆ ವ್ಯವಸ್ಥಾಪಕಿ ಬೀಜಿ ಕೇಳಿದಾಗ, ರೈತ ಮುಖಂಡರು ಇದಕ್ಕೊಪ್ಪದೆ 4 ದಿನಗಳಲ್ಲಿ ಹಣ ಖಾತೆಗೆ ಹಾಕುವಂತೆ ಪಟ್ಟುಹಿಡಿದರು. ಗುರುವಾರದೊಳಗಾಗಿ ಹಣ ಜಮೆ ಮಾಡದಿದ್ದರೆ ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ರೈತರು ಎಚ್ಚರಿಕೆ ನೀಡಿದರು.
ಜಿಲ್ಲಾ ಸಂಘದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿ, ರೈತರಿಗೆ ಜಾಮೀನು ನೀಡಿದವರ ಖಾತೆಯಲ್ಲಿರುವ ಹಣವನ್ನು ಜಾಮೀನುದಾರರು ಹಿಂತೆಗೆದುಕೊಳ್ಳಲು ಬ್ಯಾಂಕ್ ಅಧಿಕಾರಿಗಳು ತಡೆಯೊಡ್ಡುತ್ತಿದ್ದಾರೆ. ಜಾಮೀನುದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಆರ್‌ಬಿಐ ಆದೇಶದಂತೆ ಮೂರು ಲಕ್ಷ ರೂ. ಗಳ ವರೆಗೆ ಜಾಮೀನು ರಹಿತ ಸಾಲ ನೀಡಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಎಂ.ಗಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡರಾದ ಮಲ್ಲೇಶಪ್ಪ ಪರಪ್ಪನವರ, ಸೋಮಣ್ಣ ಜಡೆಗೊಂಡರ, ರುದ್ರಪ್ಪ ಹಣ್ಣಿ, ವಾಸುದೇವ ಕಮಾಟಿ, ರಾಜೀವ ದಾನಪ್ಪನವರ, ಶ್ರೀಕಾಂತ ದುಂಡಣ್ಣನವರ, ಅಬ್ದುಲ್ಖಾದರ ಮುಲ್ಲಾ, ಎಂ.ಎಂ.ಬಡಗಿ, ಮಹೇಶ ವಿರುಪಣ್ಣನವರ, ಶ್ರೀಧರ ಮಲಗುಂದ, ಚನ್ನಪ್ಪ ಪಾವಲಿ, ಎಸ್.ಎಸ್.ಇನಾಮದಾರ, ರವಿ ನೆರ್ಕಿಮನಿ, ಅಶೋಕ ಸಂಶಿ, ಪುಟ್ಟಪ್ಪ ಗಂಗೋಜಿ, ಮಲ್ಲನಗೌಡ ಮತ್ತಿಕಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.
ಬ್ಯಾಂಕ್ ಅಧಿಕಾರಿಗಳು ಬೆಳೆವಿಮಾ ಕಂತು ಕಟ್ಟಿಸಿಕೊಳ್ಳುವಲ್ಲಿ ಸಾಲ ಪಡೆಯದವರನ್ನು ವಿವಿಧ ಕಾರಣ ನೀಡಿ ಖಾಸಗಿ ಕೇಂದ್ರಗಳಿಗೆ ಕಳುಹಿಸಬಾರದು. ಖಾಸಗಿಯವರಿಗೆ ಪ್ರತಿದಿನ 2 ಲಕ್ಷ ರೂ. ವ್ಯವಹಾರ ಮಿತಿ ಹೇರಲಾಗಿದೆ. ಇದರಿಂದಾಗಿ ರೈತರು ಈ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಂಗಮೇಶ ಹಕ್ಲಪ್ಪನವರ ವಿವರಿಸಿದರು.
ರೈತರಿಗೆ ಬರುವ ಸಬ್ಸಿಡಿ ಮುಂತಾದ ಪರಿಹಾರದ ಮೊತ್ತವನ್ನು ಸಾಲದ ಖಾತೆಗೆ ತೆಗೆದುಕೊಳ್ಳದೆ ನೇರವಾಗಿ ರೈತರ ಖಾತೆಗೆ ಸಂದಾಯ ಮಾಡಬೇಕು ಹಾಗೂ ರೈತರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.