11ರಿಂದ ಜಾನಪದ ಜಾತ್ರೆ: ಓಲೇಕಾರ
Team Udayavani, Feb 1, 2020, 1:24 PM IST
ಹಾವೇರಿ: ಜಾನಪದ ಕಲೆಗಳಿಗೆ ಉತ್ತೇಜನ ಹಾಗೂ ಜಾನಪದ ಕಲೆಗಳ ರಕ್ಷಣೆ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆ.11ರಿಂದ 13ರ ವರೆಗೆ ಮೂರು ದಿನಗಳ ಕಾಲ “ಜಾನಪದ ಜಾತ್ರೆ’ ಕಾರ್ಯಕ್ರಮ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.
ನಗರದ ಪ್ರವಾಸಿಗೃಹದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ವಿವರಣೆ ನೀಡಿದರು. “ಜಾನಪದ ಜಾತ್ರೆ’ ಕಾರ್ಯಕ್ರಮದಲ್ಲಿ ಜಿಲ್ಲೆಯ ಜಾನಪದ ಕಲಾವಿದರು ಒಳಗೊಂಡಂತೆ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ 250 ರಿಂದ 300 ಜಾನಪದ ಕಲಾತಂಡಗಳು ಭಾಗವಹಿಸಲಿವೆ. 15ರಿಂದ 20 ಪ್ರಕಾರದ ಜಾನಪದ ಕಲಾ ಪ್ರಕಾರ ಈ ಜಾತ್ರೆಯಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.
ಫೆ.11ರಿಂದ 12ರ ವರೆಗೆ ಆಹ್ವಾನಿತ ಜಾನಪದ ಕಲಾತಂಡಗಳ ಪ್ರದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಫೆ. 13ರಂದು ಆಯ್ಕೆಯಾದ ಪ್ರಥಮ ಮತ್ತು ದ್ವಿತೀಯ ತಂಡಗಳ ಕಲಾಪ್ರದರ್ಶನ ಜರುಗಲಿದೆ ಎಂದರು.
ಫೆ.13ರಂದು ಬೆಳಗ್ಗೆ 10ಕ್ಕೆ ಯುವಜನ ಸೇವಾ ಇಲಾಖೆಯಿಂದ ಜಂಗಿ ಕುಸ್ತಿಗಳು ಜರುಗಲಿವೆ. ಮಧ್ಯಾಹ್ನ 3ಕ್ಕೆ ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆಯನ್ನು ನಗರದಲ್ಲಿ ಆಯೋಜಿಸಲಾಗಿದೆ. ಸಂಜೆ 5ಕ್ಕೆ ಜಾನಪದ ಜಾತ್ರೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಹೈಸ್ಕೂಲ್ ಮೈದಾನದಲ್ಲಿ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ವಸ್ತುಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಜಾನಪದ ಭಜನೆ, ಸೋಬಾನೆ ಪದಗಳ ಸ್ಪರ್ಧೆ ಆಯೋಜಿಸಲಾಗಿದ್ದು ಫೆ.11 ಮತ್ತು 12ರಂದು ಎರಡು ದಿನಗಳ ಕಾಲ ಸ್ಪರ್ಧೆಗಳು ನಡೆಯಲಿವೆ. ಪ್ರತಿ ತಂಡದಲ್ಲಿ ಕನಿಷ್ಟ ನಾಲ್ಕರಿಂದ ಐದು ಜನರು ಭಾಗವಹಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ಫೆ. 8 ರೊಳಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಥವಾ ಜಿಲ್ಲಾಕ್ರೀಡಾಂಗಣದಲ್ಲಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಾನಪದ ಜಾತ್ರೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪ ಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಜಾನಪದ ಕಲಾವಿದರಿಗೆ ವಿಶೇಷ ಆದ್ಯತೆ ನೀಡಲಾಗುವುದು. ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ನೀಡಲಾಗುವುದು. ಜನಪದ ಜಾತ್ರೆಯ ಸ್ಪರ್ಧೆಗಳಲ್ಲಿ ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿ ಎಂದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಛಲವಾದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ನಗರಸಭೆ ಸದಸ್ಯರಾದ ಗಿರೀಶ ತುಪ್ಪದ, ಜಗದೀಶ ಮಲಗೌಡ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.