ಗುತ್ತಲ ಬಂದ್‌ಗೆ ಉತ್ತಮ ಪ್ರತಿಕ್ರಿಯೆ
ಅಂಗಡಿ ಮುಂಗಟ್ಟು ಮುಚ್ಚಿ ವ್ಯಾಪಾರಸ್ಥರ ಬೆಂಬಲ
Team Udayavani, May 17, 2022, 3:09 PM IST
ಗುತ್ತಲ: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ 24×7 ಮಾದರಿ ನೀರಿನ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಲ್ಮಠದ ಗುರುಸಿದ್ಧ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರಸ್ಥರು ಬೆಂಬಲ ನೀಡಿದರು. ಬೆಳಗ್ಗೆ ಪಪಂ ಹತ್ತಿರದ ಆಂಜನೇಯ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಯಿತು.
ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ನೆಗಳೂರ ರಸ್ತೆಯಲ್ಲಿನ ಕಿತ್ತೂರು ಚನ್ನಮ್ಮನ ವೃತ್ತದವರೆಗೆ ಪಾದಯಾತ್ರೆ ನಡೆಸಿ ಪುನಃ ಬಸ್ ನಿಲ್ದಾಣ ಬಳಿ ಇರುವ ಶ್ರೀರುದ್ರಮುನಿ ಶಿವಯೋಗೀಶ್ವರ ವೃತ್ತಕ್ಕೆ ಆಗಮಿಸಿತು.
ಪಪಂ ಸದಸ್ಯ ಪ್ರದೀಪ ಸಾಲಗೇರಿ ಮಾತನಾಡಿ, ಹೋರಾಟದಿಂದ ಮಾತ್ರ ಸೌಲಭ್ಯಗಳನ್ನು ಪಡೆಯಬೇಕಾಗಿದೆ. ಜನರು ನಮ್ಮನ್ನು ಚುನಾಯಿಸಿದ್ದಾರೆ. ಸೌಲಭ್ಯಗಳನ್ನು ಕೇಳುವ ಹಕ್ಕು ಅವರದ್ದು. ಎಲ್ಲಿಯವರೆಗೂ ನಾವು ಕೇಳುವುದನ್ನು ಮರೆಯುತ್ತೇವೋ ಅಲ್ಲಿಯವರೆಗೂ ನಮಗೆ ಸೌಲಭ್ಯಗಳು ಸಿಗಲ್ಲ. ಕೇಳುವ ಹಾಗೂ ಪ್ರಶ್ನೆ ಮಾಡುವ ಅನಿವಾರ್ಯತೆ ಇದೆ. ಈಗಾಗಲೇ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಅನುಮೋದನೆಗೆ ಕಳುಹಿಸಲಾಗಿದ್ದು, ಇನ್ನೂವರೆಗೂ ಅದು ಮಂಜೂರಿಯಾಗಿಲ್ಲ. ಅದು ಮಂಜೂರಿಯಾದರೆ ಎಲ್ಲರಿಗೂ ನೀರು ದೊರೆಯುತ್ತದೆ ಎಂದರು.
ಈರಪ್ಪ ಲಮಾಣಿ, ಹಾಲೇಶ ಹಾಲಣ್ಣನವರ, ಶಹಜಾನಸಾಬ ಅಗಡಿ, ಚನ್ನಪ್ಪ ಕಲಾಲ, ವಿರೂಪಾಕ್ಷಪ್ಪ ಶೀತಾಳ ಮಾತನಾಡಿದರು.
ಡಿಸಿ ಆಗಮನಕ್ಕೆ ಪಟ್ಟು: ಸ್ಥಳಕ್ಕೆ ತಹಶೀಲ್ದಾರ್ ಎನ್.ಬಿ ಗೆಜ್ಜಿ ಆಗಮಿಸಿದಾಗ, ನೀವು ಮನವಿ ಪಡೆದು ಹೋಗುವುದು ಬೇಡ. ಜಿಲ್ಲಾಧಿಕಾರಿಗಳೇ ಬರಬೇಕು. ಇಲ್ಲಿಗೆ ಒಮ್ಮೆಯೂ ಅವರು ಬಂದಿಲ್ಲ. ಅವರು ಬರುವವರೆಗೂ ಹೋರಾಟ ಮಾಡುತ್ತೇವೆಂದು ಪಟ್ಟುಹಿಡಿದರು.
ಜಿಲ್ಲಾಧಿಕಾರಿಗೆ ಕಾರ್ಯದೊತ್ತಡ ಹೆಚ್ಚಿದೆ. ಪರಿಷತ್ ಚುನಾವಣಾ ನೀತಿಸಂಹಿತೆ ಸಹ ಜಾರಿಯಲ್ಲಿದೆ. ತಮ್ಮ ಸಮಸ್ಯೆಗೆ ಪರಿಹಾರವನ್ನು ನಾನು ಮಾಡುವುದಾಗಿ ತಹಶೀಲ್ದಾರ್ ಸಮಜಾಯಿಷಿ ನೀಡಿದರೂ ಪ್ರತಿಭಟನಾಕಾರರು ಒಪ್ಪಲಿಲ್ಲ. ಬಳಿಕ ಸ್ಥಳದಿಂದ ತಹಶೀಲ್ದಾರ್ ನಿರ್ಗಮಿಸಿದರು. ನಂತರ ಕೆಲ ಪ್ರಮುಖರು ಹಾಗೂ ಪೊಲೀಸರು ನೀತಿ ಸಂಹಿತೆ ಇರುವ ಕಾರಣಕ್ಕಾಗಿ ತಹಶೀಲ್ದಾರ್ ಆಶ್ವಾಸನೆ ನೀಡಲು ಬರಲ್ಲ ಎಂದಾಗ ಕುಡಿಯುವ ನೀರಿಗೆ ನೀತಿ ಸಂಹಿತೆ ಅಡ್ಡಿ ಬರಲ್ಲ ಎಂದು ಪಟ್ಟು ಹಿಡಿದರು.
ಆಗ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ತುಂಗಭದ್ರಾ ನದಿಯಿಂದ ಮುಖ್ಯಮಂತ್ರಿ ನಿವಾಸದವರೆಗೂ ಪಾದಯಾತ್ರೆ ಹಮ್ಮಿಕೊಳ್ಳೋಣ ಎಂದಾಗ ಜನತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲು ಸಮ್ಮತಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮನವಿ ಸ್ವೀಕರಿಸಿದರು. ಪಪಂ ಅಜ್ಜಯ್ಯ ಬಂಡಿವಡ್ಡರ, ಖಲೀಲಅಹ್ಮದ ಖಾಜಿ, ಬಸಣ್ಣ ನೆಗಳೂರ, ಮಹ್ಮದಹನೀಫ ರಿತ್ತಿ, ಮಾಜಿ ಸದಸ್ಯರಾದ ಲಿಂಗೇಶ ಬೆನ್ನೂರ, ಗುಡ್ಡಪ್ಪ ಗೊರವರ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಚಿಂದಿ, ಶೇಖರ ನರಸಣ್ಣನವರ, ಫಕ್ರುದ್ದಿನ ಅಂಗಡಿಕಾರ, ಹಾಲೇಶಪ್ಪ ಬನ್ನಿಮಟ್ಟಿ, ರಾಜಶೇಖರ ಕೂಡಲಮಠ, ಪ್ರಸನ್ನ ಜಾನ್ಮನೆ, ಪ್ರಕಾಶ ಬಾರ್ಕಿ, ಪ್ರಕಾಶ ಅಂಗಡಿ, ಹನುಮಂತ ಅಗಸಿಬಾಗಿಲದ, ಚಿದಾನಂದ ಕಮ್ಮಾರ, ರಾಜು ಚನ್ನದಾಸರ, ಸಿದ್ದು ಸಾಲಗೇರಿ, ಶಿವಯೋಗಿ ನಾಲತ್ವಾಡ, ಕೆ. ಸಿದ್ದಬಸಪ್ಪಯಾದವ್ ಇನ್ನಿತರರಿದ್ದರು. ಸಿಪಿಐ ಕೆ. ನಾಗಮ್ಮ ಹಾಗೂ ಪಿಎಸ್‌ಐ ಜಿ. ಜಗದೀಶ ಬಂದೋಬಸ್ತ್ ಏರ್ಪಡಿಸಿದ್ದರು. ಪಪಂ ಮುಖ್ಯಾಧಿಕಾರಿ ಶೇಖರಪ್ಪ ಈಳಗೇರ, ಗ್ರಾಮ ಲೆಕ್ಕಿಗ ಪ್ರಕಾಶ ಉಜ್ಜನಿ ಇದ್ದರು.
ಕೇವಲ 3 ಕಿಮೀ ದೂರದ ತುಂಗಭದ್ರಾ ನದಿಯಿಂದ ಸರಿಯಾಗಿ ನೀರನ್ನು ಪಡೆಯಲು ನಮಗೆ ಆಗುತ್ತಿಲ್ಲ ಎಂದರೆ ನೋವಾಗುತ್ತದೆ. 30 ಕಿಮೀ ದೂರದ ಹಾವೇರಿ ನಗರಕ್ಕೆ ನೀರು ಸರಬರಾಜಾಗುತ್ತದೆ. ಆದರೆ ನಮಗೆ ಮಾತ್ರ ಆಗುತ್ತಿಲ್ಲ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ, ಸುಮಾರು ಮೂರು ದಶಕದ ಸಮಸ್ಯೆಯಾಗಿದೆ. ನಮಗೆ ದಿನದ 24 ಗಂಟೆನೂ ನೀರು ದೊರೆಯುವ ಯೋಜನೆ ಅನುಷ್ಠಾನ ಆಗಬೇಕಿದೆ. –ಗುರುಸಿದ್ಧ ಸ್ವಾಮೀಜಿ, ಕಲ್ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.