Team Udayavani, Mar 25, 2019, 5:10 PM IST
ಹಾವೇರಿ: ನಿರೀಕ್ಷೆಯಂತೆ ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಮೂರನೇ ಬಾರಿ ಶಿವಕುಮಾರ ಉದಾಸಿಯವರಿಗೆ ಘೋಷಣೆಯಾಗಿದ್ದು ಪಕ್ಷದ ಅಭ್ಯರ್ಥಿಯೆಂಬ ಅಧಿಕೃತ ಮುದ್ರೆ ಬಿದ್ದಿದೆ.
ಜಿಲ್ಲೆಯಲ್ಲಿ ಬಿಜೆಪಿಯ ಶಿವಕುಮಾರ ಉದಾಸಿ ಹಾಲಿ ಸಂಸದರಾಗಿದ್ದು ಕ್ಷೇತ್ರದಲ್ಲಿ ಅವರನ್ನು ಬಿಟ್ಟರೆ ಬಿಜೆಪಿಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳೂ ಇರಲಿಲ್ಲ. ಸಂಸದ ಶಿವಕುಮಾರ ಉದಾಸಿಯವರಿಗೆ ಟಿಕೆಟ್ ನೀಡುವಲ್ಲಿ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಗೊಂದಲವೂ ಇರಲಿಲ್ಲ. ಶಿವಕುಮಾರ ಉದಾಸಿಯವರ ತಂದೆ ಸಿ.ಎಂ. ಉದಾಸಿ ಬಿಜೆಪಿಯ ಹಿರಿಯ ನಾಯಕರು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರೂ ಆಗಿರುವುದರಿಂದ ಶಿವಕುಮಾರ ಉದಾಸಿಯವರಿಗೆ ಟಿಕೆಟ್ ಪಕ್ಕಾ ಎಂಬುದು ಚುನಾವಣೆ ಘೋಷಣೆಯಾಗುವ ಮೊದಲೇ ಖಚಿತವಾಗಿತ್ತು. ಆದರೂ ಪಕ್ಷದ ಅಧಿಕೃತ ಘೋಷಣೆಗಾಗಿ ಮುಖಂಡರು, ಕಾರ್ಯಕರ್ತರು ಕಾಯುತ್ತಿದ್ದರು. ಇದೀಗ ಪಕ್ಷ ಶಿವಕುಮಾರ ಉದಾಸಿಯವರನ್ನೇ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿರುವುದರಿಂದ ಪ್ರಚಾರಕ್ಕೆ ಇನ್ನಷ್ಟು ಪ್ರೇರಣೆ ಸಿಕ್ಕಂತಾಗಿದೆ.
ಶಿವಕುಮಾರ ಉದಾಸಿಯವರು 2009ರಲ್ಲಿ ಪ್ರಥಮ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಂಸತ್ ಪ್ರವೇಶಿಸಿದರು. 2014ರಲ್ಲಿಯೂ ಸ್ಪರ್ಧಿಸಿ ಎರಡನೇ ಬಾರಿ ವಿಜಯಮಾಲೆ ಧರಿಸಿದರು. ಈ ಎರಡೂ ಚುನಾವಣೆಗಳಲ್ಲಿ ಉದಾಸಿಯವರಿಗೆ ಎದುರಾಳಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಇದ್ದರು. ಈ ಎರಡೂ ಚುನಾವಣೆಗಳಲ್ಲಿ ಶಿವಕುಮಾರ ಉದಾಸಿಯವರು ಸರಾಸರಿ 87 ಸಾವಿರ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಈ ಬಾರಿ ಶಿವಕುಮಾರ ಉದಾಸಿ ಹ್ಯಾಟ್ರಿಕ್ ಜಯ ಸಾಧಿಸುವ ಉಮೇದಿಯಲ್ಲಿದ್ದಾರೆ.
ಬದಲಾಗಲಿರುವ ಎದುರಾಳಿ: ಕಾಂಗ್ರೆಸ್‌ನಲ್ಲಿ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದು ಇನ್ನೂ ಪಕ್ಕಾ ಆಗದೆ ಇರುವುದರಿಂದ ಶಿವಕುಮಾರ ಉದಾಸಿ, ತಮಗೆ ಈ ಬಾರಿ ಎದುರಾಳಿ ಕಾಂಗ್ರೆಸ್‌ನಿಂದ ಯಾರಾಗಬಹುದು ಎಂಬ ಕುತೂಹಲದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಈ ಬಾರಿ ಸಲೀಂ ಅಹ್ಮದ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇಲ್ಲದೇ ಇರುವುದರಿಂದ ಉದಾಸಿಯವರಿಗೆ ಈ ಬಾರಿ ಕಾಂಗ್ರೆಸ್‌ನ ಹೊಸ ಅಭ್ಯರ್ಥಿ ಎದುರಾಳಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಶಾಸಕರ ಬಲ ಹೆಚ್ಚಳ: ಹಾವೇರಿ ಲೋಕಸಭೆ ಕ್ಷೇತ್ರ ಗದಗ ಹಾಗೂ ಹಾವೇರಿ ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿದೆ. ಹಾನಗಲ್ಲ, ಹಾವೇರಿ, ಬ್ಯಾಡಗಿ, ರೋಣ, ಶಿರಹಟ್ಟಿ ಹೀಗೆ ಐದು ಕಡೆ ಬಿಜೆಪಿ ಶಾಸಕರಿದ್ದು ಗದಗ ಹಾಗೂ ಹಿರೇಕೆರೂರ ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ರಾಣಿಬೆನ್ನೂರಿನಲ್ಲಿ ಪಕ್ಷೇತರ ಶಾಸಕ ಆರ್. ಶಂಕರ್ ಇದ್ದು ಅವರು ಈಗಾಗಲೇ ಕಾಂಗ್ರೆಸ್ ಗೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಅವರ ಬೆಂಬಲ ಯಾರಿಗೆ ಎಂಬುದು ಭಾರಿ ಕುತೂಹಲ ಕೆರಳಿಸಿದೆ. ಕಳೆದ ಬಾರಿ ಕ್ಷೇತ್ರದಲ್ಲಿ ಹಿರೇಕೆರೂರು ಹೊರತು ಪಡಿಸಿ (ಹಿರೇಕೆರೂರರಲ್ಲಿ ಬಿಜೆಪಿ ಶಾಸಕರಿದ್ದರು) ಕ್ಷೇತ್ರದ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರು.
ಈ ಬಾರಿ ಜೆಡಿಎಸ್- ಕಾಂಗ್ರೆಸ್ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿರುವುದರಿಂದ ಸಹಜವಾಗಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆಯೇ ನೇರ ಹಣಾಹಣಿ ನಡೆಯಲಿದೆ. ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಈ ಬಾರಿ ಪಕ್ಷದ ಶಾಸಕರ ಸಂಖ್ಯೆ ಹೆಚ್ಚಿರುವುದು ಶಿವಕುಮಾರ ಉದಾಸಿಯವರ ಶಕ್ತಿ ಹೆಚ್ಚಾದಂತಾಗಿದೆ. ಒಟ್ಟಾರೆ ಬಿಜೆಪಿ ಅಭ್ಯರ್ಥಿಯ ಅಧಿಕೃತ ಘೋಷಣೆ ಚುನಾವಣೆ ಕಾರ್ಯಕ್ಕೆ ಬಿರುಸಿನ ಚಾಲನೆ ನೀಡಿದಂತಾಗಿದೆ.
ಪ್ರಚಾರ, ಪ್ರವಾಸ: ಅಭ್ಯರ್ಥಿಯ ಘೋಷಣೆ ಅಧಿಕೃತವಾಗಿ ಹೊರಬೀಳುತ್ತಿದ್ದಂತೆ ಪಕ್ಷದಲ್ಲಿ ಪ್ರಚಾರ ಸಿದ್ಧತೆ ಕಾರ್ಯ ಚುರುಕುಗೊಂಡಿದ್ದು ಶುಕ್ರವಾರ ಚುನಾವಣಾ ನಿರ್ವಹಣಾ ಸಮಿತಿಗಳ ಸಭೆ ನಡೆಸಲಾಯಿತು. ಚುನಾವಣೆಗಾಗಿ ವಿವಿಧ ಸಮಿತಿಗಳನ್ನು ಪಕ್ಷ ರಚಿಸಿದೆ. ಶಾಸಕರು, ಸಂಸದರು ಹಾಗೂ ರಾಜ್ಯ ನಾಯಕರ ಪ್ರವಾಸ ಪಟ್ಟಿ ಸಿದ್ಧಪಡಿಸಿದೆ. ಅಷ್ಟೇ ಅಲ್ಲ ಏ. 4ರಂದು ನಾಮಪತ್ರ ಸಲ್ಲಿಸಲು ಮುಹೂರ್ತವನ್ನೂ ನಿಗದಿಪಡಿಸಿದೆ. ಇತ್ತ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯ ಅಧಿಕೃತ ಘೋಷಣೆಗೆ ದಿನಗಣನೆ ಶುರುವಾಗಿದ್ದು ಅಭ್ಯರ್ಥಿ ಹೆಸರು ಘೋಷಣೆಯಾದ ಬಳಿಕವಷ್ಟೇ ಕಾಂಗ್ರೆಸ್ ನಲ್ಲಿ ಪ್ರಚಾರ ಚುರುಕು ಪಡೆದುಕೊಳ್ಳಲಿದೆ.
ಚುನಾವಣಾ ಪ್ರಚಾರ ಸಾಮಗ್ರಿಗಳು ಕ್ಷೇತ್ರಕ್ಕೆ ಬಂದಿವೆ. ಚುನಾವಣೆಗಾಗಿ ವಿವಿಧ ಸಮಿತಿ ರಚಿಸಲಾಗಿದೆ. ಶಾಸಕರು, ಸಂಸದರ ಪ್ರವಾಸ ಪಟ್ಟಿ ಸಿದ್ಧವಾಗಿದೆ. ರಾಜ್ಯ ನಾಯಕರ ಪ್ರವಾಸ ಪಟ್ಟಿ ರಾಜ್ಯ ಮಟ್ಟದಲ್ಲಿ ಸಿದ್ಧವಾಗಿದ್ದು ಕ್ಷೇತ್ರದಲ್ಲಿ ಸಿದ್ಧತೆ ನಡೆದಿದೆ. ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹೀಗೆ ವಿವಿಧ ಘಟಕಗಳ ಸಮಾವೇಶ ನಡೆಸಲು ಸಹ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು, ಚುನಾವಣಾ ಪ್ರಕ್ರಿಯೆ ಚುರುಕಾಗಿ ನಡೆಯುತ್ತಿದೆ.
ಶಿವರಾಜ ಸಜ್ಜನರ,
ಬಿಜೆಪಿ ಜಿಲ್ಲಾಧ್ಯಕ್ಷರು.
ಎಚ್.ಕೆ. ನಟರಾಜ