ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
ಕಿಟಕಿಗೆ ಅಳವಡಿಸಲಾದ ಒಂದು ಗ್ಲಾಸ್ ಕೂಡ ಒಡೆದಿದೆ...
Team Udayavani, Dec 18, 2024, 4:44 PM IST
ಉದಯವಾಣಿ ಸಮಾಚಾರ
ಹಾವೇರಿ: ಕಟ್ಟಡದ ಸುತ್ತಮುತ್ತ ಬೆಳೆದಿರುವ ಗಿಡಗಂಟಿ, ಎಲ್ಲೆಂದರಲ್ಲಿ ಬಿದ್ದಿರುವ ತ್ಯಾಜ್ಯ, ಮಾಸುತ್ತಿರುವ ಕಟ್ಟಡದ ಬಣ್ಣ ಇದು ನಗರದಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್ ರಂಗಮಂದಿರಕ್ಕೆ ಎದುರಾಗಿರುವ ದುಸ್ಥಿತಿ.
ಹೌದು, ನಗರದ ಹೃದಯ ಭಾಗದಲ್ಲಿರುವ ಗೂಗಿಕಟ್ಟಿ ಬಳಿ ವಿಶಾಲವಾದ ಜಾಗೆಯಲ್ಲಿ ನಿರ್ಮಿಸಿರುವ ಸುಸಜ್ಜಿತ ಹೈಟೆಕ್ ರಂಗಮಂದಿರ ನಗರಸಭೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ.
ಸಾರ್ವಜನಿಕ ಸಭೆ ಸಮಾರಂಭ: ಮದುವೆ, ರಾಜಕೀಯ ಸಮಾವೇಶ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು, ಗಣ್ಯರ ಜಯಂತ್ಯುತ್ಸವ ಹೀಗೆ ಅನೇಕ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಾಯವಾಗಲಿ ಎಂಬ ಉದ್ದೇಶದಿಂದ ಪೌರಾಡಳಿತ ಇಲಾಖೆಯು ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದೊಂದಿಗೆ ಎರಡ್ಮೂರು ವರ್ಷಗಳ
ಹಿಂದೆಯೇ ಹೈಟೆಕ್ ರಂಗಮಂದಿರ ನಿರ್ಮಿಸಿ ಉದ್ಘಾಟನೆಯನ್ನೂ ಮಾಡಲಾಗಿದೆ.
ಆದರೆ ಕಟ್ಟಡದ ನಿರ್ವಹಣೆ ಮಾಡಲು ಟೆಂಡರ್ ನೀಡುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದಿಂದ ಇಲ್ಲಿವರೆಗೂ ಯಾವುದೇ ಸಭೆ-ಸಮಾರಂಭ, ಸಮಾವೇಶವನ್ನು ನಡೆಸಲು ಸಾಧ್ಯವಾಗದೇ ಸದುಪಯೋಗವಾಗುತ್ತಿಲ್ಲ. ಬದಲಾಗಿ ಅಕ್ರಮ
ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕಸ ತ್ಯಾಜ್ಯ, ಗಿಡಗಂಟಿಗಳು ಬೆಳೆದು ಭವ್ಯ ಕಟ್ಟಡದ ಸೌಂದರ್ಯಕ್ಕೆ ಧಕ್ಕೆಯುಂಟಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಶೀಘ್ರ ಸಾರ್ವಜನಿಕರಿಗೆ ಸಭೆ ಸಮಾರಂಭದಂತಹ
ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಕ್ರಮ ಚಟುವಟಿಕೆಗಳ ತಾಣ: ಹೈಟೆಕ್ ರಂಗಮಂದಿರ ಸಾರ್ವಜನಿಕರಿಗೆ ಉಪಯೋಗವಾಗದ ಹಿನ್ನೆಲೆ ನಗರಸಭೆಯ ಗೋಡೌನ್ ಆಗಿ ಮಾರ್ಪಟ್ಟಿದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಗರದ ನಿವಾಸಿಗಳಿಗೆ ವಿತರಿಸಿ ಉಳಿದ ಬಕೆಟ್ ಸೇರಿ ಇನ್ನಿತರ ಸಾಮಗ್ರಿ ಇಡಲಾಗಿದೆ. ಗಿಡಗಂಟಿಗಳು ಬೆಳೆದುಕೊಂಡು ಸ್ವಚ್ಛತೆ ಮರೀಚಿಕೆಯಾಗಿದೆ. ಕಟ್ಟಡದ ಆವರಣ ಅಕ್ರಮ ಚಟುವಟಿಕೆಗಳ ತಾಣವಾಗಿದೆ.ಕಿಟಕಿಗೆ ಅಳವಡಿಸಲಾದ ಒಂದು ಗ್ಲಾಸ್ ಕೂಡ ಒಡೆದಿದ್ದು, ಬಣ್ಣ ಮಾಸಿ ಸೌಂದರ್ಯಕ್ಕೆ ಧಕ್ಕೆಯುಂಟಾಗಿದೆ.
ಬಿಡ್ ಮಾಡ್ತಿಲ್ಲ: ಮಾರ್ಗಸೂಚಿಯನ್ವಯ ಹೈಟೆಕ್ ರಂಗಮಂದಿರ ಬಾಡಿಗೆ ರೂಪದಲ್ಲಿ ಹಸ್ತಾಂತರಿಸಲು ಸಾರ್ವಜನಿಕ ಗುತ್ತಿಗೆದಾರರಿಂದ ನಾಲ್ಕು ಬಾರಿ ಟೆಂಡರ್ ಕರೆದಿದ್ದೇವೆ. ಬಾಡಿಗೆ ಹೆಚ್ಚಾಗುತ್ತೋ ಅಥವಾ ಏನಾದರೂ ಸಮಸ್ಯೆಯಾಗುತ್ತೋ ಗೊತ್ತಿಲ್ಲ. ಆದರೂ ಇದುವರೆಗೆ ಯಾರೂ ಬಿಡ್ ಮಾಡುತ್ತಿಲ್ಲ. ಇದರಿಂದ ಟೆಂಡರ್‌ದಾರರಿಗೆ ರಂಗಮಂದಿರ ಹಸ್ತಾಂತರಿಸಲು ಸಮಸ್ಯೆಯಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ನಿರ್ಮಿಸಿರುವ ಹೈಟೆಕ್ ರಂಗಮಂದಿರ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಐದು ಬಾರಿ ಟೆಂಡರ್ ಕರೆದರೂ
ಒಬ್ಬರೇ ಅರ್ಜಿ ಹಾಕಿದ್ದಾರೆ. ಅವರು ಐದು ವರ್ಷಕ್ಕೆ ಕರಾರು ಒಪ್ಪಂದ ಕೇಳುತ್ತಿದ್ದಾರೆ. ಈ ಕುರಿತು ಶೀಘ್ರದಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು.
*ರುದ್ರಪ್ಪ ಲಮಾಣಿ, ಶಾಸಕ, ವಿಧಾನಸಭೆ ಉಪಸಭಾಧ್ಯಕ್ಷರು
ನಗರದಲ್ಲಿ ಹೈಟೆಕ್ ರಂಗಮಂದಿರ ಹೆಸರಿಗೆ ಮಾತ್ರ ಇದ್ದು, ಯಾವುದೇ ಸಾರ್ವಜನಿಕ ಸಭೆ, ಸಮಾರಂಭಗಳು ನಡೆಯುತ್ತಿಲ್ಲ. ಕಟ್ಟಡ ಸಾರ್ವಜನಿಕರ ಉಪಯೋಗಕ್ಕಿಲ್ಲದೇ ಧೂಳು ತಿನ್ನುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಿಕೊಡಬೇಕು.
*ವೀರೇಶ ಹತ್ತಿಮತ್ತೂರ, ಹಾವೇರಿ
ರಂಗಮಂದಿರದಲ್ಲಿರುವ ಸೌಲಭ್ಯ
ಹೈಟೆಕ್ ರಂಗಮಂದಿರ ಸುಸಜ್ಜಿತ ಜಿ-ಪ್ಲಸ್1 ಮಾದರಿ ಕಟ್ಟಡ ಒಳಗೊಂಡಿದೆ. ವಿಶಾಲವಾದ ಫಂಕ್ಷನ್ ಹಾಲ್, ಊಟದ ಹಾಲ್ ಇದೆ. ಕಾರ್ಯಕ್ರಮ ಆಯೋಜನೆಗೆ ಉತ್ತಮ ವೇದಿಕೆ ಸೌಲಭ್ಯ ಇದ್ದು, ಅಡುಗೆ ಹಾಲ್ ಇದೆ. ಪ್ರತ್ಯೇಕವಾಗಿ ಡ್ರೆಸ್ಸಿಂಗ್ ರೂಮ್‌ಗಳು ಇವೆ. 6-7 ಕೊಠಡಿಗಳಿವೆ. ಜತೆಗೆ ಶೌಚಾಲಯ, ಕುಡಿಯುವ ನೀರು, ಉತ್ತಮ ಬೆಳಕಿನ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳು ಇವೆ. ಆದರೆ ಈ ಎಲ್ಲ ಸೌಲಭ್ಯಗಳಿದ್ದರೂ ಸಾರ್ವಜನಿಕರಿಗೆ
ಸದ್ಬಳಕೆಯಾಗದೇ ಹಾಳಾಗುತ್ತಿವೆ.
ಸಾಮಾನ್ಯ ಸಭೆಯಲ್ಲೂ ಚರ್ಚೆ
ಇತ್ತೀಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪಾಳು ಬಿದ್ದಿರುವ ರಂಗಮಂದಿರದ ಬಗ್ಗೆ ಸದಸ್ಯ ಬಸವರಾಜ ಬೆಳವಡಿ ಗಮನ ಸೆಳೆದರು. ಸುಮಾರು 8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ನಿರ್ವಹಣೆ ಇಲ್ಲದೇ 3 ವರ್ಷದಿಂದ ಖಾಲಿ ಬಿದ್ದಿದೆ. ಅಲ್ಲಿ ಯಾರೊ ಶೆಡ್ ಹಾಕಿಕೊಂಡಿದ್ದಾರೆ. ಕೂಡಲೇ ಈ ಶೇಡ್ ತೆರವುಗೊಳಿಸಿ, ರಂಗ ಮಂದಿರ ಬಾಡಿಗೆಗೆ ಕೊಡಿ ಒಂದು ಒತ್ತಾಯಿಸಿದ್ದಾರೆ.
■ ವೀರೇಶ ಮಡ್ಲೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ
Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ
Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್ ಜಾರಕಿಹೊಳಿ
ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.