Haveri: ಕೈಕೊಟ್ಟ ಮಳೆ- ಹಿಂಗಾರು ಬಿತ್ತನೆಗೆ ಹಿನ್ನಡೆ
ರೈತರು ಔಷಧಿ ಸಿಂಪಡಣೆ ಮಾಡುವ ಮೂಲಕ ಲದ್ದಿಹುಳು ಬಾಧೆ ರೋಗವನ್ನು ನಿಯಂತ್ರಿಸಬಹುದು.
Team Udayavani, Nov 21, 2023, 6:13 PM IST
ಹಾವೇರಿ: ಹಿಂಗಾರು ಆರಂಭಗೊಂಡು ಒಂದು ತಿಂಗಳು ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದಿರುವ ಹಿನ್ನೆಲೆಯಲ್ಲಿ
ಹಿಂಗಾರು ಬಿತ್ತನೆಗೆ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಶೇ.28ರಷ್ಟು ಮಾತ್ರ ಬಿತ್ತನೆಯಾಗಿದ್ದು, ಮಳೆಗಾಗಿ ಅನ್ನದಾತ ಮುಗಿಲ ಕಡೆ ಮುಖ ಮಾಡುವಂತಾಗಿದೆ.
ಮುಂಗಾರು ವೈಫಲ್ಯದಿಂದ ಬರ ಪರಿಸ್ಥಿತಿ ಎದುರಿಸುತ್ತಿರುವ ಅನ್ನದಾತರಿಗೆ ಹಿಂಗಾರು ಮಳೆಯೂ ಕೈಕೊಟ್ಟಿದೆ. ಜಿಲ್ಲೆಯಲ್ಲಿ ನವೆಂಬರ್ ಮೊದಲ ವಾರ ಆಗಾಗ ಸುರಿದ ಮಳೆಗೆ ಜಿಲ್ಲೆಯ ಕೆಲ ರೈತರು ತಕ್ಕಮಟ್ಟಿಗೆ ಜೋಳ, ಮೆಕ್ಕೆಜೋಳ ಸೇರಿದಂತೆ ಇತರೆ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ.
ಅವು ಈಗ ಮೊಳಕೆ ಒಡೆಯುತ್ತಿವೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಕಟಾವು ಮಾಡಿ ಈದೀಗ ಬಿತ್ತನೆ ಮಾಡಲು ಭೂಮಿ ಹದಗೊಳಿಸಿರುವ ರೈತರಿಗೆ ಬಿತ್ತನೆಗೆ ಹದ ಇಲ್ಲದಂತಾಗಿದೆ. ಮೊಳಕೆ ಒಡೆದಿರುವ ಬೀಜಗಳಿಗೂ ಮಳೆ ಈಗ ಅವಶ್ಯವಾಗಿದೆ. ಹೀಗೆ ಮಳೆ ಹೋದರೆ ಹಿಂಗಾರಿನಲ್ಲಿ ಬಿತ್ತನೆ ಮಾಡಿರುವ ಬೀಜಗಳು ಮಣ್ಣು ಪಾಲಾಗುವ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಶೇ.28ರಷ್ಟು ಬಿತ್ತನೆ: ಹಿಂಗಾರು ಹಂಗಾಮಿನಲ್ಲಿ ಒಟ್ಟಾರೆ 1.11 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ನವೆಂಬರ್ ಮೂರನೇ ವಾರದವರೆಗೆ ಕೇವಲ 31,515 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬಿತ್ತನೆ ಗುರಿ ಹೊಂದಿದ್ದು, ಇವರೆಗೆ ಕೇವಲ 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ಇದರ ಜೊತೆಗೆ 6700 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. 2691 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ, 1044 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದಿ, 368 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 371 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಮಳೆ ಬಾರದೆ ಕೈಕೊಟ್ಟಿದ್ದರಿಂದ ಬಿತ್ತನೆ ಪ್ರಮಾಣ ಕುಂಠಿತಗೊಂಡಿದೆ. ಅಲ್ಲದೇ ಬಿತ್ತನೆ ಮಾಡಿದ ಬಹುತೇಕ ಬೆಳೆಗಳು ಸಹ ನಾಶಗೊಳ್ಳುತ್ತಿವೆ. ಮುಂಗಾರು ಹಂಗಾಮಿನಲ್ಲಿ ಎದುರಾಗಿದ್ದ ಸ್ಥಿತಿಯೇ ಹಿಂಗಾರು ಹಂಗಾಮಿನಲ್ಲಿಯೂ ಎದುರಾಗಿದ್ದು ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿರುವುದನ್ನು ನೋಡಿ ರೈತರು ಕಣ್ಣೀರಿಡುತ್ತಿದ್ದಾರೆ.
ನೀರಾವರಿ ಆಶ್ರಿತ ಪ್ರದೇಶದಲ್ಲೂ ಬಿತ್ತನೆಗೆ ಹಿಂದೇಟು: ನೀರಾವರಿ ಸೌಲಭ್ಯ ಹೊಂದಿರುವ ರೈತರು ಹಿಂಗಾರಿನಲ್ಲಿ ಬಿತ್ತನೆ ಮಾಡಲು ಸಾಕಷ್ಟು ಯೋಚನೆ ಮಾಡುತ್ತಿದ್ದಾರೆ. ಒಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದ್ದರೆ, ಮತ್ತೂಂದೆಡೆ ಕೊಳವೆಬಾವಿಗಳಲ್ಲಿ ಈಗಲೇ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆಲ ಬೋರ್‌ಗಳು ಈಗಾಗಲೇ ಬತ್ತಿ ಹೋಗಿದ್ದರೆ, ಕೆಲ ಬೋರ್‌ಗಳಲ್ಲಿ ಸಣ್ಣಗೆ ನೀರು ಬರುತ್ತಿವೆ. ಹೀಗಾಗಿ ನೀರಾವರಿ ಸೌಲಭ್ಯ ಇರುವ ರೈತರು ಬಿತ್ತನೆಗೆ ಹಿಂದೇಟು ಹಾಕುವಂತಾಗಿದೆ.
ರೈತರಲ್ಲಿ ಆತಂಕದ ಕಾರ್ಮೋಡ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದ ರೈತರಿಗೆ ಬೆಂಬಿಡದೇ ಕಾಡಿದ್ದ ಲದ್ದಿ (ಸೈನಿಕ)ಹುಳು, ಇದೀಗ ಅಲ್ಲಲ್ಲಿ ಬಿತ್ತನೆ ಮಾಡಿರುವ ಹಿಂಗಾರು ಹಂಗಾಮಿನ ಬೆಳೆಗಳಲ್ಲೂ ಕಾಣಿಸಿಕೊಳ್ಳಲಾರಂಭಿಸಿದೆ. ಜಿಲ್ಲಾದ್ಯಂತ ಹಿಂಗಾರು ನೀರಾವರಿಯನ್ನಾಧರಿಸಿ ಬಿತ್ತನೆ ಮಾಡಿದ ಮೆಕ್ಕೆಜೋಳ ಸಸಿಯಾಗಿ ಸಾಲು ಮಾಡುವಷ್ಟರಲ್ಲಿಯೇ ಸೈನಿಕ ಹುಳು ಹಾಗೂ ಹಳದಿರೋಗ ಕಾಣಿಸಿಕೊಳ್ಳಲಾರಂಭಿಸಿದ್ದು, ರೈತರಲ್ಲಿ ಮತ್ತೆ ಆತಂಕ ಮೂಡಿಸಿದೆ. ಈ ಸೈನಿಕ ಹುಳು ಕೀಟವು ಬೆಳೆಗೆ ತುಂಬಾ ಅಪಾಯಕಾರಿಯಾಗಿದ್ದು, ಮೆಕ್ಕೆಜೋಳ ಬೆಳೆಯುವ ಮೊದಲೇ ಸಂಪೂರ್ಣವಾಗಿ ನಾಶ
ಮಾಡುತ್ತದೆ. ಅಲ್ಲದೇ ಹಳದಿ ರೋಗ ಕೂಡ ಬೆಳೆದ ಬೆಳೆಗಳಿಗೆ ಆವರಿಸುತ್ತಿದ್ದು, ರೈತರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.
ಬರ ಪರಿಹಾರದ ನಿರೀಕ್ಷೆಯಲ್ಲಿ ಅನ್ನದಾನ
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಸಾವಿರಾರು ಖರ್ಚು ಮಾಡಿ ಬಿತ್ತನೆಗೈದಿದ್ದ ಜಿಲ್ಲೆಯ ಅನ್ನದಾತರು ಸಕಾಲಕ್ಕೆ ಮಳೆಯಾಗದೇ ಕೈಕೊಟ್ಟಿದ್ದರಿಂದ ಬರಗಾಲ ಪರಿಸ್ಥಿತಿ ಎದುರಾಗಿದೆ. ಸರಕಾರ ಸಹ ಸಂಪೂರ್ಣ ಜಿಲ್ಲೆಯನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ್ದರೂ ಕೂಡ ಇದುವರೆಗೂ ಅನ್ನದಾತರಿಗೆ ಬರ ಪರಿಹಾರ ಮಾತ್ರ ಬಂದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ರೈತ ಸಂಘಟನೆಗಳು ಬರ ಪರಿಹಾರ ಬಿಡುಗಡೆಗೊಳಿಸುವಂತೆ ಹೋರಾಟಕ್ಕೆ ಮುಂದಾಗುತ್ತಿವೆ.
ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಸುಮಾರು 1ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಾಗಿದೆ. ಮಳೆ ಕೊರತೆಯಿಂದಾಗಿ ಈವರೆಗೆ ಕೇವಲ ಶೇ. 28ರಷ್ಟು ಬಿತ್ತನೆಯಾಗಿದೆ. ನೀರಾವರಿ ಸೌಲಭ್ಯ ಹೊಂದಿರುವ ರೈತರು ಬಿತ್ತನೆ ಕಾರ್ಯ ನಡೆಸುತ್ತಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆಗೆ ಅವಶ್ಯವಿರುವ ಬೀಜ ದಾಸ್ತಾನಿದೆ. ಕೆಲ ಭಾಗದಲ್ಲಿ ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳುಬಾಧೆ ಕಂಡು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಕೃಷಿ ಇಲಾಖೆ ವತಿಯಿಂದ ಎಲ್ಲ ಆರ್‌ಎಸ್ ಕೆಗಳಿಗೆ ಔಷಧಿಗಳನ್ನು ಪೂರೈಸಿದ್ದೇವೆ. ರೈತರು ಔಷಧಿ ಸಿಂಪಡಣೆ ಮಾಡುವ ಮೂಲಕ ಲದ್ದಿಹುಳು ಬಾಧೆ ರೋಗವನ್ನು ನಿಯಂತ್ರಿಸಬಹುದು.
*ಮಂಜುನಾಥ ಅಂತರವಳ್ಳಿ,
ಜಂಟಿ ಕೃಷಿ ನಿರ್ದೇಶಕರು, ಹಾವೇರಿ
ಹಿಂಗಾರು ಹಂಗಾಮಿನಲ್ಲಿ ಕೂಡ ನಿರೀಕ್ಷಿತಮಟ್ಟದಲ್ಲಿ ಮಳೆ ಬಾರದೇ ಕೈಕೊಟ್ಟಿದೆ. ಸಾಲಶೂಲ ಮಾಡಿ ಬಿತ್ತನೆ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದ್ದೇವೆ. ಆದರೆ ಇದೀಗ ಗೋವಿನಜೋಳಕ್ಕೆ ಸೈನಿಕ ಹುಳು ಬಾಧೆ ಹಾಗೂ ಹಳದಿ ರೋಗ ಕಂಡುಬಂದಿದೆ. ಇದರ ನಿಯಂತ್ರಣಕ್ಕೆ ಆರ್ ಎಸ್‌ಕೆಯಲ್ಲಿ ಔಷಧಿ ತಂದು ಸಿಂಪಡಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಳೆ ರಕ್ಷಣೆಗಾಗಿ ಏನು ಮಾಡಬೇಕೆಂಬುದೇ ದಿಕ್ಕು ತೋಚದಂತಾಗಿದೆ.
ಶಿವಪ್ಪ ಅರಳಿ, ರೈತ
*ವೀರೇಶ ಮಡ್ಲೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್-ಸವಾಲಾದ ಶುದ್ಧ ನೀರು ಪೂರೈಕೆ…
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ
Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.