ಎಪಿಎಂಸಿ ಆದಾಯಕ್ಕೆ ಅಡ್ಡಿ
Team Udayavani, Feb 26, 2021, 4:12 PM IST
ಹಾವೇರಿ: ಮೆಕ್ಕೆಜೋಳ, ಹತ್ತಿ ಖರೀದಿಗೆ ಹೆಸರಾಗಿದ್ದ ಜಿಲ್ಲೆಯ ಹಾವೇರಿ ಹಾಗೂ ರಾಣೆಬೆನ್ನೂರು ಮಾರುಕಟ್ಟೆಗಳ ಆದಾಯಕ್ಕೆ ಈಗ ಖಾಸಗೀಕರಣ ಹಾಗೂ ಶುಲ್ಕ ಇಳಿಕೆಯಿಂದ ದೊಡ್ಡ ಪೆಟ್ಟು ಬಿದ್ದಿದೆ. ಆಡಳಿತ ಮಂಡಳಿಗೆ ನಿರ್ವಹಣೆ ತಲೆನೋವಾಗಿ ಪರಿಣಮಿಸಿದೆ.
ಸರ್ಕಾರ ಕಳೆದ ವರ್ಷ ಮೇ ತಿಂಗಳಲ್ಲಿ ಎಪಿಎಂಸಿ ಖಾಸಗೀಕರಣ ಮಸೂದೆ ಜಾರಿಗೊಳಿಸಿತ್ತು. ಅದರ ಬೆನ್ನಲ್ಲೇ ಮಾರುಕಟ್ಟೆ ಶುಲ್ಕ 35 ಪೈಸೆಗೆ ಇಳಿಕೆ ಮಾಡಿತು. ಈ ಎರಡೂ ಕಾರಣಗಳಿಂದ ಎಪಿಎಂಸಿ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಪೆಟ್ಟು ಬಿದ್ದಂತಾಗಿದೆ. ರಾಣೆಬೆನ್ನೂರಿನ ಎಪಿಎಂಸಿ ಮಾರುಕಟ್ಟೆ ಕಳೆದ ವರ್ಷ ಸುಮಾರು 8.50 ಕೋಟಿ ಆದಾಯ ಕಂಡಿದ್ದರೆ, ಈ ಸಾಲಿನಲ್ಲಿ ಈವರೆಗೆ ಕೇವಲ 1.50 ಕೋಟಿ ಸಂಗ್ರಹಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಶೇ.70 ಆದಾಯ ಕುಸಿತ: ಎಪಿಎಂಸಿ ಅಧಿಕಾರಿಗಳ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ ಶೇ.65-70 ಆದಾಯ ಕುಸಿತ ಕಂಡಿದೆ. ರೈತರ ಉತ್ಪನ್ನಗಳ ಮೇಲೆ ಮಾರುಕಟ್ಟೆ ಶುಲ್ಕ ವಿ ಧಿಸಿ ಅದರಿಂದ ಬರುತ್ತಿದ್ದ ಆದಾಯದಲ್ಲಿಯೇ ಎಪಿಎಂಸಿ ನಿರ್ವಹಣೆ ಮಾಡಬೇಕಿತ್ತು. ಆದರೆ ಈಗ ಖಾಸಗೀರಕಣಗೊಂಡಿದ್ದರಿಂದ ರೈತರು ತಮ್ಮ ಉತ್ಪನ್ನವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾಗಿದೆ. ವರ್ತಕರು ಎಪಿಎಂಸಿಗೆ ಯಾವುದೇ ಶುಲ್ಕ ಕಟ್ಟಬೇಕಿಲ್ಲ. ಜಿಲ್ಲೆಯ ಎಪಿಎಂಸಿಗಳಿಗೆ ಶೇ.60 ಗೋವಿನಜೋಳ, ಶೇ.30 ಹತ್ತಿ ಹಾಗೂ ಶೇ.10 ಇತರೆ ಉತ್ಪನ್ನಗಳಿಂದ ಆದಾಯ ಬರುತ್ತಿತ್ತು. ಈಗ ಮೆಕ್ಕೆಜೋಳ, ಹತ್ತಿ ಸೇರಿದಂತೆ ಪ್ರಮುಖ ಉತ್ಪನ್ನಗಳು ಎಪಿಎಂಸಿ ಹೊರಗಡೆಯೇ ಖರೀದಿಯಾಗುತ್ತಿವೆ.
ನೇರವಾಗಿ ರೈತರಿಂದಲೇ ವ್ಯಾಪಾರಸ್ಥರು, ಮಿಲ್ಲರ್ಗಳು ಖರೀದಿಸುತ್ತಿರುವ ಕಾರಣ ಎಪಿಎಂಸಿಗೆ ಆದಾಯವೇ ಇಲ್ಲದಂತಾಗಿದೆ. ಹಾವೇರಿಯ ಎಪಿಎಂಸಿಗೆ ಪ್ರತಿವರ್ಷ 3.50 ಕೋಟಿ ಆದಾಯ ಬರುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಈವರೆಗೆ 86ಲಕ್ಷ ರೂ.ಆದಾಯ ಸಂಗ್ರಹವಾಗಿದೆ. ಇನ್ನು ಜಿಲ್ಲೆಯ ಹಾನಗಲ್ಲ, ಹಿರೇಕೆರೂರು, ಶಿಗ್ಗಾವಿ ಹಾಗೂ ಸವಣೂರು ಎಪಿಎಂಸಿಗಳಲ್ಲಿ 50 ಸಾವಿರ ರೂ. ಆದಾಯ ಸಂಗ್ರಹವಾಗುವುದೇ ಕಷ್ಟಕರವಾಗಿದೆ.
ನಿರ್ವಹಣೆಯ ಸವಾಲು: ಎಪಿಎಂಸಿ ಖಾಸಗೀಕರಣಗೊಂಡಿದ್ದರಿಂದ ಎಪಿಎಂಸಿ ಹೊರಗಡೆ ವಹಿವಾಟು ನಡೆಸಿದರೆ ಶುಲ್ಕ ಕಟ್ಟುವಂತಿಲ್ಲ. ಹೀಗಾಗಿ, ವರ್ತಕರು ಎಪಿಎಂಸಿ ಆವರಣದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದ್ದರೂ ಎಪಿಎಂಸಿ ಹೊರಗಡೆಯೇ ವಹಿವಾಟು ನಡೆಸುತ್ತಿದ್ದಾರೆ. ಅಲ್ಲದೇ ಮಿಲ್ಲರ್ಗಳು ನೇರವಾಗಿ ರೈತರಿಂದ ಉತ್ಪನ್ನ ಖರೀದಿಸುತ್ತಿದ್ದರಿಂದ ರೈತರು ಎಪಿಎಂಸಿಯತ್ತ ಸುಳಿಯುತ್ತಿಲ್ಲ. ಇದರಿಂದ ಎಪಿಎಂಸಿ ಆದಾಯ ತಗ್ಗಿದ್ದು, ಸಿಬ್ಬಂದಿ ವೇತನ, ಕರೆಂಟ್ ಬಿಲ್ ಸೇರಿದಂತೆ ಕಚೇರಿ ನಿರ್ವಹಣೆಗೆ ಪರದಾಡುವಂತಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.