![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 12, 2022, 1:13 PM IST
ಹಾವೇರಿ: ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ಆರಂಭಿಸಿದೆ. ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಲ್‌ಗೆ 3,377 ರೂ.ನಂತೆ ಖರೀದಿ ಮಾಡಲಾಗುತ್ತದೆ. ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಶಾಸಕ ನೆಹರು ಓಲೇಕಾರ ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬುಧವಾರ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ರಾಗಿ 2100 ರೂ.ನಂತೆ ಖರೀದಿಯಾಗುತ್ತಿದೆ. ರಾಗಿ ಬೆಳೆಗಾರರಿಗೆ ನೆರವು ನೀಡಲು ಸರ್ಕಾರ ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಲ್‌ಗೆ 3,377 ರೂ.ನಂತೆ ಖರೀದಿ ಮಾಡುತ್ತದೆ. ಪ್ರತಿ ರೈತನಿಂದ ಗರಿಷ್ಠ 20 ಕ್ವಿಂಟಲ್ ರಾಗಿ ಖರೀದಿಸಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಕಳೆದ ಸಾಲಿನಲ್ಲಿ ಅಂದಾಜು 2.10 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ರೈತರಿಂದ ನೇರವಾಗಿ ಖರೀದಿಸಲು ಸರ್ಕಾರ ಅನುಮತಿ ನೀಡಿತ್ತು. ಈ ವರ್ಷ 3.14 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಉದ್ದೇಶಿಸಿದೆ ಎಂದರು.
ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ದೊರೆತಲ್ಲಿ ರೈತರು ಸುಗಮವಾಗಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಕಾಡುಪ್ರಾಣಿ, ಕೀಟಬಾಧೆ ಹಾಗೂ ಕೂಲಿಕಾರರ ಸಮಸ್ಯೆಯಿಂದಾಗಿ ಇಂದು ರಾಗಿ ಉತ್ಪಾದನೆ ಕುಂಠಿತವಾಗಿದೆ ಎಂದರು.
ವ್ಯಾಪಾರಸ್ಥರು ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇದನ್ನು ತಪ್ಪಿಸಿ ಸರ್ಕಾರ ರಾಗಿಗೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಮಾಡಿ ರೈತರಿಗೆ ಉತ್ತೇಜನ ನೀಡುವ ಮುಖ್ಯ ಉದ್ದೇಶ ಹೊಂದಿದೆ. ರಾಗಿ ಖರೀದಿಗೆ ಸರ್ಕಾರ ನಿರ್ದಿಷ್ಟ ಪ್ರಮಾಣ ನಿಗದಿಪಡಿಸಿದೆ. ಆದಷ್ಟು ಬೇಗ ರೈತರು ಅಗತ್ಯ ದಾಖಲೆ ನೀಡಿ ನೋಂದಾಯಿಸಿಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಎಪಿಎಂಸಿ ಸಹಾಯಕ ನಿರ್ದೇಶಕ ಜಿ.ಬಿ.ಕಬ್ಬಿರಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ಕ್ವಿಂಟಲ್ ರಾಗಿ 3,377 ರೂ.ನಂತೆ ಎಕರೆಗೆ ಕನಿಷ್ಟ 10 ಕ್ವಿಂಟಲ್ ಹಾಗೂ ಗರಿಷ್ಠ 20 ಕ್ವಿಂಟಲ್ ರಾಗಿ ಖರೀದಿ ಮಾಡಲಾಗುತ್ತಿದೆ. ರೈತರಿಗೆ ಕೃಷಿ ಇಲಾಖೆ ನೀಡಿರುವ “ಫ್ರೂಟ್ ಐಡಿ’ಯನ್ನು ಖರೀದಿ ಕೇಂದ್ರಕ್ಕೆ ತಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ರೈತರಿಂದ ಖರೀದಿಸುವ ರಾಗಿ ಸರಕಿನ ಮೌಲ್ಯವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಪಾವತಿಸಲಾಗುವುದು. ರೈತರ ಹೊರತಾಗಿ ಮಧ್ಯವರ್ತಿಗಳು ಅಥವಾ ಏಜೆಂಟರು ನೋಂದಣಿ ಕೇಂದ್ರಕ್ಕೆ ರಾಗಿ ತಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶ್ರೀಕಾಂತ ಪೂಜಾರ, ಯಲವಿಗಿ ಗ್ರಾಪಂ ಸದಸ್ಯ ನಾಗರಾಜ ಮತ್ತೂರ, ತಹಶೀಲ್ದಾರ್ ಎನ್.ಬಿ.ಗೆಜ್ಜಿ, ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಪರಮೇಶ್ವರಪ್ಪ ನಾಯಕ, ರಾಗಿ ಖರೀದಿ ಕೇಂದ್ರದ ಅಧಿಕಾರಿ ಈಶ್ವರಗೌಡ ಪಾಟೀಲ, ನಾಗರಾಜ ಲಮಾಣಿ ಇತರರು ಹಾಜರಿದ್ದರು.
ವ್ಯಾಪಾರಸ್ಥರು ರೈತರಿಂದ ಕಡಿಮೆ ಬೆಲೆಗೆ ರಾಗಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇದನ್ನು ತಪ್ಪಿಸಿ ಸರ್ಕಾರ ರಾಗಿಗೆ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸುವ ಮೂಲಕ ರೈತರಿಗೆ ಉತ್ತೇಜನ ನೀಡುವ ಮುಖ್ಯ ಉದ್ದೇಶ ಹೊಂದಿದೆ. ರಾಗಿ ಖರೀದಿಗೆ ಸರ್ಕಾರ ನಿರ್ದಿಷ್ಟ ಪ್ರಮಾಣ ನಿಗದಿಪಡಿಸಿದೆ. ಆದಷ್ಟು ಬೇಗ ರೈತರು ಅಗತ್ಯ ದಾಖಲೆ ನೀಡಿ ನೋಂದಾಯಿಸಿಕೊಂಡು ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು. -ನೆಹರು ಓಲೇಕಾರ, ಹಾವೇರಿ ಶಾಸಕರು
You seem to have an Ad Blocker on.
To continue reading, please turn it off or whitelist Udayavani.