![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jun 7, 2019, 9:26 AM IST
ಹಾವೇರಿ: ಜಿಲ್ಲಾ ವಿವಿಧ ಸಂಘಟನೆಗಳ ಹೋರಾಟ ಸಮಿತಿ ಕಾರ್ಯಕರ್ತರು ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಹಾವೇರಿ: ನಗರದ ಜಿಲ್ಲಾಸ್ಪತ್ರೆಯಲ್ಲಿರುವ ಅವ್ಯವಸ್ಥೆ ಸರಿಪಡಿಸಬೇಕು ಹಾಗೂ ಸಾರ್ವಜನಿಕರಿಗೆ ವಿವಿಧ ಸೌಲಭ್ಯಗಳೊಂದಿಗೆ ಉತ್ತಮ ಸೇವೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ವಿವಿಧ ಸಂಘಟನೆಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಗುರುವಾರ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಇದಕ್ಕೂ ಮೊದಲು ಮೈಲಾರ ಮಹದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗುತ್ತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಸೇವೆ ಪಡೆಯಲು ರೋಗಿಗಳು ಇಲ್ಲಿನ ಸಿಬ್ಬಂದಿಗೆ ಹಣ ನೀಡಬೇಕಾಗಿದೆ. ಹಣ ಕೊಟ್ಟರೆ ಮಾತ್ರ ಸೇವೆ ಎಂಬಂತಾಗಿದೆ. ಆಸ್ಪತ್ರೆಯಲ್ಲಿರುವ ಸಿಬ್ಬಂದಿ ಹಾಗೂ ವೈದ್ಯರು ರೋಗಿಗಳಿಗೆ ಸರಿಯಾಗಿ ಸ್ಪಂದಿಸದೆ ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಹೆಚ್ಚಿನ ಸಮಯವನ್ನು ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಕಳೆಯುತ್ತಿದ್ದು, ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಸೇವೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಮೂಲ ಸೌಕರ್ಯ ಕಲ್ಪಿಸಲು ಕೋಟ್ಯಾಂತರ ಹಣ ಬಿಡುಗಡೆಯಾಗುತ್ತಿದ್ದರೂ ಅದು ಸರಿಯಾಗಿ ಬಳಕೆಯಾಗುತ್ತಿಲ್ಲ.
ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳು ಹಾಗೂ ಮಹಿಳೆಯರಿಗೆ ಚಿಕಿತ್ಸೆ ನೀಡಲು ಎಲ್ಲ ಸೌಲಭ್ಯಗಳಿದ್ದರೂ ಕೂಡ ಖಾಸಗಿ ಔಷಧ ಅಂಗಡಿಗಳಿಗೆ ಚೀಟಿ ಬರೆದುಕೊಡುತ್ತಿದ್ದಾರೆ. ಹಾವು, ನಾಯಿ ಕಚ್ಚಿದರೂ ಕೂಡ ಚಿಕಿತ್ಸೆಗೆ ಹುಬ್ಬಳ್ಳಿ ಹಾಗೂ ದಾವಣಗೆರೆಗೆ ಹೋಗುವಂತಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿಯೇ ಎಲ್ಲ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೇ ಆಗಬೇಕು ಎಂದರು.
ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟರೆ ಪರ್ಯಾಯವಾಗಿ ಯಾವುದೇ ಜನರೇಟ್ ವ್ಯವಸ್ಥೆ ಸಹ ಕಲ್ಪಿಸಿಲ್ಲ. ಜಿಲ್ಲಾಸ್ಪತ್ರೆಗೆ ಹಾಗೂ ವೈದ್ಯರ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು, ಆದಷ್ಟು ಬೇಗ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆಯಿದ್ದರೂ ಕೂಡ ಸಿಬ್ಬಂದಿ ಕೊರತೆಯಿಂದ ರೋಗಿಗಳಿಗೆ ಸೌಲಭ್ಯ ದೊರಕದಂತಾಗಿದೆ. ಕೂಡಲೇ ಸ್ಕ್ಯಾನಿಂಗ್ ಆಪರೇಟರ್‌ಗಳನ್ನು ನೇಮಕ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜಿಲ್ಲಾಸ್ಪತ್ರೆಯಲ್ಲಿನ ಶೌಚಾಲಯಗಳು ಇದ್ದರೂ ಕೂಡ ಅವುಗಳ ನಿರ್ವಹಣೆ, ಸ್ವಚ್ಛತೆಗೆ ನಿರ್ಲಕ್ಶ್ಯ ತೋರಲಾಗುತ್ತಿದೆ. ರೋಗಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆಯಿಲ್ಲ. ಎಚ್ಐವಿ, ಟಿಬಿ, ಕುಷ್ಠರೋಗಿಗಳನ್ನು ಒಂದೇ ಕೊಠಡಿಯಲ್ಲಿ ಹಾಕುತ್ತಿದ್ದು, ಪ್ರತ್ಯೇಕ ವಾರ್ಡ್ ವ್ಯವಸ್ಥೆ ಇದ್ದರೂ ಕೂಡ ಅದನ್ನು ಬಳಸಿಕೊಳ್ಳುತ್ತಿಲ್ಲ ಎಂದು ಮನವಿ ಮೂಲಕ ದೂರಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಮಾನವಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಅಧ್ಯಕ್ಷ ಬಸವರಾಜ ಟೀಕೆಹಳ್ಳಿ, ಜಯಕರ್ನಾಟಕ ಸಂಘಟನೆ ರಾಜ್ಯ ಸಂಚಾಲಕ ರಮೇಶ ಆನವಟ್ಟಿ, ಕರವೇ ಸ್ನೇಹ ಬಳಗ ಅಧ್ಯಕ್ಷ ನಾಗರಾಜ ಮಳಗಾವಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಎಂ.ಎನ್.ನಾಯ್ಕ, ವಿದ್ಯಾರ್ಥಿಗಳ ಪಾಲಕರ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಹರೀಶ ಇಂಗಳಗೊಂದಿ, ನಮ್ಮ ಕರ್ನಾಟಕ ಒಕ್ಕೂಟ ಸೇರಿದಂತೆ ಇತರರು ಭಾಗವಹಿಸಿದ್ದರು.
You seem to have an Ad Blocker on.
To continue reading, please turn it off or whitelist Udayavani.