ಕನ್ನಡ ಅನ್ನದ, ಹಕ್ಕಿನ, ಜ್ಞಾನಕೋಶದ ಭಾಷೆ: ಆಳುವ ಸರಕಾರಕ್ಕೆ ದೊಡ್ಡರಂಗೇಗೌಡರ ಸಲಹೆ
ಮುಚ್ಚಿದ ಕನ್ನಡ ಶಾಲೆಗಳನ್ನು ತೆರೆಯುವಂತೆಯೂ ಆಗ್ರಹ
Team Udayavani, Jan 7, 2023, 6:10 AM IST
ಕೊರೊನಾ ಮಹಾಮಾರಿ ಎರಗಿ ಹೋದ ಅನಂತರದ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿರೀಕ್ಷೆಯಂತೆ ಜನಸಾಗರವೇ ಹರಿದುಬಂದಿದೆ. ಮೂರು ದಿನಗಳ ನುಡಿಜಾತ್ರೆಗೆ ಸರ್ವಾಧ್ಯಕ್ಷರಾದ ದೊಡ್ಡರಂಗೇಗೌಡರ ಸಾರಥ್ಯದಲ್ಲಿ ರಂಗೇರಿದೆ. ಹತ್ತಿ ಹೊಲದಲ್ಲಿ ಕನ್ನಡದ ಜ್ಯೋತಿ ಹೊತ್ತಿದ್ದು, ಕನ್ನಡ ನಾಡು-ನುಡಿ, ನೆಲ-ಜಲ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಚಿಂತನ ಮಂಥನ ನಡೆಯುತ್ತಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆ ಎನ್ನುವ ಹೆಮ್ಮೆಯ ಗರಿ ಸಮ್ಮೇಳನಕ್ಕಿರುವುದರಿಂದ ಹೆಚ್ಚು ಕಡಿಮೆ ಎಲ್ಲವೂ ಅಚ್ಚುಕಟ್ಟಾಗಿ ವ್ಯವಸ್ಥೆಯಾಗಿದೆ. ಇನ್ನೆರಡು ದಿನ ನುಡಿತೇರು ಎಳೆಯಲಿದ್ದಾರೆ ಸಾಹಿತ್ಯಾಭಿಮಾನಿಗಳು.
ಕನಕ-ಶರೀಫರ-ಸರ್ವಜ್ಞರ ಪ್ರಧಾನ ವೇದಿಕೆ (ಹಾವೇರಿ): ಆಳುವ ಸರಕಾರಗಳು ಯಾವುದೇ ಇರಲಿ, ಎಡ-ಬಲ-ಮಧ್ಯಮ ಮಾರ್ಗಗಳೇನೇ ಇರಲಿ, ಕನ್ನಡವೆಂಬುದು ಕನ್ನಡಿಗರ ಅನ್ನದ, ಹಕ್ಕಿನ ಭಾಷೆ ಎನ್ನುವುದನ್ನು ನಾವು ಮರೆಯಬಾರದು…
ಇದು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ| ದೊಡ್ಡರಂಗೇಗೌಡ ಅವರ ನುಡಿಗಳು. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಆಳುವ ಸರಕಾರಗಳು ಯಾವುದೇ ಇರಲಿ, ಯಾವುದೇ ಬರಲಿ ಅವುಗಳ ಮುಂದೆ ನನ್ನ ಬಿನ್ನಹವೊಂದೇ..”ಕನ್ನಡವನ್ನು ಬರಿದೇ ಭಾವಕೋಶದ ಭಾಷೆಯಾಗಿ ಮಾತ್ರವೇ ಕಾಣಬೇಡಿ, ಅದು ಜ್ಞಾನಕೋಶದ ಭಾಷೆ, ಕೌಶಲದ ಭಾಷೆ, ಕನ್ನಡಿಗರ ಮಹತ್ವಾಕಾಂಕ್ಷೆಯ ಭಾಷೆ, ಕ್ರಿಯಾಶೀಲತೆ, ಉದ್ಯೋಗಶೀಲತೆಯ ಭಾಷೆ ಎನ್ನುವುದನ್ನು ಮರೆಯದಿರಿ. ನನ್ನ ಜನರಿಗೆ ಅವರಾಡುವ ಭಾಷೆಯಲ್ಲಿಯೇ ಜಗತ್ತಿನ ಜ್ಞಾನವನ್ನು ಕೊಡಲು ಪಣ ತೊಡಿ’ ಎಂದರು.
ಮುಚ್ಚಿದ ಶಾಲೆ ತೆರೆಯಿರಿ: ರಾಜ್ಯದ ಹೊರಭಾಗದ ಗಡಿಯಲ್ಲಿ ಅವಶ್ಯವಿರುವಷ್ಟು ಕನ್ನಡ ಶಾಲೆಗಳನ್ನು ತೆರೆಯಲು ಸರಕಾರ ಸಹಾಯ ಒದಗಿಸಬೇಕು. ನೆರೆ ರಾಜ್ಯದವರು ಕನ್ನಡ ಶಾಲೆಗಳನ್ನು ಮುಚ್ಚಿರುವಂಥ ಗ್ರಾಮಗಳಲ್ಲಿ ಶಿಕ್ಷಣ ನೀಡಲು ಕನ್ನಡ ಮಾಧ್ಯಮದ ಶಾಲೆಗಳನ್ನು ತೆರೆಯುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಹಿಂದಿನ ಸರಕಾರ ಆತುರದ ನಿರ್ಧಾರ ತೆಗೆದುಕೊಂಡು ಕೆಲವು ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಿದೆ ಎಂದರು.
“ಕಲಿ-ನಲಿ’ ಪ್ರಶಿಕ್ಷಣ ಕೊಡಿ: ಕನ್ನಡಿಗರ ಜತೆ ಸ್ನೇಹ-ಪ್ರೀತಿ-ವಿಶ್ವಾಸಗಳಿಂದ ಕನ್ನಡೇತರರು ಒಂದಾಗಿ ಸೌಹಾರ್ದದಿಂದ ಬಾಳಿ ಬದುಕಬೇಕು. ಐಎಎಸ್ ಮುಂತಾದ ಹಿರಿಯ ಅಧಿಕಾರಿಗಳು ಕನ್ನಡ ಕಲಿಯಬೇಕು. ಸರಕಾರ ಅಂಥವರಿಗೆ ಮೂರು ತಿಂಗಳ ಅಥವಾ ಆರು ತಿಂಗಳ “ಕನ್ನಡ ಕಲಿ-ನಲಿ’ ಎಂಬ ಪ್ರಶಿಕ್ಷಣ ಕೊಡಬೇಕು. ಅನೇಕರು ಇನ್ನೂ ಆಂಗ್ಲ ಭಾಷೆಯಲ್ಲೇ ಟಿಪ್ಪಣಿ ಬರೆಯುತ್ತಾರೆ. ಅವರಿಗೆ ಕನ್ನಡಿಗರ ಎಚ್ಚರಿಕೆಯ ಮಾತು ಇಷ್ಟೇ; ನಿಯತ್ತಿನಿಂದ ಕನ್ನಡ ಕಲಿತು ಆಡಳಿತ ನಡೆಸಿ. ಕನ್ನಡ ನಾಡಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡಕ್ಕೇ ಆದ್ಯತೆ. ಇಲ್ಲಿ ಕನ್ನಡಕ್ಕೆ ಮೊದಲ ಮಣೆ ಸಂದಾಯ ಆಗಬೇಕು. ಇನ್ನೆಲ್ಲವೂ ಗೌಣ ಎಂದರು.
5ನೇ ತರಗತಿವರೆಗೆ ಕನ್ನಡ ಕಲಿಕೆ ಕಡ್ಡಾಯವಾಗಲಿ: ಪ್ರಾಥಮಿಕ ಶಾಲೆಗಳಲ್ಲಿ ಕನ್ನಡಕ್ಕೆ ನಾವೆಲ್ಲರೂ ಆದ್ಯತೆ ಕೊಡಬೇಕು. 5ನೇ ತರಗತಿವರೆಗೆ ಕನ್ನಡ ಕಲಿಕೆಯನ್ನು ಸರಕಾರ ಕಡ್ಡಾಯಗೊಳಿಸಬೇಕು, ಆ ಮೇಲೆ ಆ ಮಗುವಿನ ಬೌದ್ಧಿಕ ಸಾಮರ್ಥಯದ ಮೇಲೆ ಎಷ್ಟು ಭಾಷೆಗಳನ್ನಾದರೂ ಕಲಿಯಲಿ. ನಮ್ಮ ವಿರೋಧವಿಲ್ಲ. ಇದು ಸೈದ್ಧಾಂತಿಕ ತರ್ಕ. ಈ ಬಗ್ಗೆ ಸರಕಾರ ಕೂಡ ಗಮನ ನೀಡಬೇಕು ಎಂದರು. ಇಂದಿನ ವಾಸ್ತವದ ಜಗತ್ತಿನಲ್ಲಿ “ಅನ್ನ ನೀಡುವ’ ಭಾಷೆ ಬಗ್ಗೆ ಜನಸಮುದಾಯದಲ್ಲಿ ವಿಶೇಷ ಸೆಳೆತ ಕಂಡು ಬರುತ್ತಿರುವುದಕ್ಕೆ ನಾವು ಕುರುಡಾಗಬಾರದು ಎಂದರು.
ಪಾರಿಭಾಷಿಕ ಪದಕೋಶ ಅಗತ್ಯ: ನಮ್ಮ ರಾಜ್ಯದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿಯೇ ನೀಡುವ ತಲಾ ಒಂದೊಂದು ಕಾಲೇಜನ್ನಾದರೂ ಮುಂದಿನ ಮೂರು ವರ್ಷದ ಅವಧಿಯಲ್ಲಿ ಆರಂಭಿಸಬೇಕು. ಇದಕ್ಕಾಗಿ “ಕನ್ನಡ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಕಾರ್ಯಪಡೆ’ಯೊಂದನ್ನು ಮೊದಲು ರಾಜ್ಯ ಸರಕಾರ ರಚಿಸಬೇಕು ಎಂದು ಆಗ್ರಹಿಸಿದರು.
ಕನ್ನಡದಲ್ಲಿ ಕಲಿಸಬೇಕೆನ್ನುವ ಇಚ್ಛಾಶಕ್ತಿ ಇರುವ ಉತ್ಸಾಹಶೀಲ, ನುರಿತ ಬೋಧಕ ಸಿಬಂದಿಯನ್ನು ಅಲ್ಲಿಗೆ ತರುವ ಮೂಲಕ ಕನ್ನಡದಲ್ಲಿಯೇ ಈ ಶಾಸ್ತ್ರಗಳನ್ನು ಕಲಿಯಲು ಮುಂದಾಗುವ ವಿದ್ಯಾರ್ಥಿಗಳ ಪ್ರತ್ಯೇಕ ತಂಡ ಆರಂಭಿಸಬಹುದು. ಹೀಗೆ ಕನ್ನಡದಲ್ಲಿಯೇ ವೃತ್ತಿಪರ ಶಿಕ್ಷಣವನ್ನು ಪಡೆಯಲು ಮುಂದಾಗುವ ಪ್ರತಿಭಾವಂತ ಮಕ್ಕಳ ಸಂಪೂರ್ಣ ಖರ್ಚು ವೆಚ್ಚವನ್ನು ಸರಕಾರವೇ ವಹಿಸಿಕೊಳ್ಳುವ ಮೂಲಕ ವೃತ್ತಿಪರ ಕೋರ್ಸ್‌ಗಳನ್ನು ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ಕಲಿಯುವುದಕ್ಕೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಬೇಕು ಎಂದರು. ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಪಾಸ್ ಮಾಡಿದವರು ಎಂದು ಹೇಳುತ್ತಿದ್ದ ರೀತಿಯಲ್ಲಿ, ಕನ್ನಡದಲ್ಲಿಯೇ ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಶಿಕ್ಷಣವನ್ನು ಪಡೆದವರು ಇವರು ಎಂದು ನಾಡಿನ ಜನ ಹೆಮ್ಮೆಯಿಂದ ಗುರುತಿಸುವಂತಾಗಬೇಕು ಎಂದರು.
ಮುಲಾಜಿಲ್ಲದೆ ಧಿಕ್ಕರಿಸಿ: ನಮ್ಮ ಭಾಷೆಯಲ್ಲಿ ಸೇವೆ ನೀಡದ ಬ್ಯಾಂಕ್‌ಗಳು, ಸರಕಾರಿ ಉದ್ದಿಮೆಗಳು, ಖಾಸಗಿ ಸಂಸ್ಥೆಗಳನ್ನು ಮುಲಾಜಿಲ್ಲದೆ ಧಿಕ್ಕರಿಸಬೇಕು. ಇತ್ತೀಚೆಗೆ ಶಾಸನಸಭೆಯಲ್ಲಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ -2022′ ಅನ್ನು ಮಂಡಿಸಲಾಯಿತು. ಇದರಲ್ಲಿ ಕನ್ನಡವನ್ನು ಅಧಿಕೃತ ರಾಜ್ಯ ಭಾಷೆಯಾಗಿ ತೀರ್ಮಾನಿಸುವ, ಆಡಳಿತ, ನ್ಯಾಯಾಂಗದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವುದು ಸಹಿತ ಹಲವು ಉತ್ತಮ ಅಂಶಗಳಿವೆ ಎಂದರು.
ಕನ್ನಡದಲ್ಲಿಯೂ ವೃತ್ತಿಪರ, ಉನ್ನತ ಶಿಕ್ಷಣ ನೀಡಿ
ಮುಖ್ಯಮಂತ್ರಿಗಳೇ, ಸಮಸ್ತ ಕನ್ನಡಿಗರ ಪರವಾಗಿ ಗಟ್ಟಿ ನಿರ್ಧಾರ ಮಾಡಿ, ಕನ್ನಡದಲ್ಲಿಯೂ ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣ ನೀಡಿಯೇ ತೀರುತ್ತೇವೆ ಎನ್ನುವ ಪಣ ತೊಡಿ. ಸಾಹಿತಿಯಾಗಿ ಆಗಲಿ, ಕನ್ನಡ ಭಾಷಾ ಪ್ರಾಚಾರ್ಯನಾಗಿ ಆಗಲಿ, ಕನ್ನಡದ ಮೇಲಿನ ಅಭಿಮಾನಕ್ಕಾಗಿಯಾಗಲಿ ನಿಮ್ಮ ಮುಂದೆ ಈ ಮಾತು ಹೇಳುತ್ತಿಲ್ಲ. ಬದಲಿಗೆ ಶಿಕ್ಷಣ ವ್ಯವಸ್ಥೆಯನ್ನು ಬಹುಕಾಲ ಕಂಡಿರುವ, ಅದರ ಒಳಹೊರಗನ್ನು ಅರಿತವನಾಗಿ ಹೇಳುತ್ತಿದ್ದೇನೆ. ಯಾವುದೋ ದೂರ ದೇಶದ ಕಂಡು ಕೇಳರಿಯದ ಭಾಷೆಯಲ್ಲಿ ಆ ದೇಶಗಳಿಗೆ ತೆರಳಿ ವೈದ್ಯಕೀಯ, ವೃತ್ತಿಪರ, ಉನ್ನತ ಶಿಕ್ಷಣವನ್ನು ಪಡೆಯುತ್ತಾರೆ ಎನ್ನುವುದಾದರೆ ನಮ್ಮದೇ ಭಾಷೆಯಲ್ಲಿ ನಗರ-ಹಳ್ಳಿ ಎಂಬ ಹಂಬಲವಿಲ್ಲದ ಈ ನಮ್ಮ ಕರುನಾಡ ಮಕ್ಕಳು ವೈದ್ಯಕೀಯ, ವೃತ್ತಿಪರ, ಉನ್ನತ ಶಿಕ್ಷಣಗಳನ್ನು ಪಡೆಯಲಾಗುವುದಿಲ್ಲವೇ? ಏಕೆ ನಮಗೆ ನಮ್ಮ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಕೊಡಲಾಗುತ್ತಿಲ್ಲ. ನಮ್ಮ ವಿಶ್ವವಿದ್ಯಾನಿಲಯಗಳನ್ನು ನಾನು ಈ ವೇದಿಕೆಯಲ್ಲಿ ನಿಂತು, ಸಮಸ್ತ ಕನ್ನಡಿಗರ ಪರವಾಗಿ ಕೇಳುತ್ತಿದ್ದೇನೆ, ನಾವು ಕೇವಲ ಎಡ, ಬಲದ ವಾದ-ವಿವಾದಗಳಿಗೆ ಮಾತ್ರವೇ ನಮ್ಮ ಬೌದ್ಧಿಕತೆಯನ್ನು ಸೀಮಿತಗೊಳಿಸಿಕೊಳ್ಳಬೇಕೆ? ಕನ್ನಡವನ್ನು ಸಮರ್ಥ “ಜ್ಞಾನದಾಯಿನಿ’ ಭಾಷೆಯಾಗಿ ಬೆಳೆಸುವ ಜವಾಬ್ದಾರಿ ನಮಗಿಲ್ಲವೇ ಎಂದು ಸಾಹಿತಿ ದೊಡ್ಡರಂಗೇಗೌಡ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.