ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
ಸೌಲಭ್ಯ ಪಡೆಯಲು ರೈತರಿಗೂ ತೊಂದರೆ
Team Udayavani, Jul 10, 2020, 5:31 PM IST
ಸಾಂದರ್ಭಿಕ ಚಿತ್ರ
ಹಾವೇರಿ: ಕೃಷಿಕರಿಗೆ ಸೂಕ್ತ ಸಮಯದಲ್ಲಿ ಪೂರಕ ಸೌಲಭ್ಯ ಒದಗಿಸಿ ಅನುಕೂಲ ಕಲ್ಪಿಸಬೇಕಿದ್ದ ಜಿಲ್ಲೆಯ ಕೃಷಿ ಇಲಾಖೆಯೇ ಸಿಬ್ಬಂದಿ ಕೊರತೆಯಿಂದ ನಲುಗುತ್ತಿದೆ. ಇದರಿಂದಾಗಿ ಕೃಷಿ ಇಲಾಖೆ ಸೌಲಭ್ಯ ರೈತರಿಗೆ ಸಮರ್ಪಕವಾಗಿ ದೊರಕುವಲ್ಲಿ ಹಿನ್ನಡೆಯಾಗಿದೆ.
ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ಒಟ್ಟು 262 ಹುದ್ದೆಗಳು ಮಂಜೂರಾಗಿದ್ದು 120ಹುದ್ದೆ ಭರ್ತಿಯಾಗಿವೆ. 142 ಹುದ್ದೆಗಳು ಖಾಲಿ ಇವೆ. ಇಲಾಖೆಯಲ್ಲಿ ರೈತರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿರಬೇಕು. ಆದರೆ ಜಿಲ್ಲೆಯಲ್ಲಿ ಈ ಎರಡು ಹುದ್ದೆಗಳಲ್ಲಿ ಬಹುತೇಕ ಹುದ್ದೆಗಳು ಖಾಲಿ ಇವೆ.
ಮಂಜೂರಾಗಿರುವ 45 ಕೃಷಿ ಅಧಿಕಾರಿ ಹುದ್ದೆಗಳಲ್ಲಿ 17 ಹುದ್ದೆ ಖಾಲಿ ಉಳಿದಿವೆ. ಸಹಾಯಕ ಕೃಷಿ ಅಧಿಕಾರಿಯ 83 ಹುದ್ದೆಗಳಲ್ಲಿ ಬರೋಬ್ಬರಿ 62 ಹುದ್ದೆಗಳು ಖಾಲಿಯಿದ್ದು, ಕೇವಲ 21 ಹುದ್ದೆಗಳು ಭರ್ತಿಯಾಗಿವೆ. 13 ಸಹಾಯಕ ಕೃಷಿ ನಿರ್ದೇಶಕರ ಹುದ್ದೆಗಳಲ್ಲಿ 5 ಹುದ್ದೆ ಖಾಲಿ ಇವೆ. ಒಟ್ಟಾರೆ ತಾಂತ್ರಿಕ ವಿಭಾಗದ 146 ಹುದ್ದೆಗಳಲ್ಲಿ 61ಹುದ್ದೆಗಳಷ್ಟೇ ಭರ್ತಿಯಾಗಿದ್ದು, 85 ಹುದ್ದೆಗಳು ಖಾಲಿ ಉಳಿದಿವೆ.
ಕೃಷಿ ಇಲಾಖೆಯ ಕಚೇರಿಗಳಲ್ಲೂ ಸಿಬ್ಬಂದಿ ಕೊರತೆ ಕಾಡುತ್ತಿದೆ. ಅಧೀಕ್ಷಕರು, ಪ್ರಥಮದರ್ಜೆ ಸಹಾಯಕರು ಸೇರಿದಂತೆ ಮಂಜೂರಾಗಿರುವ 116ಹುದ್ದೆಗಳಲ್ಲಿ 59ಹುದ್ದೆ ಭರ್ತಿಯಾಗಿದ್ದು, 57ಹುದ್ದೆಗಳು ಖಾಲಿಯಿವೆ. ಇದರಿಂದ ಕಚೇರಿಗಳಲ್ಲಿ ಸಮರ್ಪಕವಾಗಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಇರುವ ಸಿಬ್ಬಂದಿಯಲ್ಲೇ ಎಲ್ಲ ಕೆಲಸ ಮುಗಿಸುವ ಹೊರೆ ಬೀಳುತ್ತಿದೆ.
ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ, ರೈತರಿಗೆ ತಾಂತ್ರಿಕ ಸಲಹೆ ನೀಡುವುದು, ಪ್ರಾತ್ಯಕ್ಷಿಕೆ, ಕೀಟಬಾಧೆ ಬಗ್ಗೆ ಮಾಹಿತಿ, ಉತ್ಪನ್ನ ಹೆಚ್ಚಳಕ್ಕೆ ಮಾರ್ಗದರ್ಶನ, ನಷ್ಟ ತಗ್ಗಿಸಲು ಯಾವ ಬೆಳೆ ಸೂಕ್ತ, ಮಣ್ಣಿನ ಮಾದರಿ ಪರೀಕ್ಷೆ ಮಾಡಿ ರೈತರಿಗೆ ಮಾಹಿತಿ ನೀಡುವುದು, ಹವಾಮಾನ ಹಾಗೂ ಮಣ್ಣಿನ ಗುಣಕ್ಕೆ ತಕ್ಕಂತೆ ಯಾವ ಬೆಳೆ ಬೆಳೆಯಬೇಕು, ಹೀಗೆ ಪ್ರತಿ ಹಂತದಲ್ಲೂ ಕೃಷಿ ಇಲಾಖೆಯು ರೈತರೊಂದಿಗೇ ಇದ್ದು ಮಾಹಿತಿ ನೀಡಬೇಕಾಗುತ್ತದೆ. ಇದಲ್ಲದೇ ಬೆಳೆ ನಷ್ಟವಾದರೆ ಇದೇ ಇಲಾಖೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕಾಗುತ್ತದೆ. ಸ್ವಲ್ಪ ತಪ್ಪಿದರೂ ಸಮಸ್ಯೆ ಎದುರಾಗುತ್ತದೆ. ಇಂಥ ಪ್ರಮುಖ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಆದರೂ ರೈತರಿಗೆ ತಾಂತ್ರಿಕ ಸಲಹೆ, ಸರ್ಕಾರದ ಯೋಜನೆಗಳನ್ನು ತಲುಪಿಸುವುದು ಸೇರಿದಂತೆ ಎಲ್ಲ ಮಾಹಿತಿಯನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹುದ್ದೆ ಭರ್ತಿಯಾದರೆ ಅನುಕೂಲವಾಗಲಿದೆ. -ಬಿ. ಮಂಜುನಾಥ, ಜಂಟಿ ಕೃಷಿ ನಿರ್ದೇಶಕರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.