ಪತ್ರಿಕಾ ವಿತರಕರಿಗೆ ಸೌಲಭ್ಯ ಸಿಗಲಿ
Team Udayavani, Sep 6, 2019, 11:59 AM IST
ಹಾವೇರಿ: ಪತ್ರಿಕಾ ವಿತರಕರ ಬಳಗದಿಂದ ಪತ್ರಿಕಾ ವಿತರಕರ ದಿನ ಆಚರಿಸಲಾಯಿತು.
ಹಾವೇರಿ: ಸಮಾಜದ ಆಗು ಹೋಗುಗಳನ್ನು ಮನೆ-ಮನೆಗೆ ತಲುಪಿಸುವ ಜವಾಬ್ದಾರಿ ಹೊತ್ತಿರುವ ಪತ್ರಿಕಾ ವಿತರಕರು ಅಸಂಘಟಿತರಾಗಿದ್ದು, ಅವರಿಗೆ ಸರ್ಕಾರದ ನೆರವು ಅವಶ್ಯ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ| ಬಿ.ಆರ್. ರಂಗನಾಥ ಕುಳಗಟ್ಟೆ ಅಭಿಪ್ರಾಯಿಸಿದರು.
ಗುರುವಾರ ನಗರದ ಪ್ರವಾಸಿಗೃಹದಲ್ಲಿ ಹಾವೇರಿ ಪತ್ರಿಕಾ ವಿತರಕರ ಬಳಗ ಏರ್ಪಡಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳಂಬೆಳಗ್ಗೆ ಪತ್ರಿಕೆ ಹಂಚುವಾಗ ಅಪಘಾತ ಸಂಭವಿಸಿದರೆ, ಭದ್ರತೆಗಾಗಿ ಸರ್ಕಾರದ ಸೌಲಭ್ಯಗಳ ಅವಶ್ಯವಿದೆ. ಪತ್ರಿಕಾ ವಿತರಿಕರಿಗೆ ಸರ್ಕಾರದ ಯಾವುದೇ ಯೋಜನೆಗಳಿಲ್ಲ. ಆರ್ಥಿಕ, ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಏನಾದರೂ ಯೋಜನೆ ರೂಪಿಸುವ ಬೇಡಿಕೆ ಇದೆ ಎಂದರು.
ಮುದ್ರಣ ಮಾಧ್ಯಮದಲ್ಲಿ ವಿತರಕರೇ ಅನ್ನದಾತರು. ಅವರಿಂದಲೇ ಪತ್ರಿಕೆ ನಡೆಯುತ್ತಿರುತ್ತವೆ. ರಾಜೀವಗಾಂಧಿ ಆರೋಗ್ಯ ವಿಮೆ ಸದ್ಯ ಪತ್ರಕರ್ತರಿಗೆ ಮಾತ್ರ ಇದೆ. ಅದನ್ನು ಪತ್ರಿಕಾ ವಿತರಿಕರಿಗೂ ವಿಸ್ತರಿಸುವ ಕೆಲಸ ಆಗಬೇಕಿದ್ದು, ಇದಕ್ಕೆ ಪತ್ರಿಕಾ ವಿತರಕರ ಧ್ವನಿ ಗಟ್ಟಿಯಾಗಬೇಕು ಎಂದರು.
2018-19ರಲ್ಲಿ ಸರ್ಕಾರ ಮಾಧ್ಯಮ ಅಕಾಡೆಮಿ ಮೂಲಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ 2ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಏನಾದರೂ ಅಪಘಾತ ಸಂಭವಿಸಿದಾಗ ನೆರವು ನೀಡುವ ಉದ್ದೇಶ ಹೊಂದಲಾಗಿದೆ. ಕೆಲ ತಾಂತ್ರಿಕ ಕಾರಣಗಳಿಂದ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಕಾರ್ಯಕ್ರಮ ವಿಳಂಬವಾಗಿದೆ. ಈಗಾಗಲೇ ವಾರ್ತಾ ಇಲಾಖೆಯಿಂದ ರಾಜ್ಯದಲ್ಲಿ ಪತ್ರಿಕಾ ವಿತರಕರ ಪಟ್ಟಿಯನ್ನು ತಯಾರಿಸಲಾಗಿದೆ. ಜಿಲ್ಲೆಯ ಕೇವಲ 2,500 ಪತ್ರಿಕಾ ವಿತರಕರು ಮಾತ್ರ ಮಾಹಿತಿ ಕೊಟ್ಟಿದ್ದಾರೆ. ಇನ್ನು ಸಾಕಷ್ಟು ಶ್ರಮಿಕರು ಅದರಲ್ಲಿ ಸೇರ್ಪಡೆಯಾಗಬೇಕಿದೆ ಎಂದರು.
ಪತ್ರಿಕಾ ವಿತರಕ ಎಸ್.ಕೆ. ನಾಗನೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರಾದ ಜಯಪ್ಪ ಬಣಕಾರ, ಕರಬಸಪ್ಪ ಹಳದೂರ, ಸಂಜೀವ ಮಡ್ಲೂರ, ಸಿದ್ದಲಿಂಗಪ್ಪ ಬಶೆಟ್ಟಿಯವರ, ವಿರೇಶ ಸೂರಣಗಿ, ಅಶೋಕ ಬಡಿಗೇರ, ಆನಂದ ಕುಂಬಾರ, ವಿನುತ ತಾಯಮ್ಮನವರ, ನಿರಂಜನ ಹತ್ತಿ, ನಿಂಗಪ್ಪ ಆರೇರ, ಆನಂದ ಹಳಕೊಪ್ಪ, ಸದಾನಂದ ಹಳಕೊಪ್ಪ, ಶಿವಶಂಕರ ಭಂಗಿಗೌಡ್ರ, ಅರುಣಕುಮಾರ ಹೂಗಾರ, ಬಸಯ್ಯ ಅಂಗರಗಟ್ಟಿ, ಪ್ರಶಾಂತ, ಪ್ರಸನ್ನ, ದಯಾನಂದ ಚನ್ನಾಪುರ, ಜಯಚಂದ್ರ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.