ಸಚಿವ ‘ಜಮೀರ್ ಕಾಣೆ’! ಫೇಸ್‌ಬುಕ್‌ಲ್ಲಿ ಫೋಸ್ಟ್ ವೈರಲ್
Team Udayavani, Jun 21, 2019, 8:53 AM IST
ಹಾವೇರಿ: 'ಬ್ಯಾಡಗಿಯ ಸತ್ತಪ್ರಜೆ' ಫೇಸ್‌ಬುಕ್‌ನಲ್ಲಿ ಹಾಕಿರುವ ಪೋಸ್ಟ್.
ಹಾವೇರಿ: ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಜಿಲ್ಲೆಯ ಜನರಿಗೆ ಸಿಗದೆ ಇರುವುದನ್ನು ಖಂಡಿಸಿ ವ್ಯಕ್ತಿಯೊಬ್ಬರು ‘ಕಾಣೆಯಾಗಿದ್ದಾರೆ’ ಎಂದು ಫೇಸ್‌ಬುಕ್‌ನಲ್ಲಿ ಹಾಕಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಎಲ್ಲರ ಗಮನಸೆಳೆಯುತ್ತಿದೆ.
‘ಬ್ಯಾಡಗಿಯ ಸತ್ತಪ್ರಜೆ’ ಹೆಸರಿನ ಫೇಸ್‌ಬುಕ್ ಖಾತೆ ಹೊಂದಿರುವ ಅನಾಮಿಕ ‘ಕಾಣೆಯಾಗಿದ್ದಾರೆ’ ಎಂಬ ತಲೆಬರಹದಡಿಯಲ್ಲಿ ಈ ಪೋಸ್ಟ್ ಹಾಕಿದ್ದಾರೆ. ‘ಕಾಣೆಯಾದವರ ಬಗ್ಗೆ ಪ್ರಕಟಣೆ. ಹೆಸರು- ಜಮೀರ್ ಅಹ್ಮದಖಾನ್, ಬಣ್ಣ- ಗೋದಿಬಣ್ಣ, ಸಾಧಾರಣ ಮೈಕಟ್ಟು, ಎತ್ತರ- ಸುಮಾರು ಐದು ಅಡಿ, ಕೊನೆಯ ಬಾರಿ ಕಂಡದ್ದು-ಬ್ಯಾಡಗಿ ತಾಲೂಕಿನಲ್ಲಿ. ಇವರು ಸಿಕ್ಕಲ್ಲಿ ಹಾವೇರಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಗೆ ಒಪ್ಪಿತಕ್ಕದ್ದು’ ಎಂದು ಪೋಸ್ಟ್ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನರ ಕೈಗೆ ಸಿಗುತ್ತಿಲ್ಲ. ಯಾವಾಗಲೋ ಒಮ್ಮೆ ಒಂದು ದಿನ ಬಂದು ಹೋಗುತ್ತಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಒಂದು ದಿನ ಪ್ರಚಾರಕ್ಕೆ ಬಂದು ಹೋದ ಮೇಲೆ ಈವರೆಗೂ ಜಿಲ್ಲೆಗೆ ಬಂದಿಲ್ಲ. ಜಿಲ್ಲಾಡಳಿತ ಭವನದಲ್ಲಿರುವ ಅವರ ಕಚೇರಿಯೂ ಬಂದ್ ಆಗಿದೆ ಎಂಬ ಆಕ್ರೋಶವನ್ನು ‘ಬ್ಯಾಡಗಿಯ ಸತ್ತಪ್ರಜೆ’ ಈ ರೀತಿ ಹೊರಹಾಕಿದ್ದಾರೆ.