Team Udayavani, Sep 18, 2019, 11:32 AM IST
ಹಾವೇರಿ: ಇತ್ತೀಚೆಗೆ ಜಿಲ್ಲೆಯಲ್ಲಿ ಸೃಷ್ಟಿಯಾದ ನೆರೆ ಹಾಗೂ ಅತಿವೃಷ್ಟಿಯಿಂದ ವಿದ್ಯುತ್ ಸಂಪರ್ಕ ಸಾಧನಗಳಿಗೆ ಅಪಾರ ಹಾನಿಯಾಗಿ ಕತ್ತಲು ಆವರಿಸಿಕೊಂಡಿದ್ದ ಗ್ರಾಮಗಳಲ್ಲಿ ಈಗ ಬೆಳಕು ಮೂಡಿದೆ.
ಹಾವೇರಿ ಉಪವಿಭಾಗದ ವರದಹಳ್ಳಿ, ದಿಡಗೂರು, ಚಿಕ್ಕಹುಲ್ಲಾಳ, ತುಮರಿಕೊಪ್ಪ, ಅರೇಲಕಮಾಪುರ, ಇನಾಂಲಕಮಾಪುರ, ನೀರಲಗಿ, ಕಾಲ್ವೆಕಲ್ಲಾಪುರ, ನೆಲ್ಲಿಬೀಡು, ಮನ್ನಂಗಿ, ಮೆಳ್ಳಾಗಟ್ಟಿ, ಕುಣಿಮೆಳ್ಳಳ್ಳಿ, ಹಲಸೂರು, ನದಿನೀರಲಗಿ, ಹರಳಳ್ಳಿ, ಚಿಕ್ಕಮಗದೂರು, ಹಿರೇಮಗದೂರು, ಹಿರೇಮರಳಿಹಳ್ಳಿ, ರಾಣಿಬೆನ್ನೂರು ವಿಭಾಗದ ಕಿರಗೇರಿ, ಕುಡಪಲಿ, ಹಳ್ಳೂರ, ಪರದಕೇರಿ, ಕೋಡಮಗ್ಗಿ, ಭೈರನಪಾದ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳು ನೆರೆ ಹಾವಳಿಗೆ ತುತ್ತಾಗಿ ವಿದ್ಯುತ್ ಕಂಬಗಳು ಬಿದ್ದು, ತಂತಿ ಮಾರ್ಗ ಹರಿದು, ವಿದ್ಯುತ್ ಪರಿವರ್ತಕಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿತ್ತು. ಇದರಿಂದಾಗಿ ಈ ಗ್ರಾಮಗಳು ವಿದ್ಯುತ್ ಇಲ್ಲದೇ ಕತ್ತಲಲ್ಲಿದ್ದವು.
ನೆರೆ ಹಾಗೂ ಮಳೆ ಕಡಿಮೆಯಾಗುತ್ತಿದ್ದಂತೆ ಹೆಸ್ಕಾಂ ದುರಸ್ತಿ ಕಾರ್ಯ ಆರಂಭಿಸಿದ್ದು, ಈಗ ಕತ್ತಲಲ್ಲಿದ್ದ ಗ್ರಾಮಗಳು ಬೆಳಕು ಕಂಡಿವೆ. ಕೆಸರು ತುಂಬಿರುವ, ನೆಲ ಒಣಗದೆ ಇರುವ ನದಿಯಂಚಿನ ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ತಿ, ಹೊಸ ಪರಿವರ್ತಕ ಅಳವಡಿಕೆ ಕಾರ್ಯ ಇನ್ನೂ ಮುಂದುವರಿದಿದೆ. ಆಗಾಗ ಸುರಿಯುತ್ತಿರುವ ಮಳೆ ಕೂಡ ಈ ಕಾರ್ಯಕ್ಕೆ ಅಡಚಣೆ ಮಾಡುತ್ತಿದ್ದು, ನಿರಂತರವಾಗಿ ಒಂದು ವಾರ ಬಿಸಿಲು ಬಿದ್ದರೆ ವಿದ್ಯುತ್ ಉಪಕರಣಗಳ ದುರಸ್ತಿ, ಅಳವಡಿಕೆ ಕಾರ್ಯ ವೇಗ ಪಡೆದುಕೊಳ್ಳಲಿದೆ ಎನ್ನುತ್ತಾರೆ ಹೆಸ್ಕಾಂ ಸಿಬ್ಬಂದಿ.
ವಿದ್ಯುತ್ ಕಂಬ ಹಾನಿ: ಜಿಲ್ಲೆಯಲ್ಲಿ 2323 ವಿದ್ಯುತ್ ಕಂಬಗಳು ಬಿದ್ದಿದ್ದು 185.84ಲಕ್ಷ ರೂ.ಗಳಷ್ಟು ಹಾನಿಯಾಗಿದೆ. ಪ್ರತಿ ಕಂಬಕ್ಕೆ 4000ರೂ.ಗಳಂತೆ 92.92ಲಕ್ಷ ರೂ.ಗಳ ಪರಿಹಾರ ನಿರೀಕ್ಷಿಸಲಾಗಿದೆ. ಹಾವೇರಿ ತಾಲೂಕಿನಲ್ಲಿ 285, ರಾಣಿಬೆನ್ನೂರು ತಾಲೂಕಿನಲ್ಲಿ 153, ಬ್ಯಾಡಗಿ ತಾಲೂಕಿನಲ್ಲಿ 177, ಹಿರೇಕೆರೂರು ತಾಲೂಕಿನಲ್ಲಿ 353, ಸವಣೂರು ತಾಲೂಕಿನಲ್ಲಿ 726, ಶಿಗ್ಗಾವಿ ತಾಲೂಕಿನಲ್ಲಿ 158, ಹಾನಗಲ್ಲ ತಾಲೂಕಿನಲ್ಲಿ 471 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
ವಿದ್ಯುತ್ ಪರಿವರ್ತಕ ಹಾನಿ: ಜಿಲ್ಲೆಯಲ್ಲಿ ಒಟ್ಟು 172 ವಿದ್ಯುತ್ ಪರಿವರ್ತಕಗಳು ಹಾಳಾಗಿದ್ದು, 172ಲಕ್ಷ ರೂ.ಗಳಷ್ಟು ಹಾನಿಯಾಗಿದೆ. ಪ್ರತಿ 131ಲಕ್ಷ ರೂ. ಪರಿಹಾರ ನಿರೀಕ್ಷಿಸಲಾಗಿದೆ. ಹಾವೇರಿ ತಾಲೂಕಿನಲ್ಲಿ 11, ರಾಣಿಬೆನ್ನೂರು ತಾಲೂಕಿನಲ್ಲಿ 38, ಬ್ಯಾಡಗಿ ತಾಲೂಕಿನಲ್ಲಿ 9, ಹಿರೇಕೆರೂರು ತಾಲೂಕಿನಲ್ಲಿ 18, ಸವಣೂರು ತಾಲೂಕಿನಲ್ಲಿ 56, ಶಿಗ್ಗಾವಿ ತಾಲೂಕಿನಲ್ಲಿ 14, ಹಾನಗಲ್ಲ ತಾಲೂಕಿನಲ್ಲಿ 26 ವಿದ್ಯುತ್ ಪರಿವರ್ತಕಗಳು ಹಾಳಾಗಿವೆ.
ತಂತಿಮಾರ್ಗ ಹಾನಿ: ಜಿಲ್ಲೆಯಲ್ಲಿ ಒಟ್ಟು 28.15 ಕಿಮೀ ತಂತಿ ಮಾರ್ಗ ಹಾಳಾಗಿದ್ದು, 17.43ಲಕ್ಷ ರೂ.ಗಳಷ್ಟು ಹಾನಿಯಾಗಿದೆ. ಪ್ರತಿ ಕಿಮೀಗೆ 50,000 ರೂ.ಗಳಂತೆ 44.95ಲಕ್ಷ ರೂ. ಪರಿಹಾರ ನಿರೀಕ್ಷಿಸಲಾಗಿದೆ. ಹಾವೇರಿ ತಾಲೂಕಿನಲ್ಲಿ 1.20 ಕಿಮೀ, ರಾಣಿಬೆನ್ನೂರು ತಾಲೂಕಿನಲ್ಲಿ 6 ಕಿಮೀ ಬ್ಯಾಡಗಿ ತಾಲೂಕಿನಲ್ಲಿ 1.50 ಕಿಮೀ, ಹಿರೇಕೆರೂರು ತಾಲೂಕಿನಲ್ಲಿ 8.50 ಕಿಮೀ, ಸವಣೂರು ತಾಲೂಕಿನಲ್ಲಿ 4.50ಕಿಮೀ, ಶಿಗ್ಗಾವಿ ತಾಲೂಕಿನಲ್ಲಿ 2.40 ಕಿಮೀ, ಹಾನಗಲ್ಲ ತಾಲೂಕಿನಲ್ಲಿ 2.03 ಕಿಮೀ ವಿದ್ಯುತ್ ತಂತಿಮಾರ್ಗ ಹಾನಿಯಾಗಿದೆ. ಒಟ್ಟಾರೆ ನೆರೆ ಹಾಗೂ ಅತಿವೃಷ್ಟಿಯಿಂದ ವಿದ್ಯುತ್ ಉಪಕರಣಗಳು ಹಾಳಾಗಿ ಕಗ್ಗತ್ತಲಲ್ಲಿ ಕಳೆದಿದ್ದ ಗ್ರಾಮಗಳು ಬೆಳಕು ಕಂಡಿದ್ದು, ಇನ್ನುಳಿದ ಉಪಕರಣಗಳ ದುರಸ್ತಿ, ಹೊಸ ಸಲಕರಣೆ ಅಳವಡಿಕೆ ಕಾರ್ಯ ಮುಂದುವರಿದೆ.
ನೆರೆಯಿಂದ ಹಾನಿಯಾದ ವಿದ್ಯುತ್ ಉಪಕರಣಗಳ ದುರಸ್ತಿ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಂಡ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಶೇ. 80ರಷ್ಟು ಪೂರ್ಣಗೊಂಡಿದೆ. ನದಿಯಂಚಿನ ಕೆಲ ಗ್ರಾಮಗಳಲ್ಲಿ ಇನ್ನೂ ನೀರು, ಕೆಸರಿದ್ದು ಒಣಗುತ್ತಿದ್ದಂತೆ ದುರಸ್ತಿ ಪೂರ್ಣಗೊಳಿಸಲಾಗುವುದು.• ಸಿ.ಬಿ. ಹೊಸಮನಿ, ಸಹಾಯಕ ಇಂಜೀನಿಯರ್, ಹೆಸ್ಕಾಂ
3.75 ಕೋಟಿ ರೂ. ಹಾನಿ: ಜಿಲ್ಲೆಯಲ್ಲಿ 375.27ಲಕ್ಷ ರೂ. ಮೌಲ್ಯದ ವಿದ್ಯುತ್ ಉಪಕರಣ ಹಾಗೂ ಸಲಕರಣೆಗಳಿಗೆ ಹಾನಿಯಾಗಿದ್ದು, 266.87ಲಕ್ಷ ರೂ.ಗಳಷ್ಟು ಪರಿಹಾರ ನಿರೀಕ್ಷಿಸಲಾಗಿದೆ. ಹಾವೇರಿ ತಾಲೂಕಿನಲ್ಲಿ 35 ಲಕ್ಷ ರೂ., ರಾಣಿಬೆನ್ನೂರು ತಾಲೂಕಿನಲ್ಲಿ 55.24ಲಕ್ಷ ರೂ., ಬ್ಯಾಡಗಿ ತಾಲೂಕಿನಲ್ಲಿ 24.66ಲಕ್ಷ ರೂ., ಹಿರೇಕೆರೂರು ತಾಲೂಕಿನಲ್ಲಿ 50.49ಲಕ್ಷ ರೂ., ಸವಣೂರು ತಾಲೂಕಿನಲ್ಲಿ 116.33 ಲಕ್ಷ ರೂ., ಶಿಗ್ಗಾವಿ ತಾಲೂಕಿನಲ್ಲಿ 27.84 ಲಕ್ಷ ರೂ., ಹಾನಗಲ್ಲ ತಾಲೂಕಿನಲ್ಲಿ 65.71 ಲಕ್ಷ ರೂ.ಗಳಷ್ಟು ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಪ್ರಾಕೃತಿಕ ವಿಕೋಪ ನಿಧಿ ನಿಯಮಾನುಸಾರ ಹಾವೇರಿ ತಾಲೂಕಿನಲ್ಲಿ 12.60 ಲಕ್ಷ ರೂ., ರಾಣಿಬೆನ್ನೂರು ತಾಲೂಕಿನಲ್ಲಿ 23.12ಲಕ್ಷ ರೂ., ಬ್ಯಾಡಗಿ ತಾಲೂಕಿನಲ್ಲಿ 11.58 ಲಕ್ಷ ರೂ., ಹಿರೇಕೆರೂರು ತಾಲೂಕಿನಲ್ಲಿ 63.89 ಲಕ್ಷ ರೂ., ಸವಣೂರು ತಾಲೂಕಿನಲ್ಲಿ 87.29 ಲಕ್ಷ ರೂ., ಶಿಗ್ಗಾವಿ ತಾಲೂಕಿನಲ್ಲಿ 21.52ಲಕ್ಷ ರೂ., ಹಾನಗಲ್ಲ ತಾಲೂಕಿನಲ್ಲಿ 46.87 ಲಕ್ಷ ರೂ.ಗಳಷ್ಟು ಪರಿಹಾರ ನಿರೀಕ್ಷಿಸಲಾಗಿದೆ.
• ಎಚ್.ಕೆ. ನಟರಾಜ