ದುಬಾರಿ ದಂಡಕ್ಕೆ ಬೆಂಡಾದ ಸವಾರರು
Team Udayavani, Sep 17, 2019, 12:24 PM IST
ಹಾವೇರಿ: ವಾಹನ ಚಾಲನಾ ಪರವಾನಗಿ ಪಡೆಯಲು ಆರ್‌ಟಿಒ ಕಚೇರಿಯಲ್ಲಿ ಸರದಿಯಲ್ಲಿ ನಿಂತ ವಾಹನ ಸವಾರರು.
ಹಾವೇರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆಯಡಿ ಸಂಚಾರಿ ನಿಯಮ ಉಲ್ಲಂಘನೆ ಭಾರಿ ಮೊತ್ತದ ದಂಡ ವಿಸಿರುವುದರಿಂದ ವಾಹನ ಸವಾರರು ಚಾಲನಾ ಪರವಾನಗಿ ಪಡೆಯಲು, ವಿಮೆ ಮಾಡಿಸಲು ಹಾಗೂ ವಾಹನ ಮಾಲಿನ್ಯ ತಪಾಸಣೆಗೆ ಮುಗಿಬಿದ್ದಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸಿರುವ ಪರಿಣಾಮ ಪ್ರಾದೇಶಿಕ ಸಾರಿಗೆ ಕಚೇರಿ, ವಿಮಾ ಕಚೇರಿಗಳು ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ಜನದಟ್ಟಣೆ ಶುರುವಾಗಿದ್ದು, ವಾಹನ ಮಾಲೀಕರು ಸರದಿಯಲ್ಲಿ ನಿಂತು ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಜನರಿಲ್ಲದೇ ಬಿಕೋ ಎನ್ನುತ್ತಿದ್ದ ವಾಹನಗಳ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳು, ವಿಮಾ ಕಂಪನಿ ಕಚೇರಿಗಳು ಈಗ ಜನರಿಂದ ತುಂಬಿದ್ದು, ದುಬಾರಿ ದಂಡ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಜನ ವಿಮೆ, ತಪಾಸಣೆ ಶುಲ್ಕ ಪಾವತಿಸುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.
ಜಿಲ್ಲೆಯಾದ್ಯಂತ ಪೊಲೀಸರು ವಾಹನ ತಪಾಸಣೆ, ದಾಖಲಾತಿ ಪರಿಶೀಲನೆ ಮಾಡುತ್ತಿದ್ದು, ಬಹುತೇಕರು ವಾಹನಗಳನ್ನು ರಸ್ತೆಗಿಳಿಸುವ ಮುನ್ನ ಎಲ್ಲ ದಾಖಲಾತಿಗಳನ್ನು ಹೊಂದಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಹಾವೇರಿ, ರಾಣಿಬೆನ್ನೂರಿನ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಜನಸಂದಣಿ ಹೆಚ್ಚಾಗಿದೆ.
ವಾಹನ ಚಾಲನಾ ಪರವಾನಗಿ ಇಲ್ಲದವರು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಹೋಗಿ ಪರವಾನಗಿ ಅರ್ಜಿ ಹಾಕುವುದು, ಇದಕ್ಕಾಗಿ ಏಜೆಂಟರಲ್ಲಿ ಶುಲ್ಕ ವಿಚಾರಿಸುತ್ತಿದ್ದಾರೆ. ಕೆಲ ಏಜೆಂಟರಂತೂ ಇದನ್ನೇ ಒಂದು ಅವಕಾಶವಾಗಿ ಮಾರ್ಪಡಿಸಿಕೊಂಡು ಶೀಘ್ರ ವಾಹನ ಚಾಲನಾ ಪರವಾನಗಿ ಪತ್ರ ಮಾಡಿಸಿಕೊಡಲು ನಿಗದಿತ ಶುಲ್ಕಕ್ಕಿಂತ ಶೇ. 8-10ರಷ್ಟು ಹಣ ಕೀಳಲು ಮುಂದಾಗಿದ್ದಾರೆ.
ವಿಮೆ ಕಚೇರಿಗಳಲ್ಲೂ ಜನದಟ್ಟಣೆ : ಅದೇ ರೀತಿ ವಿಮೆ ಕಂಪನಿ ಕಚೇರಿಗಳಲ್ಲಿಯೂ ಜನರು ಸರದಿ ನಿಂತು ವಾಹನಗಳಿಗೆ ವಿಮೆ ಮಾಡಿಸುತ್ತಿದ್ದಾರೆ. ವಿವಿಧ ವಿಮಾ ಕಂಪನಿಗಳ ಪ್ರತಿನಿಧಿಗಳು ಸಹ ನಾಮುಂದು, ತಾಮುಂದು ಎಂದು ಸ್ಪರ್ಧೆಯೊಡ್ಡಿ ಗ್ರಾಹಕರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಕೆಲ ವಿಮಾ ಕಂಪನಿಗಳಂತೂ ವಿಮೆ ಮಾಡಿಸುವ ಸಂಚಾರಿ ವಾಹನ ಮಾಡಿಕೊಂಡು ಸಾರಿಗೆ ಕಚೇರಿಯ ಹೊರಗಡೆಯೇ ನಿಂತುಬಿಟ್ಟಿವೆ.
ವಿಮಾ ಕಚೇರಿ ಬಾಗಿಲು ತೆರೆಯುವ ಮುನ್ನವೇ ಗ್ರಾಮೀಣ ಭಾಗಗಳಿಂದ ಜನರು ವಾಹನಗಳನ್ನು ತಂದು ನಿಲ್ಲಿಸುತ್ತಿದ್ದಾರೆ.
ಕಾರು ಇನ್ನಿತರ ನಾಲ್ಕು ಚಕ್ರಗಳ ವಾಹನಕ್ಕಿಂತ ದ್ವಿಚಕ್ರ ವಾಹನಗಳೇ ಹೆಚ್ಚಾಗಿ ಬರುತ್ತಿವೆ. ಜನರು ಒಮ್ಮೇಲೇ ವಾಹನ ವಿಮೆ ಮಾಡಿಸಲು ಬರುತ್ತಿರುವುದರಿಂದ ವಿಮಾ ಕಂಪನಿ ನೌಕರರ ಮೇಲೆ ಒತ್ತಡ ಹೆಚ್ಚಾಗಿದೆ. ದ್ವಿಚಕ್ರ ವಾಹನಗಳಿಗೆ ಬಹುತೇಕರು ಥರ್ಡ್ ಪಾರ್ಟಿ ವಿಮೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಸುಮಾರು 1500 ರೂ.ಗಳಷ್ಟು ವಿಮಾ ಕಂತು ಭರಿಸಬೇಕಾಗಿದ್ದು, ಇತ್ತ ವಿಮೆ ಮೊತ್ತವೂ ಹೆಚ್ಚಾಗಿದೆ. ಬಿಟ್ಟರೆ ಪೊಲೀಸರ ದಂಡ ದುಪ್ಪಟ್ಟಾಗಿದೆ. ಹೀಗಾದರೆ ಸಾಮಾನ್ಯರು ಬದುಕುವುದು ಹೇಗೆ ಎಂದು ಗೊಣಗುತ್ತಲೇ ವಿಮೆ ಮಾಡಿಸಿಕೊಳ್ಳುತ್ತಿದ್ದಾರೆ.
ತಪಾಸಣೆ ಕೇಂದ್ರದಲ್ಲೂ ಸರದಿ: ಪ್ರಾದೇಶಿಕ ಸಾರಿಗೆ ಕಚೇರಿ, ವಿಮಾ ಕಚೇರಿ ಅಷ್ಟೇ ಅಲ್ಲದೇ ವಾಹನಗಳ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿಯೂ ವಾಹನಗಳ ಸರದಿ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಒಟ್ಟು 13 ವಾಹನ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಆರು, ರಾಣಿಬೆನ್ನೂರಿನಲ್ಲಿ ಮೂರು, ಸವಣೂರು, ಬೊಮ್ಮನಳ್ಳಿ, ಹಿರೇಕೆರೂರು, ಕುಮಾರಪಟ್ಟಣದಲ್ಲಿ ತಲಾ ಒಂದು ವಾಹನಗಳ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಿವೆ. ಇಲ್ಲಿ ವಾಹನಗಳ ತಪಾಸಣೆ ಮಾಡಿಸಿ, ಪ್ರಮಾಣ ಪತ್ರ ಪಡೆದು ಕೊಳ್ಳುತ್ತಿದ್ದಾರೆ.
ಒಟ್ಟಾರೆ ಸಂಚಾರಿ ನಿಯಮ ಉಲ್ಲಂಘನೆಗೆ ವಿಸಿರುವ ದುಬಾರಿ ದಂಡ ವಾಹನ ಸವಾರರ ನಿದ್ದೆಗೆಡಿಸಿದ್ದು, ಎಲ್ಲರೂ ವಾಹನ ರಸ್ತೆಗಿಳಿಸುವ ಮುನ್ನ ದಾಖಲೆ ಪತ್ರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
•ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.