ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಆದ್ಯತೆ
Team Udayavani, Nov 8, 2018, 4:21 PM IST
ಹಾವೇರಿ: ಜಿಲ್ಲೆಯಲ್ಲಿ ಸಿರಿಧಾನ್ಯಗಳ ಸಂಸ್ಕರಣಾ ಘಟಕ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದು ಕೃಷಿ ಖಾತೆ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ತಿಳಿಸಿದರು. ಶಿಗ್ಗಾವಿ ತಾಲೂಕು ತಿಮ್ಮಾಪುರದ ಸಿರಿಧಾನ್ಯಗಳ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಸಿರಿಧಾನ್ಯಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶ ಲಭ್ಯವಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸಿರಿಧಾನ್ಯಗಳಿಗೆ ಬೇಡಿಕೆ ಇದೆ. ಈ ಭಾಗದಲ್ಲಿ ಸಂಸ್ಕರಣಾ ಘಟಕ ಸ್ಥಾಪನೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ಬಳಿಕ ಸಚಿವರು ಶಿಗ್ಗಾವಿ ಏತ ನೀರವಾರಿ ಯೋಜನೆ ಸ್ಥಳಕ್ಕೆ ಹಾಗೂ ಬಾಡ ಕನಕದಾಸರ ಅರಮನೆಗೆ ಭೇಟಿ ನೀಡಿ ಪರಿಶೀಲಿಸಿದರು ಮತ್ತು ರೈತರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಶಿಗ್ಗಾವಿ ಏತ ನೀರಾವರಿ ಯೋಜನೆಯಿಂದ 9,900 ಹೆಕ್ಟೇರ್ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. ಈ ಪ್ರದೇಶದಲ್ಲಿ ಕೃಷಿ ಇಲಾಖೆಯಿಂದ ಯಾವ ರೀತಿ ಬೆಳೆ ಪದ್ಧತಿ ಅನುಸರಿಸಬಹುದು ಹಾಗೂ ರೈತರಿಗೆ ಯಾವುದು ಹೆಚ್ಚು ಸಹಕಾರಿ ಮತ್ತು ರೈತರಿಗೆ ಮಾರುಕಟ್ಟೆ ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಈ ಭಾಗದ 30 ಹಳ್ಳಿಗಳಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದ್ದು, 2008ರಲ್ಲಿ ಸಿರಿಧಾನ್ಯಗಳ ಪಾಲಿಶ ಮಷಿನ್ ನೀಡಲಾಗಿತ್ತು. ಇಲ್ಲಿ ಆರೇಳು ಸಿರಿಧಾನ್ಯಗಳನ್ನು ಪಾಲಿಶ್ ಮಾಡಿ ಪ್ಯಾಕೇಟ್ ಮಾಡಲಾಗುತ್ತಿದೆ. ಈ ಭಾಗದಲ್ಲಿ ಕೃಷಿ ಔದ್ಯೋಗಿಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಧನಸಹಾಯ ನೀಡಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ಮುಂದೆ ಬರಬೇಕು ಎಂದರು. ಎಸ್.ಕೆ. ಕರಿಯಣ್ಣನವರ, ಜಿಲ್ಲಾಧಿಕಾರಿ ಡಾ| ಎಂ.ವಿ. ವೆಂಕಟೇಶ, ಮಂಜುನಾಥ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.