ರಾಹುಲ್ ಸಮಾವೇಶ ಯಶಸ್ವಿಗೊಳಿಸಿ
Team Udayavani, Mar 5, 2019, 8:36 AM IST
ಬ್ಯಾಡಗಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರಧಾನಿಗಳು ಕೇವಲ ಕಾಂಗ್ರೆಸ್‌ನಲ್ಲಿದ್ದಾರೆ. ಅದಕ್ಕೂ ಮುನ್ನ ಸ್ವಾತಂತ್ರ್ಯಾ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಪಕ್ಷದ ಬಹಳಷ್ಟು ಮುಖಂಡರು ದೇಶಕ್ಕಾಗಿ ಮತ್ತು ನೆಲಕ್ಕಾಗಿ ತಮ್ಮ ಪ್ರಾಣ ಕಳೆದುಕೊಂಡು ಹುತಾತ್ಮರಾಗಿದ್ದಾರೆ ಎಂದು ಮಾಜಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಮಾ.9ರಂದು ಹಾವೇರಿಗೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಜರುಗಿದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಜನರಲ್ಲಿ ಭಾವೈಕ್ಯತೆ ಮೂಡಿಸುವ ಸಾಮರ್ಥ್ಯವಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂದರು.
ದೇಶದಲ್ಲಿ ಜನರಲ್ಲಿ ಐಕ್ಯತೆ ಮೂಡಿಸಿ ಕಳೆದ 70 ವರ್ಷಗಳ ಕಾಲ ದೇಶವನ್ನು ಸುಭದ್ರವಾಗಿಡುವಲ್ಲಿ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯಾಗದಂತೆ ಕಾಂಗ್ರೆಸ್ ನೋಡಿಕೊಂಡಿದೆ. ಸ್ವಾತಂತ್ರ್ಯಾ ಪಡೆದ ಬಳಿಕ ಯಾವುದೇ ಕೈಗಾರಿಕೆಗಳಲ್ಲಿದೇ ಬಡತನದ ಸ್ಥಿತಿಯಲ್ಲಿದ್ದ ಜನರಿಗೆ ಅನ್ನ ನೀರು ನೀಡುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಇಂದು ಭವ್ಯ ಭಾರತವೆಂಬ ಬಲಿಷ್ಠ ರಾಷ್ಟ್ರ ಉದಯಿಸಿದೆ ಎಂದರು.
ಹಿರಿಯ ಮುಖಂಡ ಎಸ್.ಆರ್.ಪಾಟೀಲ ಮಾತನಾಡಿ, ಅಧಿಕಾರದಲ್ಲಿದ್ದಾಗ ಯಾರೊಬ್ಬರು ಪಕ್ಷದ ಸಂಘಟನೆ ಬಗ್ಗೆ ಗಮನ ಹರಿಸುವುದಿಲ್ಲ. ಅಧಿಕಾರ ಕಳೆದುಕೊಂಡ ತಕ್ಷಣವೇ ಸಂಘಟನೆ ಬಗ್ಗೆ ನೆನಪಾಗುತ್ತದೆ. ಪಕ್ಷ ಸಂಘಟನೆ ಎಂದರೆ ಚುನಾವಣೆ ಬಂದಾಗ ಮಾಡುವ ಕೆಲಸವಲ್ಲ. ಮಾಜಿ ಪ್ರಧಾನಿ ಇಂದಿರಾಗಾಂಧಿ ತಂದಿದ್ದ ಹೊಸ ಹೊಸ ಯೋಜನೆಗಳ ಮಾದರಿಯಲ್ಲಿ ಟ್ರೆಂಡ್ ಹುಟ್ಟು ಹಾಕುವ ಯೋಜನೆಗಳು ಜಾರಿಗೆ ತರಬೇಕಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ಕಾಂಗ್ರೆಸ್ ಸರಕಾರದ ಹಿಂದಿನ ಸಾಧನೆಗಳನ್ನು ಮನೆ ಮನೆಗೂ ತಲುಪಿಸುವ ಮೂಲಕ ಲೋಕಸಭೆ ಚುನಾವಣೆಗೆ ತಯಾರಿ ನಡೆಸಬೇಕಿದೆ. ಗದಗ ಹಾಗೂ ಹಾವೇರಿ ಲೋಕಸಭೆ ಚುನಾವಣೆ ಕುರಿತಂತೆ ಶಿಗ್ಗಾವಿ ತಾಲೂಕಿನ ಬಿಸನಳ್ಳಿ ಗ್ರಾಮಕ್ಕೆ ಮಾ.9 ರಂದು ಆಗಮಿಸುತ್ತಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುವಂತೆ ಮನವಿ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಕಾಗಿನೆಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಕರಿಲಿಂಗಣ್ಣನವರ, ಜಿಪಂ ಸದಸ್ಯ ಅಬ್ದುಲ ಮುನಾಫ್ ಎಲಿಗಾರ, ಎಪಿಎಂಸಿ ಅಧ್ಯಕ್ಷ ಕೆ.ಎಸ್.ನಾಯ್ಕರ, ಪುರಸಭೆ ಸದಸ್ಯರಾದ ದುಗ್ಗೇಶ ಗೋಣೆಮ್ಮನರ, ನಜೀರ ಅಹಮ್ಮದ ಶೇಕ್ ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.