ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ
Team Udayavani, Apr 24, 2024, 1:22 PM IST
■ ಉದಯವಾಣಿ ಸಮಾಚಾರ
ರಾಣಿಬೆನ್ನೂರ: ಜಗತ್ತಿನಲ್ಲಿ ಧರ್ಮ ಮತ್ತು ದೇವರ ಹೆಸರಿನಲ್ಲಿ ಮಹಾ ಯುದ್ಧಗಳು ನಡೆಯುತ್ತಿವೆ. ಈ ಎರಡು ವಿಷಯಗಳು ಅಫೀಮ್ ಹಾಗೂ ಗಾಂಜಾಕ್ಕಿಂತಲೂ ಅತೀಯಾದ ಅಪಾಯಕಾರಿ ಎಂದು ಐಮಂಗಳದ ಹರಳಯ್ಯ ಗುರು ಪೀಠದ ಹರಳಯ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಸುಕ್ಷೇತ್ರ ಐರಣಿ ಮನಿಮಠದಲ್ಲಿ ಮಂಗಳವಾರ ಸಾಧು ಚಕ್ರವರ್ತಿ ಶ್ರೀ ಸಿದ್ಧಾರೂಢರ ಮತ್ತು ಮಹಾ ತಪಸ್ವಿ ಮುಪ್ಪಿನಾರ್ಯ ಸ್ವಾಮಿಗಳ ಅಖಂಡ ಶಿವಭಜನೆ ಸಪ್ತಾಹ, ಅಡ್ಡಪಲ್ಲಕ್ಕಿ ಉತ್ಸವ, ನೂತನವಾಗಿ ನಿರ್ಮಾಣಗೊಂಡಿರುವ ಮಹಾ ರಥೋತ್ಸವ ಮತ್ತು ಶ್ರೀಮಠದ ಗಜದಂಡ ಮಹಾಸ್ವಾಮಿಗಳ 31ನೇ ವರ್ಷದ ಫಟ್ಟಾಭಿಷೇಕ ಮಹೋತ್ಸವದ ಸವಿ ನೆನಪಿಗಾಗಿ ನಡೆದ ತುಲಾಭಾರ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಮ್ಮಲ್ಲಿ ಮುಕ್ಕೋಟಿ ದೇವಾನು ದೇವತೆಗಳಿದ್ದು, ಅವುಗಳು ಯಾರಿಗೂ ಕಂಡಿಲ್ಲ. ಅವುಗಳಿಂದ ಯಾರಿಗೂ ಸಂಸ್ಕಾರ ಸಿಕ್ಕಿಲ್ಲ. ಆದರೂ ಸಹ ಧರ್ಮ ಹಾಗೂ ದೇವತೆಗಳ ನಾಮಾಂಕಿತದ ಮೇಲೆ ಮಹಾ ಯುದ್ಧಗಳು ನಡೆಯುತ್ತಿವೆ. ಇದು ಸರಿಯಾದ ಮಾರ್ಗವಲ್ಲ. ಬಸವಾದಿ ಶರಣರು ಹಾಗೂ ಶ್ರೀ ಸಿದ್ಧಾರೂಢರು ತನ್ನನ್ನು ತಾನರಿತು ನಡೆಯುವುದೇ ಸನ್ಮಾರ್ಗವಾಗಿದೆ ಎಂದು ಪ್ರತಿಪಾದಿಸಿದ್ದಾರೆ ಎಂದು ನುಡಿದರು.
ಮಠ-ಮಾನ್ಯಗಳು ಮನುಷ್ಯನಿಗೆ ಮೋಕ್ಷ ಹಾಗೂ ಸನ್ಮಾರ್ಗ ನೀಡುತ್ತಿವೆ. ಸಗಣಿಗೆ ಸಂಸ್ಕಾರ ನೀಡಿದಾಗ ವಿಭೂತಿಯಾಗುತ್ತದೆ. ಅದನ್ನು ದೈವ ಸಮಾನವೆಂದು ಹಣೆಗೆ ಧರಿಸಿಕೊಳ್ಳುತ್ತೇವೆ. ಹಾಗೆಯೇ ಅಂತಪ್ಪ ಗುರುವಿನಿಂದ ಸಂಸ್ಕಾರ ದೊರೆತ ಮನುಷ್ಯ ಮೋಕ್ಷಕ್ಕೆ ಹತ್ತಿರವಾಗುತ್ತಾನೆ. ಆಗ ಆ ಮನುಷ್ಯ ಪರಮಾತ್ಮನಿಗೆ ಪ್ರಿಯನಾಗುತ್ತಾನೆ.
ಮೂಢನಂಬಿಕೆಗಳನ್ನು ನಂಬದೇ ಸಮಾನತೆಯ ಸತ್ಯ ಮಾರ್ಗ ಪ್ರತಿಪಾದಿಸಿದ ಬಸವಾದಿ ಶರಣರ ಮಾರ್ಗದರ್ಶನ ಸರ್ವ ಜನಾಂಗಕ್ಕೂ ಸೂಕ್ತವಾಗಿದೆ ಎಂದು ಶ್ರೀಗಳು ಹೇಳಿದರು.
ಸಾನಿಧ್ಯ ವಹಿಸಿದ್ದ ಶ್ರೀಮಠದ ಗಜದಂಡ ಮಹಾಸ್ವಾಮಿಗಳು ಮಾತನಾಡಿ, ನವದಂಪತಿ ಗುರುಹಿರಿಯರನ್ನು ಮತ್ತು ತಂದೆ, ತಾಯಿಗಳನ್ನು ಪ್ರೀತಿಯಿಂದ ಕಾಣಬೇಕು. ಸಂಸ್ಕಾರಯುತ ಜೀವನ ನಿಮ್ಮದಾಗಬೇಕು. ಮುಂದೆ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಬೇಕು. ಶ್ರೀ ಸಿದ್ಧಾರೂಢರ ಮಾರ್ಗದಲ್ಲಿ ನಡೆದಾಗ ಮಾತ್ರ ಬದುಕು ಹಸನವಾಗಲಿದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಕೆ.ಆರ್. ನಗರದ ಗುರುಮಲ್ಲೇಶ್ವರ ದಾಸೋಹ ಮಠದ ಮಾತೋಶ್ರೀ ಜಗದೇವಿ ತಾಯಿ, ಚಿತ್ರದುರ್ಗ ಮಡಿವಾಳ ಗುರುಪೀಠದ ಮಡಿವಾಳ ಮಾಚಿದೇವ ಶ್ರೀಗಳು, ತಿಳವಳ್ಳಿ ಕಲ್ಮಠದ ಬಸವ ನಿರಂಜನ ಮಹಾಸ್ವಾಮಿಗಳು, ಬೈಲಹೊಂಗಲ ಸಿದ್ಧಾರೂಢ ಮಠದ ಜಗದೇವ ಮಹಾಸ್ವಾಮಿಗಳು, ಗೋಕಾಕ ರವಿ ಶಂಕರ ಶಿವಾಚಾರ್ಯ ಶ್ರೀಗಳು ಆಶೀರ್ವಚನ
ನೀಡಿದರು.
ಸಾಮೂಹಿಕ ವಿವಾಹದಲ್ಲಿ 8 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹನುಮಂತಪ್ಪ ಚಳಗೇರಿ ಕುಟುಂಬದವರು ಶ್ರೀಮಠದ ಗಜದಂಡ ಮಹಾಸ್ವಾಮಿಗಳ ತುಲಾಭಾರ ನೆರವೇರಿಸಿದರು. ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದ ಧರ್ಮದರ್ಶಿ ಸಿದ್ಧನಗೌಡ ಪಾಟೀಲ, ಭರಮಪ್ಪ ಪೂಜಾರ, ಹನುಮಂತಪ್ಪ ಚಳಗೇರಿ, ಬಸವರಾಜಪ್ಪ ಹೊನ್ನಾಳಿ, ಬುಳ್ಳಪ್ಪ ಬಣಕಾರ, ನಾಗಪ್ಪ ಕಾಡಜ್ಜಿ, ಗದಿಗೆಪ್ಪ ಸಾರ್ಥಿ, ಪರಸಪ್ಪ ಹಿರೇಬಿದರಿ, ಮಂಜಣ್ಣ ಕುರುಬರಹಳ್ಳಿ, ಕೊಟ್ರೇಶಪ್ಪ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.