ಹಾವೇರಿಯಲ್ಲಿ ಟಿಪ್ಪು ಹೆಜ್ಜೆ ಗುರುತಿಗೆ ಬೇಕಿದೆ ರಕ್ಷಣೆ
Team Udayavani, Nov 10, 2018, 3:53 PM IST
ಹಾವೇರಿ: ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಹಾಗೂ ಹಾವೇರಿ ಜಿಲ್ಲೆಗೆ ಅವಿನಾಭಾವ ಸಂಬಂಧವಿದ್ದು ಟಿಪ್ಪು ಆಡಳಿತಾವಧಿಗೆ ಸಂಬಂಧಿಸಿದ ಅಪರೂಪದ ಅನೇಕ ಸಾಕ್ಷ್ಯಗಳು ಜಿಲ್ಲೆಯಲ್ಲಿವೆ. ಬಹುತೇಕ ಸಾಕ್ಷ್ಯಗಳು ಎಲ್ಲರ ನಿರ್ಲಕ್ಷ್ಯಕ್ಕೊಳಗಾಗಿದ್ದು, ಅವೆಲ್ಲವುಗಳನ್ನು ಸುರಕ್ಷಿತವಾಗಿ ಕಾಯ್ದಿಡುವ ಕಾರ್ಯ ಆಗಬೇಕಿದೆ.
ಟಿಪ್ಪು ಹಾಗೂ ಆತನ ಆಡಳಿತಾವಧಿಗೆ ಸಂಬಂಧಿಸಿ ಶಿಲಾಶಾಸನ, ಆತ ಉಡುಗೊರೆಯಾಗಿ ನೀಡಿದ್ದ ಅಡ್ಡಪಲ್ಲಕ್ಕಿ ಹಾಗೂ ಸೇನಾನಾಯಕನಾಗಿದ್ದ ದೊಂಡಿಯಾ ವಾಘನ ಖಡ್ಗಗಳು ಹೀಗೆ ಅನೇಕ ಪುರಾವೆಗಳು ಜಿಲ್ಲೆಯಲ್ಲಿದ್ದು, ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಯ ಇತಿಹಾಸ ಅಧ್ಯಯನಕ್ಕೆ ಅನೂಕೂಲ ಮಾಡಿಕೊಡಬೇಕಾದ ಅವಶ್ಯಕತೆ ಇದೆ.
ಟಿಪ್ಪುವಿನ ಕಾಲದ ಕನ್ನಡ ಶಿಲಾಶಾಸನವೊಂದು ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಚನ್ನಾಪುರ ತಾಂಡಾದಲ್ಲಿ ಅನಾಥವಾಗಿದೆ. ಟಿಪ್ಪು ಸುಲ್ತಾನ್ ಕಾಲದ ಕಥೆ ಹೇಳುವ ಅಪರೂಪದ ಈ ಮೌಲ್ಯಯುತ ಶಾಸನ 1933-34ರಲ್ಲಿ ಪತ್ತೆಯಾಗಿದೆಯಾದರೂ ಇದಕ್ಕೆ ಸೂಕ್ತ ರಕ್ಷಣೆ ನೀಡಿ ಕಾಯ್ದಿಡುವ ಕಾರ್ಯ ಈವರೆಗೂ ಆಗಿಲ್ಲ. ಈ ಶಾಸನವು ಚನ್ನಾಪುರದ ಫಕ್ಕಿರಪ್ಪ ಭೀಮಪ್ಪ ಬೆಳವಿಗೆಯವರ ಮಾಲ್ಕಿ ಜಮೀನಲ್ಲಿದ್ದು, ದಿನದಿಂದ ದಿನಕ್ಕೆ ಹಾಳಾಗುತ್ತಿದೆ. ಹನ್ನೊಂದು ಸಾಲುಗಳನ್ನು ಹೊಂದಿರುವ ಈ ಶಾಸನದಲ್ಲಿ ಟಿಪ್ಪು ಸುಲ್ತಾನ್ ಪರವಾನಗಿ ಮೇರೆಗೆ ರಾಣಿಬೆನ್ನೂರಿನ ಚೆನ್ನಾಪುರ ಗ್ರಾಮದ ಭೂಮಿಯನ್ನು ಜೂಡಿದಾರರಿಗೆ ತೊಂಬತ್ತು ವರಹಕ್ಕೆ ಇನಾಮ್ ನೀಡಿದ ವಿಷಯ ತಿಳಿಸುತ್ತಿದೆ.
ಅಡ್ಡಪಲ್ಲಕ್ಕಿ: ಟಿಪ್ಪು ಬಂಕಾಪುರದ ಸಮೀಪದಲ್ಲಿರುವ ಗದ್ದಿಗೇಶ್ವರ ಮಠಕ್ಕೆ ದಾನವಾಗಿ ನೀಡಿದ್ದ ಅಡ್ಡಪಲ್ಲಕ್ಕಿ ಈಗಲೂ ಮಠದಲ್ಲಿದೆ. ಈ ಅಡ್ಡಪಲ್ಲಕ್ಕಿಯನ್ನು ವರ್ಷದಲ್ಲಿ ಒಮ್ಮೆ ಮಾತ್ರ ಉಪಯೋಗಿಸಲಾಗುತ್ತದೆ. ಟಿಪ್ಪುವಿನ ಈ ಕೊಡುಗೆ ಕುರಿತು ಮಠದ ಪುಸ್ತಕಗಳಲ್ಲಿಯೂ ಉಲ್ಲೇಖೀಸಲಾಗಿದೆ. ಇಂಥ ವಿಶಿಷ್ಟ ವಸ್ತುಗಳನ್ನು ಸಹ ವ್ಯವಸ್ಥಿತವಾಗಿ ರಕ್ಷಿಸುವ ಕಾರ್ಯ ಸಂಬಂಧಿತ ಇಲಾಖೆಗಳಿಂದ ಆಗಬೇಕಿದೆ.
ವಾಘ ನೀಡಿದ ಖಡ್ಗಗಳು: ಟಿಪ್ಪುವಿನ ಸೇನಾ ನಾಯಕನಾಗಿ, ಬಳಿಕ ಆತನ ವಿರೋಧ ಕಟ್ಟಿಕೊಂಡು ಸೆರೆಮನೆವಾಸಿಯಾಗುವ ದೊಂಡಿಯಾ ವಾಘ ಕುರಿತು ಇತಿಹಾಸಕಾರರು ಹಲವೆಡೆ ಉಲ್ಲೇಖೀಸಿದ್ದಾರೆ. ಸೆರೆವಾಸದ ಬಳಿಕ ದೊಂಡಿಯಾ ವಾಘ ಬಲಾಡ್ಯ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿಯುತ್ತಾನೆ. ಈತ ಹಾವೇರಿ ಜಿಲ್ಲೆಯ ಹಾನಗಲ್ಲ, ಸವಣೂರುಗಳನ್ನು ವಶಪಡಿಸಿಕೊಂಡು ಕ್ರಿ.ಶ. 1800ರಲ್ಲಿ ರಾಣಿಬೆನ್ನೂರ ತಾಲೂಕಿನ ಐರಣಿ ಗ್ರಾಮದ ಕೋಟೆಯನ್ನೂ ವಶಪಡಿಸಿಕೊಳ್ಳುತ್ತಾನೆ. ಬಳಿಕ ಬ್ಯಾಡಗಿ ತಾಲೂಕಿನ ಕದರಮಂಡಲಗಿಯ ಕೋಟೆಯ ಮೇಲೆ ದಾಳಿ ಮಾಡಲು ಹೋದಾಗ ತನ್ನ ಕೈಯಲ್ಲಿದ್ದ ಖಡ್ಗಗಳನ್ನು ಶ್ರೀಕಾಂತೇಶನ ಸನ್ನಿಧಿಯಲ್ಲಿಡುತ್ತಾನೆ ಎಂಬ ಉಲ್ಲೇಖ ದೇವಸ್ಥಾನ ಪ್ರಕಟಿತ ‘ಶ್ರೀಕಾಂತೇಶ ವಿಜಯ’ ಕೃತಿಯಲ್ಲಿದೆ. ಈ ಉಲ್ಲೇಖದಂತೆ ಈ ದೇವಸ್ಥಾನದಲ್ಲಿ ಈಗಲೂ ದೊಂಡಿಯಾ ವಾಘ ನೀಡಿದ ಎರಡು ಖಡ್ಗಗಳು ಇವೆ.
ಟಿಪ್ಪು ಸುಲ್ತಾನ್ ಹಾಗೂ ಹಾವೇರಿ ಜಿಲ್ಲೆಗೆ ಸಂಬಂಧವಿದ್ದು ಕನ್ನಡ ಶಾಸನ, ಅಡ್ಡಪಲ್ಲಕ್ಕಿ ಕೊಡುಗೆ, ದೊಂಡಿಯಾ ವಾಘನ ಖಡ್ಗ ಹೀಗೆ ಅನೇಕ ಸಾಕ್ಷ್ಯ, ಪುರಾವೆಗಳು ಹಾವೇರಿ ಜಿಲ್ಲೆಯಲ್ಲಿ ಕಾಣಲು ಸಿಗುತ್ತವೆ. ಎಲ್ಲ ಸಾಕ್ಷ್ಯ, ಶಾಸನಗಳನ್ನು ಹಾಳಾಗದಂತೆ ಸಂರಕ್ಷಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ಇತಿಹಾಸ ಅಧ್ಯಯನಕ್ಕೆ ಅನುಕೂಲ ಕಲ್ಪಿಸಿಕೊಡುವ ಕಾರ್ಯ ಪ್ರಾಚ್ಯಶಾಸ್ತ್ರ ಇಲಾಖೆಯಿಂದ ಆಗಬೇಕು.
ಪ್ರಮೋದ ನಲವಾಗಲ,
ಇತಿಹಾಸ ಸಂಶೋಧಕರು, ಹಾವೇರಿ
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.